ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯರೇ ಕಾರಣ: ಕೋಳಿವಾಡ ಆಕ್ರೋಶ


Updated:May 16, 2018, 1:59 PM IST
ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯರೇ ಕಾರಣ: ಕೋಳಿವಾಡ ಆಕ್ರೋಶ
ಕೆಬಿ ಕೋಳಿವಾಡ

Updated: May 16, 2018, 1:59 PM IST
- ಕೃಷ್ಣ ಜಿ.ವಿ., ನ್ಯೂಸ್18 ಕನ್ನಡ

ಬೆಂಗಳೂರು(ಮೇ 16): ಸಿದ್ದರಾಮಯ್ಯನವರಲ್ಲಿ ಕಾಂಗ್ರೆಸ್​ನ ರಕ್ತ ಇಲ್ಲ. ಇವರಿಂದಲೇ ಕಾಂಗ್ರೆಸ್ ಸೋಲನುಭವಿಸಿತು ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಆರೋಪಿಸಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿ ಅಭ್ಯರ್ಥಿಗೆ ಬೆಂಬಲ ಕೊಟ್ಟು ತನ್ನ ಸೋಲಿಗೆ ಸಿದ್ದರಾಮ್ಯರೇ ಕಾರಣರಾದರು ಎಂದು ಕೋಳಿವಾಡ ಆಪಾದಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಮಾಜಿ ಸ್ಪೀಕರ್, ಕಳೆದ ಚುನಾವಣೆಯಲ್ಲಿ ಜಿ.ಪರಮೇಶ್ವರ್ ಸೋಲಿಗೆ ಇವರೇ ಕಾರಣರಾಗಿದ್ದರು. ಡಿ.ಬಿ. ಇನಾಮ್ದಾರ್ ಮತ್ತು ತನ್ನನ್ನು ಸೋಲಿಸಲು ಕಳೆದ ಬಾರಿಯೂ ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಕಾಂಗ್ರೆಸ್​ನಲ್ಲಿ ಉಳಿಸಬಾರದು. ಇವರಿಗೆ ಕಾಂಗ್ರೆಸ್​ನಲ್ಲಿ ಯಾವುದೇ ಅಧಿಕಾರ ಕೊಡಬಾರದು. ಇವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ರೆ ಕಾಂಗ್ರೆಸ್ ಉಳಿಯುವುದಿಲ್ಲ. ಇವರ ನೇತೃತ್ವದಲ್ಲಿ ಯಾವುದೇ ಕಾರಣಕ್ಕೂ ಲೋಕಸಭೆ ಚನಾವಣೆಗೆ ಹೋಗಬಾರದು. ಜಿ. ಪರಮೇಶ್ವರ್, ಡಿಕೆಶಿ ಅಥವಾ ಬೇರಾರಾದರೂ ಲಿಂಗಾಯತ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೈಕಮಾಂಡ್​ಗೆ ಮನವಿ ಮಾಡುತ್ತೇನೆ ಎಂದು ಕೆ.ಬಿ. ಕೋಳಿವಾಡ ಹೇಳಿದ್ದಾರೆ.

ಸಿದ್ದರಾಮಯ್ಯಗೆ ಜಾತಿ ಮತ್ತು ಅಧಿಕಾರ ಇದ್ರೆ ಏನು ಬೇಕಾದರೂ ಮಾಡುತ್ತಾರೆ. ಪರಿಸ್ಥಿತಿ ಬದಲಾದಂತೆ ಹೈಕಮಾಂಡನ್ನು ಬಳಕೆ ಮಾಡಿಕೊಂಡಿದ್ದಾರೆ. ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತು ಬದಾಮಿಯಲ್ಲಿ ಸಣ್ಣ ಅಂತರದಿಂದ ಗೆದ್ದಿದ್ದಾರೆ. ಒಬ್ಬ ಮುಖ್ಯಮಂತ್ರಿಯಾದಂಥವರಿಗೆ ನಾಚಿಕೆಯಾಗಬೇಕು. ಆದ್ರೆ ನನ್ನ ಎದುರಲ್ಲಿ ಅವರು ಇನ್ನೂ ಚೋಟ. ಇವರು ಜೀವನದಲ್ಲಿ ಮುಂದೆಂದೂ ಅಧಿಕಾರದಲ್ಲಿರುವುದಿಲ್ಲ. ಇದು ಅವರಿಗೆ ಕೊನೆಯ ಅಧಿಕಾರವಷ್ಟೇ, ಎಂದು ಮಾಜಿ ಶಾಸಕ ಕೋಳಿವಾಡ ಭವಿಷ್ಯ ನುಡಿದಿದ್ದಾರೆ.

ನಾನು ಅಪ್ಪಟ ಕಾಂಗ್ರೆಸ್ಸಿಗ. ಸ್ಪೀಕರ್ ಆಗಿ ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ವಿಧಾನಸಭೆಯಲ್ಲಿ ಕಾಂಗ್ರೆಸ್​ನ ನಿರ್ಧಾರಗಳ ಪರವಾಗಿ ನಾನು ನಿಂತಿದ್ದೇನೆ. ನನ್ನ ಹನಿಹನಿ ರಕ್ತ ಕೂಡ ಕಾಂಗ್ರೆಸ್ಸೇ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಪಕ್ಷದಲ್ಲಿ ಯಾವುದೇ ಸಾಮಾನ್ಯ ಸ್ಥಾನ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಕೆ.ಬಿ. ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ