Kaveri Theerthodbhava: ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾದ ಕಾವೇರಿ ಮಾತೆ

ನಿಗದಿತ ಸಮಯದಂತೆ ಕಾವೇರಿ ಮಾತೆ ಮಕರ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು.

ಕಾವೇರಿ ತೀರ್ಥೋದ್ಭವ 

ಕಾವೇರಿ ತೀರ್ಥೋದ್ಭವ 

  • Share this:
 ಕೊಡಗಿನ ಕುಲದೇವಿ ನಾಡಿನ ಜೀವನದಿ ಮಾತೆ ಕಾವೇರಿ (Kaveri) ನಿಗದಿಯಂತೆ ಮಕರ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ನೆರೆದಿದ್ದ ನೂರಾರು ಭಕ್ತರಿಗೆ ದರುಶನ ನೀಡಿದಳು. ಬೆಳಿಗ್ಗೆ ಹನ್ನೊಂದುವರೆಯಿಂದಲೇ ಪ್ರಧಾನ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ ಮತ್ತು ಕುಂಕುಮಾರ್ಚನೆ ನೆರವೇರಿಸಿದರು. ಮತ್ತೊಂದೆಡೆ ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಭಾಗಮಂಡಲದಿಂದ (bhagamandala)  8 ಕಿ.ಮೀ. ದೂರದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ್ರು. ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟ ಭಕ್ತರು ಕಾವೇರಿ ಮಾತೆಯನ್ನು ನೆನೆಯುತ್ತಾ ತಲಕಾವೇರಿ (talacauvery) ತಲುಪಿದರು.

1 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವ 

ಕೊಡಗು ಅಷ್ಟೇ ಅಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯ ಭಕ್ತರು ತಲಕಾವೇರಿಗೆ ಆಗಮಿಸಿದ್ದರು. ತೀರ್ಥೋದ್ಭವದ ಸಮಯ ಹತ್ತಿರವಾದಂತೆ, ಹತ್ತಿರವಾದಂತೆ ಭಕ್ತರ ಹರ್ಷೋದ್ಘಾರ ಹೆಚ್ಚುತ್ತಲೇ ಇತ್ತು. ಉಕ್ಕಿ ಬಾ ತಾಯೆ ಎಂದು ಕಾವೇರಿ ಮಾತೆಯನ್ನು ನೆನೆಯುತ್ತಾ ಭಜಿಸುತ್ತಿದ್ದರು. ನಿಗದಿತ ಸಮಯದಂತೆ ಕಾವೇರಿ ಮಾತೆ ಮಕರ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು.

ಪುನೀತರಾದ ಭಕ್ತರು 

ತೀರ್ಥೋದ್ಭವಾಗುತ್ತಿದ್ದಂತೆ ತೀರ್ಥರೂಪಿಣಿಯಾದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸ್ಥಳದಲ್ಲಿದ್ದ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥವನ್ನು  ಪ್ರೋಕ್ಷಣೆ ಮಾಡಿದರು. ಕಾವೇರಿ ಮಾತೆಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ಭಕ್ತಿಭಾವ ಮೆರೆದು ಪುನೀತರಾದರು. ಇನ್ನು ಯುವಜನ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರು ಕಾವೇರಿ ತೀರ್ಥೋದ್ಭವದಲ್ಲಿ ಭಾಗವಹಿಸಿದರು. ತೀರ್ಥ ಕುಂಡಿಕೆಯ ಬಳಿ ನಿಂತು ಪೂಜೆ ಸಲ್ಲಿಸಿದರು.

ತೀರ್ಥರೂಪಿಣಿಯಾದ ಕಾವೇರಿ


ಕಾವೇರಿ ಉಕ್ಕಿ ಹರಿದರೆ ರಾಜ್ಯ ಸುಭಿಕ್ಷ

ಬಳಿಕ ಮಾತನಾಡಿದ ಸಚಿವ ನಾರಾಯಣಗೌಡ ಅವರು ಕಾವೇರಿ ಮಾತೆ ಕೊಡಗು ಕರ್ನಾಟಕಕ್ಕೆ ಅಷ್ಟೇ ಅಲ್ಲ. ತಮಿಳುನಾಡಿಗೂ ಅನ್ನ ನೀರು ಒದಗಿಸುತ್ತಿದ್ದಾಳೆ. ನಾವು ಕಾವೇರಿ ತೀರ್ಥವನ್ನು ಕೊಂಡೊಯ್ದು ಮಂಡ್ಯದ ಕಾಳಿಕಾಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಜನರಿಗೆ ವಿತರಣೆ ಮಾಡಲಿದ್ದೇವೆ. ಇಡೀ ವಿಶ್ವಕ್ಕೆ ಒಳ್ಳೆಯದು ಮಾಡಲೆಂದು ಪ್ರಾರ್ಥಿಸಿದ್ದೇನೆ. ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದ್ರು. ಇನ್ನು ಸಂಸದ ಪ್ರತಾಪ್ ಸಿಂಹ ಮಾತನಾಡಿ ಈ ದಿನ ಸರಿಯಾದ ಸಮಯಕ್ಕೆ ತೀರ್ಥೋದ್ಭವವಾಗಿದೆ. ಕರ್ನಾಟಕ ಕಾಮಧೇನು ಆಗಿರುವುದು ಕಾವೇರಿಯಿಂದ. ಕಾವೇರಿ ಉಕ್ಕಿ ಹರಿದರೆ ನಮ್ಮ ರಾಜ್ಯ ಸುಭಿಕ್ಷವಾಗಿರುತ್ತದೆ. ಅರ್ಧ ರಾಜ್ಯಕ್ಕೆ ಕಾವೇರಿ ಮಾತೆ ಅನ್ನ ನೀರು ಕೊಡುತ್ತಿದ್ದಾಳೆ. ಕಾವೇರಿ ಮಾತೆ ಸದಾಕಾಲ ರಾಜ್ಯವನ್ನು ಸುಭಿಕ್ಷವಾಗಿಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದ್ರು.

ತಲಕಾವೇರಿಯಲ್ಲಿ ಪೂಜೆ


ಭಕ್ತರ ಹರ್ಷಕ್ಕೆ ಪಾರವೇ ಇರಲಿಲ್ಲ

ಇನ್ನು ಭಕ್ತರ ಹರ್ಷಕ್ಕೆ ಪಾರವೇ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ತೀರ್ಥೋದ್ಭವದಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ಇರಲಿಲ್ಲ. ಈ ಬಾರಿ ಜಿಲ್ಲಾಡಳಿತ ಅವಕಾಶ ನೀಡಿತ್ತು. ನಾವು ಅಷ್ಟೇ ಭಕ್ತಿಯಿಂದ ಭಾಗಮಂಡಲದಿಂದ ಕಾಲ್ನಡಿಗೆಯಲ್ಲಿ ಬಂದು ತಾಯಿಯ ದರುಶನದಿಂದ ಪುನೀತರಾಗಿದ್ದೇವೆ. ಮುಂದೆ ಜಿಲ್ಲೆಯಲ್ಲಿ ಯಾವುದೇ ಪ್ರಾಕೃತಿಕ ವಿಕೋಪಗಳು ಆಗದಂತೆ ತಾಯಿ ಕಾಪಾಡಲಿ ಎಂದು ಬೇಡಿರುವುದಾಗಿ ಭಕ್ತರಾದ ಕಳ್ಳಿಚಂಡ ಡೀನಾ ಅಭಿಪ್ರಾಯಿಸಿದರು. ನಿಗಧಿತ ಸಮಯದಂತೆ ಕಾವೇರಿ ಮಾತೆ ಮಕರ ಲಗ್ನದಲ್ಲಿ ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದಳು. ತೀರ್ಥರೂಪಿಣಿಯಾದ ಕಾವೇರಿ ಮಾತೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸ್ಥಳದಲ್ಲಿದ್ದ ಅರ್ಚಕರು ಭಕ್ತರಿಗೆ ಕಾವೇರಿ ತೀರ್ಥವನ್ನು  ಪ್ರೋಕ್ಷಣೆ ಮಾಡಿದರು.
Published by:Kavya V
First published: