ಕೊಡಗಿಗೆ ಪ್ರವಾಹ ಕಂಟಕ ತಪ್ಪಿಸಲು ಕಾವೇರಿ ನದಿ ಸರ್ವೆ; ಬೋಟ್, ಡ್ರೋಣ್ ಮೂಲಕ ಪರಿಶೀಲನೆ

ಎಲ್ಲಿ ನದಿಯ ಸಂರಕ್ಷಿತ ಜಾಗ ಒತ್ತುವರಿ ಆಗಿದೆ, ಪ್ರವಾಹ ಉಂಟಾದಲ್ಲಿ ಎಷ್ಟು ಪ್ರದೇಶದಲ್ಲಿ ದುಷ್ಪರಿಣಾಮ ಬೀರುತ್ತದೆ ಎನ್ನೋ ಎಲ್ಲಾ ಮಾಹಿತಿಯು ಡ್ರೋಣ್ ಸರ್ವೆ ಮೂಲಕ ವೈಜ್ಞಾನಿಕವಾಗಿ ಗೊತ್ತಾಗಲಿದೆ. ಈ ಸರ್ವೆ ಬಳಿಕ ಸಿಗಲಿರುವ ವರದಿಯನ್ನು ಇಲಾಖೆ ಸರ್ಕಾರಕ್ಕೆ ಸಲ್ಲಿಸಲಿದೆ.

ಕಾವೇರಿ ನದಿ ಸರ್ವೆ

ಕಾವೇರಿ ನದಿ ಸರ್ವೆ

  • Share this:
ಕೊಡಗು :  2018 ರಲ್ಲಿ ಆರಂಭವಾದ ಕಾವೇರಿ ನದಿ (Kaveri River) ಪ್ರವಾಹ (Flood) ನಿರಂತರ 3 ವರ್ಷಗಳಿಂದ ಮರುಕಳಿಸುತ್ತಲೇ ಇದೆ. ಪರಿಣಾಮ ಕಾವೇರಿ ನದಿ ಹರಿಯುವ ಭಾಗದಲ್ಲಿ ಸಾವಿರಾರು ಕುಟುಂಬಗಳ ಬದುಕು ಪ್ರತೀ ವರ್ಷವೂ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗುತ್ತಿದೆ(Flood Effect). ಇದಕ್ಕೆ ಕಾರಣವೇನು, ಪ್ರವಾಹವನ್ನು ತಪ್ಪಿಸುವುದು ಹೇಗೆ ಎನ್ನೋದನ್ನು ಅರಿಯುವುದಕ್ಕಾಗಿ ಸರ್ಕಾರ ಮುಂದಾಗಿದ್ದು, ಕಾವೇರಿ ನದಿ ಸರ್ವೆ(Kaveri River Survey) ಮಾಡಿಸುತ್ತಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿಯ ಸಂರಕ್ಷಿತ ಜಾಗ ಕೊಡಗಿನಲ್ಲೇ ಒತ್ತುವರಿಯಾಗಿದೆ. ಜೊತೆಗೆ ಹವಾಮಾನ ವೈಪರೀತ್ಯದಿಂದ ಭಾರಿ ಪ್ರಮಾಣದಲ್ಲಿ ಸುರಿಯುವ ಮಳೆ ಕಾವೇರಿ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಲು ಕಾರಣವಾಗಿದೆ. ಹೀಗಾಗಿ ಎಲ್ಲೆಲ್ಲಿ ಕಾವೇರಿ ನದಿಯ ಸಂರಕ್ಷಿತ ಜಾಗ ಒತ್ತುವರಿ ಆಗಿದೆ, ಯಾವೆಲ್ಲ ಪ್ರದೇಶ ಪ್ರವಾಹ ಪೀಡಿತವಾಗುತ್ತಿದೆ ಎಂಬುದನ್ನು ತಿಳಿಯಲು ಸರ್ವೆ ಮಾಡಲಾಗುತ್ತಿದೆ.

ಬೋಟ್ ಮೂಲಕ ನದಿಯ ಸರ್ವೆ:  ಈಗಾಗಲೇ ಬೋಟ್ ಮೂಲಕ ಒಂದು ಹಂತದ ಸರ್ವೆ ಮುಗಿಸಲಾಗಿದೆ. ಬೋಟ್ ಮೂಲಕವೇ ನದಿಯ ಎಲ್ಲೆಡೆ ಓಡಾಡುವ ಸರ್ವೆ ಸಿಬ್ಬಂದಿ ನದಿ ಎಲ್ಲಿ ಎಷ್ಟು ಆಳವಿದೆ ಎಂಬುದನ್ನು ಪರಿಶೀಲಿಸುತ್ತಿದೆ. ಕೆಲವೆಡೆ ನದಿ 30 ಮೀಟರ್ ನಷ್ಟು ಆಳವಿದ್ದರೆ, ಕೆಲವೆಡೆ ಹೂಳು ತುಂಬಿ, ನದಿ ಮುಚ್ಚಿಹೋಗಿ ಬಿಡುತ್ತಾ ಎನ್ನುವಷ್ಟು ತೀರಾ ಕಡಿಮೆ ಆಳವಿದೆ. ಇದು ಕೂಡ ತೀವ್ರ ಮಳೆ ಸುರಿದಾಗ ಪ್ರವಾಹದ ಸ್ಥಿತಿ ಎದುರಾಗಲು ಕಾರಣ ಎನ್ನೋದು ಸರ್ವೆ ಮಾಡುತ್ತಿರುವ ಖಾಸಗಿ ಕಂಪನಿಯ ಸಿಬ್ಬಂದಿ ಸಂತೋಷ್ ಚಂದ್ರ ಅವರ ಅಭಿಪ್ರಾಯ.

ಡ್ರೋಣ್ ಮೂಲಕ ಏರಿಯಲ್ ಸರ್ವೆ : ಎರಡನೇ ಹಂತದ ಸರ್ವೆ ಆರಂಭಿಸಿರುವ ಇಲಾಖೆ ಡ್ರೋಣ್ ಮೂಲಕ ಏರಿಯಲ್ ಸರ್ವೆ ನಡೆಸುತ್ತಿದೆ. ಇದರಿಂದ ಎಲ್ಲಿ ನದಿಯ ಸಂರಕ್ಷಿತ ಜಾಗ ಒತ್ತುವರಿ ಆಗಿದೆ, ಪ್ರವಾಹ ಉಂಟಾದಲ್ಲಿ ಎಷ್ಟು ಪ್ರದೇಶದಲ್ಲಿ ದುಷ್ಪರಿಣಾಮ ಬೀರುತ್ತದೆ ಎನ್ನೋ ಎಲ್ಲಾ ಮಾಹಿತಿಯು ಡ್ರೋಣ್ ಸರ್ವೆ ಮೂಲಕ ವೈಜ್ಞಾನಿಕವಾಗಿ ಗೊತ್ತಾಗಲಿದೆ. ಈ ಸರ್ವೆ ಬಳಿಕ ಸಿಗಲಿರುವ ವರದಿಯನ್ನು ಇಲಾಖೆ ಸರ್ಕಾರಕ್ಕೆ ಸಲ್ಲಿಸಲಿದೆ. ಸರ್ಕಾರ ಮುಂದೆ ಸಂಭವಿಸಲಿರುವ ಪ್ರವಾಹವನ್ನು ಹೇಗೆ ತಡೆಯಬಹುದು, ಅಲ್ಲಿ ತಡೆಗೋಡೆ ನಿರ್ಮಿಸಬಹುದು ಅಥವಾ ಅಲ್ಲಿರುವ ಜನರು ಸ್ಥಳಾಂತರಿಸಬೇಕೆ ಎನ್ನೋ ಬಗ್ಗೆ ನಿರ್ಧರಿಸಲಿದೆ.

ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ: ಹಾಗೆ ನೋಡಿದರೆ ಸಾಕಷ್ಟು ಕಡೆಗಳಲ್ಲಿ ಒತ್ತುವರಿಯಾಗಿರುವ ನದಿಯ ಸಂರಕ್ಷಿತ ಜಾಗವನ್ನು ತೆರವು ಮಾಡಬೇಕಾಗಿರುವುದು ಸರ್ಕಾರದ ಮೊದಲ ಆದ್ಯತೆ ಮತ್ತು ಜವಾಬ್ದಾರಿ. ಈಗಾಗಲೇ ನದಿಯ ಎರಡು ಕಡೆಗಳಲ್ಲಿ ಸಾಕಷ್ಟು ಒತ್ತುವರಿಯಾಗಿದೆ. ನದಿಯ ಮಧ್ಯಭಾಗದಿಂದ 150 ಮೀಟರ್ ಜಾಗವನ್ನು ಸಂರಕ್ಷಿತ ಜಾಗವಾಗಿಯೇ ಉಳಿಸಬೇಕು. ಸರ್ವೆ ಮುಗಿಯುತ್ತಿದ್ದಂತೆ ಈಗಲಾದರೂ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ನದಿಯ ಸರಾಗ ಹರಿವಿಗೆ ಅವಕಾಶ ಮಾಡಿಕೊಡಲಿ. ಇಲ್ಲದಿದ್ದರೆ ಪ್ರವಾಹ ಬಂದು ಜನರ ಬದುಕು ಹಾಳಾಗುತ್ತಿದೆ ಎಂದು ಪ್ರತೀ ವರ್ಷ ಪರಿಹಾರ ನೀಡೋದು ಸರಿಯಲ್ಲ. ಇದು ಮುಂದಿನ ಪೀಳಿಗೆಗೂ ಒಳ್ಳೆಯದಲ್ಲ ಎನ್ನೋದು ಸಾಮಾಜಿಕ ಹೋರಾಟಗಾರ ವಿ ಪಿ ಶಶಿಧರ್ ಅವರ ಆಗ್ರಹ.

ಇದನ್ನೂ ಓದಿ: ಇದು ಕುಗ್ರಾಮವಾದರೂ ಪವರ್ ಕಟ್ ಸಮಸ್ಯೆ ಇಲ್ಲ; ಗ್ರಾಮಸ್ಥರಿಂದಲೇ ಕರೆಂಟ್ ಉತ್ಪಾದನೆ

ಈ ಕುರಿತು ಪ್ರತಿಕ್ರಿಯಿಸಿರುವ ಹಾರಂಗಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತೀವ್ರ ಪ್ರವಾಹಕ್ಕೆ ತುತ್ತಾಗಿರುವ ಕುಶಾಲನಗರದಿಂದ ಕೂಡಿಗೆ ವರೆಗೆ ಸರ್ವೆ ಮಾಡಲಿದ್ದೇವೆ. ಬಳಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ನಂತರ ಯಾವ ಯೋಜನೆಯನ್ನು ಸರ್ಕಾರ ರೂಪಿಸುತ್ತದೆಯೋ ಗೊತ್ತಿಲ್ಲ ಎನ್ನೋ ಸಬೂಬು ಉತ್ತರ ಇಲಾಖೆಯದ್ದು. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಾವೇರಿ ನದಿ ಸರ್ವೆ ಮಾಡಲಾಗುತ್ತಿದ್ದು, ನದಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಆತಂಕ ಎದುರಾಗಿರುವುದಂತು ಸತ್ಯ.
Published by:Kavya V
First published: