ವಿಜಯಪುರ, (ಫೆ. 05): ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಕಾಂಕ್ಷಿಗಳು ಬಿರುಸಿನ ಪ್ರವಾಸ ಕೈಗೊಳ್ಳುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಮತ್ತು ಮಾಜಿ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಈಗ ಬಸವ ನಾಡಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಪ್ರವಾಸದ ಅಂಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪರ ಹಿರಿಯ ಮತ್ತು ಕಿರಿಯ ಸಾಹಿತಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಾವು ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಬಾರಿ ಸ್ಪರ್ಥಾಳುಗಳಲ್ಲಿ ತಾವು ಮಾತ್ರ ಏಕೈಕ ಸಾಹಿತಿಯಾಗಿದ್ದು, 16 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದೇನೆ. ಅಲ್ಲದೇ, ಕೇಂದ್ರ ಮತ್ತು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎರಡು ಅವಧಿಗೆ ಗೌರವ ಕಾರ್ಯದರ್ಶಿಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದೇನೆ. ಐದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಅನೇಕ ವಿಚಾರ ಸಂಕಿರಣ, ಕಮ್ಮಟ, ಸಮಾವೇಶ, ಗೋಷ್ಠಿಗಳನ್ನು ಆಯೋಜಿಸುವ ಮೂಲಕ ಪೂರ್ಣ ಪ್ರಮಾಣದಲ್ಲಿ ಸಾಹಿತಿಗಳೊಂದಿಗೆ ಒಡನಾಟ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ತಾವು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಂಚಾಲಕನಾಗಿ ದುಡಿದಿದ್ದೇನೆ. ಸರ್ವ ಸಮ್ಮತ ಅಭ್ಯರ್ಥಿಯಾಗಿದ್ದರೂ ಕೂಡ ಆರ್ಥಿಕ ಚೈತನ್ಯವಿಲ್ಲದ ಕಾರಣ ಚುನಾವಣೆ ಯಶಸ್ಸಿಗೆ ಪಾಲುದಾರಿಕೆಯ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದೇನೆ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತನ್ನು ಕಟ್ಟಿ ಬೆಳೆಸುವ ಹೊಸ ಆಯಾಮಗಳ ಆಲೋಚನೆಯೊಂದಿಗೆ ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಿಕೊಂಡಿದ್ದು, ಅವುಗಳ ಸಮರ್ಪಕ ಅನುಷ್ಠಾನವೇ ತಮ್ಮ ಏಕೈಕ ಗುರಿಯಾಗಿದೆ. ಪ್ರತಿಭಾ ನ್ಯಾಯ, ಪ್ರಾದೇಶಿಕ ನ್ಯಾ, ಸಾಮಾಜಿಕ ನ್ಯಾಯದ ಅಡಿಯೇ ತಾವು ಕಾರ್ಯಕ್ಷಮತೆಯ ಯೋಜನೆಗಳನ್ನು ತಾವು ಹೊಂದಿದ್ದು, ಅವುಗಳನ್ನು ಚಾಚೂ ತಪ್ಪತೆ ಕಾರ್ಯಗತ ಮಾಡುವುದಾಗಿ ಸಂಗಮೇಶ ಬಾದವಾಡಗಿ ಅವರು ತಿಳಿಸಿದರು.
ಇದನ್ನು ಓದಿ: ಹಾವೇರಿಯಲ್ಲಿ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿದ ಸರ್ಕಾರ
ಈ ಬಾರಿ ರಾಜ್ಯಾದ್ಯಂತ 3.30 ಲಕ್ಷ ಮತದಾರರು ಈ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ನೇರವಾಗಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವುದರಿಂದ ಈ ಬಾರಿ ತಮಗೆ ಮತದಾರರು ಅವಕಾಶ ನೀಡುವ ವಿಶ್ವಾಸವಿದೆ. ಅಲ್ಲದೇ, ತಮಗೆ ಈಗಾಗಲೇ ಹಲವಾರು ಜನ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ ಅಜೀವ ಸದಸ್ಯರು ಮೊಬೈಲ್, ಇ-ಮೇಲ್ ಮತ್ತು ವಾಟ್ಸಾಪ್ ಸೇರಿದಂತೆ ನಾನಾ ಸಂವಹನ ಮಾಧ್ಯಮಗಳ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದಸ್ಯರ ಈ ಪ್ರೀತಿ ಮತ್ತು ಒತ್ತಾಯದ ಹಿನ್ನೆಲೆಯಲ್ಲಿ ತಾವು ಈ ಬಾರಿ ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಸಂಗಮೇಶ ಬಾದವಾಡಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣು ಸಬರದ ಸೇರಿದಂತೆ ನಾನಾ ಸಾಹಿತಿಗಳು ಉಪಸ್ಥಿತರಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ