ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ‌ನೆಲಕಚ್ಚಿದ್ದ ಮತ್ಸ್ಯೋದ್ಯಮ; ಕಂಗಾಲಾದ ಮೀನುಗಾರರು

ಈ ಬಾರಿ ಸಹ ಮಳೆಯ ಅಬ್ಬರದಿಂದಾಗಿ ಸಾಂಪ್ರದಾಯಿಕ ಮೀನುಗಾರರು ಕಡಲಿಗಿಳಿಯಲಾಗದೇ ಬೋಟುಗಳು ದಡದ ಮೇಲೆ ಉಳಿಯುವಂತಾಗಿದೆ. 

ಕಡಲ ತೀರದಲ್ಲಿ ನಿಂತ ಬೋಟ್​ಗಳು

ಕಡಲ ತೀರದಲ್ಲಿ ನಿಂತ ಬೋಟ್​ಗಳು

  • Share this:
ಕಾರವಾರ (ಜು. 15): ಅದ್ಯಾಕೋ ಏನೋ‌ ಕಳೆದೆರಡು ವರ್ಷಗಳಿಂದ ಉತ್ತರಕನ್ನಡದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ.  ನೆರೆ ಪ್ರವಾಹದಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆಗೆ ಕಳೆದ ವರ್ಷ ಕೊರೊನಾ ಅಡ್ಡಿಯಾಗಿತ್ತು. ಈ ಬಾರಿ ಸಹ ಮಳೆಯ ಅಬ್ಬರದಿಂದಾಗಿ ಸಾಂಪ್ರದಾಯಿಕ ಮೀನುಗಾರರು ಕಡಲಿಗಿಳಿಯಲಾಗದೇ ಬೋಟುಗಳು ದಡದ ಮೇಲೆ ಉಳಿಯುವಂತಾಗಿದೆ. 

ಸಾಂಪ್ರದಾಯಿಕ ಮೀನುಗಾರೆ ಬದುಕಲ್ಲಿ ಪ್ರಕೃತಿ  ಮುನಿಸು

ಜಿಲ್ಲೆಯ ಕಾರವಾರ ಸೇರಿ ಕೆಲವಡೆ  ಕಡಲತೀರದಲ್ಲಿ ಪ್ರತಿಬಾರಿ ಮಳೆಗಾಲದ ಅವಧಿಯಲ್ಲಿ ಮೀನು ಹೊತ್ತು ತರುತ್ತಿದ್ದ ಸಾಂಪ್ರದಾಯಿಕ ದೋಣಿಗಳು ಈ ಬಾರಿ ಮೀನುಗಾರಿಕೆಗೆ ತೆರಳಲಾಗದೇ ದಡದಲ್ಲಿಯೇ ಉಳಿದುಕೊಂಡಿವೆ. ಪ್ರತಿವರ್ಷ ಮಳೆಗಾಲ ಆರಂಭದ ಜೂನ್ ತಿಂಗಳಿನಿಂದ 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಆದ್ರೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇರುವ ಹಿನ್ನಲೆ ಸಣ್ಣ ದೋಣಿಗಳಲ್ಲಿ 10 ನಾಟಿಕಲ್ ಮೈಲು ದೂರದೊಳಗೆ ಮೀನುಗಾರಿಕೆ ನಡೆಸಲಾಗುತ್ತದೆ. ಯಂತ್ರ ಬಳಸದೇ ಸಣ್ಣ ದೋಣಿಗಳಲ್ಲಿ ಬಲೆಯನ್ನ ಬೀಸಿ ಸಿಗುವ ಮೀನುಗಳನ್ನ ಮಾರಾಟ ಮಾಡಿ ಸಾಕಷ್ಟು ಮೀನುಗಾರರು ಜೀವನ ನಡೆಸುತ್ತಿದ್ದರು.

ಆದ್ರೆ ಈ ಬಾರಿ ಕಳೆದೊಂದು ತಿಂಗಳಿನಿಂದ ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಮತ್ತೆ ಮಳೆ ಮುಂದುವರೆದ ಹಿನ್ನಲೆ ಕಡಲಿಗೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಮಳೆಗಾಲದ ಸಂದರ್ಭದಲ್ಲಿ ಉತ್ತಮ ಮೀನುಗಾರಿಕೆ ನಡೆಸುತ್ತಿದ್ದ ಸಾಂಪ್ರದಾಯಿಕ ಮೀನುಗಾರರಿಗೆ ಇದು ಸಂಕಷ್ಟ ತಂದೊಡ್ಡಿದೆ. ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನಲೆ ಸಮುದ್ರದಲ್ಲಿ ದೋಣಿ ಇಳಿಸುವುದು ಅಪಾಯಕಾರಿಯಾಗಿದ್ದು ಮೀನುಗಾರಿಕೆಗೆ ತೆರಳಲಾಗದೇ ನೂರಾರು ಸಾಂಪ್ರದಾಯಿಕ ದೋಣಿಗಳು ದಡದಲ್ಲಿಯೇ ಉಳಿದುಕೊಂಡಿವೆ.

ಇದನ್ನು ಓದಿ: ವಿಶ್ವ ವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ

ಸಾಂಪ್ರದಾಯಿಕ ಮೀನುಗಾರಿಕೆ‌ ಹಂಗಾಮು ಸಂಪೂರ್ಣ ನಷ್ಟ

ಇನ್ನು ಆಳಸಮುದ್ರ ಮೀನುಗಾರಿಕೆಗೆ ಅವಕಾಶ ಇರುವ ವೇಳೆ ಸಾಂಪ್ರದಾಯಿಕ ಮೀನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುವುದಿಲ್ಲ. ಜೂನ್ 1 ರಿಂದ ಜುಲೈ 31ರ ವರೆಗೆ ಯಾಂತ್ರೀಕೃತ ಬೋಟುಗಳು ಕಡಲಿಗೆ ಇಳಿಯದಿರುವುದರಿಂದ ಈ ವೇಳೆಯಲ್ಲಿಯೇ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಸಿಕೊಂಡು ಉತ್ತಮ ಆದಾಯ ಗಳಿಸಿಕೊಳ್ಳುತ್ತಿದ್ದರು. ಈಗಾಗಲೇ ಆಳಸಮುದ್ರ ಮೀನುಗಾರಿಕೆ ನಿಷೇಧ ಅವಧಿ ಮುಗಿಯುವ ಹಂತಕ್ಕೆ ಬಂದಿದ್ದು ಈ ಬಾರಿಯೂ ಸಾಂಪ್ರದಾಯಿಕ ಮೀನುಗಾರಿಕೆ ವರುಣನ ಅವಕೃಪೆಗೆ ಒಳಗಾದಂತಾಗಿದೆ.

ಇದನ್ನು ಓದಿ: ರಾಜ್ಯದಲ್ಲಿ 28,000 ಕೋಟಿ ರೂ. ಹೂಡಿಕೆ; ಅದಾನಿ ಸೇರಿದಂತೆ ಹಲವು ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ

ಮೀನುಗಾರಿಕೆ ನಡೆಸಲು ಸಾಲ ಮಾಡಿ ಬೋಟು, ಬಲೆಗಳನ್ನ ಸಿದ್ಧಪಡಿಸಿಕೊಳ್ಳುವ ಮೀನುಗಾರರು ಮೀನುಗಾರಿಕೆ ನಡೆಯದೇ ಸಂಕಷ್ಟದಲ್ಲಿದ್ದು ಸರ್ಕಾರ ನೆರವು ನೀಡಬೇಕು ಅನ್ನೋದು ಮೀನುಗಾರರ ಅಭಿಪ್ರಾಯ. ‌ಇನ್ನು ಕರಾವಳಿಯಲ್ಲಿ ಜುಲೈ 17ರ ವರೆಗೂ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದ್ದು ಸಾಂಪ್ರದಾಯಿಕ ಮೀನುಗಾರಿಕೆಗೂ ಸಹ ನಿಷೇಧ ಹೇರಲಾಗಿದೆ ಅಂತಾ ಮೀನುಗಾರಿಕಾ ಇಲಾಖೆ ಮಾಹಿತಿ ನೀಡಿದೆ.

ಒಟ್ಟಾರೇ ಕರಾವಳಿಯಲ್ಲಿ ಈ ಬಾರಿಯೂ ಸಹ ಸಾಂಪ್ರದಾಯಿಕ ಮೀನುಗಾರಿಕೆ ವರುಣನ ಅಬ್ಬರದಿಂದಾಗಿ ಸ್ಥಗಿತಗೊಳ್ಳುವಂತಾಗಿದೆ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಸಾಂಪ್ರದಾಯಿಕ ಮೀನುಗಾರರಿಗೆ ನೆರವು ನೀಡಬೇಕಿದೆ. ನಾಡ ದೋಣಿ ಹೊಂದಿದ ಮೀನುಗಾರರಿಗೆ ಸಹಾಯ ಧನ ನೀಡುವಂತಾಗಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: