ಕಾರವಾರ (ಜ. 28): ಅರಬ್ಬಿ ಸಮುದ್ರದ ಮಧ್ಯೆ ಇರುವ ಕೂರ್ಮಗಡ ನರಸಿಂಹ ದೇವರ ಜಾತ್ರೆ ಸುಪ್ರಸಿದ್ಧಿ ಪಡೆದಿದೆ. ಈ ಜಾತ್ರೆಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೇ, ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಕೇವಲ ನರಸಿಂಹ ಸ್ವಾಮಿ ದೇವರ ದರ್ಶನ ಅಷ್ಟೆ ಅಲ್ಲದೆ ಭಕ್ತರಿಗೆ ದೋಣಿಯ ಪಯಣ ಕೂಡ ಇದಕ್ಕೆ ಕಾರಣ. ಆದರೆ, 2019ರಲ್ಲಿ ಆದ ದೋಣಿ ದುರಂತವನ್ನು ಇಲ್ಲಿನ ಜನರಲ್ಲಿ ಇನ್ನು ಮಾಸದ ಗಾಯವಾಗಿದೆ. ಇದೇ ಕಾರಣದಿಂದ ಈಗ ಈ ಜಾತ್ರೆ ಎಂದರೆ ಎಲ್ಲೆಡೆ ಕಟ್ಟೆಚ್ಚರಿಕೆ. ಈ ಹಿಂದೆ ಪ್ರತಿ ವರ್ಷ ಜಾತ್ರೆಗೆ ಸಮುದ್ರದ ಮೂಲಕ ತೆರಳಲು ಬೈತ್ಕೋಲ್ ಮೀನುಗಾರಿಕಾ ಬಂದರಿನ ಮೂಲಕ, ಕೋಡಿಬಾಗ ಮೂಲಕ ಮತ್ತು ದೇವಬಾಗ್ , ಮಾಜಾಳಿ ಮೂಲಕ ಹೀಗೆ ಹತ್ತು ಹಲವು ಕಡೆಯಿಂದ ಭಕ್ತರು ದೋಣಿ ಮೂಲಕ ಆಗಿಸುತ್ತಿದ್ದರು. ಆದರೆ, 2019 ರ ಕಹಿ ಘಟನೆಯ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಉತ್ತರ ಕನ್ನಡ ಜಿಲ್ಲಾಡಳಿತ ಕೇವಲ ಬೈತ್ಕೋಲ್ ಮೀನುಗಾರಿಕಾ ಬಂದರು ಮತ್ತು ಕಡವಾಡದ ಮೂಲಕ ಮಾತ್ರ ಬೋಟ್ ವ್ಯವಸ್ಥೆ ಮಾಡಿದೆ. ಹೀಗಾಗಿ ಈ ವರ್ಷದ ಜಾತ್ರೆಗೆ ಭಕ್ತರ ಸಂಖ್ಯೆ ತೀರಾ ಕಡಿಮೆ ಆಗಿದೆ. ಜೊತೆಗೆ ಕೊರೋನಾ ಕೂಡ ಕರಿಛಾಯೆ ಬೀರಿದ್ದು, ಸರಳವಾಗಿ ಜಾತ್ರೆ ಸಂಭ್ರಮ ನೆರೆವೇರಿದೆ.
ನರಸಿಂಹ ಸ್ವಾಮಿ ದರ್ಶನ ಪಡೆದ ಶಾಸಕಿ
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್ ಕೂಡ ನರಸಿಂಹ ದೇವರ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಈ ದೇವಾಲಯದಲ್ಲಿ ಅಭಿವೃದ್ದಿ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು. ಜೊತೆಗೆ ಮುಂದಿನ ಜಾತ್ರೆ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಉಚಿತ ಸೇವೆ ನೀಡಿದ ಮೀನುಗಾರರು
ಕೂರ್ಮಗಡ ನರಸಿಂಹ ದೇವರ ಜಾತ್ರೆ ತೆರಳಲು ಜಿಲ್ಲಾಡಳಿತದಿಂದ ಯಾವುದೇ ಬೋಟ್ ವ್ಯವಸ್ಥೆ ಇರುವುದಿಲ್ಲ. ಇದೇ ಕಾರಣಕ್ಕೆ ಕಾರವಾರದ ಬೈತ್ಕೋಲ್ ಮೀನುಗಾರರು ತಮ್ಮ ಬೋಟ್ಗಳ ಮೂಲಕ ಭಕ್ತರಿಗೆ ಉಚಿತ ಸೇವೆ ನೀಡಿದರು. ಕಳೆದ ಹಲವು ವರ್ಷದಿಂದಲೂ ಕಾರವಾರ ಮೀನುಗಾರರು ಬೈತ್ಕೋಲ್ ಮೂಲಕ ತೆರಳುವ ಭಕ್ತರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಇನ್ನೂ ನರಸಿಂಹ ದೇವರು ಮೀನುಗಾರರ ಆರಾಧ್ಯ ದೈವ ಆಗಿರುವುದರಿಂದ ಇಲ್ಲಿ ಮೀನುಗಾರರು ಹಾಗೆ ಇನ್ನಿತರೆ ಸಮುದಾಯದ ಭಕ್ತರು ಬಾಳೆಗೊನೆ ಹರಕೆ ನೀಡಿ ಕೃತಾರ್ಥರಾದರು. ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ಇಲ್ಲಿನ ಮೀನುಗಾರರು ಕಡ್ಡಾಯವಾಗಿ ನರಸಿಂಹ ದೇವರನ್ನ ನೆನೆದು ಸಾಗುತ್ತಾರೆ. ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾವಲು ಪಡೆ ಗಸ್ತು ತಿರುಗಿತು. ಒಟ್ಟಾರೆ ಈ ವರ್ಷ ನರಸಿಂಹ ದೇವರ ಜಾತ್ರೆ ಸರಳವಾಗಿ ಅತಿ ಕಡಿಮೆ ಭಕ್ತರ ನಡುವೆ ನಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ