ಬೆಳಗಾವಿ: ಸುವರ್ಣ ಸೌಧದಲ್ಲಿ (Suvarna Soudha) ಬಸವಣ್ಣ, ಸಾವರ್ಕರ್ (Vinayak Damodar Savarkar) ಸೇರಿದಂತೆ ಏಳು ನಾಯಕರ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿದೆ. ಅಧಿವೇಶನಕ್ಕೂ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Speaker Vishweshwar Hegde Kageri) ಅವರು ಸದನದಲ್ಲಿ ಅನಾವರಣ ಮಾಡಿದರು. ಈ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ಕೂಡ ಮಾಹಿತಿ ನೀಡಲಾಗಿತ್ತು, ಆದರೆ ಇದಕ್ಕೆ ಅವರು ಗೈರಾಗಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ (Congress) ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಈ ಬಗ್ಗೆ ವಿರೋಧ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಿಲ್ಲ ಎಂದಿದೆ.
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ನಿಂದ 'ಕನ್ನಡ ಅಸ್ಮಿತೆ' ಅಸ್ತ್ರ
ಕಾಂಗ್ರೆಸ್ ವಿರೋಧದ ನಡುವೆಯೂ ಸಾವರ್ಕರ್ ಫೋಟೋ ಅನಾವರಣ ಮಾಡಲಾಗಿದೆ. ಆದರೆ ಈಗ ಕಾಂಗ್ರೆಸ್ ನಾಯಕರು ಹಲವು ಮಹನೀಯರ ಫೋಟೋಗಳನ್ನು ಅನಾವರಣ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ರಾಷ್ಟ್ರೀಯ ನಾಯಕರು ಸೇರಿದಂತೆ ರಾಜ್ಯದ ಗಣ್ಯರ ಫೋಟೋಗಳ ಅನಾವರಣ ಆಗಬೇಕು ಎಂದಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ಧ ಕನ್ನಡದ ಅಸ್ಮಿತೆ ಅಸ್ತ್ರ ಪ್ರಯೋಗ ಮಾಡಿದ್ದು, ಕನ್ನಡದ ಮಹನೀಯರ ಫೋಟೋ ಹಾಕಲು ಒತ್ತಾಯ ಮಾಡಿ ಪ್ರತಿಭಟನೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಮಹರ್ಷಿ ವಾಲ್ಮೀಕಿ, ಬಸವಣ್ಣ, ಸಂತ ಶಿಶುನಾಳ ಶರೀಫ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ನೆಹರೂ, ಜಗಜೀವನ ರಾಮ್, ಸರದಾರ ವಲ್ಲಭಬಾಯ್ ಪಟೇಲ್, ಕುವೆಂಪು ಮತ್ತಿತರ ಮಹನೀಯರ ಭಾವಚಿತ್ರ ಹಾಕಬೇಕೆಂದು ಒತ್ತಾಯಿಸಿ, ಈ ಮಹನೀಯರ ಭಿತ್ತಿಚಿತ್ರಗಳನ್ನು ಹಿಡಿದು ಬೆಳಗಾವಿ ಸುವರ್ಣಸೌಧದ ಪ್ರವೇಶ ದ್ವಾರದಲ್ಲಿ ಪ್ರದರ್ಶನ ನಡೆಸಲಾಯಿತು. pic.twitter.com/BGuHUllXzD
— Karnataka Congress (@INCKarnataka) December 19, 2022
ಪ್ರತಿಭಟನೆ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಮಗೆ ಯಾವುದೇ ಫೋಟೋ ಇಡಲು ಯಾವುದೇ ಅಭ್ಯಂತರ ಇಲ್ಲ. ಆದರೆ ಫೋಟೋಗಳನ್ನು ಅನಾವರಣ ಮಾಡುವ ಮುನ್ನ ಸದನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಇದನ್ನು ಆಡಳಿತ ಪಕ್ಷ ಮಾಡಿಲ್ಲ, ಯಾರ ಫೋಟೋ ಇಡಬೇಕು ಅಂತ ಕೂಡ ಚರ್ಚೆ ಮಾಡಿಲ್ಲ.
ಈಗ ಅವರು ಯಾಕೆ ಫೋಟೋ ಇಡುತ್ತಿದ್ದಾರೆ ಎಂದರೇ, ಇಂದು ನಾವು ಸದನದಲ್ಲಿ ಸರ್ಕಾರದ ಭ್ರಷ್ಟಾಚಾರ, ರಾಜ್ಯದ ಕಾನೂನು ಸುವ್ಯವಸ್ಥೆ, ವೋಟರ್ ಐಡಿ ಹಗರಣ, ರೈತರ ಸಮಸ್ಯೆ, ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಹಗರಣಗಳ ಬಗ್ಗೆ ಪ್ರಸ್ತಾಪ ಮಾಡ್ಬೇಕಿತ್ತು. ಆದ್ದರಿಂದ ಇವುಗಳನ್ನು ವಿಷಯಾಂತರ ಮಾಡಲು ಹೀಗೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Karnataka Assembly Session: ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ ಅನಾವರಣ, ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್
ಬಿಜೆಪಿ ಲೆಕ್ಕಾಚಾರ ಉಲ್ಟಾ ಮಾಡಿದ ಕಾಂಗ್ರೆಸ್?
ಸದನದಲ್ಲಿ ವಿರೋಧಿ ಪಕ್ಷದ ಕಾಂಗ್ರೆಸ್ ನಾಯಕರನ್ನು ಕಟ್ಟಿ ಹಾಕಲು ತಂತ್ರ ರೂಪಿಸಿದ್ದ ರಾಜ್ಯ ಬಿಜೆಪಿ ಸರ್ಕಾರ ಉಲ್ಟಾ ಆಗಿದೆ. ಸದನದಲ್ಲಿ ಸಾವರ್ಕರ್ ಫೋಟೋ ಹಾಕಿ ಗಮನ ಬೇರೆಡೆ ಸೆಳೆಯಲು ಬಿಜೆಪಿ ಮುಂದಾಗಿತ್ತಂತೆ. ಇದಕ್ಕಾಗಿಯೇ, ತರಾತುರಿಯಲ್ಲಿ ಭಾವಚಿತ್ರಗಳನ್ನು ಅನಾವರಣ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆ ಮೂಲಕ ಮುಂದಿನ ಮುರ್ನಾಲ್ಕು ದಿನಗಳ ಕಾಲ ಇದೇ ವಿಚಾರ ಸದನದಲ್ಲಿ ಸದ್ದು ಮಾಡಲಿ, ಇದರಿಂದ ಸರ್ಕಾರದ ಮೇಲಿನ ಆರೋಪಗಳು ಡೈವರ್ಟ್ ಆಗಲಿವೆ. ಆ ಮೂಲಕ ಮುಜುಗರದಿಂದ ಪಾರಾಗಬಹುದು ಎಂಬ ಲೆಕ್ಕಾಚಾರವನ್ನು ಸರ್ಕಾರ ಹಾಕಿತ್ತಂತೆ.
ರಾಜ್ಯ ಸರ್ಕಾರದ ತಂತ್ರಕ್ಕೆ ನಯವಾಗಿಯೇ ಕೌಂಟರ್ ಕೊಟ್ಟ ಕಾಂಗ್ರೆಸ್
ಸರ್ಕಾರದ ತಂತ್ರಕ್ಕೆ ನಯವಾಗಿಯೇ ಕೌಂಟರ್ ಕೊಟ್ಟ ಕಾಂಗ್ರೆಸ್, ಸಾವರ್ಕರ್ ವಿಚಾರ ಜೋರು ಮಾಡುವುದು ಬೇಡ ಅಂತ ನಿರ್ಧರಿಸಿದೆಯಂತೆ. ನಾವು ಹೋರಾಟಕ್ಕಿಳಿದರೆ ಮಾಧ್ಯಮಗಳಲ್ಲೇ ಇದೇ ದೊಡ್ಡದಾಗಲಿದೆ. ಜೊತೆಗೆ ಸಾವರ್ಕರ್ ಫೋಟೋ ಹಾಕುವುದರಿಂದ ಏನೂ ಆಗಬೇಕಿಲ್ಲ. ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಾಗ ಸಾವರ್ಕರ್ ಫೋಟೋವನ್ನು ತೆಗೆದು ಹಾಕಬಹುದು ಎಂಬ ಚಿಂತನೆ ನಡೆಸಿದೆಯಂತೆ.
ಸಾವರ್ಕರ್ ಬದಲು ಸರ್ಕಾರದ ವೈಫಲ್ಯಗಳ ಬಗ್ಗೆ ಧ್ವನಿ
ಕೆಲವೇ ತಿಂಗಳ ಅವಧಿಯಲ್ಲಿ ಚುನಾವಣೆ ಎದುರಾಗುವ ಕಾರಣ ಸರ್ಕಾರ ಕಟ್ಟಿಹಾಕೋಕೆ ಇದು ಒಳ್ಳೆಯ ಸಮಯ. ತರಾತುರಿಯಲ್ಲಿ ಫೋಟೋ ಅನಾವರಣ ಮಾಡಿರುವ ವಿಚಾರದ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದು ಬೇಡ. ಈ ಬಗ್ಗೆ ಧ್ವನಿ ಎತ್ತಿದರೆ ಪಿಎಸ್ಐ ಅಕ್ರಮ ನೇಮಕಾತಿ ಹಗರಣ, ಚಿಲುಮೆ ವೋಟರ್ ಐಡಿ ಹಗರಣ, 40 ಪರ್ಸೆಂಟ್ ಕಮಿಷನ್ ಸೇರಿದಂತೆ ಮುಖ್ಯ ವಿಚಾರಗಳು ಮೂಲೆ ಸೇರುತ್ತವೆ. ಹಾಗಾಗೀ ಸಾರ್ವರ್ಕರ್ ವಿಚಾರ ಬೇರೆ ಸಮಯದಲ್ಲಿ ಹೋರಾಟಕ್ಕೆ ತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ನಿರ್ಧರಿಸಿದೆಯಂತೆ.
ಈ ತಂತ್ರದಂತೆ ನಾಳೆ ಸದನ ಆರಂಭವಾಗುತ್ತಿದಂತೆ 40 ಪರ್ಸೆಂಟ್ ಕಮಿಷನ್, ಪಿಎಸ್ಐ ನೇಮಕಾತಿ ಹಗರಣ, ವೋಟರ್ ಐಡಿ ಹಗರಣ ಬಗ್ಗೆ ಪ್ರಸ್ತಾಪ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆಯಂತೆ. ಮೊದಲು ಸರ್ಕಾರದ ಮೇಲಿನ ಆರೋಪಗಳ ಬಗ್ಗೆ ದೊಡ್ಡದಾಗಿ ಚರ್ಚೆಗೆ ಮಾಡುವುದರಿಂದ ಸರ್ಕಾರಕ್ಕೆ ಸಾಕಷ್ಟು ಡ್ಯಾಮೇಜ್ ಆಗಲಿದೆ ಎಂದು ಯೋಜಿಸಿ ಸಾವರ್ಕರ್ ಫೋಟೋ ಬಗ್ಗೆ ಸಾಂಕೇತಿಕ ಪ್ರತಿಭಟನೆ ಮಾಡಿ ಕೈ ಬಿಡಲಾಗಿದೆಯಂತೆ.
ಕಾಂಗ್ರೆಸ್ ಹೈಕಮಾಂಡ್ನಿಂದ ಸ್ಪಷ್ಟ ಸಂದೇಶ
ಕಾಂಗ್ರೆಸ್ ಹೈಕಮಾಂಡ್ ಕೂಡ ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲಾ ಅವರ ಮೂಲಕ ನಾಯಕರಿಗೆ ಸಂದೇಶ ರವಾನಿಸಿದ್ದು, ನಾಳೆಯಿಂದ ಸದನದಲ್ಲಿ ಕಮಿಷನ್ ಆರೋಪ, ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಬಗ್ಗೆ ಪ್ರಸ್ತಾಪಿಸಲು ಸೂಚನೆ ನೀಡಿದೆಯಂತೆ.
ಇದೇ ವಿಚಾರದ ಬಗ್ಗೆ ನಿನ್ನೆ ಸ್ಪಷ್ಟ ಸಂದೇಶ ರವಾನಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಯಾವುದೇ ಕಾರಣಕ್ಕೂ ಸಾವರ್ಕರ್ ಫೋಟೋ ವಿಚಾರಕ್ಕೆ ವಿರೋಧ ಬೇಡ ಸೂಚಿಸಿತ್ತಂತೆ. ಇದರಂತೆ ನಡೆದುಕೊಂಡಿರುವ ಕಾಂಗ್ರೆಸ್ ನಾಯಕರು, ಸಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದ ಬಿಜೆಪಿ ತಂತ್ರ ಉಲ್ಟಾ ಆಗಿದೆ. ಸಾಫ್ಟ್ ಹಿಂದುತ್ವದ ಮೂಲಕ ಕಾಂಗ್ರೆಸ್ ತಿರುಗೇಟು ಕೊಡಲು ಕಾಂಗ್ರೆಸ್ ತಯಾರಿ ನಡೆಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ