HOME » NEWS » State » KARNATAKA WILL GET NORTH KARNATAKA CM AFTER UGADI FESTIVAL BJP MLA BASANAGOUDA PATIL YATNAL CONTROVERSY VTC SCT

ಯುಗಾದಿ ಬಳಿಕ ಉತ್ತರ ಕರ್ನಾಟಕದವರೇ ರಾಜ್ಯದ ಸಿಎಂ ಆಗುತ್ತಾರೆ; ಬಿಜೆಪಿ ಶಾಸಕ ಯತ್ನಾಳ್ ಭವಿಷ್ಯ

 ಪಂಚಮಸಾಲಿ ಸಮುದಾಯವನ್ನು ಉಪಯೋಗಿಸಿಕೊಂಡು ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆ ಕುರ್ಚಿ ಮೇಲೆ ಕುಳಿತು ನಮ್ಮ ಸಮಾಜವನ್ನು ಮರೆತಿದ್ದಾರೆ. ಅದನ್ನು ನಾವು ನೆನಪು ಮಾಡಿಕೊಡುತ್ತೇವೆ ಎಂದು ಸಿಎಂ  ಯಡಿಯೂರಪ್ಪ ವಿರುದ್ದ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ. 

news18-kannada
Updated:February 3, 2021, 8:08 AM IST
ಯುಗಾದಿ ಬಳಿಕ ಉತ್ತರ ಕರ್ನಾಟಕದವರೇ ರಾಜ್ಯದ ಸಿಎಂ ಆಗುತ್ತಾರೆ; ಬಿಜೆಪಿ ಶಾಸಕ ಯತ್ನಾಳ್ ಭವಿಷ್ಯ
ಬಸನಗೌಡ ಪಾಟೀಲ್ ಯತ್ನಾಳ್
  • Share this:
ಚಿತ್ರದುರ್ಗ (ಫೆ. 3): ರಾಜ್ಯದಲ್ಲಿ ಯುಗಾದಿ ಬಳಿಕ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗುತ್ತಾರೆ. ಎಲ್ಲರೂ ಪ್ರೀತಿಯಿಂದ ನನ್ನ ಸಿಎಂ ಎಂದು ಹೇಳುತ್ತಿದ್ದಾರೆ. ಅದನ್ನು ಪಕ್ಷ ನಿರ್ಧರಿಸುತ್ತದೆ. ನಾನು ಸಚಿವ ಸ್ಥಾನ ಕೇಳಿಲ್ಲ. ಯಡಿಯೂರಪ್ಪನವರ ಸಂಪುಟದಲ್ಲಿ ಯಾವ ಕಾರಣಕ್ಕೂ ಮಂತ್ರಿಯಾಗಲ್ಲ. ನಾನು ಯಾವ ಮಠಾಧೀಶರ ಕಾಲು ಹಿಡಿದಿಲ್ಲ. ಪಂಚಮಸಾಲಿ ಸಮುದಾಯವನ್ನು ಉಪಯೋಗಿಸಿಕೊಂಡು ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆ ಕುರ್ಚಿ ಮೇಲೆ ಕುಳಿತು ನಮ್ಮ ಸಮಾಜವನ್ನು ಮರೆತಿದ್ದಾರೆ. ಅದನ್ನು ನಾವು ನೆನಪು ಮಾಡಿಕೊಡುತ್ತೇವೆ ಎಂದು ಪರೋಕ್ಷವಾಗಿ ಸಿಎಂ  ಯಡಿಯೂರಪ್ಪ ವಿರುದ್ದ ಯತ್ನಾಳ್  ವಾಗ್ದಾಳಿ ಮಾಡಿದ್ದಾರೆ. 

ಚಿತ್ರದುರ್ಗದಲ್ಲಿ ನಡೆದ ಪಂಚಮಸಾಲಿ 2A ಮೀಸಲಾತಿ ಪಾದಯಾತ್ರೆ ಸಭೆಯಲ್ಲಿ ಭಾಷಣ ಮಾಡಿದ ಯತ್ನಾಳ್, ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡುವ ಯೋಗ ಬರಲಿದೆ. ದೆಹಲಿಗೆ ಹೋಗಿ ಯಾರು ಏನು ಹೇಳಿದರೂ ಏನೂ ಆಗಲ್ಲ. ನಾನು ಏನೆಂಬುದು ದೆಹಲಿ ಹೈಕಮಾಂಡ್ ಗೆ ಗೊತ್ತಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿದೆ ಎಂದು ಹೇಳಿದ್ದಾರೆ.

ಈ ದೇಶದಲ್ಲಿ ಹುಟ್ಟಿದ ಎಲ್ಲರಿಗೂ ಪ್ರಧಾನಿ ಆಗುವ, ಸಿಎಂ ಆಗುವ ಅರ್ಹತೆ ಇದೆ. ನಮಗೂ ಯಾಕೆ ಸಿಗಬಾರದು? ಹೈಕಮಾಂಡ್ ಏನು ನಿರ್ಣಯ ಮಾಡುತ್ತೋ ಮಾಡುತ್ತೆದೆ. ಇನ್ನೂ ಎರಡನೇ ಹಂತದ ನಾಯಕತ್ವ ಕರ್ನಾಟಕದಲ್ಲಿ ಬರುತ್ತದೆ. ಹಿರಿಯ ಸಚಿವರು ಪಕ್ಷ ಸಂಘಟನೆಗೆ ಹೋಗುತ್ತಾರೆ. ನಾನು ಹೇಳುವುದರಲ್ಲಿ ಸಿಎಂ ಯಡಿಯೂರಪ್ಪನವರೂ ಬರುತ್ತಾರೆ. ಬಿಜೆಪಿಯಲ್ಲಿ ಬಹಳ ಜನ ಮಾಸ್ ಲೀಡರ್ ಇದ್ದಾರೆ. ಪ್ರಾಮಾಣಿಕ ಹಿಂದುತ್ವ ಪರ ಇರುವ ರಾಜಕಾರಣಿ ರಾಜ್ಯಕ್ಕೆ ಬೇಕಿದೆ. ಆ ಕಾಲ ಉತ್ತರ ಕರ್ನಾಟಕದವರಿಗೆ ಬರುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: BS Yeddyurappa: ಕಾನೂನು ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಗಣಿಗಾರಿಕೆಗೆ ಅಡ್ಡಿ ಇಲ್ಲ; ಬಿ.ಎಸ್.​ ಯಡಿಯೂರಪ್ಪ

ಅಲ್ಲದೆ, ಪಂಚಮಸಾಲಿ ಸಮಾಜದ  ಶ್ರೀಗಳು ಪಾದಯಾತ್ರೆ ಹೊರಟರೂ ಸಿಎಂ ಯಡಿಯೂರಪ್ಪ ಇದುವರೆಗೆ ಮಾತನಾಡಿಲ್ಲ. ಈ ಬಗ್ಗೆ ನಾವು ಸದನದಲ್ಲಿ ಪ್ರಸ್ತಾಪಿಸಿದ ಬಳಿಕ ಸಭೆ ಕರೆದರು. ಅಧಿವೇಶನದಲ್ಲಿ ನಾವು‌ ಬಾವಿಗೆ ಇಳಿದು 2ಎ ಮೀಸಲಾತಿಗಾಗಿ ಧರಣಿ‌ ಮಾಡಿದೆವು ಎಂದಿದ್ದಾರೆ. ಇನ್ನೂ ಸಿಎಂ ಊಟ, ತಿಂಡಿ ಮಾಡಿಸುವುದರಿಂದ ನಮ್ಮ ಬೇಡಿಕೆ ಈಡೇರಲ್ಲ. ನಾವು ಶಾಸಕರು, ‌ಸಂಸದರು ಹೇಗೆ ಆಗಬೇಕೆಂದು ನಮಗೆ ಗೊತ್ತಿದೆ. ನಮ್ಮನ್ನು ಹೊರಗೆ ಹಾಕಿದರೂ ನಾವು ಆಗೇ ಆಗುತ್ತೇವೆ. ನಾವು ಪಕ್ಷದೊಳಗಿದ್ದರೂ ಗೆಲ್ಲುತ್ತೇವೆ. ನಾನು  ಪಕ್ಷೇತರವಾಗಿ ವಿಧಾನ ಪರಿಷತ್​ಗೆ ಗೆದ್ದು ಬಂದಿದ್ದೆ ಎಂದು ಟಾಂಗ್ ನೀಡಿದ್ದಾರೆ.

ಪಂಚಮಸಾಲಿ ಹೋರಾಟಕ್ಕೆ ಬೆಂಬಲ ನೀಡದ ಶಾಸಕರ, ಮನೆ ಬಳಿ ಧರಣಿ ಮಾಡಿ ಎಂದು ಯತ್ನಾಳ್ ಕರೆ ನೀಡಿದ್ದಾರೆ. ಶಿವಮೊಗ್ಗ, ಶಿಕಾರಿಪುರ,‌ ಭದ್ರಾವತಿ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಇದೆ. ಅಲ್ಲಿ ಪಂಚಮಸಾಲಿ ಸಮಾಜದ ಶಕ್ತಿ ತೋರಿಸಬೇಕಿದೆ ಎಂದಿರುವ ಅವರು, ಪಂಚಮಸಾಲಿ ಸಮಾಜಕ್ಕೆ‌‌‌ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಎರಡು ಸಲ ಹೇಳಿ ಟಾಂಗ್ ಕೊಟ್ಟಿದ್ದೀರಿ. ಆದರೆ,‌ ಈ ಬಾರಿ ಬಿಡುವುದಿಲ್ಲ ಎಂದು ಸಿಎಂಗೆ ಹೇಳಿದ್ದೇನೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದ ಬಳಿಕವೇ ಮೀಟಿಂಗ್ ಎಂದು ಹೇಳಿದ್ದೇನೆ ಎಂದಿದ್ದಾರೆ.
ಸ್ವ ಪಕ್ಷದ ಶಾಸಕರನ್ನ ಮರೆತಿರುವ ಸಿಎಂ ಯಡಿಯೂರಪ್ಪ, ಇಂದು ಸಿದ್ದರಾಮಯ್ಯ, ಜಮೀರ್ ಅಹಮದ್, ಕೆ.ಜೆ ಜಾರ್ಜ್, ಡಿಕೆ ಶಿವಕುಮಾರ್ ಅವರ ಕ್ಷೇತ್ರಗಳಿಗೆ ಅನುದಾನ ಹೆಚ್ಚು ಕೊಡುತ್ತಿದ್ದಾರೆ. ನಮ್ಮ ಪಕ್ಷದ ಶಾಸಕರ ಮತ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬೇಕಿದೆ ಎಂದು ಬಸನಗೌಡ ಯತ್ನಾಳ್ ಅಸಮಾಧಾನ  ಹೊರ ಹಾಕಿದ್ದಾರೆ.

(ವರದಿ : ವಿನಾಯಕ ತೊಡರನಾಳ್)
Published by: Sushma Chakre
First published: February 3, 2021, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories