• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಳ; ಬೆಂಗಳೂರಿನ ಹವಾಮಾನ ಹೀಗಿದೆ

Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಳ; ಬೆಂಗಳೂರಿನ ಹವಾಮಾನ ಹೀಗಿದೆ

ಕರ್ನಾಟಕದಲ್ಲಿ ಮಳೆ

ಕರ್ನಾಟಕದಲ್ಲಿ ಮಳೆ

Karnataka Monsoon 2021: ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು ಸಾಮಾನ್ಯ ಮಳೆ ಸುರಿಯಲಿದ್ದು, ಜೂನ್ 10 ಮತ್ತು 11ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.

  • Share this:

    Karnataka Monsoon Rain: ಬೆಂಗಳೂರು (ಜೂನ್ 9): ಕರ್ನಾಟಕದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಇಂದು ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ನಾಳೆಯಿಂದ 2 ದಿನ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು ಸಾಮಾನ್ಯ ಮಳೆ ಸುರಿಯಲಿದ್ದು, ಜೂನ್ 10 ಮತ್ತು 11ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ.


    ಇಂದು ಕೂಡ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಮಲೆನಾಡಿನಲ್ಲೂ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯಿಂದ ಭೂಕುಸಿತವಾಗುವ ಸಾಧ್ಯತೆಯೂ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ, ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್​ಡಿಆರ್​ಎಫ್​ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.


    ಮುಂಗಾರು ಆಗಮನವಾದ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಜೂನ್ 3ರಂದು ಕೇರಳಕ್ಕೆ ಮುಂಗಾರಿನ ಪ್ರವೇಶವಾಗಿದ್ದು, ಅದರ ಪರಿಣಾಮವಾಗಿ ಮಲೆನಾಡು, ಕರ್ನಾಟಕದ ಕರಾವಳಿ ತೀರದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಬೆಂಗಳೂರಿನಲ್ಲೂ ಕಳೆದೆರಡು ದಿನಗಳಿಂದ ಮಳೆಯ ಸಿಂಚನವಾಗುತ್ತಿದೆ. ಕರಾವಳಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ.


    ಇದನ್ನೂ ಓದಿ: ಪಾಸಿಟಿವಿಟಿ ರೇಟ್​​ನಲ್ಲಿ ರಾಜ್ಯಕ್ಕೇ ಪ್ರಥಮ: ಕೊರೊನಾ ಕಪಿಮುಷ್ಠಿಯಲ್ಲಿ ಆ ಜಿಲ್ಲೆಯ ಜನತೆ!


    ಜೂನ್ 3ಕ್ಕೆ ಕೇರಳವನ್ನು ಪ್ರವೇಶಿಸಿರುವ ಮುಂಗಾರು ಕರ್ನಾಟಕಕ್ಕೆ ಎಂಟ್ರಿ ನೀಡಲು ಮೂರ್ನಾಲ್ಕು ದಿನಗಳು ಬೇಕಾಗುತ್ತದೆ ಎನ್ನಲಾಗಿತ್ತು. ಆದರೆ, ಜೂನ್ 5ಕ್ಕೇ ಕರ್ನಾಟಕಕ್ಕೆ ಮುಂಗಾರಿನ ಪ್ರವೇಶವಾಗಿದೆ. ಜೂನ್ ಮೂರನೇ ವಾರದ ವೇಳೆಗೆ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ಮಲೆನಾಡಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ.


    ಈಗಾಗಲೇ ಕೇರಳ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇಂದು ಕರ್ನಾಟಕ, ಛತ್ತೀಸ್​ಘಡ, ಕೇರಳ, ಮಾಹೆ, ಗೋವಾ, ಅಂಡಮಾನ್ ನಿಕೋಬಾರ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ ರಾಜ್ಯಗಳಲ್ಲಿ ಮಳೆ ಹೆಚ್ಚಾಗಲಿದೆ.


    ಇಂದು ಕರ್ನಾಟಕ ಮಾತ್ರವಲ್ಲದೆ ಕೇರಳ, ಅಸ್ಸಾಂ, ಮೇಘಾಲಯ, ಮಿಜೋರಾಂ, ತೆಲಂಗಾಣ, ರಾಯಲಸೀಮೆ, ಗೋವಾ, ಮಾಹೆ, ಗುಜರಾತ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದು ಬಾರಿ ಮುಂಗಾರು ಆರಂಭವಾದ ನಂತರ ಅದರ ಪರಿಣಾಮ ಯಾವ ರೀತಿ ಇರಬಹುದು ಎಂದು ನಾವು ಅಂದಾಜಿಸಬಹುದು. ಜೂನ್​ನಿಂದ ಸೆಪ್ಟೆಂಬರ್​ವರೆಗೆ ಮಳೆಯ ಆರ್ಭಟವಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವರ್ಷ ಸಾಧಾರಣದಿಂದ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.


    ಇದನ್ನೂ ಓದಿ: Bhaskar Shetty Murder: ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಹೆಂಡತಿ, ಮಗ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ


    ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರ್ಗಿ, ಬೀದರ್, ಚಿಕ್ಕಮಗಳೂರಿನಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎನ್ನಲಾಗಿದೆ.


    ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಈಗಾಗಲೇ ಜಲಾಶಯಗಳಿಗೆ ಭಾರೀ ನೀರು ಹರಿದುಬರುತ್ತಿದ್ದು, ನದಿಗಳು ತುಂಬಿಹರಿಯುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಆಗಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

    Published by:Sushma Chakre
    First published: