Karnataka Rains Today:(ಆ.25): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆ ಮುಂದುವರೆಯಲಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹಮಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ವರುಣನ ಅಬ್ಬರ ಮುಂದುವರೆದಿದೆ. ಕೆಲವೆಡೆ ಜಿಟಿ ಜಿಟಿ ಮಳೆಯಾದರೆ, ಇನ್ನೂ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ. ಸಕಾಲಕ್ಕೆ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತನೆ ಕಾರ್ಯ ಮಾಡಿದ್ದ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಅಂದರೆ ಆಗಸ್ಟ್ 27ವರೆಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನ ಮಳೆಯಾಗಲಿದೆ. ಪ್ರಮುಖವಾಗಿ ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ ಜಿಲ್ಲೆಗಳಲ್ಲಿ ಇಂದು ಅಧಿಕ ಮಳೆಯಾಗಲಿದೆ.
ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಈಗ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಅದರಲ್ಲೂ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗಗಳಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಇಂದು ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ರಾಯಚೂರು, ಧಾರವಾಡ, ಹಾವೇರಿ, ಕಲಬುರ್ಗಿ, ವಿಜಯಪುರ, ಕೊಪ್ಪಳ, ಯಾದಗಿರಿಯಲ್ಲಿ ಇಂದಿನಿಂದ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:BRS Hospital: ಅತಂತ್ರವಾಗಿದೆ ಬಡವರಿಗಾಗಿ ಉಡುಪಿಯಲ್ಲಿ ನಿರ್ಮಿಸಿದ್ದ ಐಷಾರಾಮಿ ಬಿಆರ್ಎಸ್ ಆಸ್ಪತ್ರೆ ಭವಿಷ್ಯ!
ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಒಂದು ವಾರದಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೇ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಇಂದು ಮಳೆ ಸುರಿಯಲಿದೆ. ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿರಲಿದೆ. ಮುಖ್ಯವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಮಳೆಯ ತೀವ್ರತೆ ಹೆಚ್ಚಾಗಲಿದೆ.
ಇಂದು ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಲಿದೆ. ಈಗಾಗಲೇ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ರಾಯಚೂರು, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಮಳೆಯಾಗಿದೆ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಭರ್ತಿಯಾಗಿದೆ. ಉತ್ತರ ಒಳನಾಡಿನಲ್ಲೂ ಇಂದು ಮಳೆಯಾಗಲಿದೆ. ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:Android Phone: ಹಳೆಯ ಸ್ಮಾರ್ಟ್ಫೋನೆಂದು ಎಸೆಯಬೇಡಿ...ಕಂಪ್ಯೂಟರ್ ಮೌಸ್ ಆಗಿ ಬಳಸಬಹುದು! ಹೇಗೆ?
ಇತ್ತ ಬೆಂಗಳೂರಿನಲ್ಲೂ ಇಂದು ಮಳೆಯಾಗುವ ಸಾಧ್ಯತೆಯಿದೆ. ಈ ಬಾರಿ ಕೊಡಗಿನ ಮಡಿಕೇರಿ, ವಿರಾಜಪೇಟೆ, ಸೋಮವಾರ ಪೇಟೆ ಮುಂತಾದ ಕಡೆಗಳಲ್ಲಿ ಕಳೆದ ವರ್ಷಗಳಿಗಿಂತ ದಾಖಲೆಯ ಪ್ರಮಾಣದ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಡಗಿನಲ್ಲಿ ದಾಖಲೆಯ ಮಳೆಯಾಗಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿದ್ದು, ರೈತರ ಮೊಗದಲ್ಲಿ ಖುಷಿ ಕಾಣುತ್ತಿದೆ. ಈಗಾಗಲೇ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ