Karnataka Weather Today: ತೀವ್ರಗೊಂಡ ಮಾನ್ಸೂನ್; ಕರ್ನಾಟಕದಲ್ಲೂ ಬಿರುಸಿನ ಮಳೆ ಸಾಧ್ಯತೆ​

ಮಾನ್ಸೂನ್ ದ್ವಾರಕಾ, ಬರೋಡಾ, ಭೋಪಾಲ್, ಈಶಾನ್ಯ ಮಧ್ಯಪ್ರದೇಶದ ದಾಲ್ತೊನ್ಗಂಜ್, ದಿಘಾ  ಮೂಲಕ ಹಾದು ಹೋಗಲಿದ್ದು, ಆಗ್ನೇಯದಿಂದ ಮಧ್ಯ ಬಂಗಾಳ ಕೊಲ್ಲಿಯವರೆಗೆ ಕಡಿಮೆ ಒತ್ತಡವಿರಲಿದೆ ಎಂದು ಇಲಾಖೆ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Rains Today: ಬೆಂಗಳೂರು(ಸೆ.16)ಮುಂದಿನ ಎರಡು ದಿನ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ(Coastal)  ಹಾಗೂ ಮಲೆನಾಡು ಭಾಗಗಳಲ್ಲಿ  ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ  ಭಾರೀ ಮಳೆಯಾಗುವ ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್(Yellow Alert )ಘೋಷಣೆ ಮಾಡಲಾಗಿದೆ. ಶಿವಮೊಗ್ಗ , ಹಾಸನ ಭಾಗಗಳಲ್ಲಿ ಆರೆಂಜ್ ಅಲರ್ಟ್ (Orange Alert)ಘೋಷಿಸಲಾಗಿದೆ. ಕರಾವಳಿ ಮತ್ತು ಮಲೆನಾಡು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ  ಇಲಾಖೆಯ ಪ್ರಕಾರ, ರಾಜ್ಯದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಭಾರೀ ಮಳೆಯಿಂದ ನದಿಗಳು ತುಂಬಿದ್ದು, ಜಲಾಶಯದಿಂದ ನೀರನ್ನು ಹೊರ ಬಿಡಲಾಗುತ್ತಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯಕ್ಕೆ 36,631 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಈ ಹಿನ್ನಲೆಯಲ್ಲಿ ಬುಧವಾರ 60 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ತೆಪ್ಪ, ದೋಣಿ ಸಂಚಾರವನ್ನು ನಿಷೇಧಿಸಲಾಗಿದೆ.

ಮಾನ್ಸೂನ್ ದ್ವಾರಕಾ, ಬರೋಡಾ, ಭೋಪಾಲ್, ಈಶಾನ್ಯ ಮಧ್ಯಪ್ರದೇಶದ ದಾಲ್ತೊನ್ಗಂಜ್, ದಿಘಾ  ಮೂಲಕ ಹಾದು ಹೋಗಲಿದ್ದು, ಆಗ್ನೇಯದಿಂದ ಮಧ್ಯ ಬಂಗಾಳ ಕೊಲ್ಲಿಯವರೆಗೆ ಕಡಿಮೆ ಒತ್ತಡವಿರಲಿದೆ ಎಂದು ಇಲಾಖೆ ತಿಳಿಸಿದೆ.

ಗುಜರಾತ್, ಮಧ್ಯ ಪ್ರದೇಶದಲ್ಲಿ ಮುಂದಿನ ಎರಡು ದಿನಗಳಲ್ಲಿ ಅಧಿಕ ಮಳೆಯಾಗಲಿದೆ. ಇದರೊಂದಿಗೆ ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಸೆಪ್ಟೆಂಬರ್ 16ರಂದು ಭಾರೀ ಮಳೆಯಾಗಲಿದ್ದು,  ಜನರು ಎಚ್ಚರಿಕೆಯಿಂದಿರಬೇಕು ಎಂದು ಹೇಳಲಾಗಿದೆ.  ಇನ್ನು ನದಿ ಪಾತ್ರದ ಜನರನ್ನು ಸ್ಥಳಾಂತರ ಮಾಡಲು ಆಯಾ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ವಾಯುಭಾರ ಕುಸಿತದ ತೀವ್ರ ಪ್ರಭಾವದಿಂದಾಗಿ ಗುಜರಾತ್‌ನಲ್ಲಿ ಭಾನುವಾರದಿಂದಲೂ ಭಾರೀ ಮಳೆಯಾಗುತ್ತಿದ್ದು, ರಾಜ್‌ಕೋಟ್ ಹಾಗೂ ಜಮ್ನಾ ನಗರದಲ್ಲಿ ಅತ್ಯಧಿಕ ಮಳೆಯಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.  ಈ ಹಿನ್ನಲೆಯಲ್ಲಿ ಸುಮಾರು ಏಳು ಸಾವಿರ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹದಿಂದಾಗಿ ಪ್ರಮುಖ ರಸ್ತೆಗಳು, ಗ್ರಾಮಗಳು ಜಲಾವೃತವಾಗಿವೆ. ಮುಂದಿನ ಎರಡು ದಿನಗಳವರೆಗೂ ಮಳೆ ಅಧಿಕವಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು,  ಗುಜರಾತ್ ಹಾಗೂ ಮಧ್ಯ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕಳೆದ 24 ಗಂಟೆಗಳಲ್ಲಿ, ಗಂಗಾ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಕರಾವಳಿ ಕರ್ನಾಟಕ, ಕರಾವಳಿ ಆಂಧ್ರ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಕೇರಳದ ಕೆಲವು ಭಾಗಗಳು ಮತ್ತು ಪೂರ್ವ ರಾಜಸ್ಥಾನ, ಮಧ್ಯಪ್ರದೇಶದ ಉಳಿದ ಭಾಗಗಳು, ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂನ ಭಾಗಗಳು ಮತ್ತು ಉಪ ಹಿಮಾಲಯನ್ ಪಶ್ಚಿಮ ಬಂಗಾಳದಲ್ಲಿ  ಬಿರುಸಿನ ಮಳೆಯಾಗಿದೆ.  ಮುಂದಿನ 24 ಗಂಟೆಗಳಲ್ಲಿ,  ಕರಾವಳಿ ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶ, ಸಿಕ್ಕಿಂ ಉಪ ಹಿಮಾಲಯ ಪಶ್ಚಿಮ ಬಂಗಾಳ, , ಹರಿಯಾಣ, ರಾಜಸ್ಥಾನದ ಉಳಿದ ಭಾಗಗಳು, ಕೊಂಕಣ ಮತ್ತು ಗೋವಾ ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ಜುಲೈ ತಿಂಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಮಾರು 31,360 ಮಂದಿಯನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 22,417 ಜನರು 237 ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಾರ, ಸುಮಾರು 283 ಗ್ರಾಮಗಳು, 45 ತಾಲೂಕುಗಳು ಮಳೆಯ ಹೊಡೆತಕ್ಕೆ ಸಿಕ್ಕಿದ್ದು, 36,498 ಜನರು ಅಕ್ಷರಶಃ ನಲುಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆ ಸಾಧ್ಯತೆ- ಇಲ್ಲಿದೆ ಇಂದಿನ ಹವಾಮಾನ ವರದಿ..

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈ ವರ್ಷ ಮಳೆಯಿಂದಾಗಿ 9 ಮಂದಿ ಸಾವನ್ನಪ್ಪಿದ್ದು, ಮೂರು ಜನರು ಕಣ್ಮರೆಯಾಗಿದ್ದಾರೆ. ಸುಮಾರು 3,502 ವಿದ್ಯುತ್ ಕಂಬಗಳು ಧರೆಗುರುಳಿವೆ. 342 ಟ್ರಾನ್ಸ್​ಫಾರ್ಮರ್​​​ಗಳು ಹಾನಿಯಾಗಿದ್ದು, ಹಲವಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
Published by:Sandhya M
First published: