Karnataka Weather Today: ಇಂದು ಅಪ್ಪಳಿಸಲಿದೆ ಶಾಹೀನ್ ಚಂಡಮಾರುತ; ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  Karnataka Rains Today ಬೆಂಗಳೂರು(ಸೆ.30): ಬಂಗಾಳ ಕೊಲ್ಲಿಯಲ್ಲಿ(Bay of Bengal) ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ದೇಶದ ಹಲವೆಡೆ ಕಳೆದ ಕೆಲ ದಿನಗಳಿಂದ ಭಾರೀ ಮಳೆ(Rainfall)ಯಾಗುತ್ತಿದೆ. ಗುಲಾಬ್​ ಚಂಡಮಾರುತದ(Cyclone Gulab) ಪ್ರಭಾವದಿಂದಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ಅಧಿಕ ಮಳೆಯಾಗಿದೆ. ಗುಲಾಬ್ ದುರ್ಬಲಗೊಂಡ ಬಳಿಕ ಇಂದು ಶಾಹೀನ್​ ಚಂಡಮಾರುತ(Cyclone Shaheen) ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ. ಹೀಗಾಗಿ ಕರ್ನಾಟಕದಲ್ಲಿ(Karnataka Rains) ಇಂದಿನಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಶಾಹೀನ್ ಚಂಡಮಾರುತ ಇಂದು ಅರಬ್ಬೀ ಸಮುದ್ರಕ್ಕೆ ಅಪ್ಪಳಿಸಲಿದ್ದು, ರಾಜ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ(NIK) ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಇಂದು ಆರೆಂಜ್ ಅಲರ್ಟ್(Orange Alert) ಘೋಷಿಸಲಾಗಿದೆ. ಅಂತೆಯೇ ಕರಾವಳಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್(Yellow Alert)​ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

  ಮುಂಗಾರು ಜೈಸಲ್ಮೇರ್, ಉದೈಪುರ್, ಇಂದೋರ್, ಜಗದಲ್ಪುರ್, ಕಳಿಂಗಪಟ್ಟಣಂ ಮತ್ತು ಪೂರ್ವ ಆಗ್ನೇಯ ದಿಕ್ಕಿನಲ್ಲಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಯವರೆಗೆ ಹಾದು ಹೋಗುತ್ತಿದೆ. ಶಾಹೀನ್ ಚಂಡಮಾರುತ ಅರಬ್ಬಿ ಸಮುದ್ರದತ್ತ ತೆರಳಿದ್ದು, ಅರಬ್ಬಿ ಸಮುದ್ರಕ್ಕೆ ಇದು ಅಪ್ಪಳಿಸಲಿದೆ. ಹೀಗಾಗಿ ಇಂದ ಕರ್ನಾಟಕದಲ್ಲಿ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

  ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ, ಕರಾವಳಿಯ ಹಲವು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ.

  ಇದನ್ನೂ ಓದಿ:Karnataka Dams Water Level: ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಾದ ಮಳೆ, ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

  ಏನಿದು ಶಾಹೀನ್ ಚಂಡಮಾರುತ?

  ಒಡಿಶಾ, ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ್ದ 'ಗುಲಾಬ್' ಚಂಡಮಾರುತ ಸದ್ಯ ದುರ್ಬಲಗೊಂಡಿದೆ. ಆದರೆ ಹವಾಮಾನ ಬದಲಾವಣೆಯಾದ ಕಾರಣ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಗುಲಾಬ್ ಚಂಡಮಾರುತ ಇನ್ನು ಎರಡು- ಮೂರು ದಿನಗಳಲ್ಲಿ 'ಶಾಹೀನ್' ಚಂಡಮಾರುತವಾಗಿ ಬದಲಾಗಲಿದ್ದು, ಭಾರೀ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

  ಗುಲಾಬ್ ಚಂಡಮಾರುತ ದುರ್ಬಲವಾದ ಬೆನ್ನಲ್ಲೇ ಸೆ.30ರಂದು ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದ್ದು, ಈ ಚಂಡಮಾರುತಕ್ಕೆ ‘ಕತಾರ್‘, 'ಶಾಹೀನ್' ಎಂಬ ಹೆಸರನ್ನು ನೀಡಿದೆ ಎನ್ನಲಾಗುತ್ತಿದೆ.

  ಮಹಾರಾಷ್ಟ್ರದಲ್ಲಿ ಚಂಡಮಾರುತ ಪ್ರಭಾವದಿಂದ ಭಾರೀ ಮಳೆಯಾಗುವ ಸೂಚನೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕರ್ನಾಟಕದಲ್ಲಿ ಸಹ ಚಂಡಮಾರುತ ತನ್ನ ಪ್ರಭಾವ ಬೀರಲಿದ್ದು, ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಸೆಪ್ಟೆಂಬರ್ 30ರಂದು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

  ಮುಂದಿನ 24 ಗಂಟೆಗಳಲ್ಲಿ, ಮಹಾರಾಷ್ಟ್ರ, ದಕ್ಷಿಣ ಗುಜರಾತ್, ಕರಾವಳಿ ಕರ್ನಾಟಕದ ಕೆಲವು ಭಾಗಗಳು, ಕೇರಳ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, , ಕೋಸ್ಟಲ್ ಒಡಿಶಾ ಮತ್ತು ಗಂಗಾ ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

  ದೇಶದ ಬಹುತೇಕ ಭಾಗಗಳಲ್ಲಿ ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. "ಜೂನ್‌ನಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತಲೂ ಶೇ. 7ರಷ್ಟು ಕಡಿಮೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಶೇ. 24ರಷ್ಟು ಕಡಿಮೆಯಾಗಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯ ಕಾರಣದಿಂದಾಗಿ ಕೊರತೆ ಪ್ರಮಾಣ ನೀಗಲಿದೆ‘‘ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ತಿಳಿಸಿದ್ದಾರೆ. ಕಳೆದ ಜೂನ್-ಜುಲೈ ತಿಂಗಳಲ್ಲಿ ಅಬ್ಬರಿಸಿದ್ದ ಮಳೆರಾಯ, ಆಗಸ್ಟ್​ ತಿಂಗಳಲ್ಲಿ ಕೊಂಚ ವಿರಾಮ ನೀಡಿದ್ದ. ಈಗ ಮತ್ತೆ ಸೆಪ್ಟೆಂಬರ್ ಪ್ರಾರಂಭದಿಂದಲೇ ಮಳೆರಾಯನ ಅಬ್ಬರ ಜೋರಾಗಿದ್ದು, ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  Published by:Latha CG
  First published: