ಬೆಂಗಳೂರು (ಏ. 23): ಬಿರು ಬಿಸಿಲಿನಿಂದ ಒಣಗಿದ್ದ ಭೂಮಿಗೆ ಕಳೆದ 2-3 ದಿನಗಳಿಂದ ಮಳೆಯ ಸಿಂಚನವಾಗುತ್ತಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಕರ್ನಾಟಕದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ಧಾರಾಕಾರವಾಗಿ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಕರಾವಳಿ, ಮಲೆನಾಡು, ಕೊಡಗು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಏ. 26ರವರೆಗೆ ಅಕಾಲಿಕ ಮಳೆಯಾಗಲಿದೆ.
ಇನ್ನೂ 4 ದಿನಗಳ ಕಾಲ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಮುಂದುವರಿಯಲಿದೆ. ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಮೈಸೂರಿನಲ್ಲಿ ಮೂರ್ನಾಲ್ಕು ದಿನ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಇನ್ನೂ 3 ದಿನ ಮಳೆ ಹೆಚ್ಚಾಗಲಿದೆ. 2 ದಿನದಿಂದ ಉಡುಪಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಾಗೇ, ಉತ್ತರ ಕರ್ನಾಟಕದ ಬೀದರ್, ಬಾಗಲಕೋಟೆ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ವಿಜಯಪುರದಲ್ಲೂ ಏ. 26ರವರೆಗೆ ಮಳೆಯಾಗಲಿದೆ.
ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಿನ್ನೆ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದ್ದು, ಬಸವನಗುಡಿ, ಜಯನಗರ, ಬನಶಂಕರಿ, ವಿಜಯನಗರ, ಯಲಹಂಕ, ಮೆಜೆಸ್ಟಿಕ್ ಸುತ್ತಮುತ್ತಲಿನ ಏರಿಯಾಗಳು ಜಲಾವೃತವಾಗಿತ್ತು.
ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಬಿಸಿಲಿದ್ದರೂ ಸಂಜೆಯ ವೇಳೆ ಮಳೆಯಾಗುವ ನಿರೀಕ್ಷೆಯಿದೆ. ನಿನ್ನೆಯ ಮಳೆಯಿಂದ ಹಲವೆಡೆ ಮರಗಳು ಉರುಳಿ ಬಿದ್ದಿವೆ. ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಮಲೆನಾಡು ಮತ್ತು ಕರಾವಳಿಯಲ್ಲಿ ಇನ್ನೂ ಮೂರ್ನಾಲ್ಕು ದಿನ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಅನೇಕ ಕಡೆ ಮೋಡ ಕವಿದ ವಾತಾವರಣವಿರಲಿದ್ದು, ತುಂತುರು ಮಳೆಯಾಗಲಿದೆ. ಕರ್ನಾಟಕದ ಮಾತ್ರವಲ್ಲದೆ ತಮಿಳುನಾಡು, ಕೇರಳ, ತೆಲಂಗಾಣ, ರಾಯಲಸೀಮೆಯಲ್ಲಿಯೂ ಇನ್ನು ಮೂರ್ನಾಲ್ಕು ದಿನ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ