HOME » NEWS » State » KARNATAKA WEATHER RAIN RED ALERT ISSUED IN MANGALURU UDUPI UTTARA KANNADA KARNATAKA RAIN SCT

Karnataka Weather: ಕರ್ನಾಟಕದಲ್ಲಿ ಇಂದಿನಿಂದ 3 ದಿನ ಭಾರೀ ಮಳೆ; ಕರಾವಳಿಯಲ್ಲಿ ರೆಡ್ ಅಲರ್ಟ್​ ಘೋಷಣೆ

Karnataka Rains: ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್​, ಮಲೆನಾಡು, ಕೊಡಗು, ಉತ್ತರ ಕರ್ನಾಟಕದಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ.

news18-kannada
Updated:September 22, 2020, 8:11 AM IST
Karnataka Weather: ಕರ್ನಾಟಕದಲ್ಲಿ ಇಂದಿನಿಂದ 3 ದಿನ ಭಾರೀ ಮಳೆ; ಕರಾವಳಿಯಲ್ಲಿ ರೆಡ್ ಅಲರ್ಟ್​ ಘೋಷಣೆ
ಉಡುಪಿಯಲ್ಲಿ ಸುರಿದ ಮಳೆಯಿಂದ ಜಲಾವೃತವಾಗಿರುವ ಮನೆ
  • Share this:
ಬೆಂಗಳೂರು (ಸೆ. 22): ನಾಲ್ಕೈದು ದಿನಗಳಿಂದ ಕರ್ನಾಟಕದ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್​, ಮಲೆನಾಡು, ಕೊಡಗು, ಉತ್ತರ ಕರ್ನಾಟಕದಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ. ಉಡುಪಿ, ಮಂಗಳೂರು ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ನಿನ್ನೆ ಸಂಜೆಯಿಂದ ಚಿಕ್ಕಮಗಳೂರಿನಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಕೊಡಗಿನಲ್ಲಿ ಇಂದು ಕೂಡ ಮಳೆ ಮುಂದುವರೆದಿದೆ.

ಇಂದಿನಿಂದ ಸೆ. 24ರವರೆಗೆ ಕರಾವಳಿ, ಶಿವಮೊಗ್ಗ, ಹಾಸನ, ಕೊಡಗು, ಯಾದಗಿರಿ, ರಾಯಚೂರು, ಕಲಬುರ್ಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಳವಾಗುವ ಸಾಧ್ಯತೆಯಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ. ನಿನ್ನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಗರಿಷ್ಠ 27 ಸೆ.ಮೀ. ಮಳೆಯಾಗಿದೆ. ನಿನ್ನೆ ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಭಾರೀ ಮಳೆಯಾಗಿದೆ. ಮಳೆಗೆ ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಹಲವೆಡೆ ಭೂಕುಸಿತದಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮಳೆಯಿಂದ ಕೊಡಗು ಜಿಲ್ಲೆಯ ಭಾಗಮಂಡಲ ಮತ್ತೆ ಜಲಾವೃತಗೊಂಡಿದೆ. ಶಿವಮೊಗ್ಗದಲ್ಲಿ ಜೋರು ಮಳೆಯಾಗುತ್ತಿದೆ.

ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ತಗ್ಗಿದ ಮಳೆಯ ಆರ್ಭಟ; ಶಾಂತವಾದ ತುಂಗಾ, ಭದ್ರಾ, ಹೇಮಾವತಿ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ವಿಟ್ಲ ಸಮೀಪದ ಬನಾರಿ ಬಾಬಟ ಎಂಬಲ್ಲಿ ಗುಡ್ಡ ಕುಸಿದು ಮನೆ ನೆಲಸಮವಾಗಿದೆ. ಈ ಘಟನೆಯಲ್ಲಿ ಮಣ್ಣಿನಡಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಕೊಡಗು ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಸೋಮವಾರ ಚಿಕ್ಕಮಗಳೂರಿನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಡುವು ನೀಡಿದ ಮಳೆ ಸಂಜೆ ವೇಳೆಗೆ ಸಾಧಾರಣವಾಗಿ ಮಳೆ ಸುರಿದಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಬಾಳೆಹೊನ್ನೂರು, ಮಾಗುಂಡಿ, ಬಣಕಲ್, ಮೂಡಿಗೆರೆ, ಕಳಸ, ಶೃಂಗೇರಿ ಭಾಗದಲ್ಲಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ನಿರ್ಮಾಣವಾಗಿತ್ತು. ಎರಡುದಿನ ಅಬ್ಬರಿಸಿದ ಮಳೆರಾಯ ಇಳಿಮುಖವಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.

ಮೈಸೂರಿನಲ್ಲಿಯೂ ಮಳೆಯ ಅಬ್ಬರ ಹೆಚ್ಚಾಗಿದೆ. ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ, ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರಾ ಜಲಾಶಯದಿಂದ ನೀರಿನ ಹೊರಹರಿವು ಹೆಚ್ಚಾಗಿದೆ. ಆಲಮಟ್ಟಿ ಜಲಾಶಯವೂ ತುಂಬುವ ಹಂತಕ್ಕೆ ಬಂದಿದೆ. ಲಿಂಗನಮಕ್ಕಿ ಡ್ಯಾಂನಲ್ಲಿಯೂ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.
Published by: Sushma Chakre
First published: September 22, 2020, 8:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories