Karnataka Weather: ಕರ್ನಾಟಕವನ್ನು ಪ್ರವೇಶಿಸಿದ ಮುಂಗಾರು: ಬೆಂಗಳೂರಲ್ಲಿ ವರುಣನ ಆರ್ಭಟ, ಇತರೆಡೆ ಸಾಮಾನ್ಯ!

ರಾಜ್ಯ ರಾಜಧಾನಿಯಲ್ಲಿ ಎಂದಿನಂತೆ ಉತ್ತಮ ಮಳೆಯಾಗಲಿದೆ. ಆದರೆ, ಉತ್ತರ ಹಾಗೂ ದಕ್ಷಿಣ ಒಳನಾಡುಗಳಲ್ಲಿ ವಾಡಿಕೆಗಿಂತ ಕಡಿಮೆ ಅಥವಾ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಳೆಯ ಸಾಂದರ್ಭಿಕ ಚಿತ್ರ

ಮಳೆಯ ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜೂನ್ 04); ಈ ವರ್ಷ ಮಾನ್ಸೂನ್ ಮಾರುತಗಳು ತಡವಾಗಿ ಭಾರತವನ್ನು ಪ್ರವೇಶಿಸಿದ್ದು, ಜೂನ್​.03 ರಂದು ಮಾನ್ಸೂನ್ ಮಾರುಗಳು ಕೇರಳದ ದಡವನ್ನು ಪ್ರವೇಶಿಸಿವೆ. ಕೇರಳದಲ್ಲಿ ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ತಜ್ಞರ ಮಾಹಿತಿಯಂತೆ ಮಳೆಯ ಮಾರುತಗಳು ಇಂದು ಕರ್ನಾಟಕವನ್ನು ಪ್ರವೇಶಿಸಿವೆ. ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಭಾರೀ ಮಳೆಯಾಗಿದೆ. ಪರಿಣಾಮ ಇಷ್ಟು ದಿನ ಬಿಸಿಲಿನಿಂದ ಕಾವೇರಿದ್ದ ನೆಲ ತಂಪಾಗಿದ್ದು, ಜನ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈ ವರ್ಷ ಕರ್ನಾಟಕದಲ್ಲಿ ಸೆಪ್ಟೆಂಬರ್​ವರೆಗೆ ಮಳೆ ಬಂದರೂ ಸಹ ಸಾಮಾನ್ಯ ಮಳೆಯೇ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

  ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಅಧಿಕಾರಿಗಳು, "ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿಯಲ್ಲಿರಲಿದ್ದು ಕೇಂದ್ರ ಭಾಗದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಇನ್ನೂ ರಾಜ್ಯ ರಾಜಧಾನಿಯಲ್ಲಿ ಎಂದಿನಂತೆ ಉತ್ತಮ ಮಳೆಯಾಗಲಿದೆ. ಆದರೆ, ಉತ್ತರ ಹಾಗೂ ದಕ್ಷಿಣ ಒಳನಾಡುಗಳಲ್ಲಿ ವಾಡಿಕೆಗಿಂತ ಕಡಿಮೆ ಅಥವಾ ಸಾಮಾನ್ಯ ಮಳೆಯಾಗಲಿದೆ" ಎಂದು ತಿಳಿಸಿದ್ದಾರೆ.

  "ಈಗಾಗಲೇ ಗುರುವಾರ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗಗಳಲ್ಲಿ ಮಳೆಯಾಗಿದೆ. ಮಂಗಳೂರಿನಲ್ಲಿ 114 ಎಂಎಂ, ಕಾರವಾರ 70 ಎಂಎಂ, ಹಾಸನ 33 ಎಂಎಂ, ಮೈಸೂರು 56 ಎಂಎಂ ಹಾಗೂ ಬೆಂಗಳೂರಿನಲ್ಲಿ 52.4 ಎಂಎಂ ಮಳೆಯಾಗಿದೆ. ಅಲ್ಲದೆ, ಕರ್ನಾಟಕದ ದಕ್ಷಿಣ ಭಾಗಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ ಹಾಗೂ ಬೆಂಗಳೂರಿನಲ್ಲಿ ಮುಂದಿನ 36 ಗಂಟೆಗಳಲ್ಲಿ ಉತ್ತಮ ಮಳೆಯಾಗಲಿದೆ" ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

  ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 128 ಎಂಎಂ ಮಳೆಯಾಗಿತ್ತು. ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯ ಮಳೆಯಾಗಲಿದ್ದು, ತಿಂಗಳಿಗೆ 89 ಎಂಎಂ ಮಳೆಯಾಗುವುದಾಗಿ ಸೂಚನೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಮಿಂಚು ಸಹಿತ ಮಳೆಯಾಗುವುದಾಗಿ ತಿಳಿಸಲಾಗಿದೆ.

  ಇದನ್ನೂ ಓದಿ: CoronaVirus: ತಮಿಳುನಾಡಿನ ಮೃಗಾಲಯದಲ್ಲಿ ಸಿಂಹಗಳಿಗೆ ಕೊರೋನಾ ಪಾಸಿಟಿವ್; ಒಂದು ಸಿಂಹ ಸಾವು!

  ಬರಗಾಲದ ಭಯ!

  ರಾಜ್ಯದ ಬಹುತೇಕ ತಾಲೂಕುಗಳನ್ನು ಕಳೆದ ವರ್ಷ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಕಳೆದ ವರ್ಷ ಕೊರೋನಾ ಕಾಟದ ನಡುವೆ ಮಳೆಯೂ ಅನೇಕ ಕಡೆಗಳಲ್ಲಿ ಕೈಕೊಟ್ಟ ಪರಿಣಾಮ ರೈತರು ಬರಗಾಲವನ್ನು ಎದುರಿಸಿದ್ದರು. ಹಲವೆಡೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು. ಈ ನಡುವೆ ಈ ವರ್ಷವೂ ಮಳೆ ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು ಈ ವರ್ಷವೂ ಬರಗಾಲದ ಛಾಯೆ ಕಾಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಹೀಗಾಗಿ ಸರ್ಕಾರ ಈಗಿಂದಲೇ ಎಚ್ಚರಿಕೆವಹಿಸಬೇಕಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: