ಬೆಂಗಳೂರು (ಅ. 19): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದ ಕಾರಣ ಕಳೆದ ವಾರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಜೋರಾಗಿತ್ತು. ಮೂರ್ನಾಲ್ಕು ದಿನಗಳಿಂದ ಕೊಂಚ ಕಡಿಮೆಯಾಗಿದ್ದ ಮಳೆ ಇಂದಿನಿಂದ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ. ಇಂದಿನಿಂದ ಮತ್ತೊಂದು ಹಂತದ ಮಳೆ ಆರಂಭವಾಗಲಿದ್ದು, ಅ. 21ರವರೆಗೆ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಮಲೆನಾಡು, ಕರಾವಳಿ ಭಾಗದಲ್ಲೂ ತುಂತುರು ಮಳೆಯಾಗುತ್ತಿದೆ.
ಇಂದು ಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತು ಉತ್ತರ ಕನ್ನಡದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಆದರೆ, ಉತ್ತರ ಕರ್ನಾಟಕದಲ್ಲಿ ಅ.20 ಮತ್ತು 21ರಂದು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೀದರ್, ರಾಯಚೂರು, ಗದಗ, ಬಾಗಲಕೋಟೆ, ಕೊಪ್ಪಳ, ಕಲ್ಬುರ್ಗಿ ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಂಭವವಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆಯ ದರ್ಶನ; ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರ ಪರದಾಟ
ಇಂದಿನಿಂದ ಮೂರು ದಿನಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗಿನಲ್ಲಿ ಮಳೆ ಹೆಚ್ಚಾಗಲಿದೆ. ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದ್ದು, ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಆಫೀಸು, ಅಂಗಡಿಗಳಿಗೆ ಹೊರಟ ಬೈಕ್ ಸವಾರರು ಪರದಾಡಿದರು. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಕಾರಣ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಮೈಸೂರು ರಸ್ತೆ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿಜಯನಗರ, ನಾಯಂಡಹಳ್ಳಿ, ಶ್ರೀನಗರ, ಚಂದ್ರಾ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್, ಜಯನಗರ, ಕೆಆರ್ ಮಾರ್ಕೆಟ್ ಸೇರಿ ಹಲವೆಡೆ ಜೋರು ಮಳೆಯಾಗಿದೆ.
ಬೆಂಗಳೂರಿನ ಮಲ್ಲತ್ತಹಳ್ಳಿ ಬಳಿ ಇಂದು ಬೆಳಗಿನ ಜಾವ ನಾಲ್ಕೈದು ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನೀರು ಮನೆಯೊಳಗೆ ತುಂಬಿದ್ದರಿಂದ ಮನೆಯೆಲ್ಲ ಕೆಸರಾಗಿದೆ. ಇಂದು ಈ ವಾರದ ಮೊದಲ ದಿನ. ವೀಕೆಂಡ್ ಕಳೆದು ಕಚೇರಿಗಳಿಗೆ ಹೊರಟ ಬೆಂಗಳೂರಿಗರಿಗೆ ಮಳೆ ಅಡ್ಡಿಯಾಗಿದೆ. ವಾರದ ಮೊದಲ ದಿನವಾದ್ದರಿಂದ ಮಳೆಯ ನಡುವೆಯೂ ಜನರು ಕಚೇರಿ, ಕೆಲಸಗಳಿಗೆ ಹೊರಡುತ್ತಿದ್ದಾರೆ. ಮೈಸೂರು ರಸ್ತೆಯ ಸ್ಯಾಟಲೈಟ್ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಇಂದಿನಿಂದ ಮತ್ತೆ ಮಳೆಯ ಆರ್ಭಟ ಶುರುವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ