Bangalore Rain: ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಮಳೆ ಅಬ್ಬರ; ಸಚಿವೆ ನಿರ್ಮಲಾ ಸೀತಾರಾಮನ್​ ಸಂವಾದಕ್ಕೆ ಅಡ್ಡಿಯಾದ ವರುಣ

ಸಂಜೆ ಹೊತ್ತಿನಲ್ಲಿ ಜೋರು ಮಳೆ ಸುರಿದ ಹಿನ್ನಲೆ ಹಲವು ಕಡೆ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದ್ದು, ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಫೆ. 20): ರಾಜ್ಯ ರಾಜಧಾನಿಯಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಆರ್ಭಟ ಶುರುವಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಶುಕ್ರವಾರ ಸಂಜೆ ಮಳೆಯಾಗಿದ್ದು, ಶನಿವಾರ ಸಂಜೆ ಕೂಡ ಮಳೆಯ ಆರ್ಭಟ ಶುರುವಾಗಿದೆ. ಇದರಿಂದ ವಿಕೇಂಡ್​ ಮೂಡಿನಲ್ಲಿದ್ದ ಜನರಿಗೆ ಕಿರಿಕಿರಿಯಾಗಿದೆ. ಅಲ್ಲದೇ ಸಂಜೆ ಹೊತ್ತಿನಲ್ಲಿ ಜೋರು ಮಳೆ ಸುರಿದ ಹಿನ್ನಲೆ ಹಲವು ಕಡೆ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದ್ದು, ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದೆ. ನಗರದ ಮೆಜೆಸ್ಟಿಕ, ಕಾರ್ಪೋರೇಷನ್​, ಚಾಮರಾಜಪೇಟೆ, ಕೋರಮಂಗಲ, ಶಾಂತಿನಗರ, ಮಲ್ಲೇಶ್ವರಂ, ಆನಂದ್ ರಾವ್ ಸರ್ಕಲ್, ನೃಪತುಂಗ ರಸ್ತೆ ಸೇರಿದಂತೆ ಬಹುತೇಕ ಕಡೆ ಮಳೆ ಅಬ್ಬರಿಸಿದೆ. ವಾಯುಭಾರ ಕುಸಿತದಿಂದಾಗಿ ಮಳೆಯಾಗುತ್ತಿದ್ದು, ಇನ್ನು ಎರಡು ದಿನ ಮೋಡ, ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಸೂಚನೆ ನೀಡಿದೆ.  ನಿರ್ಮಲಾ ಸೀತಾರಾಮನ್​ ಸಂವಾದ ಅಸ್ತವ್ಯಸ್ತ

  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕಚೇರಿಯಲ್ಲಿ ಇಂದು ಸಾರ್ವಜನಿಕರೊಂದಿಗೆ ಸಂವಾದ ನಡೆಸಲು ತಯಾರಿ ನಡೆಸಿದ್ದರು. ಅಲಿ ಅಸ್ಕರ್ ರಸ್ತೆಯ ಕಚೇರಿಯಲ್ಲಿ ಸಂವಾದ ಏರ್ಪಾಡು ಮಾಡಿದ್ದು, ಸಾರ್ವಜನಿಕರಿಗಾಗಿ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 5.30ಕ್ಕೆ ಸಂವಾದ ಆರಂಭವಾಗಬೇಕಿತ್ತು. ಆದರೆ, ಮಳೆ ಸುರಿದ ಪರಿಣಾಮ ಅಸ್ತವ್ಯಸ್ತಗೊಂಡಿದ್ದು, ಮಳೆಯ ನಡುವೆ ನಿರ್ಮಲಾ ಸೀತಾರಾಮನ್ ಕಚೇರಿಗೆ ಆಗಮಿಸಿದರು. ಮಳೆಯ ಕಾರಣ  ಸಂವಾದವನ್ನು ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು.

  ಕರಾವಳಿ, ಮಲೆನಾಡಿನಲ್ಲಿ ಉತ್ತಮ ಮಳೆ

  ಕೇವಲ ಬೆಂಗಳೂರು ಮಾತ್ರವಲ್ಲದೇ, ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ.  ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತ ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾಧರಣ ಮಳೆ ಮತ್ತ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

  ಈಗಾಗಲೇ ಕೆಲವೆಡೆ ಜೋರಾಗಿಯೇ ಮಳೆ ಸುರಿದಿದೆ. ಚಿತ್ರದುರ್ಗ, ಮೈಸೂರು, ಬಾಗಲಕೋಟೆ ಸೇರಿದಂತೆ ನಿನ್ನೆ ಹಲವೆಡೆ ಮಳೆಯಾಗಿದೆ. ಇತ್ತ ದಕ್ಷಿಣ ಕನ್ನಡ, ಮಲೆನಾಡಿನಲ್ಲಿಯೂ ಮಳೆ ಆರ್ಭಟಿಸಿದ್ದು,  ಅನಿರೀಕ್ಷಿತ ಮಳೆಯಿಂದ ಕರಾವಳಿಯ ರೈತರು ಕಂಗಾಲಾಗಿದ್ದಾರೆ.  ಕರ್ನಾಟಕ ಮಾತ್ರವಲ್ಲದೆ ತೆಲಂಗಾಣ, ತಮಿಳುನಾಡು, ಕೇರಳದಲ್ಲೂ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
  Published by:Seema R
  First published: