Sushma ChakreSushma Chakre
|
news18-kannada Updated:September 18, 2020, 9:11 AM IST
ಬೀದರ್ನಲ್ಲಿ ಭಾರೀ ಮಳೆಯಿಂದ ರಸ್ತೆಯಲ್ಲಿ ನಿಂತಿರುವ ನೀರು
ಬೆಂಗಳೂರು (ಸೆ. 18): ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇಂದು ಮುಂಜಾನೆಯಿಂದಲೇ ಮಳೆಯ ಆರ್ಭಟ ಹೆಚ್ಚಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಳೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕರ್ನಾಟಕದಲ್ಲೂ ಮಳೆಯ ಅಬ್ಬರ ಮುಂದುವರೆದಿದೆ. ಬೀದರ್, ಯಾದಗಿರಿ, ಕಲಬುರ್ಗಿ, ವಿಜಯಪುರದಲ್ಲಿ ಮಳೆ ಹೆಚ್ಚಾಗಿದೆ. ಸೆ. 19 ಮತ್ತು 20ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಕಲಬುರ್ಗಿ, ಬೀದರ್ನಲ್ಲಿ ಮಳೆ ತನ್ನ ಉಗ್ರರೂಪ ತೋರಿಸುತ್ತಿದೆ.
ನೈಋತ್ಯ ಮಾನ್ಸೂನ್ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಮಳೆ ಹೆಚ್ಚಾಗಿದೆ. ನಿನ್ನೆ ಕರಾವಳಿಯಲ್ಲಿ ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಮಲೆನಾಡಿನಲ್ಲಿ ಮಳೆ ಕೊಂಚ ಇಳಿಮುಖಗೊಂಡಿದೆ. ಕರಾವಳಿಯಲ್ಲಿ 3 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Bengaluru Accident: ಸಿಗ್ನಲ್ನಲ್ಲಿ ಕಾರುಗಳ ನಡುವೆ ಅಪ್ಪಚ್ಚಿಯಾಯ್ತು ಬೈಕ್; ಅಮಾಯಕ ಸಾವು, ಕಾರು ಚಾಲಕ ಬಂಧನ
ಕೊಡಗಿನಲ್ಲಿಯೂ ಮಳೆಯ ಅಬ್ಬರ ಹೆಚ್ಚಾಗಿದೆ. ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮಳೆ ಕೊಂಚ ಬಿಡುವು ಪಡೆದಿದೆ. ಉತ್ತರ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿದ್ದು, ಕಲಬುರ್ಗಿ, ಬೀದರ್ನ ನದಿಗಳು ಉಕ್ಕಿ ಹರಿಯುತ್ತಿವೆ. ಬೀದರ್ ಜಿಲ್ಲೆಯ ರಾಚಪ್ಪ ಗೌಡಗಾಂವ್ ಗ್ರಾಮದಲ್ಲಿ ಮಳೆಯಿಂದಾಗಿ ಅಮ್ಮ- ಮಗಳು 5 ಗಂಟೆಗಳ ಕಾಲ ಮನೆಯ ಮೇಲೆ ಹತ್ತಿ ಕುಳಿತು, ಮಳೆನೀರಿನಿಂದ ರಕ್ಷಿಸಿಕೊಂಡ ಘಟನೆ ನಡೆದಿದೆ. ಮಳೆಯ ಆರ್ಭಟ ಕಡಿಮೆಯಾದ ಮೇಲೆ ಸ್ಥಳೀಯರು ಅವರನ್ನು ಮನೆಯಿಂದ ಇಳಿಸಿ, ರಕ್ಷಿಸಿದರು. ಹೊಲದಲ್ಲಿದ್ದ ಮನೆಯೊಳಗೆ ನದಿಯ ನೀರು ಆವರಿಸಿಕೊಂಡಿತ್ತು. ಮುಳುಗುವಷ್ಟು ನೀರು ಒಮ್ಮೆಲೆ ಬಂದಿದ್ದರಿಂದ ಅಮ್ಮ-ಮಗಳಿಬ್ಬರೂ ಮನೆಯ ಚಾವಣಿಯ ಮೇಲೆ ಹತ್ತಿ ಕುಳಿತಿದ್ದರು. ಮಳೆಯಿಂದ ನದಿಯ ಆರ್ಭಟ ಹೆಚ್ಚಿದ್ದರಿಂದ ಸ್ಥಳೀಯರಿಗೆ ಆ ಮನೆಯ ಬಳಿ ಧಾವಿಸಲು ಸಾಧ್ಯವಾಗಿರಲಿಲ್ಲ.
ಉತ್ತರ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಕಲುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕೂಡ ಮಳೆ ಹೆಚ್ಚಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಮುಂಬೈ ಕರ್ನಾಟಕದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಇಂದು ಮಳೆಯಾಗಲಿದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ.
Published by:
Sushma Chakre
First published:
September 18, 2020, 9:11 AM IST