Karnataka Weather: ಉತ್ತರ ಕರ್ನಾಟಕದಲ್ಲಿ ನಿಲ್ಲದ ವರುಣನ ಆರ್ಭಟ; ಅ. 3ರವರೆಗೆ ರಾಜ್ಯಾದ್ಯಂತ ಮಳೆ ಸಾಧ್ಯತೆ

Karnataka Rain Updates: ಉತ್ತರ ಕರ್ನಾಟಕದ ಬೀದರ್, ಬಾಗಲಕೋಟೆಯಲ್ಲಿ ಅಧಿಕ ಮಳೆಯಾಗಿದೆ. ಬಾಗಲಕೋಟೆಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಯಿಂದ ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ 10 ಮನೆಗಳು ಕುಸಿದುಬಿದ್ದಿವೆ.

news18-kannada
Updated:October 1, 2020, 9:51 AM IST
Karnataka Weather: ಉತ್ತರ ಕರ್ನಾಟಕದಲ್ಲಿ ನಿಲ್ಲದ ವರುಣನ ಆರ್ಭಟ; ಅ. 3ರವರೆಗೆ ರಾಜ್ಯಾದ್ಯಂತ ಮಳೆ ಸಾಧ್ಯತೆ
ಮಳೆಯ ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ. 1): ರಾಜ್ಯಾದ್ಯಂತ 2-3 ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಬೆಂಗಳೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರದ ಕೆಲವು ಭಾಗಗಳಲ್ಲಿ ನಿನ್ನೆ ತುಂತುರು ಮಳೆಯಾಗಿದೆ. ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಇಂದಿನಿಂದ ಅಕ್ಟೋಬರ್ 3ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರೀತ್ಯ ಉಂಟಾದ್ದರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದೆ. ಇದರಿಂದಾಗಿ ಇನ್ನೂ 2-3 ದಿನಗಳ ಕಾಲ ಮಳೆ ಮುಂದುವರೆಯಲಿದೆ. ಇಂದಿನಿಂದ ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಲಿದ್ದು, ಸಾಧಾರಣ ಮಳೆ ಬೀಳಲಿದೆ. ನಿನ್ನೆ ಬೆಂಗಳೂರು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿತ್ತು. ಆದರೆ, ಉತ್ತರ ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ.

ಉತ್ತರ ಕರ್ನಾಟಕದ ಬೀದರ್, ಬಾಗಲಕೋಟೆಯಲ್ಲಿ ಅಧಿಕ ಮಳೆಯಾಗಿದೆ. ಬಾಗಲಕೋಟೆಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಯಿಂದ ಇಳಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ 10 ಮನೆಗಳು ಕುಸಿದುಬಿದ್ದಿವೆ. ನಿರಂತರವಾಗಿ ಮಳೆ ಸುರಿದ ಕಾರಣದಿಂದ ನಿನ್ನೆ ನಡುರಾತ್ರಿಯೇ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯಿಂದಾಗಿ ಹುನಗುಂದ, ಇಳಕಲ್ ತಾಲೂಕಿನಲ್ಲಿ ಹಳ್ಳಗಳು ಮೈತುಂಬಿ ಹರಿಯುತ್ತಿವೆ. ಬೀದರ್​ನ ಬಾಲ್ಕಿ, ಔರಾದ್ ಹಾಗೂ ಕಮಲನಗರದಲ್ಲಿ ನಿನ್ನೆ ಮಳೆಯಾಗಿದೆ. ಇದರಿಂದ ಬೀದರ್​ನ ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿತ್ತು.


ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತಡವಾಗಿ ಮಳೆಗಾಲ ಆರಂಭವಾದರೂ ಬೇರೆ ವರ್ಷಗಳಿಗಿಂತ ಹೆಚ್ಚಿನ ಮಳೆ ದಾಖಲಾಗಿದೆ. 4 ತಿಂಗಳ ಮಳೆಗಾಲದಲ್ಲಿ ಸಾಮಾನ್ಯ ಮಾನ್ಸೂನ್​ಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.  ಕಳೆದ 30 ವರ್ಷಗಳಲ್ಲಿ ಎರಡನೇ ಅತಿ ಹೆಚ್ಚು ಮಳೆಯಾದ ವರ್ಷ 2020 ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಈ ವರ್ಷ ಬಿಹಾರ, ಗುಜರಾತ್, ಮೇಘಾಲಯ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು,  ಸಿಕ್ಕಿಂ, ಕರ್ನಾಟಕ ಮತ್ತು ಲಕ್ಷದ್ವೀಪ ದ್ವೀಪಗಳಲ್ಲಿ ಸಾಮಾನ್ಯ ಮಳೆಗಿಂತ ಹೆಚ್ಚು ಮಳೆಯಾಗಿದೆ. ಆದರೆ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಬೇರೆ ವರ್ಷಗಳಿಗಿಂತ ಕಡಿಮೆ ಮಳೆಯಾಗಿದೆ.
Published by: Sushma Chakre
First published: October 1, 2020, 9:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading