news18-kannada Updated:September 20, 2020, 12:02 PM IST
ಉಡುಪಿ ಮಳೆ
ಬೆಂಗಳೂರು (ಸೆ. 20): ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿನ್ನೆಯಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ವಿಪರೀತವಾಗಿದೆ. ರಾಜ್ಯಾದ್ಯಂತ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೆ. 22ರವರೆಗೆ ರಾಜ್ಯದ ಬಹುತೇಕ ಕಡೆ ಮಳೆಯ ಅಬ್ಬರ ಮುಂದುವರೆಯಲಿದೆ. ಬೆಂಗಳೂರು, ಮೈಸೂರಿನಲ್ಲಿಯೂ ಮಳೆಯ ಅಬ್ಬರ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲೂ ನಿನ್ನೆಯಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಉಡುಪಿಯಲ್ಲಿ ಕಳೆದ 4 ದಶಕದಲ್ಲೇ ಅತಿಹೆಚ್ಚು ಮಳೆ ದಾಖಲಾಗಿದೆ.
ಉಡುಪಿಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿಯ ಮುಖ್ಯ ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ಜಿಲ್ಲೆಯ ಇತಿಹಾಸದಲ್ಲಿಯೇ ಈ ಬಾರಿ ಅತಿಹೆಚ್ಚು ಮಳೆಯಾಗಿದೆ. ಪುತ್ತಿಗೆ ಮಠ ಗುಂಡಿಬೈಲ್-ಕಲ್ಸಂಕ ರಸ್ತೆ, ಬೈಲ್ಕೆರೆ ಮಠದಬೆಟ್ಟು, ಉಡುಪಿ- ಮಣಿಪಾಲ್ ಮುಖ್ಯರಸ್ತೆಗಳು ನೀರಿನಿಂದ ಮುಳುಗಿವೆ. ಬಡಗುಪೇಟೆಯ ಅನೇಕ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಬೈಲುಕೆರೆ , ಕುಂಜಿಬೆಟ್ಟು ಪ್ರದೇಶವೂ ಜಲಾವೃತವಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಸಂದರ್ಶಕರ ಪಾರ್ಕಿಂಗ್ ಪ್ರದೇಶವು ನೀರಿನಲ್ಲಿ ಮುಳುಗಿದೆ. ಕಲ್ಸಂಕ ಬಳಿಯ ಇಂದ್ರಾಣಿ ನದಿಯ ದಡದಲ್ಲಿರುವ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ.
ನಿನ್ನೆ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲ್ಪೆ- ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮಲ್ಪೆ ಸಮುದ್ರದಲ್ಲಿ ಮೂರು ಬೋಟ್ಗಳು ಮುಳುಗಡೆಯಾಗಿದೆ. ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಹಿರಿಯಡ್ಕದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: Karnataka Rain: ಭಾರೀ ಮಳೆಗೆ ಅಕ್ಷರಶಃ ತತ್ತರಿಸಿದ ಉಡುಪಿ; ಮುಳುಗಿದ ಮನೆಗಳು
ಮಳೆಯಿಂದ ಉಡುಪಿ ಶ್ರೀಕೃಷ್ಣ ಮಠದ ಬಳಿ ಇರುವ ವಾಹನ ನಿಲುಗಡೆ ಸ್ಥಳವು ಮುಳುಗಡೆಯಾಗಿದೆ. ಇಂದ್ರಾಣಿ ನದಿಯ ಅಕ್ಕಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಬ್ರಹ್ಮಾವರ ತಾಲೂಕಿನ ನೀಲಾವರ, ಮಟಪಾಡಿ ಗ್ರಾಮಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಜನಸಂಪರ್ಕವನ್ನು ಕಳೆದುಕೊಂಡಿದ್ದಾರೆ.
ಕೊಡಗಿನಲ್ಲೂ ರೆಡ್ ಅಲರ್ಟ್:
ಕೊಡಗು ಜಿಲ್ಲೆಯಾದ್ಯಂತ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಉಡುಪಿ ಮತ್ತು ಕೊಡಗಿನಲ್ಲಿ ಸೆಪ್ಟೆಂಬರ್ 22ರವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಅಲ್ಲಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯೂ ಸುರಿಯುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿದೆ.
ಉತ್ತರ ಕರ್ನಾಟಕದಲ್ಲೂ ಮಳೆ ಹೆಚ್ಚಾಗಿದ್ದು, ಇಂದು ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಾವಣಗೆರೆ, ಮೈಸೂರು, ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಸೆ. 23ರವರೆಗೆ ಮಳೆ ಮುಂದುವರಿಯಲಿದೆ. ಚಿಕ್ಕಮಗಳೂರಿನಲ್ಲಿ ಮಳೆ ಹೆಚ್ಚಾಗಿದ್ದು, ಶೃಂಗೇರಿಯ ಸುತ್ತಮುತ್ತ ಹಾಗೂ ಕುದುರೆಮುಖ ಭಾಗದಲ್ಲಿ ಸತತ ಮಳೆಯಾಗುತ್ತಿದ್ದು ತುಂಗಾ ನದಿಯ ಪ್ರವಾಹದ ನೀರು ಬೈಪಾಸ್ ರಸ್ತೆಗೆ ನುಗ್ಗಿದೆ. ಕೆವಿಆರ್ ರಸ್ತೆಗೆ ನೀರು ನುಗ್ಗಿದ್ದು, ಮಳೆ ಹೆಚ್ಚಾಗುತ್ತಿರುವುದರಿಂದ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ.
Published by:
Sushma Chakre
First published:
September 20, 2020, 12:02 PM IST