Sushma ChakreSushma Chakre
|
news18-kannada Updated:September 11, 2020, 12:37 PM IST
ಗುಡ್ಡ ಕುಸಿದಿರುವುದು
ಬೆಂಗಳೂರು (ಸೆ. 11): ರಾಜ್ಯದೆಲ್ಲೆಡೆ ಮೂರ್ನಾಲ್ಕು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಇನ್ನೂ ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಇಂದು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡದಲ್ಲಿ ಬೆಳಗ್ಗೆಯಿಂದಲೇ ಮಳೆ ಶುರುವಾಗಿದೆ. ಕರಾವಳಿಯಲ್ಲಿ ಇಂದು ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಹೆಚ್ಚಾಗಲಿದೆ. ಎರಡು -ಮೂರು ದಿನಗಳಿಂದ ರಾಜ್ಯದ ಒಳನಾಡಿನ ಕೆಲವು ಕಡೆಗಳಲ್ಲಿ ಸಾಧಾರಣ ಹಾಗೂ ಮತ್ತೆ ಕೆಲವೆಡೆ ಭಾರೀ ಮಳೆಯಾದ ವರದಿಯಾಗಿದೆ. ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಳೆಗೆ ಪೂರಕವಾದ ಸನ್ನಿವೇಶ ಸೃಷ್ಟಿಯಾಗಿದ್ದು, ಇದೇ ರೀತಿ ಮಳೆ ಮುಂದುವರೆಯಲಿದೆ.
ಮುಂದಿನ ಎರಡು ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಅಬ್ಬರಿಸಿದ ಮಳೆ ಬಳಿಕ ಕಡಿಮೆಯಾಗಿತ್ತು. 15ರಿಂದ 20 ದಿನಗಳಿಂದ ಇಳಿಮುಖವಾಗಿದ್ದ ಮಳೆ ಮತ್ತೆ ಹೆಚ್ಚಾಗಿದೆ. ಇಂದು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: Coronavirus Vaccine: ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆ ಪ್ರಯೋಗಕ್ಕೆ ಚೀನಾ ಒಪ್ಪಿಗೆ
ಇಂದು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು, ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ 2 ದಿನ ಮಳೆ ಹೆಚ್ಚಾಗಲಿದೆ. ಹಾಸನ, ಕೋಲಾರ, ಮಂಡ್ಯ, ಮೈಸೂರು, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ಬೆಂಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಕೊಡಗು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅತ್ಯಧಿಕ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿಯ ಸಮುದ್ರದ ತೀರದಲ್ಲಿ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಕಾರವಾರದಲ್ಲೂ ದೊಡ್ಡ ಅಲೆಗಳು ಏಳಲಿವೆ. ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿಯೂ ಇನ್ನೆರಡು ದಿನ ಮಳೆಯ ಪ್ರಮಾಣ ಹೆಚ್ಚಾಗಲಿದೆ.
ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಕಲ್ಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮೂಲಗಳ ಮಾಹಿತಿ ನೀಡಿವೆ. ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಲಿದೆ.
Published by:
Sushma Chakre
First published:
September 11, 2020, 12:37 PM IST