• Home
  • »
  • News
  • »
  • state
  • »
  • Karnataka Assembly Elections: ಯಶವಂತಪುರದಲ್ಲಿ ಈ ಬಾರಿ ಯಶಸ್ಸು ಸಿಗೋದು ಯಾರಿಗೆ? ಮತ್ತೆ ಗೆಲುವು ಸಾಧಿಸ್ತಾರಾ ಸಚಿವ ಸೋಮಶೇಖರ್?

Karnataka Assembly Elections: ಯಶವಂತಪುರದಲ್ಲಿ ಈ ಬಾರಿ ಯಶಸ್ಸು ಸಿಗೋದು ಯಾರಿಗೆ? ಮತ್ತೆ ಗೆಲುವು ಸಾಧಿಸ್ತಾರಾ ಸಚಿವ ಸೋಮಶೇಖರ್?

ಸಚಿವ ಎಸ್‌ಟಿ ಸೋಮಶೇಖರ್

ಸಚಿವ ಎಸ್‌ಟಿ ಸೋಮಶೇಖರ್

ಸಚಿವ ಎಸ್.ಟಿ. ಸೋಮಶೇಖರ್ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು, ಅದೃಷ್ಟ ಪರೀಕ್ಷೆಯಲ್ಲಿ ಗೆದ್ದು, ಸಚಿವರೂ ಆಗಿರುವ ಸೋಮಶೇಖರ್ ಈ ಬಾರಿಯೂ ಸ್ಪರ್ಧಿಸೋದು ಪಕ್ಕಾ. ಮತ್ತೊಂದೆಡೆ ಪಕ್ಷಾಂತರದ ಸೇಡು, ಸೋಲಿನ ಕಹಿ ತೀರಿಸಿಕೊಳ್ಳಲು ಕಾಂಗ್ರೆಸ್ ಕಾದಿದೆ. ಇವುಗಳ ಮಧ್ಯೆ ಜೆಡಿಎಸ್ ಕೂಡ ಇಲ್ಲಿ ಪ್ರಭಾವಿಯಾಗಿದೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಯಶವಂತಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಮುಂದೆ ಓದಿ ...
  • Share this:

ಬೆಂಗಳೂರಿನ (Bengaluru) ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಯಶವಂತಪುರ (Yeshwanthpur Assembly Constituency) ಕೂಡ ಒಂದು. ಯಶವಂತಪುರ ನಗರವು ಬೆಂಗಳೂರು ಜಿಲ್ಲೆಯ ಬೆಂಗಳೂರು ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ಇದು ಬೆಂಗಳೂರು ರೈಲು ನಿಲ್ದಾಣದಿಂದ ಪಶ್ಚಿಮ ಭಾಗಕ್ಕೆ 6 ಕಿ.ಮೀ ದೂರದಲ್ಲಿದೆ. ಜನವಸತಿಯ ಪ್ರದೇಶವಷ್ಟೇ ಅಲ್ಲದೆ ಕೈಗಾರಿಕಾ ಪ್ರದೇಶವನ್ನೂ ಒಳಗೊಂಡಿರುವ ಯಶವಂತಪುರವು ಕೃಷಿ ನಿಯಂತ್ರಿತ ಮಾರುಕಟ್ಟೆಯನ್ನು (APMC) ಸಹ ಒಳಗೊಂಡಿದೆ. ಬೆಂಗಳೂರಿನಿಂದ 18 ಜಿಲ್ಲೆಗಳಿಗೆ ಸಾಗುವ ವಾಹನಗಳು ಯಶವಂತಪುರ ಮಾರ್ಗವಾಗಿಯೆ ಹೋಗಬೇಕು ಎನ್ನುವುದು ಇದರ ಪ್ಲಸ್ ಮತ್ತು ಮೈನಸ್ ಪಾಯಿಂಟ್! ಸದ್ಯ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಈ ವಿಧಾನಸಭಾ ಕ್ಷೇತ್ರದ ಶಾಸಕರು. ಕಾಂಗ್ರೆಸ್‌ನಿಂದ (Congress) ಬಿಜೆಪಿಗೆ (BJP) ಬಂದು, ಅದೃಷ್ಟ ಪರೀಕ್ಷೆಯಲ್ಲಿ ಗೆದ್ದು, ಸಚಿವರೂ (Minister) ಆಗಿರುವ ಸೋಮಶೇಖರ್ ಈ ಬಾರಿಯೂ ಸ್ಪರ್ಧಿಸೋದು ಪಕ್ಕಾ. ಮತ್ತೊಂದೆಡೆ ಪಕ್ಷಾಂತರದ ಸೇಡು, ಸೋಲಿನ ಕಹಿ ತೀರಿಸಿಕೊಳ್ಳಲು ಕಾಂಗ್ರೆಸ್ ಕಾದಿದೆ. ಇವುಗಳ ಮಧ್ಯೆ ಜೆಡಿಎಸ್ (JDS) ಕೂಡ ಇಲ್ಲಿ ಪ್ರಭಾವಿಯಾಗಿದೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಯಶವಂತಪುರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.


ಪ್ರಮುಖ ನಾಯಕರು ಸ್ಪರ್ಧಿಸಿದ ಕ್ಷೇತ್ರ


ಯಶವಂತಪುರ ಕ್ಷೇತ್ರ ಹಳ್ಳಿ ಮತ್ತು ನಗರಗಳನ್ನು ಒಳಗೊಂಡ ವಿಧಾನಸಭಾ ಕ್ಷೇತ್ರವಾಗಿದೆ. ಬಿಬಿಎಂಪಿ ವ್ಯಾಪ್ತಿಯ ದೊಡ್ಡಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ, ಹೆಮ್ಮಿಗೆಪುರ ಹಾಗೂ ಯಶವಂಪುರ ಎಂಬ 6 ವಾರ್ಡ್‌ಗಳನ್ನು ಈ ಕ್ಷೇತ್ರ ಹೊಂದಿದೆ. ರಾಜ್ಯದ ಮಾಜಿ ಸಚಿವೆ ಮೋಟಮ್ಮ, ಕೇಂದ್ರದ ಹಾಲಿ ಸಚಿವೆ ಶೋಭಾ ಕರಂದ್ಲಾಜೆಯಂತಹ ಘಟಾನುಘಟಿ ಮಹಿಳಾ ನಾಯಕರಿಯರು ಇಲ್ಲಿಂದ ಸ್ಪರ್ಧಿಸಿದ್ದರು. ಸದ್ಯ ಸಚಿವ ಎಸ್‌ಟಿ ಸೋಮಶೇಖರ್ ಇಲ್ಲಿನ ಶಾಸಕರಾಗಿದ್ದಾರೆ. ಹಾಲಿ ರಾಜ್ಯಸಭಾ ಸದಸ್ಯ, ಚಿತ್ರ ನಟ ಜಗ್ಗೇಶ್ ಕೂಡ ಇಲ್ಲಿಂದ ಸ್ಪರ್ಧಿಸಿದ್ದರು.


karnataka vidhana sabha general election constituency profile yeshwanthpur bengaluru city
ಜೆಡಿಎಸ್ ನಾಯಕ ಜವರಾಯಿಗೌಡ


ಸಚಿವ ಎಸ್‌ಟಿ ಸೋಮಶೇಖರ್ ಪ್ರತಿನಿಧಿಸುವ ಕ್ಷೇತ್ರ


2008ರಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಸ್ಪರ್ಧಿಸಿ ಸೋತಿದ್ದ ಎಸ್‌.ಟಿ ಸೋಮಶೇಖರ್ 2013 ರಲ್ಲಿ ಜೆಡಿಎಸ್‌ ಅಭ್ಯರ್ಥಿ ಟಿ.ಎನ್. ಜವರಾಯಿ ಗೌಡ ವಿರುದ್ಧ 29,100 ಮತಗಳ ಅಂತರದಿಂದ ಗೆದ್ದರು. 2010ರ ವಿಧಾನಸಭಾ ಚುನಾವಣೆಯಲ್ಲೂ ಜವರಾಯಿಗೌಡ ವಿರುದ್ಧ 10,711ಮತಗಳ ಅಂತರದ ಗೆಲುವು ಸಾಧಿಸಿದ್ದರು. ಬಳಿಕ ಪಕ್ಷ ಬದಲಾಯಿಸಿ ಕಾಂಗ್ರೆಸ್‌ನಿಂದ, ಬಿಜೆಪಿಗೆ ಜಿಗಿದರು. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಭರ್ಜರಿ ಗೆಲುವಿನೊಂದಿಗೆ ಶಾಸಕರಾದರು. ಸದ್ಯ ಸಹಕಾರ ಸಚಿವರಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


karnataka vidhana sabha general election constituency profile yeshwanthpur bengaluru city
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ


ಇದನ್ನೂ ಓದಿ: Karnataka Assembly Elections: ಶಾಂತಿನಗರ ಕ್ಷೇತ್ರದಲ್ಲಿ ಹೇಗಿದೆ ಚುನಾವಣಾ ರಣಕಣ? ಕೈ-ಕಮಲ-ದಳ ನಡುವೆ ನಡೆಯುತ್ತಾ ಫೈಟ್?


ಎಸ್‌.ಟಿ. ಸೋಮಶೇಖರ್ ಪರವಾಗಿರುವ ಅಂಶಗಳು


ಯಶವಂತಪುರ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿ ಎಂಬ ಹೆಗ್ಗಳಿಕೆ ಇದೆ. ಬಿಜೆಪಿಗೆ ವಲಸಿಗರಾದರೂ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಹೆಚ್ಚುಗಾರಿಕೆ. ಸದ್ಯ ಯಶವಂತಪುರ ಕ್ಷೇತ್ರ, ಬೆಂಗಳೂರು ನಗರ ಹಾಗೂ ಬಿಜೆಪಿ ಪಕ್ಷದಲ್ಲೂ ಪ್ರಭಾವ ಹೊಂದಿರುವ ವ್ಯಕ್ತಿ. ಮೂರು ಬಾರಿ ಶಾಸಕರಾಗಿದ್ದರಿಂದ ಕ್ಷೇತ್ರದ ಹಿಡಿತವಿದೆ.


ಸೋಮಶೇಖರ್ ವಿರುದ್ಧದ ಅಂಶಗಳು


ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದು, ವಿಪಕ್ಷ ನಾಯಕ ಸಿದ್ಧರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಸೋಮಶೇಖರ್, ಬಳಿಕ ಕಾಂಗ್ರೆಸ್ ತೊರೆದಿದ್ದು ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಂತಾಗಿದೆ. ಪಕ್ಷ ನಿಷ್ಠೆಯಿಲ್ಲ ಎಂಬ ಸಂದೇಶ ಮತದಾರರಿಗೆ ರವಾನೆಯಾಗಿದೆ. ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನ ಮಾಡಿದ ಕಾರಣಕ್ಕಾಗಿ ಒಕ್ಕಲಿಗ ಸಮುದಾಯ ಇವರ ಮೇಲೆ ಆಕ್ರೋಶಗೊಂಡಿದೆ ಎನ್ನಲಾಗುತ್ತಿದೆ.


ಟಿಕೆಟ್‌ಗಾಗಿ ಯಶವಂತಪುರದಲ್ಲಿ ಭಾರೀ ಸ್ಪರ್ಧೆ


ಯಶವಂತಪುರದಲ್ಲಿ ಈ ಬಾರಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯಿಂದ ಹಾಲಿ ಶಾಸಕ ಎಸ್‌ಟಿ ಸೋಮಶೇಖರ್‌ ಅವರೇ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಅತ್ತ ಕಾಂಗ್ರೆಸ್‌ನಿಂದ ಉದ್ಯಮಿ ರಾಜ್‌ಕುಮಾರ್ ಟಿಕೆಟ್ ಬಯಸಿದ್ದಾರೆ. ಇದರೊಂದಿಗೆ ಅಚ್ಚರಿಯ ಹೆಸರು ಪುಟ್ಟಣ್ಣ. ಹಾಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿರುವ ಪುಟ್ಟಣ್ಣ ಪಕ್ಷಾಂತರದ ಸುಳಿವು ನೀಡಿದ್ದು, ಯಶವಂತಪುರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಜೆಡಿಎಸ್‌ನಿಂದ ಯಶವಂತಪುರದ ಸಜ್ಜನ ರಾಜಕಾರಣಿ ಅಂತ ಹೆಸರಾದ ಜವರಾಯಿಗೌಡ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯೋದು ಪಕ್ಕಾ ಆಗಿದೆ.


ಯಶವಂತಪುರ ಕ್ಷೇತ್ರದ ಮತದಾರರ ಲೆಕ್ಕಾಚಾರ


ಕ್ಷೇತ್ರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದೆ. ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 4,53,546ರಷ್ಟಿದ್ದು, ಈ ಪೈಕಿ ಒಕ್ಕಲಿಗರ ಸಂಖ್ಯೆ 1,30,000ದಷ್ಟಿದೆ. ಇನ್ನು ಪರಿಶಿಷ್ಟ ಜಾತಿ 84,000, ಲಿಂಗಾಯತರು 55,000, ಮುಸ್ಲಿಂ 42,000, ಕುರುಬರು 34,000, ಬ್ರಾಹ್ಮಣ 34,000, ಎಸ್‌ಟಿ 15,000ರಷ್ಟು ಮತದಾರರಿದ್ದಾರೆ. ಇನ್ನು ಯಾದವ 39,000 ಹಾಗೂ ಇತರೇ ಮತದಾರರ ಸಂಖ್ಯೆ 59,400ರಷ್ಟಿದೆ.


ಇದನ್ನೂ ಓದಿ: Karnataka Assembly Elections: ಗಣೇಶನ ಗದ್ದಲ, ಈದ್ಗಾ ಕೋಲಾಹಲ! ಹೇಗಿದೆ ಚಾಮರಾಜಪೇಟೆಯಲ್ಲಿ ಚುನಾವಣಾ ಕಾವು?


ಕ್ಷೇತ್ರದ ಸಮಸ್ಯೆಗಳು


ಬಿಡಿಎ ಅಭಿವೃದ್ಧಿಪಡಿಸಿರುವ ವಲಗೇರಹಳ್ಳಿ ವಸತಿ ಸಮುಚ್ಚಯದಲ್ಲಿ ನೀರು ಮತ್ತು ವಿದ್ಯುತ್ ಸಮಸ್ಯೆಗಳು ಇವೆ. ಏಜೀಸ್ ಬಡಾವಣೆಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಸೌಕರ್ಯ ಇಲ್ಲದಿರುವುದು, ತಿಪ್ಪೇನಹಳ್ಳಿ ಬಳಿಯ ಕಸ ಸಂಸ್ಕರಣಾ ಘಟಕದಿಂದ ಉಂಟಾಗಿರುವ ಅನಾರೋಗ್ಯಕರ ವಾತಾವರಣ, ಕೆಂಗೇರಿ ಉಪನಗರದಿಂದ ಉಲ್ಲಾಳು ಮಾರ್ಗದಲ್ಲಿ ಮಾಗಡಿ ರಸ್ತೆ ಸಂಪರ್ಕಿಸುವ 80 ಅಡಿ ರಸ್ತೆ ಹಾಳಾಗಿರುವುದು, ಮಾಗಡಿ ರಸ್ತೆ ಡಾಂಬರೀಕರಣಗೊಳ್ಳದ ಕಾರಣ ಆಗುತ್ತಿರುವ ಬವಣೆಗಳು ಹಲವಾರು. ಇನ್ನು ಬಿಡಿಎ ಬಡಾವಣೆಗಳು ಹಾಗೂ ಖಾಸಗಿ ಬಡಾವಣೆಗಳಲ್ಲಿ ಮೂಲಸೌಕರ್ಯ ಕೊರತೆ, ರಿಯಲ್ ಎಸ್ಟೇಟ್ ಏರು ಮುಖವಾಗಿರುವ ಈ ವ್ಯಾಪ್ತಿಯಲ್ಲಿ ಅತಿಕ್ರಮಣ, ಖಾತೆಗಳ ಸಮಸ್ಯೆ ಕೂಡ ಅಷ್ಟೇ ಪ್ರಮಾಣದಲ್ಲಿದೆ.

Published by:Annappa Achari
First published: