ಉತ್ತರ ಕನ್ನಡ (Uttara Kannada) ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರವೂ (Yellapur assembly constituency) ಒಂದು. ಹಾಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ (Labor Minister Shivram Hebbar) ಅವರು ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಈ ಕ್ಷೇತ್ರ ಈ ಬಾರಿ ಚುನಾವಣೆಯಲ್ಲಿ ಗಮನ ಸೆಳೆಯಲಿದೆ. 2018ರಲ್ಲಿ ಚುನಾವಣೆ ಎದುರಿಸಿದ್ದ ಈ ಕ್ಷೇತ್ರ, ಬಳಿಕ ಶಿವರಾಮ್ ಹೆಬ್ಬಾರರ ಪಕ್ಷಾಂತರದ ಬಳಿಕ ಮತ್ತೊಮ್ಮೆ ಉಪಚುನಾವಣೆಗೆ (By Election) ಸಾಕ್ಷಿಯಾಗಿತ್ತು. ಇದೀಗ ಮತ್ತೊಂದು ಚುನಾವಣೆಗೆ (Election) ಯಲ್ಲಾಪುರ ವಿಧಾನಸಭಾ ಕ್ಷೇತ್ರ ಸಜ್ಜಾಗುತ್ತಿದೆ. ಸಚಿವರೂ ಆಗಿರುವ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ಪಾಠ ಕಲಿಸಲು ಕಾಂಗ್ರೆಸ್ (Congress) ಸಜ್ಜಾಗುತ್ತಿದ್ದರೆ, ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಅಂತಿದ್ದಾರೆ ಸಚಿವ ಹೆಬ್ಬಾರ್! ಹಾಗಾದರೆ ಈ ಕ್ಷೇತ್ರದಲ್ಲಿ ಎಲೆಕ್ಷನ್ ಕಾವು ಹೇಗಿದೆ? ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರರ ಬಗ್ಗೆ ಅವರ ಕ್ಷೇತ್ರದ ಮತದಾರರು ಏನಂತಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪರಿಚಯ
ಯಲ್ಲಾಪುರ ಪ್ರಕೃತಿ ಸೌಂದರ್ಯದ ತಾಣವಾಗಿದೆ. ದಟ್ಟ ಅರಣ್ಯಗಳು, ತೋಟ, ಹೊಲ, ಗದ್ದೆಗಳು, ಜಲಪಾತ, ನದಿಗಳು ಎಲ್ಲವನ್ನೂ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಯಲ್ಲಾಪುರ ತಾಲೂಕು, ಮುಂಡಗೋಡು ತಾಲುಕಿನ ಎಲ್ಲಾ ಗ್ರಾಮಗಳ ಜೊತೆಗೆ ಶಿರಸಿ ತಾಲೂಕಿನ ಬನವಾಸಿಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಯಲ್ಲಾಪುರ-ಮುಂಡಗೋಡು ಕ್ಷೇತ್ರ 2008ರ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ರೂಪುಗೊಂಡಿದೆ. ಅದುವರೆಗೆ ಮುಂಡಗೋಡು ಹಳಿಯಾಳ ಕ್ಷೇತ್ರದ ಭಾಗವಾಗಿತ್ತು. ಯಲ್ಲಾಪುರ ಅಂಕೋಲಾ ಕ್ಷೇತ್ರದಲ್ಲಿತ್ತು. ಯಲ್ಲಾಪುರ, ಮುಂಡಗೋಡ ತಾಲೂಕುಗಳ ಜತೆ ಶಿರಸಿಯ ಬನವಾಸಿ ಭಾಗ ಸೇರಿಸಿ ಈ ಕ್ಷೇತ್ರ ರಚಿಸಲಾಗಿದೆ.
2018ರಲ್ಲಿ ಚುನಾವಣೆ, 2019ರಲ್ಲಿ ಉಪ ಚುನಾವಣೆ
2018ರ ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ - ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ 7 ಮಂದಿ ಕಣದಲ್ಲಿದ್ದರು, ಚುನಾವಣೆಯಲ್ಲಿ ಒಟ್ಟು 1,40,271ಮತಗಳು ಚಲಾವಣೆಯಾಗಿದ್ದವು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಿವರಾಮ್ ಹೆಬ್ಬಾರ್ 66,290 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ವಿ ಎಸ್ ಪಾಟೀಲ್ ಅವರನ್ನು 1,483 ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ ಅದಾದ ಬಳಿಕ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದ ಅತೃಪ್ತ ಶಾಸಕರ ಗುಂಪನ್ನು ಶಿವರಾಮ್ ಹೆಬ್ಬಾರ್ ಸೇರಿಕೊಂಡು, ಬಿಜೆಪಿಗೆ ಶಿಫ್ಟ್ ಆದರು. ಬಳಿಕ 2019ರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
ಶಿವರಾಮ್ ಹೆಬ್ಬಾರ್ ಮೂಲತಃ ಬಿಜೆಪಿಯಲ್ಲೇ ಇದ್ದವರು. ಉತ್ತರಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಆದರೆ ಕಾರಣಾಂತರಗಳಿಂದ ಕಾಂಗ್ರೆಸ್ ಸೇರಿದರು. 2013ರಲ್ಲಿ ಪ್ರಥಮವಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರಲ್ಲಿ ಪುನಃ ಶಾಸಕರಾಗಿ ಮರು ಆಯ್ಕೆಯಾದರು. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಬಿಜೆಪಿ ಸೇರಿ, 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ, ಪ್ರಸ್ತುತ ಕಾರ್ಮಿಕ ಸಚಿವರಾಗಿದ್ದಾರೆ.
ಶಿವರಾಮ್ ಹೆಬ್ಬಾರ್ ಎದುರಾಳಿ ಭೀಮಣ್ಣ ನಾಯ್ಕ್
ಶಿವರಾಮ್ ಹೆಬ್ಬಾರ್ ಅವರ ಎದುರಾಳಿಯಾಗಿರುವ ಭೀಮಣ್ಣ ನಾಯ್ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಳೆದ 10 ವರ್ಷಗಳಿಂದ ಕೆಲಸ ಮಾಡಿದವರು. ಇಡೀ ಜಿಲ್ಲೆಯಲ್ಲಿ ಅವರು ಚಿರಪರಿಚಿತರಾಗಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಅನೇಕ ಬೆಂಬಲಿಗರನ್ನು ಹೊಂದಿದ್ದಾರೆ. ಆದರೆ, ಈ ಭಾಗದಲ್ಲಿ ತಳಮಟ್ಟದ ಕಾರ್ಯಕರ್ತರು ಭೀಮಣ್ಣ ನಾಯ್ಕ ಅವರಿಗೆ ಪರಿಚಿತರಲ್ಲ ಎನ್ನಲಾಗಿದೆ. ಭೀಮಣ್ಣ ನಾಯ್ಕ ಅವರು ಹಿರಿಯ ರಾಜಕಾರಣಿ, ಮಾಜಿ ಸಚಿವ, ಹಾಲಿ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರ ಆಪ್ತರು.
ಈ ಬಾರಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?
ಹಾಲಿ ಶಾಸಕ, ಸಚಿವ ಶಿವರಾಮ ಹೆಬ್ಬಾರ್ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಅವರೊಂದಿಗೆ ಉದ್ಯಮಿ ನರಸಿಂಹ ಕೋಣೆಮನೆ ಟಿಕೆಟ್ ಮೇಲೆ ಕಣ್ಣಿಟಿದ್ದಾರೆ. ಅತ್ತ ಕಾಂಗ್ರೆಸ್ನಿಂದ ಭೀಮಣ್ಣ ನಾಯ್ಕ್ ಕೂಡ ಶಿರಸಿ ಅಥವಾ ಯಲ್ಲಾಪುರ ಕ್ಷೇತ್ರದಲ್ಲಿ ಸ್ಪರ್ಧಿಸೋ ಸಾಧ್ಯತೆ ಇದೆ. ಜೆಡಿಎಸ್ನಿಂದ ಉದ್ಯಮಿ ಸಂತೋಷ್ ರಾಯ್ಕರ್ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ.
ಈ ಬಾರಿ ಸ್ಪರ್ಧಿಸುತ್ತಾರಾ ಮಾಜಿ ಶಾಸಕ ವಿಎಸ್ ಪಾಟೀಲ್?
ಮತ್ತೊಂದೆಡೆ ಮಾಜಿ ಶಾಸಕ ವಿಎಸ್ ಪಾಟೀಲ್ ಹೆಸರೂ ಕೂಡ ಕೇಳಿ ಬರುತ್ತಿದೆ. ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ವಿಎಸ್ ಪಾಟೀಲ್, ಮೂಲತಃ ಬಿಜೆಪಿಗರು. ಆದರೆ ಶಿವರಾಮ್ ಹೆಬ್ಬಾರ್ ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ ಸೇರಿದ್ದ ಅವರು, ಈ ಬಾರಿ ಹೆಬ್ಬಾರ್ ವಿರುದ್ಧವೇ ಸ್ಪರ್ಧಿಸುವ ಸಾಧ್ಯತೆ ಇದೆ.
ಯಲ್ಲಾಪುರ ಮತದಾರರ ವಿವರ
ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 1,67,300 ಮತದಾರರಿದ್ದಾರೆ. ಈ ಪೈಕಿ ಬ್ರಾಹ್ಮಣರು – 22,500, ನಾಮಧಾರಿಗಳು – 21,500, ಮರಾಠರು – 20,500 ಮತದಾರರಿದ್ದಾರೆ. ಇನ್ನು ಮುಸ್ಲಿಂ – 19,500, ಎಸ್ಸಿ – 18,800, ಲಿಂಗಾಯತ – 17,500 ಮತದಾರರಿದ್ದಾರೆ. ಇನ್ನುಳಿದಂತೆ ಗೌಳಿಗರು – 9,500, ಕುರುಬರು – 6,000 ಹಾಗೂ ಇತರೇ ಸಮುದಾಯದ ಮತದಾರರು 24,000 ಮಂದಿ ಇದ್ದಾರೆ.
ಇದನ್ನೂ ಓದಿ: Karnataka Assembly Elections: ಕಾರವಾರ ಈ ಬಾರಿ ಯಾರಿಗೆ ಗೆಲುವಿನ ಹಾರ? ರೂಪಾಲಿ, ಆನಂದ್, ಸತೀಶ್ ಸೈಲ್ ನಡುವೆ ಫೈಟ್ ಫಿಕ್ಸ್?
ಯಲ್ಲಾಪುರ ಕ್ಷೇತ್ರದ ಸಮಸ್ಯೆಗಳೇನು?
ಉತ್ತರ ಕನ್ನಡದ ಎಲ್ಲಾ ಕ್ಷೇತ್ರಗಳಂತೆ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿನ ಮತದಾರರ ಬೇಡಿಕೆಯೂ ಆಗಿದೆ. ಸಚಿವರಾಗಿದ್ದುಕೊಂಡೇ ಶಿವರಾಮ್ ಹೆಬ್ಬಾರ್ ಈ ಕೆಲಸ ಮಾಡುತ್ತಿಲ್ಲ ಎಂಬ ಅಸಮಧಾನವೂ ಇದೆ. ಇದರ ಜೊತೆಗೆ ಕ್ಷೇತ್ರದಾದ್ಯಂತ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ, ಉತ್ತಮ ರಸ್ತೆಗಳಿಲ್ಲ ಎಂಬ ಆರೋಪವೂ ಇದೆ. ಇವುಗಳ ಜೊತೆಗೆ ಅಡಿಕೆಯನ್ನೇ ನಂಬಿಕೊಂಡಿರುವ ತೋಟಗಾರ ಸಹಾಯಕ್ಕೆ ಸರ್ಕಾರ ಬರಬೇಕು ಎಂಬ ಆಗ್ರಹವೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ