• Home
  • »
  • News
  • »
  • state
  • »
  • Karnataka Assembly Elections: ಸ್ಪೀಕರ್ ತವರಲ್ಲಿ ಈ ಬಾರಿ 'ಲೌಡ್ ಸ್ಪೀಕರ್' ಯಾರದ್ದು? ಶಿರಸಿಯಲ್ಲಿ ಯಾರನ್ನು ಗೆಲ್ಲಿಸುತ್ತಾಳೆ ಮಾರಿಕಾಂಬೆ?

Karnataka Assembly Elections: ಸ್ಪೀಕರ್ ತವರಲ್ಲಿ ಈ ಬಾರಿ 'ಲೌಡ್ ಸ್ಪೀಕರ್' ಯಾರದ್ದು? ಶಿರಸಿಯಲ್ಲಿ ಯಾರನ್ನು ಗೆಲ್ಲಿಸುತ್ತಾಳೆ ಮಾರಿಕಾಂಬೆ?

ಶಿರಸಿ ವಿಧಾನಸಭಾ ಕ್ಷೇತ್ರ

ಶಿರಸಿ ವಿಧಾನಸಭಾ ಕ್ಷೇತ್ರ

ಘಟ್ಟದ ಮೇಲಿನ ತಾಲೂಕುಗಳನ್ನು ಉತ್ತರ ಕನ್ನಡದಿಂದ ಪ್ರತ್ಯೇಕಿಸಿ, ಪ್ರತ್ಯೇಕ ಶಿರಸಿ ಜಿಲ್ಲೆಯನ್ನು ರಚಿಸಬೇಕು ಎನ್ನುವುದು ಹಲವು ವರ್ಷಗಳ ಕೂಗು. ಇದೀಗ ಮತ್ತೆ ಈ ಕೂಗಿಗೆ ಜೀವ ಸಿಕ್ಕಿದ್ದು, ಈ ಬಾರಿ ಚುನಾವಣೆಯ ಪ್ರಮುಖ ವಿಚಾರವಾದರೂ ಅಚ್ಚರಿಯಿಲ್ಲ.

  • Share this:

ಮಲೆನಾಡಿನ ಹೆಬ್ಬಾಗಿಲು ಅಂತಾನೂ ಕರೆಯಲ್ಪಡುವ ಶಿರಸಿ (Sirsi) ಕ್ಷೇತ್ರ ಉತ್ತರ ಕನ್ನಡ (Uttara Kannada) ಹಾಗೂ ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ (assembly constituency) ಒಂದು. ಕಾರಣ ಇದು ರಾಜ್ಯದ ಹಿರಿಯ ರಾಜಕಾರಣಿ (Senior Politician), ಮಾಜಿ ಸಚಿವ, ಹಾಲಿ ಸ್ಪೀಕರ್ (Sepaker) ವಿಶ್ವೇಶ್ವರ ಹೆಗಡೆ ಕಾಗೇರಿಯವರು (Vishweshwar Hegde Kageri) ಪ್ರತಿನಿಧಿಸುವ ಕ್ಷೇತ್ರ. ಮಾರಿಕಾಂಬೆ ದೇವಿಯ (Marikambe Devi) ನೆಲೆಬೀಡು, ಹಲವು ನದಿಗಳ (river) ತಾಣ, ಪ್ರಕೃತಿ ಸೌಂದರ್ಯದ ತವರು.. ಮುಂತಾದ ಉಪಮೆಗಳನ್ನು ಪಡೆದಿರುವ ಶಿರಸಿ ಉತ್ತರ ಕನ್ನಡದ ಘಟ್ಟದ ಮೇಲಿನ ಪ್ರದೇಶ. ಘಟ್ಟದ ಮೇಲಿನ ತಾಲೂಕುಗಳನ್ನು ಉತ್ತರ ಕನ್ನಡದಿಂದ ಪ್ರತ್ಯೇಕಿಸಿ, ಪ್ರತ್ಯೇಕ ಶಿರಸಿ ಜಿಲ್ಲೆಯನ್ನು ರಚಿಸಬೇಕು ಎನ್ನುವುದು ಹಲವು ವರ್ಷಗಳ ಕೂಗು. ಇದೀಗ ಮತ್ತೆ ಈ ಕೂಗಿಗೆ ಜೀವ ಸಿಕ್ಕಿದ್ದು, ಈ ಬಾರಿ ಚುನಾವಣೆಯ ಪ್ರಮುಖ ವಿಚಾರವಾದರೂ ಅಚ್ಚರಿಯಿಲ್ಲ. ಹಾಗಾದರೆ ಶಿರಸಿ-ಸಿದ್ದಾಪುರ (Sirsi- Siddapur) ಕ್ಷೇತ್ರದಲ್ಲಿ ಚುನಾವಣೆ ಜ್ವರ ಹೇಗಿದೆ? ಸ್ಪೀಕರ್ ಬಗ್ಗೆ ಅಲ್ಲಿನ ಮತದಾರರು ಏನಂತಾರೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ವಿವರ…


ಶಿರಸಿ ಕ್ಷೇತ್ರ ಪರಿಚಯ


ಶಿರಸಿಯು ಉತ್ತರ ಕನ್ನಡ ಜಿಲ್ಲೆಯ ಒಂದು ನಗರ, ತಾಲ್ಲೂಕು ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇದನ್ನು ಸಿರ್ಸಿ,  ಸಿರಸಿ ಎಂದೂ ಕರೆಯಲಾಗುತ್ತದೆ. ಶಿರಸಿಯು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಕೂಡಿದ್ದು ಅಡಿಕೆ ಬೆಳೆ ಮತ್ತು ಮಾರಾಟ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು. ಇಲ್ಲಿ ಪ್ರಸಿದ್ಧವಾದ ಮಾರಿಕಾಂಬಾ ದೇವಸ್ಥಾನ ಇದೆ. ಇಲ್ಲಿ ಎರಡು ವರ್ಷಕೊಮ್ಮೆ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಭಾರತದಲ್ಲಿಯೇ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಕನ್ನಡದ ಪ್ರಪ್ರಥಮ ರಾಜಮನೆತನ ಕಂದಬರ ರಾಜಧಾನಿ ಬನವಾಸಿ ಕೂಡ ಇರುವುದು ಇಲ್ಲೇ.


ಶಿರಸಿ ಅಧಿದೇವತೆ ಮಾರಿಕಾಂಬೆ


ಶಿರಸಿ ಜೊತೆ ಹಲವು ನಾಯಕರ ನಂಟು


ಶಿರಸಿ ಸಿದ್ದಾಪುರ ಕ್ಷೇತ್ರದೊಂದಿಗೆ ಹಲವು ಘಟಾನುಘಟಿ ನಾಯಕರು ಸಂಬಂಧ ಹೊಂದಿದ್ದರು. ಮಾಜಿ ಮುಖ್ಯಮಂತ್ರಿ, ರಾಷ್ಟ್ರ ರಾಜಕಾರಣದಲ್ಲೂ ಗುರುತಿಸಿಕೊಂಡಿದ್ದ ರಾಮಕೃಷ್ಣ ಹೆಗಡೆಯವರು ಸಿದ್ದಾಪುರ ಮೂಲದವರೇ. ಶಿರಸಿ-ಸಿದ್ಧಾಪುರ ಕ್ಷೇತ್ರದಿಂದ ಎರಡು ಬಾರಿ ಮತ್ತು ಹಳಿಯಾಳದಿಂದ ಒಂದು ಬಾರಿ ರಾಮಕೃಷ್ಣ ಹೆಗಡೆ ಸ್ಪರ್ಧಿಸಿ, ಜಯಭೇರಿ ಬಾರಿಸಿದ್ದರು. ಮತ್ತೋರ್ವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಮಾವನ ಮನೆಯೂ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇನ್ನು ಮತ್ತೋರ್ವ ಬಿಜೆಪಿ ನಾಯಕ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಮಾಜಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರ ತವರೂ ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.


ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ


ಇದನ್ನೂ ಓದಿ: Karnataka Assembly Elections: ಕಾರವಾರ ಈ ಬಾರಿ ಯಾರಿಗೆ ಗೆಲುವಿನ ಹಾರ? ರೂಪಾಲಿ, ಆನಂದ್, ಸತೀಶ್ ಸೈಲ್ ನಡುವೆ ಫೈಟ್ ಫಿಕ್ಸ್?


ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ


ಶಿರಸಿ ಸಿದ್ದಾಪುರ ಕ್ಷೇತ್ರ ಮಾಜಿ ಸಚಿವ, ಹಾಲಿ ವಿಧಾನಸಭೆ ಸ್ಪೀಕರ್ ಹಾಗೂ ರಾಜ್ಯದ ಹಿರಿಯ ರಾಜಕಾರಣಿಯೂ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತವರು ಕ್ಷೇತ್ರ. ಅವರು ಮೊದಲ ಮೂರು ಅವಧಿಗೆ ಅಂಕೋಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, 1994, 1999, 2004ರಲ್ಲಿ ಅಂಕೋಲಾ ಕ್ಷೇತ್ರದ ಶಾಸಕರಾಗಿದ್ದರು. ಬಳಿಕ ಕ್ಷೇತ್ರ ಮರುವಿಂಗಡಣೆ ಬಳಿಕ ಹೊಸದಾಗಿ ರಚಿಸಲಾದ ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು. ಇಲ್ಲಿಂದ 2008, 20013 ಹಾಗೂ 2018ರ ಚುನಾವಣೆಗಳಲ್ಲಿ ಸ್ಪರ್ಧಿಸಿ, ಜಯಭೇರಿ ಭಾರಿಸಿದರು. ಈ ಮೂಲಕ ಅವರು ತಮ್ಮ ರಾಜಕೀಯ ಜೀವನದಲ್ಲಿ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.


ಸ್ಪೀಕರ್ ಕಾಗೇರಿ


ಕಾಗೇರಿ ಬಗ್ಗೆ ಮತದಾರರು ಹೇಳುವುದೇನು?


ವಿಶ್ವೇಶ್ವರ ಹೆಗಡೆ ಕಾಗೇರಿ ಸಾದಾ-ಸೀದಾ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನಸಾಮಾನ್ಯರಿಗೂ ಸಂಪರ್ಕಕ್ಕೆ ಸಿಗುತ್ತಾರೆ ಎನ್ನುವುದೂ ಸುಳ್ಳಲ್ಲ. ಆದರೆ ಹಿರಿಯ ರಾಜಕಾರಣಿಯಾಗಿ, ರಾಜ್ಯ ರಾಜಕಾರಣದ ಪ್ರಭಾವಿ ವ್ಯಕ್ತಿಯಾಗಿ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಾ ಕೆಲಸ ಮಾಡಿಲ್ಲ ಎನ್ನುವುದು ಇಲ್ಲಿನ ಮತದಾರರ ಆರೋಪ. ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ದೊರಕಿಸಿಕೊಡಲು ಇನ್ನೂ ಸಾಧ್ಯವಾಗದೇ ಇರುವುದರಲ್ಲಿ ಕಾಗೇರಿಯವರ ಪಾತ್ರವೂ ಇದೆ ಎನ್ನುವುದು ಎಲ್ಲರ ಅಭಿಪ್ರಾಯ.


ಭೀಮಣ್ಣ ನಾಯ್ಕ್


ಈ ಬಾರಿ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ?


6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಾರಿಯೂ ಸ್ಪರ್ಧಿಸುತ್ತಾರಾ? ಪ್ರಶ್ನೆಗೆ ಇನ್ನೂ ಖಚಿತ ಉತ್ತರ ಸಿಕ್ಕಿಲ್ಲ. ಅತ್ತ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ್, ಮಾಜಿ ಶಾಸಕ ವಿವೇಕಾನಂದ ವೈದ್ಯ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಅತ್ತ ಬಂಗಾರಪ್ಪನವರ ಸಂಬಂಧಿಯೂ ಆಗಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ್ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರೊಂದಿಗೆ ಉದ್ಯಮಿಗಳಾದ ದೀಪಕ್ ದೊಡ್ಡೂರು, ವಂಸತ್ ನಾಯ್ಕ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.


ಡಾ. ಶಶಿಭೂಷಣ ಹೆಗಡೆ


ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ ಸ್ಪರ್ಧಿಸ್ತಾರಾ?


ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ತಮ್ಮನ ಮೊಮ್ಮಗ ಡಾ ಶಶಿಭೂಷಣ್ ಹೆಗಡೆ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಂತ ಎಲ್ಲಾ ಕಡೆ ಅವರ ಹೆಸರು ಕೇಳಿ ಬಂದಿತ್ತು. ಸದ್ಯ ಜೆಡಿಎಸ್‌ನಿಂದ ಅವರು ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಕ್ಷೇತ್ರದ ಮತದಾರರ ವಿವರ


ಶಿರಸಿ -ಸಿದ್ದಾಪುರ ಭಾಗದಲ್ಲಿ ಅಡಿಕೆ ಬೆಳಗಾರರೇ ಹೆಚ್ಚಾಗಿದ್ದಾರೆ. ಇವರೇ  ಈ ಭಾಗದ ರಾಜಕೀಯದಲ್ಲೂ ನಿರ್ಣಾಯಕ ಸ್ಥಾನ ವಹಿಸುತ್ತಾರೆಂದರೆ ತಪ್ಪಿಲ್ಲ. ಇನ್ನು ಕ್ಷೇತ್ರದಲ್ಲಿ ಒಟ್ಟು ಮತದಾರರು – 1,81,000 ಮಂದಿ ಇದ್ದಾರೆ. ಈ ಪೈಕಿ ನಾಮಧಾರಿಗಳು – 52,000, ಇತರೇ ಸಮುದಾಯ – 40,000 ಇದ್ದಾರೆ. ಇಲ್ಲಿನ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸುವ ಬ್ರಾಹ್ಮಣರು 49,000 ಮಂದಿ ಇದ್ದಾರೆ. ಇನ್ನುಳಿದಂತೆ ಅಲ್ಪಸಂಖ್ಯಾತರು – 24,000 ಹಾಗೂ ಮರಾಠಿಗರು – 9,000 ಮತದಾರರು ಇದ್ದಾರೆ.


ಇದನ್ನೂ ಓದಿ: Karnataka Assembly Elections: 'ಮಿನಿ ದುಬೈ'ನಲ್ಲಿ ಹೇಗಿದೆ ಎಲೆಕ್ಷನ್ ಜ್ವರ? ಭಟ್ಕಳದಲ್ಲಿ ಈ ಬಾರಿಯೂ ಫಲ ಕೊಡುತ್ತಾ ಹಿಂದುತ್ವದ ಅಲೆ?


ಕ್ಷೇತ್ರದ ಪ್ರಮುಖ ಸಮಸ್ಯೆಗಳೇನು?


ಅಘನಾಶಿನಿ ನದಿಯ ಉಗಮಸ್ಥಾನವಾಗಿದ್ದರೂ ಶಿರಸಿ, ಸಿದ್ದಾಪುರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪ್ರತ್ಯೇಕ ಜಿಲ್ಲೆಯಾಗಬೇಕು ಎನ್ನುವುದು ಒಂದುಕಡೆಯಾದರೆ, ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿನ ಮತದಾರರ ಆಗ್ರಹ ಕೂಡ ಆಗಿದೆ.

Published by:Annappa Achari
First published: