• Home
  • »
  • News
  • »
  • state
  • »
  • Karnataka Assembly Elections: ಹೈವೋಲ್ಟೇಜ್​ ಕಣ ಶಿಕಾರಿಪುರದಲ್ಲಿ ಕೈ, ಕಮಲ, ಜೆಡಿಎಸ್​ ಟಿಕೆಟ್​ ಯಾರಿಗೆ? ಬಿಎಸ್​ವೈ ಹೊರಕ್ಕೆ?

Karnataka Assembly Elections: ಹೈವೋಲ್ಟೇಜ್​ ಕಣ ಶಿಕಾರಿಪುರದಲ್ಲಿ ಕೈ, ಕಮಲ, ಜೆಡಿಎಸ್​ ಟಿಕೆಟ್​ ಯಾರಿಗೆ? ಬಿಎಸ್​ವೈ ಹೊರಕ್ಕೆ?

ಶಿಕಾರಿಪುರ ಈ ಬಾರಿ ಯಾರ ತೆಕ್ಕೆಗೆ?

ಶಿಕಾರಿಪುರ ಈ ಬಾರಿ ಯಾರ ತೆಕ್ಕೆಗೆ?

Karnataka Assembly Elections 2023: ಹೈವೋಲ್ಟೇಜ್​ ಕ್ಷೇತ್ರವಾಗಿರುವ ಶಿಕಾರಿಪುರದಲ್ಲಿ ಈ ಬಾರಿಯ ರಾಜಕೀಯ ಸ್ಥಿತಿ-ಗತಿ ಹೇಗಿದೆ? ಈ ಬಾರಿಯೂ ಬಿ. ಎಸ್​. ಯಡಿಯೂರಪ್ಪ ಸ್ಪರ್ಧಿಸುತ್ತಾರಾ? ಅವರಿಗಿರುವ ಎದುರಾಳಿಗಳು ಯಾರು? ಬಿಜೆಪಿ ಭೀಷ್ಮ ಸ್ಪರ್ಧಿಸದಿದ್ದರೆ ಆ ಕ್ಷೇತ್ರದಿಂದ ಯಾರು ಕಣಕ್ಕಿಳಿಯಬಹುದು? ಜಾತಿ ಲೆಕ್ಕಾಚಾರ ಹೇಗಿದೆ? ಎಂಬಿತ್ಯಾದಿ ವಿವರಗಳುಳ್ಳ ಶಿಕಾರಿಪುರ ಕ್ಷೇತ್ರ ಚಿತ್ರಣ ಇಲ್ಲಿದೆ.

ಮುಂದೆ ಓದಿ ...
  • News18 Kannada
  • Last Updated :
  • Shikarpur (Shikaripur), India
  • Share this:

ಶಿಕಾರಿಪುರ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Elections 2023) ಇನ್ನು ಹೆಚ್ಚು ಸಮಯ ಉಳಿದಿಲ್ಲ. ಕೆಲವೇ ತಿಂಗಳಲ್ಲಿ ಬಹುನಿರೀಕ್ಷಿತ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಜನಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ಹೀಗಿರುವಾಗ ಕರ್ನಾಟಕ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಚರ್ಚೆಯಾಗುವ ಜಿಲ್ಲೆಗಳಲ್ಲಿ ಶಿವಮೊಗ್ಗವೂ ಒಂದು. ಸಪ್ತ ವಿಧಾನಸಭಾ ಕ್ಷೇತ್ರಗಳಿರುವ ಶಿವಮೊಗ್ಗದಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರ (Shikaripura Assembly Constituency) ಕೊಂಚ ಹೆಚ್ಚೇ ಸದ್ದು ಮಾಡುತ್ತದೆ. ಮಾಜಿ ಸಿಎಂ ಹಾಗೂ ಕರ್ನಾಟಕ ರಾಜಕೀಯ ಕ್ಷೇತ್ರದ ರಾಜಾಹುಲಿ ಎಂದೇ ಖ್ಯಾತಿ ಗಳಿಸಿರುವ ಬಿ. ಎಸ್​. ಯಡಿಯೂರಪ್ಪನವರ ತವರು ಕ್ಷೇತ್ರ ಎಂಬುವುದೇ ಇದಕ್ಕೆ ಕಾರಣ. ಹೈವೋಲ್ಟೇಜ್​ ಕ್ಷೇತ್ರವಾಗಿರುವ ಶಿಕಾರಿಪುರದಲ್ಲಿ ಈ ಬಾರಿಯ ರಾಜಕೀಯ ಸ್ಥಿತಿ-ಗತಿ ಹೇಗಿದೆ? ಈ ಬಾರಿಯೂ ಬಿ. ಎಸ್​. ಯಡಿಯೂರಪ್ಪ ಸ್ಪರ್ಧಿಸುತ್ತಾರಾ? ಅವರಿಗಿರುವ ಎದುರಾಳಿಗಳು ಯಾರು? ಬಿಜೆಪಿ ಭೀಷ್ಮ ಸ್ಪರ್ಧಿಸದಿದ್ದರೆ ಆ ಕ್ಷೇತ್ರದಿಂದ ಯಾರು ಕಣಕ್ಕಿಳಿಯಬಹುದು? ಜಾತಿ ಲೆಕ್ಕಾಚಾರ ಹೇಗಿದೆ? ಎಂಬಿತ್ಯಾದಿ ವಿವರಗಳುಳ್ಳ ಶಿಕಾರಿಪುರ ಕ್ಷೇತ್ರ ಚಿತ್ರಣ ಇಲ್ಲಿದೆ.


ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರ. ಅಭಿವೃದ್ಧಿಯ ಪಥದಲ್ಲಿ ಶಿಕಾರಿಪುರ ಬಹಳ ಮುಂದೆ ಸಾಗಿದೆ. ಅರೆಮಲೆನಾಡಾಗಿರುವ ಶಿಕಾರಿಪುರ ಭತ್ತದ ಕಣಜವೆಂದೇ ಖ್ಯಾತಿ ಗಳಿಸಿದೆ. ಶಿಕಾರಿಪುರದ ಆರ್ಥಿಕ ಜೀವನಾಡಿ ಕೃಷಿ. ಇಲ್ಲಿ ಭತ್ತ, ಕಬ್ಬು, ಹತ್ತಿ, ರಾಗಿ ಮತ್ತು ದ್ವಿದಳ ಧಾನ್ಯ ಸೇರಿದಂತೆ ಇತ್ತೀಚೆಗೆ ವಾಣಿಜ್ಯ ಬೆಳೆಗಳಾದ ಶುಂಠಿ, ಅಡಿಕೆ ಹಾಗೂ ಮೆಕ್ಕೆ ಜೋಳವನ್ನೂ ಬೆಳೆಯುತ್ತಿದ್ದಾರೆ. ಇಡೀ ರಾಜ್ಯಕ್ಕೆ ಅಕ್ಕಿ ಪೂರೈಸುತ್ತಿದ್ದ ಶಿಕಾರಿಪುರದಲ್ಲಿ 25ಕ್ಕೂ ಅಧಿಕ ಅಕ್ಕಿ ಗಿರಣಿಗಳಿದ್ದವು. ಆದರೀಗ ಭತ್ತದ ಕೃಷಿ ಕಡಿಮೆಯಾಗಿರುವುದರಿಂದ ಅಕ್ಕಿ ಮಿಲ್‌ಗಳು ಸ್ಥಗಿತಗೊಂಡು, ಜೋಳದ ಗೋದಾಮುಗಳಾಗಿ ಬದಲಾಗಿವೆ.


ಸೊರಬದಿಂದ ಬೇರ್ಪಟ್ಟ ಶಿಕಾರಿಪುರ


ಶಿಕಾರಿಪುರ 1962ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ. ಅದಕ್ಕೂ ಮೊದಲು ಶಿಕಾರಿಪುರ ಸೊರಬ ವಿಧಾನಸಭಾ ಕ್ಷೇತ್ರದಲ್ಲಿದ್ದು, ಪರಿಶಿಷ್ಟ ಜಾತಿಗೆ ಮೀಸಲಾದ ಕಣವಾಗಿತ್ತು. 1978ರ ಚುನಾವಣೆ ಸಂದರ್ಭದಲ್ಲಿ ಶಿಕಾರಿಪುರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಇದಾದ ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಇದು ಲಿಂಗಾಯತ ಮೀಸಲು ಕ್ಷೇತ್ರವಾಗಿ ಮಾರ್ಪಾಡಾಗಿದೆ.


ಇದನ್ನೂ ಓದಿ: Karnataka Assembly Elections: ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಮುಖಾಮುಖಿಯಾಗ್ತಾರಾ ಮಾಜಿ ಸಿಎಂ ಪುತ್ರರು?


ರಾಜಕೀಯ ಇತಿಹಾಸ


ಬಿ. ಎಸ್​. ಯಡಿಯೂರಪ್ಪ ಈ ಕ್ಷೇತ್ರದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಇದು ಬಿಜೆಪಿ ಭದ್ರಕೋಟೆಯಾಗೇ ಉಳಿದಿದೆ. ಈವರೆಗೆ ಒಟ್ಟು ಹತ್ತು ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಎಸ್​ವೈ ಸೋತಿದ್ದು ಕೇವಲ ಒಂದು ಬಾರಿ. ಇದು ಈ ಕ್ಷೇತ್ರದಲ್ಲಿ ಅವರ ಹಾಗೂ ಅವರ ಕುಟುಂಬದ ಹಿಡಿತ ಎಷ್ಟು ಗಟ್ಟಿಯಾಗಿದೆ ಎಂಬುವುದನ್ನು ಸಾಬೀತುಪಡಿಸುತ್ತದೆ. 1962, 67, 72 ಹಾಗೂ 78ರಲ್ಲಷ್ಟೇ ಇಲ್ಲಿ ಕಾಂಗ್ರೆಸ್​ ಹಾಗೂ ಸಂಯುಕ್ತ ಸಮಾಜವಾಗಿ ಪಾರ್ಟಿ ಗೆಲುವು ಸಾಧಿಸಿತ್ತು. ತದ ನಂತರ 1983ರಲ್ಲಿ ಈ ಕ್ಷೇತ್ರದ ರಾಜಕೀಯ ಕಣಕ್ಕೆ ಬಿ. ಎಸ್​. ಯಡಿಯೂರಪ್ಪ ಧುಮುಕಿದ್ದರು. ಚೊಚ್ಚಲ ಚುನಾವಣೆಯಲ್ಲೇ ಗೆಲುವು ಕಂಡ ಈ ನಾಯಕ ಬಳಿಕದ 1985, 1989, 1994ರ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರು.


bjp leader bs yediyurappa slams congress over 2022 assembly election
ಬಿ. ಎಸ್​ ಯಡಿಯೂರಪ್ಪ


ಒಂದು ಬಾರಿ ಸೋತ ಬಿಎಸ್​ವೈ


ಆದರೆ ತದನಂತರ ನಡೆದ 1999ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್​ವೈ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಬಿ. ಎನ್​. ಮಹಾಲಿಂಗಪ್ಪ ಎದುರು ಸೋಲನುಭವಿಸಿದರು. ಈ ಸೋಲಿಗೆ ಮಾಜಿ ಸಿಎಂ ಬಂಗಾರಪ್ಪನವರ ರಣತಂತ್ರವೇ ಕಾರಣ ಎನ್ನಲಾಗಿದೆ. ಆದರೆ ತದನಂತರ 2004ರ ಚುನಾವಣೆ ವೇಳೆಗೆ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದರ ಪರಿಣಾಮ ಎಂಬಂತೆಯೇ ಬಿ. ಎಸ್​ ಯಡಿಯೂರಪ್ಪ ಈ ಚುನಾವಣೆಯಲ್ಲಿ ಸುಲಭವಾಗಿ ಗೆದ್ದು ಬೀಗಿದರು. ಬಳಿಕದ 2008, 2013ರ ಚುನಾವಣೆಯಲ್ಲೂ ಅವರು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು. ಬಿಜೆಪಿಯಿಂದ ದೂರವಾಗಿ ಕೆಜೆಪಿ ಕಟ್ಟಿದ್ದ ಈ ರಾಜಾಹುಲಿ ಗೆಲುವಿನ ಓಟ ಮುಂದುವರೆಸಿ ಕಮಲ ಪಾಳಯಕ್ಕೆ ಶಾಕ್ ಕೊಟ್ಟಿದ್ದರು.


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಬಳಿಕದ 2014ರ ಲೋಕಸಭೆ ಚುನಾವಣೆ ಎದುರಾದಾಗ ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ಸಂಸದರಾದರು. ಯಡಿಯೂರಪ್ಪರಿಂದ ತೆರವಾದ ಶಿಕಾರಿಪುರ ಕ್ಷೇತ್ರದಲ್ಲಿ ಉಪಚುನಾವಣೆ ಜರುಗಿತು. ತಂದೆಗೆ ಸಂಸದ ಸೀಟು ಬಿಟ್ಟುಕೊಟ್ಟಿದ್ದ ಯಡಿಯೂರಪ್ಪ ಹಿರಿಯಮಗ ರಾಘವೇಂದ್ರ ಕಣಕ್ಕಿಳಿದರು. ತೀರಾ ಕಡಿಮೆ ಅಂತರದಿಂದಲಾದರೂ ಗೆಲುವು ಸಾಧಿಸಿದರು. ಇದಾದ ಬಳಿಕ 2016ರಲ್ಲಿ ಯಡಿಯೂರಪ್ಪರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಮೋದಿ-ಶಾ, ಅವರೇ ಮುಂದಿನ ಸಿಎಂ ಅಭ್ಯರ್ಥಿ ಎಂದೂ ಘೋಷಿಸುತ್ತಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ 2018ರಲ್ಲಿ ಮತ್ತೆ ಕಣಕ್ಕಿಳಿದ ಬಿಎಸ್​ವೈ ಕಾಂಗ್ರೆಸ್​ ಅಭ್ಯರ್ಥಿ ಗೋಣಿ ಮಹಾಂತೇಶ್ ವಿರುದ್ಧ ಸರಳ ಗೆಲುವು ಸಾಧಿಸುತ್ತಾರೆ.


ಟಿಕೆಟ್​ ಆಕಾಂಕ್ಷಿಗಳು ಯಾರು?


ಮಂಡ್ಯದ ಕೆಆರ್ ಪೇಟೆ ತಾಲೂಕಿನ ಬೂಕನಕೆರೆಯಿಂದ ವಲಸೆ ಬಂದು ಶಿಕಾರಿಪುರವನ್ನು ಕಾರ್ಯಕ್ಷೇತ್ರ ಮಾಡಿಕೊಂಡು ರಾಜ್ಯ ಆಳುವ ಮಟ್ಟಕ್ಕೇರಿದ ಯಡಿಯೂರಪ್ಪನವರು ಈ ಬಾರಿಯೂ ಚುನಾವಣಾ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ,ಖುದ್ದು ಯಡಿಯೂರಪ್ಪನವರೂ ಮಗ ವಿಜಯೇಂದ್ರರಿಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ದಾರೆ ಎಂಬುವುದು ಉಲ್ಲೇಖನೀಯ.


ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು ಯಾರು?


ಬಿ. ವೈ. ವಿಜಯೇಂದ್ರ: ಮಾಜಿ ಸಿಎಂ ಬಿ. ಎಸ್​. ಯಡಿಯೂರಪ್ಪನವರ ಪುತ್ರ. ಈ ಕ್ಷೇತ್ರದ ಬಿಜೆಪಿ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


BY Vijayendra Active in Shikaripura Assembly mrq
ಬಿ ಎಸ್ ಯಡಿಯುರಪ್ಪ ಮತ್ತು ವಿಜಯೇಂದ್ರ


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


ಗೋಣಿ ಮಾಲತೇಶ್: ಕಳೆದ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಕಣಕ್ಕಿಳಿದು ಸೋತಿದ್ದರು. ಈ ಬಾರಿಯೂ ಅವರು ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ.


ಜೆಡಿಎಸ್​ ಟಿಕೆಟ್​ ಆಕಾಂಕ್ಷಿ ಯಾರು?


ಎಚ್​. ಟಿ. ಬಳಿಗಾರ್: ಕಳೆದ ಚುನಾವಣೆಯಲ್ಲಿ ಇವರೂ ಬಿಎಸ್​ವೈ ವಿರುದ್ಧ ಪರಾಭವಗೊಂಡಿದ್ದರು.


ಮುಂದಿನ ವಿಧಾನಭಾ ಚುನಾವಣೆಯಲ್ಲಿ ಮಾಜಿಮುಖ್ಯಮಂತ್ರಿ ಯಡಿಯೂರಪ್ಪರ ಸ್ಪರ್ಧೆಯ ಸಂಭವನೀಯತೆ ಆಧಾರದ ಮೇಲೆಯೇ ಶಿಕಾರಿಪುರದ ಎಲ್ಲಾ ಪಕ್ಷಗಳು ತಮ್ಮ ತಂತ್ರ ಸಿದ್ಧಪಡಿಸಿಕೊಳ್ಳಲಿವೆ.


ಜಾತಿ ಲೆಕ್ಕಾಚಾರ:


ಒಟ್ಟು ಮತದಾರರು: 1,75,326
ಲಿಂಗಾಯತ: 57,072
ಬ್ರಾಹ್ಮಣ: 3,797
ಒಕ್ಕಲಿಗ: 9,218
ಈಡಿಗ: 14,755
ಕುರುಬ: 18,760
ಮುಸ್ಲಿಂ: 14,563
ಎಸ್​ಸಿ/ಎಸ್​ಟಿ: 38,296


2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ. ಎಸ್​. ಯಡಿಯೂರಪ್ಪ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ಗೋಣಿ ಮಾಲತೇಶ್ ಸ್ಪರ್ಧೆಯೊಡ್ಡಿದ್ದರು. ಜೆಡಿಎಸ್​ನಿಂದ ಎಚ್​. ಟಿ ಬಳಿಗಾರ್ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕಮಲ ಪಾಳಯದ ಅಭ್ಯರ್ಥಿಯಾಗಿದ್ದ ಮಾಜಿ ಸಿಎಂ ಬಿಎಸ್​ವೈ 35,397 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರು ಮತಗಳು
ಬಿಜೆಪಿಬಿ. ಎಸ್​. ಯಡಿಯೂರಪ್ಪ86,983
ಕಾಂಗ್ರೆಸ್​ಗೋಣಿ ಮಾಲತೇಶ್51,586
ಜೆಡಿಎಸ್ಎಚ್​. ಟಿ ಬಳಿಗಾರ್13,191

Published by:Precilla Olivia Dias
First published: