ಉತ್ತರ ಕರ್ನಾಟಕದ ಹೆಬ್ಬಾಗಿಲು (gateway to North Karnataka), ಯಾಲಕ್ಕಿ ಕಂಪಿನ ನಾಡು ಎಂಬ ಹಿರಿಮೆ ಪಡೆದಿರುವ ಜಿಲ್ಲೆ ಹಾವೇರಿ (Haveri). ಪುಟ್ಟ ಜಿಲ್ಲೆಯಾದರೂ ಹಲವು ವೈವಿಧ್ಯೆತೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹಾವೇರಿ, ಹಲವು ಪ್ರಖ್ಯಾತ ವ್ಯಕ್ತಿಗಳಿಗೆ ಜನ್ಮ ನೀಡಿದ ನೆಲವೂ ಹೌದು. ಇದೀಗ ಸಿಎಂ ಬಸವರಾಜ ಬೊಮ್ಮಾಯಿಯವರ (CM Basavaraj Bommai) ರಾಜಕೀಯ ಜನ್ಮಭೂಮಿ ಕೂಡ ಹಾವೇರಿ ಜಿಲ್ಲೆಯಲ್ಲೇ ಇದೆ. ಹಾವೇರಿಯ ಶಿಗ್ಗಾಂವಿ ಅಥವಾ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ (Shiggaon assembly constituency) ಗೆದ್ದು ವಿಧಾನಸಭೆ ಪ್ರವೇಶಿಸಿದ್ದ ಬಸವರಾಜ ಬೊಮ್ಮಾಯಿ, ಸದ್ಯ ಕರ್ನಾಟಕದ ಸಿಎಂ ಆಗಿದ್ದಾರೆ. ಈ ಕಾರಣಕ್ಕಾಗಿ ಇವರ ತವರು ಕ್ಷೇತ್ರ ಶಿಗ್ಗಾವಿ ಈ ಬಾರಿ ಭಾರೀ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದಲೇ (BJP) ಸಿಡಿದೆದ್ದು ಕಾಂಗ್ರೆಸ್ (Congress) ಸೇರಿರುವ ರಾಜಕಾರಣಿಯೊಬ್ಬರು ಸಿಎಂ ವಿರುದ್ಧ ತೊಡೆ ತಟ್ಟಿದ್ದಾರೆ. ನನ್ನ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸದಲ್ಲಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಪರಿಚಯ
ಶಿಗ್ಗಾವಿ ಅಥವಾ ಶಿಗ್ಗಾಂವಿ ಎನ್ನುವುದು ಹಾವೇರಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. 1997-98ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜನೆ ಮಾಡಿದ ಸಂದರ್ಭದಲ್ಲಿ ಏಳು ತಾಲೂಕುಗಳನ್ನು ಸೇರಿಸಿ ಹಾವೇರಿ ಜಿಲ್ಲೆ ರಚನೆ ಮಾಡಲಾಯಿತು. ಇದು ಕನ್ನಡದ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫ ಶಿವಯೊಗಿಗಳು ಜನಿಸಿದ ಸ್ಥಳ ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಈ ತಾಲೂಕಿನಲ್ಲಿದೆ.
ಹಾಲಿ ಶಾಸಕ ಬಸವರಾಜ ಬೊಮ್ಮಾಯಿ
ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಸದ್ಯ ಶಿಗ್ಗಾವಿ ಕ್ಷೇತ್ರದ ಶಾಸಕರು. ಬಸವರಾಜ ಬೊಮ್ಮಾಯಿ ಅವರಿಗೆ ಜನ್ಮ ನೀಡಿದ್ದು ಧಾರವಾಡ ಜಿಲ್ಲೆ. ಆದರೆ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ್ದು ಶಿಗ್ಗಾವಿ ಕ್ಷೇತ್ರ.
ಬಸವರಾಜ ಬೊಮ್ಮಾಯಿ ರಾಜಕೀಯ ಜೀವನ
ಬಸವರಾಜ ಬೊಮ್ಮಾಯಿ ಅವರದ್ದು ರಾಜಕೀಯ ಹಿನ್ನೆಲೆಯ ಕುಟುಂಬ. ಇವರ ತಂದೆ ಎಸ್.ಆರ್. ಬೊಮ್ಮಾಯಿ ಅಥವಾ ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರು ನಾಡಿನ ಮುಖ್ಯಮಂತ್ರಿಯಾಗಿದ್ದವರು. ಅವರಂತೆ ಇವರೂ ಕೂಡ ಜನಾತದಳದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. 1998 ಹಾಗೂ 2004ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು. 2008ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಬಳಿಕ 2013, 2018ರಲ್ಲಿ ಮರು ಆಯ್ಕೆಯಾದರು. ಒಟ್ಟು ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಾಜಕೀಯ ಅನುಭವ
ಮಾಜಿ ಸಿಎಂ ಜೆ.ಎಚ್. ಪಟೇಲ್ ಸಿಎಂ ಆಗಿದ್ದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿದ್ದರು. ಬಳಿಕ ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದರು. ಬಳಿಕ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದರು. ಬಳಿಕ ಜುಲೈ 28, 2021ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಬಾರಿ ಕ್ಷೇತ್ರದಲ್ಲಿ ಸ್ಪರ್ಧೆ ಹೇಗಿದೆ?
ಕಳೆದ ಎರಡು ಬಾರಿ ಆಯ್ಕೆಯಾಗಿರುವ ಬಸವಾರಜ ಬೊಮ್ಮಾಯಿಗೆ ಈ ಚುನಾವಣೆ ಅಷ್ಟು ಸುಲಭವಲ್ಲ ಎನ್ನಲಾಗಿದೆ. ಬಿಜೆಪಿಯ ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಬಸವರಾಜ ಬೊಮ್ಮಾಯಿ ವಿರುದ್ದ ಅಖಾಡಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ಪಕ್ಷೇತರಾಗಿ ಸೋತಿದ್ದ ಸೋಮಣ್ಣ ಬೇವಿನಮರದ, ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಮತ್ತೊಂದೆದೆ ನಾಲ್ಕು ಬಾರಿ ಶಿಗ್ಗಾಂವಿಯಲ್ಲಿ ಸ್ಪರ್ಧಿಸಿ ಸೋತಿರೋ ಮಾಜಿ ಶಾಸಕ ಅಜೀಂಪೀರ್ ಖಾದ್ರಿ ಈ ಬಾರಿಯೂ ಸ್ಪರ್ಧೆ ಬಯಸಿದ್ದಾರೆ. ಇವರ ಜೊತೆಗೆ ಶಶಿಧರ್ ಯಲಿಗಾರ, ಅಲ್ಪಸಂಖ್ಯಾತ ಮುಖಂಡ ಯಾಸಿರ್ಖಾನ್ ಪಠಾಣ್, ಡಿ.ಕೆ.ಶಿವಕುಮಾರ್ ಶಿಷ್ಯ ಎಸ್.ಎಸ್.ಶಿವಳ್ಳಿ, ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವ್ ಕುಮಾರ್ ನೀರಲಗಿ ಶಿಗ್ಗಾಂವಿ ಟಿಕೆಟ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಇನ್ನು ಜೆಡಿಎಸ್ ಯಾರಿಗೆ ಟಿಕೆಟ್ ಕೊಡಲಿದೆ ಎನ್ನುವುದು ತಿಳಿದಿಲ್ಲ.
ಶಿಗ್ಗಾವಿ ಕ್ಷೇತ್ರದ ಮತದಾರರ ವಿವರ
ಜಾತಿ ಲೆಕ್ಕಾಚಾರಕ್ಕೆ ಬಂದ್ರೆ ಇಲ್ಲಿಯೂ ಲಿಂಗಾಯತರದ್ದೇ ಮೇಲುಗೈ ಬಿಟ್ಟರೇ ಮುಸ್ಲೀಂ ಮತಗಳು ಎರಡನೇ ಸ್ಥಾನಕ್ಕಿದೆ.. ಲಿಂಗಾಯತರು ಸುಮಾರು 65000, ಮುಸ್ಲಿಂ 52000, ಕುರುಬ 32000, ಲಂಬಾಣಿ 22,000 ಹಾಗೂ ದಲಿತರು ಸುಮಾರು 25 ಸಾವಿರ ಮತದಾರರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ