Karnataka Assembly Election 2023: ವಿಧಾನಸಭೆ ಚುನಾವಣೆಯ ಕಾವು ರಾಜ್ಯದೆಲ್ಲೆಡೆ ಹೆಚ್ಚಾಗಿದೆ. ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಒಂದು ನಿಮಿಷವೂ ವ್ಯರ್ಥ ಮಾಡದೆ ಮೈ ಮುರಿಯದೇ ಬಿಡುವಿಲ್ಲದಂತೆ ಕ್ಷೇತ್ರ ಸಂಚರಿಸಿ ಮತ ಗಳಿಕೆಗೆ ಕಸರತ್ತು ನಡೆಸುತ್ತಿದ್ದಾರೆ.
ಇತ್ತ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ರಾಷ್ಟ್ರೀಯ ನಾಯಕರ ಮೂಲಕ ಮತದಾರರನ್ನು ಸೆಳೆಯಲು ದಿನವೂ ರೋಡ್ ಶೋ ನಡೆಸುತ್ತಿದ್ದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ಟಕ್ಕರ್ ಕೊಡಲು ರಣತಂತ್ರ ಹೆಣೆದಿದೆ.
ಈ ಬಾರಿಯ ಚುನಾವಣೆಯನ್ನು ಮೂರು ಪಕ್ಷಗಳು ಭಾರೀ ಪ್ರತಿಷ್ಠೆಯಾಗಿ ಸ್ವೀಕರಿಸಿವೆ. ಕುಂದಾನಗರಿ ಬೆಳಗಾವಿ (Belagavi) ಸಹ ಇದಕ್ಕೆ ಹೊರತಲ್ಲ. ಎಲ್ಲ ಪಕ್ಷಗಳ ಪ್ರಮುಖ ನಾಯಕರು ಇಲ್ಲಿ ಭರ್ಜರಿಯಾಗಿಯೇ ಪ್ರಚಾರ ಮಾಡ್ತಿದ್ದಾರೆ. ಯಾಕಂದ್ರೆ, ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಹೇಗೆ ನಿರ್ಣಾಯಕವೋ ಅದೇ ರೀತಿ ರಾಜ್ಯ ವಿಧಾನಸಭೆಗೆ ಬೆಳಗಾವಿಯ ಪಾತ್ರ ಬಲು ದೊಡ್ಡದು.
ಇದನ್ನೂ ಓದಿ: Sudan Clashes: ಸುಡಾನ್ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್!
ಬೆಳಗಾವಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ಅತಿ ಹೆಚ್ಚು ಸ್ಥಾನ ಪಡೆದ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಹೀಗಾಗಿ, ಬೆಳಗಾವಿಯಲ್ಲಿ ಗೆಲುವು ಸಾಧಿಸೋಕೆ ಎಲ್ಲ ರಾಜಕೀಯ ಪಕ್ಷಗಳು ಹರಸಾಹಸ ಪಡುತ್ತಿವೆ.
ಯಾರಿಗೆ ಸಿಗಲಿದೆ ಸವದತ್ತಿಯ ಗದ್ದುಗೆ?
ಕುಂದಾನಗರಿ ಬೆಳಗಾವಿಯ ಅತ್ಯಂತ ಹಳೆಯ ಪಟ್ಟಣಗಳಲ್ಲಿ ಸವದತ್ತಿಯೂ ಒಂದು. ರೇಣುಕಾ ಯಲ್ಲಮ್ಮ ದೇವಿಯ ದೇಗುಲದಿಂದಾಗಿ ಸವದತ್ತಿ ಕ್ಷೇತ್ರ ಹೆಸರುವಾಸಿಯಾಗಿದೆ.
2008ರಲ್ಲಿ ವಿಧಾನಸಭಾ ಕ್ಷೇತ್ರಗಳು ವಿಂಗಡಣೆಯಾದಾಗ ಸವದತ್ತಿಯಲ್ಲಮ್ಮ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಅಲ್ಲಿಂದ ಇಲ್ಲಿಯವರೆಗೂ ಸವದತ್ತಿ ಕ್ಷೇತ್ರದಲ್ಲಿ ಒಟ್ಟು ಮೂರು ಚುನಾವಣೆ ನಡೆದಿದೆ. ಸದ್ಯ ನಾಲ್ಕನೇ ಚುನಾವಣೆ ನಡೆಯುತ್ತಿದ್ದು, ಪ್ರಮುಖ ಪಕ್ಷಗಳು ಇಲ್ಲಿ ಕಾದಾಟಕ್ಕೆ ಇಳಿದಿವೆ.
ಪತಿ ಸಾವಿನ ಅನುಕಂಪದ ಅಲೆಯಲ್ಲಿ ಗೆಲ್ಲುತ್ತಾರಾ ರತ್ನಾ?
ಅಂದಹಾಗೆ, ಸವದತ್ತಿ-ಯಲ್ಲಮ್ಮ ಕ್ಷೇತ್ರದಿಂದ 2018 ಚುನಾವಣೆಯಲ್ಲಿ ಬಿಜೆಪಿಯ ವಿ.ಸಿ.ಮಾಮನಿ ಗೆಲುವು ಸಾಧಿಸಿದ್ರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಆನಂದ್ ಚೋಪ್ರಾ ಅವರ ವಿರುದ್ಧ 6291 ಮತಗಳ ಅಂತರದಿಂದ ಗೆಲುವು ಪಡೆದಿದ್ರು.
ವಿಧಾನಸಭೆಯಲ್ಲಿ ಉಪ ಸಭಾಪತಿ ಕೂಡ ಆಗಿದ್ದರು. ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ವಿ.ಸಿ.ಮಾಮನಿ ಮೃತಪಟ್ಟಿದ್ರು. ಇದೀಗ, ಅವರ ಸಾವಿನಿಂದಾಗಿ ಮಾಮನಿ ಪತ್ನಿ ರತ್ನಾ ಮಾಮನಿಗೆ ಬಿಜೆಪಿ ಟಿಕೆಟ್ ನೀಡಿದೆ.
ಇನ್ನು ಜೆಡಿಎಸ್ ಪಕ್ಷದಿಂದ ಸೌರವ ಚೋಪ್ರಾ ಅವರು ಅಖಾಡದಲ್ಲಿ ಇದ್ದಾರೆ. ಕಳೆದ ಬಾರಿ ಕಡಿಮೆ ಮತಗಳಿಂದ ತಂದೆ ಆನಂದ್ ಚೋಪ್ರಾ ಸೋಲು ಅನುಭವಿಸಿದ್ರು. ಇದೀಗ ತಂದೆ ಸಾವಿನ ಬಳಿಕ ಮಗ ಸೌರವ್ ಚೋಪ್ರಾ ಅಖಾಡಕ್ಕೆ ಇಳಿದಿದ್ದಾರೆ..
ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಗೆದ್ದು ಬೀಗಲು ಹತ್ತಾರು ಸರ್ಕಸ್ ಮಾಡ್ತಿದ್ದಾರೆ. ಹಾಗೇ, ಕಾಂಗ್ರೆಸ್ ಪಕ್ಷದಿಂದ ವಿಶ್ವಾಸ್ ವಸಂತ ವೈದ್ಯ ಅವರು ಸ್ಪರ್ಧಿಸಿದ್ದು ಗೆಲುವಿಗಾಗಿ ಸೆಣಸಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Siddaramaiah: ಮೋದಿಯವ್ರೇ, ನೀವು ರಾಜ್ಯಕ್ಕೆ ಬರೋದು ಕನ್ನಡಿಗರಿಗೆ ಕೊಡೋದಕ್ಕೋ, ಕಿತ್ಕೊಳ್ಳೋದಕ್ಕೋ? ಸಿದ್ದರಾಮಯ್ಯ ವ್ಯಂಗ್ಯ
ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ
ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಅಂದಾಜು 55 ಸಾವಿರ ಮತದಾರರು ಇದ್ದಾರೆ. ಇದರಲ್ಲಿ ಎಲ್ಲ ವರ್ಗದ ಮತದಾರರು ಸೇರಿದ್ದಾರೆ. ಆದರೆ, ಈ ಪೈಕಿ ಲಿಂಗಾಯತ ಮತದಾರರೇ ಪ್ರಮುಖ ಪಾತ್ರ ವಹಿಸಲಿದ್ದಾರೆ. ಲಿಂಗಾಯತ ಪಂಚಮಶಾಲಿ ಸಮಾಜದ ಮತದಾರರನ್ನೇ ಗುರಿಯಾಗಿ ಇಟ್ಟುಕೊಂಡು ಮೂರು ಪಕ್ಷಗಳು ಮತಬೇಟೆ ನಡೆಸುತ್ತಿವೆ. ಜಾತಿ ಲೆಕ್ಕಾಚಾರಕ್ಕಿಂತಲೂ ಇಲ್ಲಿ ಅನೇಕ ಅಂಶಗಳು ಪಾತ್ರ ವಹಿಸುತ್ತಿವೆ.
ಯಾಕಂದ್ರೆ, ಕಳೆದ ಬಾರಿಯ ಚುನಾವಣೆಯಲ್ಲಿ ಆನಂದ್ ಚೋಪ್ರಾ ಅವರು ಅಖಾಡಕ್ಕೆ ಇಳಿದಿದ್ರು. ಮಾರ್ವಾಡಿ ಸಮಾಜದ ಚೋಪ್ರಾ ಅವರು ಕಳೆದ 15 ವರ್ಷದಿಂದಲೂ ಕ್ಷೇತ್ರದಲ್ಲಿ ಹೆಸರು ಮಾಡಿದ್ರು. ಹೀಗಾಗೇ, ಕಳೆದ ಬಾರಿ ಅವರು ಅನೇಕ ವರ್ಗಗಳ ಮತಗಳನ್ನ ಸೆಳೆದಿದ್ರು. ಮತಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ರು. ಸದ್ಯದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಲಿಂಗಾಯತ ಸಮುದಾಯದ ಅಭ್ಯರ್ಥಿಯಾಗಿರುವ ರತ್ನಾ ಮಾಮನಿ ಅವ್ರಿಗೆ ಟಿಕೆಟ್ ನೀಡಿದೆ. ಇನ್ನು, ಕಾಂಗ್ರೆಸ್ ಪಾಳೆಯು ಬ್ರಾಹ್ಮಣ ಸಮಾಜದ ವಿಶ್ವಾಸ್ ವೈದ್ಯ ಅವರನ್ನ ಅಖಾಡಕ್ಕೆ ಇಳಿಸಿದೆ.
ಜೆಡಿಎಸ್ ಪಕ್ಷದಿಂದ ಆನಂದ್ ಚೋಪ್ರಾ ಅವರು ಸ್ಪರ್ಧಿಸಿದ್ದಾರೆ. ಮೂರು ಪಕ್ಷಗಳ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಆದರೆ, ಅಭ್ಯರ್ಥಿಗಳು ಏನೇ ಕಸರತ್ತು ಮಾಡಿದರೂ ಮತದಾರ ಪ್ರಭುಗಳು ಕೃಪೆ ಯಾರ ಮೇಲೆ ಎಂಬುದು ಮೇ 10 ರಂದು ಗೊತ್ತಾಗಲಿದ್ದು, ಮೇ.13 ರಂದು ಫಲಿತಾಂಶ ಬಹಿರಂಗವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ