ಪುಲಕೇಶಿನಗರ ವಿಧಾನಸಭಾ ಕ್ಷೇತ್ರ (Pulakeshinagar Assembly Constituency) ವಿಧಾನಸೌಧದಿಂದ (Vidhana Soudha) ಕೆಲವೇ ಕಿಲೋಮೀಟರ್ ದೂರದಲ್ಲಿದ್ರೂ ಶೇ. 65 ಭಾಗ ಕೊಳಗೇರಿಯಿಂದಲೇ (slums) ತುಂಬಿ ಹೋಗಿದೆ. ಸಮಸ್ಯೆಗಳ ಆಗರವಾಗಿದೆ. ಆದರೆ, ಚುನಾವಣೆ ವಿಷ್ಯಕ್ಕೆ ಬಂದ್ರೆ ರಾಜ್ಯದ ಯಾವ್ದೇ ಕ್ಷೇತ್ರಕ್ಕಿಂತ್ಲೂ ಕಡಿಮೆಯಿಲ್ಲದಷ್ಟು ಇಲ್ಲಿನ ಕದನ ಕಣ ರಂಗೇರಿದೆ. ಅವಿಭಜಿತ ಯಲಹಂಕವಾಗಿದ್ದ (Yalahanka) ವೇಳೆಯಲ್ಲಿ ಬೂಸಾ ಚಳುವಳಿಯ ಹರಿಕಾರ ದಿವಂಗತ ಬಸವಲಿಂಗಪ್ಪ (Basavalingappa) ಪ್ರತಿನಿಧಿಸಿದ್ದ ಕ್ಷೇತ್ರ ಎನ್ನುವ ಹೆಗ್ಗಳಿಕೆ ಪುಲಕೇಶಿನಗರಕ್ಕಿದೆ. ಸದ್ಯ ಕಾಂಗ್ರೆಸ್ನ ಅಖಂಡ ಶ್ರೀನಿವಾಸಮೂರ್ತಿ (Akhand Srinivasamurthy) ಈ ಕ್ಷೇತ್ರದ ಶಾಸಕರು. 2020ರಲ್ಲಿ ನಡೆದ ಕೆಜಿಹಳ್ಳಿ, ಡಿಜೆ ಹಳ್ಳಿ ಗಲಾಟೆ (KGhalli, DJ Halli riots) ಬಹುಶಃ ನಿಮಗೆಲ್ಲ ನೆನಪಿರಬಹುದು. ಬೆಂಗಳೂರಿನ ಇತಿಹಾಸದಲ್ಲಿ ಕರಾಳ ಘಟನೆಯಾಗಿ ದಾಖಲಾದ ಈ ಘಟನೆ ನಡೆದಿದ್ದು ಇದೇ ಕ್ಷೇತ್ರದಲ್ಲಿ. ಸದ್ಯ ಇಲ್ಲೂ ಚುನಾವಣಾ ಕಾವು ಜೋರಾಗುತ್ತಿದೆ.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಇತಿಹಾಸ
ಮೊದಲು ಯಲಹಂಕ ಕ್ಷೇತ್ರದ ಭಾಗವಾಗಿದ್ದ ಪುಲಿಕೇಶಿನಗರ, ಬಳಿಕ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು. ಯಲಹಂಕ, ಭಾರತಿನಗರ ಕ್ಷೇತ್ರದ ಕೆಲವು ಭಾಗ ಮುರಿದುಕೊಂಡು 2008ರಲ್ಲಿ ಪುಲಿಕೇಶಿನಗರ ವಿಧಾನಸಭೆ ಕ್ಷೇತ್ರ ಉದಯಿಸಿತು. ಅವಿಭಜಿತ ಯಲಹಂಕವಾಗಿದ್ದ ವೇಳೆಯಲ್ಲಿ ಬೂಸಾ ಚಳುವಳಿಯ ಹರಿಕಾರ ದಿವಂಗತ ಬಸವಲಿಂಗಪ್ಪ ಪ್ರತಿನಿಧಿಸಿದ್ದ ಕ್ಷೇತ್ರ ಎನ್ನುವ ಹೆಗ್ಗಳಿಕೆ ಪುಲಕೇಶಿನಗರಕ್ಕಿದೆ.
ಏನಿದು ಬೂಸಾ ಚಳವಳಿ?
ನವೆಂಬರ್ 19, 1973, ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 'ಹೊಸ ಅಲೆಗಳು' ಎನ್ನುವ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಕನ್ನಡ ಸಾಹಿತ್ಯದ ಬಗ್ಗೆ ಆಗಿನ ಸರ್ಕಾರದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರು ಆಡಿದರೆನ್ನಲಾದ ಮಾತು ಸೃಷ್ಟಿಸಿದ ವಿವಾದ ಮುಂದೆ ರಾಜ್ಯದಲ್ಲಿ ದಲಿತ ಚಳುವಳಿಯ ಹುಟ್ಟಿಗೆ ಕಾರಣವಾಗಿದ್ದು ಈಗ ಇತಿಹಾಸ. ಶಿವಮೊಗ್ಗದಲ್ಲಿ ಹಿಂದೂ ಧರ್ಮ, ಪುರೋಹಿತಶಾಹಿ ಕುರಿತಂತೆ ಅವರು ಆಡಿದ ಮಾತುಗಳನ್ನು ವಿಕೃತಗೊಳಿಸಿ ಪತ್ರಿಕೆಯೊಂದು ವರದಿ ಮಾಡಿದೆಯೆಂದೂ, ಇಂಥ ಪತ್ರಿಕೆಗಳಲ್ಲಿ ಏನೇನೋ ಬರೆದು ಹೊಟ್ಟೆ ತುಂಬಿಸಿಕೊಳ್ಳುವ ಇಂಥ ಸಾಹಿತಿಗಳು ಬೂಸಾ ಸಾಹಿತಿಗಳು, ಅವರು ಬರೆಯುವ ಕನ್ನಡ ಸಾಹಿತ್ಯವೂ ಬೂಸಾ ಸಾಹಿತ್ಯ; ಅಂಥ ಸಾಹಿತ್ಯಕ್ಕೆ, ಅಂಥ ಬೂಸಾ ಸಾಹಿತಿಗಳಿಗೆ ತಾನು ಯಾವ ಬೆಲೆಯನ್ನೂ ಕೊಡುವುದಿಲ್ಲ, ಲಕ್ಷ್ಯವನ್ನೂ ಕೊಡುವುದಿಲ್ಲ ಎಂದು ಬಸವಲಿಂಗಪ್ಪನವರು ಏರಿದ ದನಿಯಲ್ಲಿ ವ್ಯಗ್ರವಾಗಿ ಹೇಳಿದ್ದರು. ಅದೇ ಮುಂದೆ ಬೂಸಾ ಚಳವಳಿ ಅಂತ ಹೆಸರಾಯಿತು.
ಪರಭಾಷಿಕರ ಕಾರುಬಾರು!
ಚಾಲುಕ್ಯ ರಾಜ ‘ಪುಲಿಕೇಶಿ’ ಹೆಸರಿನ ಈ ಕ್ಷೇತ್ರದಲ್ಲಿ ಮಚ್ಚು ಲಾಂಗ್ಗಳದ್ದೇ ಸದ್ದು. ಒಂದು ಕಾಲದಲ್ಲಿ ಚರ್ಮೋದ್ಯಮಕ್ಕೆ ಹೆಸರಾಗಿದ್ದ ಟ್ಯಾನರಿ(ಚರ್ಮ) ರಸ್ತೆಯುದ್ದಕ್ಕೂ ಗುಜರಿ, ಮಾಂಸದ ಅಂಗಡಿಗಳ ಸಾಲು. ಈಗ ಇಲ್ಲಿ ಕನ್ನಡಕ್ಕಿಂತ ಇಂಗ್ಲಿಷ್, ಹಿಂದಿ, ಉರ್ದು, ತಮಿಳು, ಇತ್ತೀಚೆಗೆ ಈಶಾನ್ಯ ಭಾರತೀಯ ಭಾಷೆಗಳದ್ದೇ ವಿಜೃಂಭಣೆ ಆಗುತ್ತಿದೆ.
ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
ಜೆಡಿಎಸ್ನಿಂದ ಅಮಾನತುಗೊಂಡು ಕಾಂಗ್ರೆಸ್ ಸೇರಿದ್ದ 7 ಶಾಸಕರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಸಹ ಒಬ್ಬರು. 2019ರ ಚುನಾವಣೆಯಲ್ಲಿ ಅವರು 97,574 ಮತಗಳನ್ನು ಪಡೆದು 81,626 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಪುಲಿಕೇಶಿ ನಗರ ಕ್ಷೇತ್ರದಲ್ಲಿ ಜೆಡಿಎಸ್ನ ಬಿ. ಪ್ರಸನ್ನ ಕುಮಾರ್ ವಿರುದ್ಧ ಜಯಗಳಿಸಿದ್ದಾರೆ.
ಮಾಜಿ ಶಾಸಕ ಪ್ರಸನ್ನ ಕುಮಾರ್
ಕ್ಷೇತ್ರ ಪುನರ್ವಿಗಂಡಣೆ ಬಳಿಕ ಬಿ.ಬಸವಲಿಂಗಪ್ಪನವರ ಮಗ ಪ್ರಸನ್ನ ಕುಮಾರ್ ಕಾಂಗ್ರೆಸ್ನಿಂದ 2 ಬಾರಿ ಗೆದ್ದು ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಕಳೆದ ಬಾರಿ ಸೋತಿದ್ದಕ್ಕೆ ಟಿಕೆಟ್ ನಿರಾಕರಿಸಿದರಿಂದ ಕಾಂಗ್ರೆಸ್ ವಿರುದ್ಧವೇ ಜೆಡಿಎಸ್ ನಿಂದ ತೊಡೆತಟ್ಟಿದ್ದರು.
ಕೆಜಿಹಳ್ಳಿ, ಡಿಜೆ ಹಳ್ಳಿ ಗಲಾಟೆ
‘ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ 500ಕ್ಕೂ ಹೆಚ್ಚು ಜನರು, ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಬೈರಸಂದ್ರದಲ್ಲಿ 2020ರ ಆಗಸ್ಟ್ 10ರಂದು ವಾಹನಗಳಿಗೆ ಬೆಂಕಿಹಚ್ಚಿ, ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆಯೂ ದಾಳಿ ಮಾಡಿದ್ದರು. ಪೊಲೀಸರ ಗುಂಡೇಟಿಗೆ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು. ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎನ್ನಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆಗೆ ಸಂಬಂಧಿಸಿದಂತೆ 111 ಜನರನ್ನು ಪೊಲೀಸರು ಬಂಧಿಸಿದ್ದರು. ಹಿಂಸಾಚಾರದಲ್ಲಿ 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತು.
ಕ್ಷೇತ್ರದ ಚುನಾವಣೆ ಇತಿಹಾಸ
ಕ್ಷೇತ್ರ ಪುನರ್ವಿಂಗಡಣೆ ಬಳಿಕ 4ನೇ ಚುನಾವಣೆ ಎದುರಿಸುತ್ತಿರುವ ಪುಲಕೇಶಿ ನಗರದಲ್ಲಿ 7 ವಾರ್ಡ್ಗಳಿವೆ. 4ರಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದ್ದರೆ, 2 ವಾರ್ಡ್ಗಳಲ್ಲಿ ಜೆಡಿಎಸ್ ಗೆದ್ದಿದೆ. ಒಂದು ವಾರ್ಡ್ ಪಕ್ಷೇತರರ ಪಾಲಾಗಿದೆ. ಬಹುತೇಕ ಕಾಂಗ್ರೆಸ್ನ ಭದ್ರಕೋಟೆ ಆಗಿರುವುದರಿಂದ ಗೆಲುವಿನ ನಿರೀಕ್ಷೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ತೇಲುತ್ತಿದ್ದಾರೆ.
ಟಿಕೆಟ್ಗಾಗಿ ಭಾರೀ ಪೈಪೋಟಿ
ಈ ಬಾರಿ ಈ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಭಾರೀ ಪೈಪೋಟಿ ಎದುರಾಗಿದೆ. ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಈ ಬಾರಿ ಮತ್ತೆ ಟಿಕೆಟ್ ಬಯಸಿದ್ದಾರೆ. ಅಲ್ಲಿ ಸಿಗದಿದ್ದರೆ ಜೆಡಿಎಸ್ಗೆ ವಾಪಸ್ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮತ್ತೊಂದೆಡೆ ಮಾಜಿ ಶಾಸಕ ಪ್ರಸನ್ನಕುಮಾರ್ ಟಿಕೆಟ್ ಬಯಸಿದ್ದರೆ, ಗಲಾಟೆಯ ಆರೋಪ ಹೊತ್ತಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೂಡ ಟಿಕೆಟ್ ಆಕಾಂಕ್ಷಿಯೇ! ಇನ್ನು ಜೆಡಿಎಸ್ ಹಾಗೂ ಬಿಜೆಪಿಯಿಂದ ಯಾರು ಟಿಕೆಟ್ ಬಯಸಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ |
ಅಖಂಡ ಶ್ರೀನಿವಾಸಮೂರ್ತಿ | ಗೊತ್ತಿಲ್ಲ | ಗೊತ್ತಿಲ್ಲ |
ಪ್ರಸನ್ನ ಕುಮಾರ್ | ||
ಸಂಪತ್ ರಾಜ್ |
ಇನ್ನು ಒಟ್ಟು – 2,56,000 ಮತದಾರರು ಇಲ್ಲಿದ್ದಾರೆ. ಈ ಪೈಕಿ ಮುಸ್ಲಿಂ ಮತಗಳೇ ನಿರ್ಣಾಯಕವಾಗಿದ್ದು, ಅವರ ಸಂಖ್ಯೆ 71,000 ಇದೆ. ಇನ್ನು ಇತರೇ ಭಾಷಿಕರು – 68,000 ಮತದಾರರಿದ್ದಾರೆ. ಇನ್ನುಳಿದಂತೆ ಲಿಂಗಾಯತ – 2,000, ಒಕ್ಕಲಿಗರು – 25,000, ಎಸ್ಸಿ-ಎಸ್ಟಿ – 45,000, ಬ್ರಾಹ್ಮಣ – 24,000, ಒಬಿಸಿ – 5,000, ತಿಗಳ - 4,000, ಕುರುಬ – 2,000, ದೇವಾಂಗ – 2,000, ಯಾದವ – 1,000 ಹಾಗೂ ಇತರೇ ಮತದಾರರು 7,000 ಇದ್ದಾರೆ.
ಇದನ್ನೂ ಓದಿ: Karnataka Assembly Elections: ಹೆಬ್ಬಾಳದಲ್ಲಿ ಹೇಗಿದೆ ಚುನಾವಣಾ ಕಾವು? ಸಂಚಾರ ಸಮಸ್ಯೆಗೆ ಮುಕ್ತಿ ಕೊಡುವವರು ಯಾರು?
ಒಂದೆಡೆ ಕೊಳೆತು ನಾರುವ ಸ್ಲಂ, ಮತ್ತೊಂದೆಡೆ ಬ್ರಿಟಿಷರ ಕಾಲದ ವೈಭವ ನೆನಪಿಸುವ ಮಹಡಿ ಮಹಲುಗಳ ವೈಭೋಗ. ಪಾರ್ಕ್ಗಳು, ಸುಂದರವಾದ ರಸ್ತೆಗಳು ಅಲ್ಲೊಂದು ಕಾಣುತ್ತವೆ. ಲಿಕೇಶಿನಗರ ಸೇರಿದಂತೆ ಇತರೆ ಮುಖ್ಯರಸ್ತೆ ಹೊರತುಪಡಿಸಿದರೆ ಇದು ಸಮರ್ಪಕವಾಗಿ ಅಭಿವೃದ್ಧಿಗೊಂಡಿಲ್ಲ. ಜತೆಗೆ ಯೋಜಿತ ಬಡಾವಣೆಯಂತೂ ಅಲ್ಲ. ಶೇ.80ರಷ್ಟು ಪ್ರದೇಶ ಯೋಜನಾಬದ್ಧವಾಗಿಲ್ಲ. ಕಡು ಬಡವರೇ ಇಲ್ಲಿ ಹೆಚ್ಚಿದ್ದಾರೆ. 50ಕ್ಕೂ ಅಧಿಕ ಕೊಳಚೆ ಪ್ರದೇಶಗಳಿಂದ ಆವೃತಗೊಂಡಿರುವುದೇ ಕ್ಷೇತ್ರದ ದೊಡ್ಡ ಸಮಸ್ಯೆಯಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದಾಗ್ಯೂ ಮತದಾರರನ್ನು ಹಣ ಹಾಗೂ ಜಾತಿಯಾಧಾರದಲ್ಲಿ ಎನ್ ಕ್ಯಾಶ್ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಪ್ರಸನ್ನ ಕುಮಾರ್ ಪೈಪೋಟಿಗೆ ಇಳಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ