ಮೇಲುಕೋಟೆ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಹೋರಾಟ ಆಳವಾಗಿ ಬೇರೂರಿರುವ ಮಂಡ್ಯ ಜಿಲ್ಲೆಯ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ (Melukote Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ ಏನು?
ರೈತ ಸಂಘದ ಹೋರಾಟವನ್ನು ಹತ್ತಿರದಿಂದ ಕಂಡಿರುವ, ಇದರ ಬೇರು ಆಳವಾಗಿರುವ ಕ್ಷೇತ್ರಗಳಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಮುಂಚೂಣಿಯಲ್ಲಿದೆ. ಈ ಹಿಂದೆ ಪಾಂಡವಪುರ ವಿಧಾನಸಭಾ ಕ್ಷೇತ್ರವಾಗಿದ್ದ ಇದು, 2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಮೇಲುಕೋಟೆ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿ ಮಾರ್ಪಾಡಾಯಿತು. ಶೀಳನೆರೆ ಹೋಬಳಿಯು ಕೆ.ಆರ್ ಪೇಟೆ ಕ್ಷೇತ್ರದ ಪಾಲಾದರೆ, ಕೆರಗೋಡು ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿ ಮೇಲುಕೋಟೆಗೆ ಸೇರಿಕೊಂಡಿತು.
ರಾಜಕೀಯ ಇತಿಹಾಸ:
1952ರಿಂದ 1983ರ ಅವಧಿಯಲ್ಲಿ ಕಾಂಗ್ರೆಸ್, ರೈತ ಸಂಘ ಹೀಗೆ ವಿವಿಧ ನಾಯಕರು ಸ್ಪರ್ಧಿಸಿ ಗೆಲುವು-ಸೋಲು ಕಂಡಿದ್ದಾರೆ. ಆದರೆ ಇಲ್ಲಿನ ಪ್ರಮುಖ ನಾಯಕರಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರೇ ಕೆ. ಎಸ್. ಪುಟ್ಟಣ್ಣಯ್ಯ. ಅಪ್ಪಟ ರೈತ ನಾಯಕ ಹಾಗೂ ಹೋರಾಟಗಾರ ಚುನಾವಣಾ ಕಣಕ್ಕೆ ಧುಮುಕಿದ್ದು 1989ರಲ್ಲಿ. ಅಂದು ಜೆಡಿಎಸ್ ಹಾಗೂ ಕಾಂಗ್ರೆಸ್ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಇತ್ತ ಪುಟ್ಟಣ್ಣಯ್ಯ ರೈತಸಂಘದಿಂದ ಚುನಾವಣೆಗೆ ಧುಮುಕಿದ್ದರು. ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್ನ ಹಲಗೇಗೌಡ ಗೆಲುವು ಸಾಧಿಸುತ್ತಾರೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಆದರೆ ಬಳಿಕ ನಡೆದ 1994ರ ಚುನಾವಣೆಯಲ್ಲಿ ಜನತಾ ದಳವು ಸಿ.ಎಸ್ ಪುಟ್ಟರಾಜುರವರಿಗೆ ಟಿಕೆಟ್ ನೀಡುತ್ತದೆ. ಆದರೆ ಬಿ ಫಾರಂನಲ್ಲಾದ ಗೊಂದಲದಿಂದ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆದರೆ ಈ ಬಾರಿ ಪುಟ್ಟಣ್ಣಯ್ಯ ಕೈ ಮೇಲಾಗುತ್ತದೆ. 12,584 ಮತಗಳ ಗೆಲುವು ದಾಖಲಿಸಿದ ಪುಟ್ಟಣ್ಣಯ್ಯ ತಮ್ಮ ಹೋರಾಟದ ದನಿಯನ್ನು ವಿಧಾನಸೌಧದಲ್ಲಿ ಮೊಳಗಿಸುತ್ತಾರೆ.
ಸಂಬಂಧಿಗಳ ಹಣಾಹಣಿ
1999ರಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಕೆ.ಕೆಂಪೇಗೌಡರಿಗೆ ಟಿಕೆಟ್ ಕೊಟ್ಟರೆ, ಅವರ ಅಣ್ಣನ ಮಗ ಸಿ.ಎಸ್ ಪುಟ್ಟರಾಜು ಜನತಾದಳದಿಂದ ಕಣಕ್ಕಿಳಿಯುತ್ತಾರೆ. ಹಾಲಿ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಮತ್ತೆ ರೈತಸಂಘದಿಂದ ಕಣಕ್ಕಿಳಿಯುತ್ತಾರೆ. ಮೂರು ಜನರ ಈ ಕಾಳಗದಲ್ಲಿ ಅಂತಿಮವಾಗಿ ಗೆಲುವು ಕೆ.ಕೆಂಪೇಗೌಡರದ್ದಾಗುತ್ತದೆ. ನಂತರದ 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್.ಡಿ ರವಿಯವರಿಗೆ ಟಿಕೆಟ್ ನೀಡುತ್ತದೆ. ಇದು ಕೈ ಆಳಯಕ್ಕೆ ದೊಡ್ಡ ಹೊಡೆತ ನೀಡುತ್ತದೆ. ಜೆಡಿಎಸ್‌ನಿಂದ ಸಿ.ಎಸ್ ಪುಟ್ಟರಾಜುರವರು ಕಣಕ್ಕಿಳಿದು ಸರ್ವೋದಯ ಕರ್ನಾಟಕ ಪಕ್ಷದಿಂದ ಕಣಕ್ಕಿಳಿದಿದ್ದ ಕೆ.ಎಸ್ ಪುಟ್ಟಣ್ಣಯ್ಯನವರನ್ನು ಸೋಲಿಸುತ್ತಾರೆ.
ಮೇಲುಕೋಟೆ ಕ್ಷೇತ್ರವಾಗಿ ಮಾರ್ಪಾಡು
2008ರ ಚುನಾವಣೆಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಎಂದು ಹೆಸರು ಪಡೆಯುತ್ತದೆ. ಸಿ.ಎಸ್ ಪುಟ್ಟರಾಜು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದರೆ, ಅತ್ತ ಸರ್ವೋದಯ ಕರ್ನಾಟಕದಿಂದ ಕೆ.ಎಸ್ ಪುಟ್ಟಣ್ಣಯ್ಯನವರು ಸ್ಪರ್ಧಿಸುತ್ತಾರೆ. ಆದರೆ ಅತ್ತ ಕಾಂಗ್ರೆಸ್ನಲ್ಲಾದ ಬದಲಾವಣೆಗಳಿಂದ ಗೊಂದಲದ ವಾತಾವರಣ ನಿರ್ಮಾಣವಾಗಿ ಬಂಡಾಯ, ಪಕ್ಷಾಂತರಗಳು ನಡೆಯುತ್ತವೆ. ನಿರೀಕ್ಷೆಯಂತೆ ಸಿ.ಎಸ್ ಪುಟ್ಟರಾಜು ಅಭೂತಪೂರ್ವ ಗೆಲುವು ಸಾಧಿಸುತ್ತಾರೆ.
ಇದನ್ನೂ ಓದಿ: Karnataka Assembly Elections: ಸಕ್ಕರೆ ನಾಡಿನ ಅಧಿಪತಿ ಆಗೋರು ಯಾರು? ಮಂಡ್ಯದಲ್ಲಿ ಯಾರೆಲ್ಲಾ ಕಣಕ್ಕೆ?
2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ದಾಖಲಿಸಬೇಕೆಂಬ ಕನಸು ಪುಟ್ಟರಾಜು ಅವರು ಕಾಣುತ್ತಾರೆ. ಆದರೆ ಅವರ ಈ ಕನಸು ಪುಟ್ಟಣ್ಣಯ್ಯ ಗೆಲುವಿನಿಂದ ಚೂರು ಚೂರಾಗುತ್ತದೆ. ಪುಟ್ಟಣ್ಣಯ್ಯ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವಿನ ನಗೆ ಬೀರುತ್ತಾರೆ. ಈ ಮೂಲಕ ಸರ್ವೋದಯ ಕರ್ನಾಟಕ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತಾರೆ.
ಕೆ.ಎಸ್ ಪುಟ್ಟಣ್ಣಯ್ಯ ನಿಧನ
2018ರ ಫೆಬ್ರವರಿಯಲ್ಲಿ ಶಾಸಕರಾಗಿದ್ದ ಕೆ.ಎಸ್ ಪುಟ್ಟಣ್ಣಯ್ಯನವರು ಹೃದಯಾಘಾತದಿಂದ ನಿಧನರಾಗುತ್ತಾರೆ. ಆದರೆ ಅದೇ ವರ್ಷ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ವಿದೇಶದಲ್ಲಿದ್ದ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಸ್ವರಾಜ್ ಇಂಡಿಯಾ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್ ಈ ಕ್ಷೇತ್ರದಿಂದ ಅಭ್ಯರ್ಥಿ ಇಳಿಸದೆ ಪುಟ್ಟಣ್ಣಯ್ಯ ಪುತ್ರನನ್ನು ಬೆಂಬಲಿಸುತ್ತದೆ. ಜೆಡಿಎಸ್‌ನಿಂದ ಸಿ.ಎಸ್ ಪುಟ್ಟರಾಜುರವರು ಕಣಕ್ಕಿಳಿಯುತ್ತಾರೆ. ಆದರೆ ಒಕ್ಕಲಿಗರ ಬೆಂಬಲ ಹಾಗೂ ಸಾಲಮನ್ನಾದಂತಹ ಭರವಸೆ ಜೆಡಿಎಸ್ ಪಕ್ಷವನ್ನು ಗೆಲುವಿನ ದಡ ಮುಟ್ಟಿಸುತ್ತದೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಜೆಡಿಎಸ್: ಕಳೆದ ವರ್ಷ ದೇವೇಗೌಡರ ಕುಟುಂಬದೊಂದಿಗೆ ಕೋಪಿಸಿಕೊಂಡಿದ್ದ ಸಿ.ಎಸ್ ಪುಟ್ಟರಾಜು ಪಕ್ಷ ತ್ಯಜಿಸುವ ಸುಳಿವು ನೀಡಿದ್ದರು. ಆದರೆ ಬಳಿಕ ವೈಮನಸ್ಸು ತೊರೆದಿದ್ದ ಅವರು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ.
ಕಾಂಗ್ರೆಸ್: ಕೈ ಪಾಳಯದಿಂದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಲಾರಿ ರೇವಣ್ಣ ಎಂದೇ ಪ್ರಸಿದ್ಧರಾಗಿದ್ದ ಬಿ.ರೇವಣ್ಣ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತೊಂದೆಡೆ ಡಾ. ಎಚ್.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್.ತ್ಯಾಗರಾಜು, ಕಾಗೇಪುರ ಆನಂದ್ ಕುಮಾರ್, ನಾಗಭೂಷಣ್, ಸಚಿನ್ ಮಿಗ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಈ ಹಿಂದಿನ ಎರಡು ಎಲೆಕ್ಷನ್ಗಳಲ್ಲಿ ರೈತ ನಾಯಕರನ್ನು ಬೆಂಬಲಿಸಿತ್ತು. ಹೀಗಿರುವಾಗ ಈ ಬಾರಿಯೂ ತನ್ನ ಹಿಂದಿನ ನಡೆಯನ್ನೇ ಮುಂದುವರೆಸುತ್ತಾ ಅಥವಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ನೋಡಬೇಕು.
ಬಿಜೆಪಿ: ಕಮಲ ಪಾಳಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಇಂದ್ರೇಶ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿದ್ದು, ಇಂದ್ರೇಶ್ ಅವರು ಪ್ರಬಲ ಪೈಪೋಟಿ ನೀಡಲಿದ್ದಾರೆ ಎನ್ನಲಾಗಿದೆ.
ದರ್ಶನ್ ಪುಟ್ಟಣ್ಣಯ್ಯ: ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ್ದದರ್ಶನ್ ಪುಟ್ಟಣ್ಣಯ್ಯ ಅಮೆರಿಕಕ್ಕೆ ಮರಳಿದ್ದರು. ಆಗಾಗ್ಗ ಕ್ಷೇತ್ರಕ್ಕೆ ಭೇಟಿ ನೀಡಿ ರೈತರ ಹೋರಾಟಗಳನ್ನು ಭಾಗವಹಿಸಿದ್ದರು. ಬಳಿಕ ತಮ್ಮ ಕಂಪನಿಯನ್ನು ಮಾರಿ ಸ್ವಗ್ರಾಮಕ್ಕೆ ಮರಳಿದ್ದಾರೆ. ಕಳೆದೆರಡು ತಿಂಗಳುಗಳಿಂದ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿರುವ ಅವರಿಗೆ ಸರ್ವೋದಯ ಕರ್ನಾಟಕ ಪಕ್ಷ ಟಿಕೆಟ್ ಘೋಷಿಸಿದೆ.
ಜಾತಿ ಲೆಕ್ಕಾಚಾರ:
ಒಟ್ಟು 19,5970 ಮತದಾರರಿರುವ ಮೇಲುಕೋಟೆ ಕ್ಷೇತ್ರದಲ್ಲಿ 97,592 ಪುರುಷ ಮತದಾರರಿದ್ದು, 98,374 ಮಹಿಳಾ ಮತದಾರರಿದ್ದಾರೆ.
ಲಿಂಗಾಯತ | 17,000 |
ಮುಸ್ಲಿಂ | 8,000 |
ಎಸ್ಸಿ | 28,000 |
ಕುರುಬ | 9,000 |
ಎಸ್ಟಿ | 4,000 |
ಒಕ್ಕಲಿಗ | 95,000 |
ಸವಿತಾ ಸಮಾಜ | 4000 |
ಬ್ರಾಹ್ಮಣ | 5,000 |
ವಿಶ್ವಕರ್ಮ | 5,000 |
ಇತರೆ | 14,000 |
2018 ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ನ ಸಿ.ಎಸ್.ಪುಟ್ಟರಾಜು, ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಅವರನ್ನು 22,224 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಸಿ.ಎಸ್.ಪುಟ್ಟರಾಜು | 96,003 |
ರೈತ ಸಂಘ | ದರ್ಶನ್ ಪುಟ್ಟಣ್ಣಯ್ಯ | 73,779 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ