ಮಾಯಕೊಂಡವು (Mayakonda) ದಾವಣಗೆರೆ (Davanagere) ಜಿಲ್ಲೆಯ ಒಂದು ಊರು ಮತ್ತು ಹೋಬಳಿ ಕೇಂದ್ರ. ಜೊತೆಗೆ ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಮಾಯಕೊಂಡ ವಿಧಾನಸಭಾ ಕ್ಷೇತ್ರ (Mayakonda assembly constituency) ಕೂಡ ಒಂದು. ಈ ಊರು ವ್ಯಾಪಾರ ಸ್ಥಳವಾಗಿ ಅಭಿವೃದ್ಧಿಯಾಗುತ್ತಿದೆ. ಅಂಚೆ, ವಿದ್ಯುಚ್ಛಕ್ತಿ, ಶಾಲೆಗಳು, ಆರೋಗ್ಯ ಕೇಂದ್ರ ಮುಂತಾದ ನಾಗರಿಕ ಸೌಲಭ್ಯಗಳಿವೆ. ಈ ಊರಿನಲ್ಲಿ ಕೇಶವ ಮತ್ತು ಓಬಳ ನರಸಿಂಹ ಗುಡಿಗಳಿವೆ. ಸದ್ಯ ಬಿಜೆಪಿ (BJP) ಆಡಳಿತವಿದ್ದು, ಪ್ರೊ. ಎನ್. ಲಿಂಗಣ್ಣ (Pro. N. Linganna) ಅಲ್ಲಿನ ಶಾಸಕರಾಗಿದ್ದಾರೆ. ಬಿಸಿಲು ಏರುತ್ತಿದ್ದಂತೆ ಮಾಯಕೊಂಡದಲ್ಲಿ ಚುನಾವಣಾ ಬಿಸಿ ಕೂಡ ಏರುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…
2018ರ ವಿಧಾನಸಭಾ ಚುನಾವಣಾ ಫಲಿತಾಂಶ
2018 ರಲ್ಲಿ ಬಿಜೆಪಿಯ ಎಲ್ ಲಿಂಗಣ್ಣ ಗೆದ್ದು ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ವಿರುದ್ದ ಕೇವಲ 6458 ಮತಗಳ ಅಂತರದಿಂದ ಲಿಂಗಣ್ಣ ಜಯ ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎನ್. ಲಿಂಗಣ್ಣ 50,556 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ 44,098 ಮತಗಳನ್ನು ಪಡೆದಿದ್ದರು.
ಹಾಲಿ ಶಾಸಕರ ಬಗ್ಗೆ ಮತದಾರರು ಏನಂತಾರೆ?
ಹಾಲಿ ಶಾಸಕ ಲಿಂಗಣ್ಣ ಕ್ಷೇತ್ರದ ಜನರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಅನ್ನೋದು ಹಲವರ ಆರೋಪ. ಇನ್ನು ಅನುದಾನ ಬಿಡುಗಡೆಗೆ ಕಮಿಷನ್ ಕೇಳುತ್ತಾರೆ ಅನ್ನೋದು ವಿಪಕ್ಷಗಳ ಆರೋಪ. ಅತ್ತ ಕಾಂಗ್ರೆಸ್‌ನ ಬಸವಂತಪ್ಪ ಕಳೆದ ಬಾರಿ ಸೋತರೂ ಸಹ ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ ಬಡವರಿಗೆ ನೆರವಾಗಿದ್ದ ಬಸವಂತಪ್ಪ, ಕ್ಷೇತ್ರದ ಜನರ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗಿಯಾಗೋದೇ, ಹಲವು ರೀತಿಯಲ್ಲಿ ಜನರಿಗೆ ನೆರವು ನೀಡ್ತಿದ್ದಾರೆ ಎನ್ನಲಾಗಿದೆ.
ಮಾಯಕೊಂಡ ಟಿಕೆಟ್ ಆಕಾಂಕ್ಷಿಗಳು
ಈ ಬಾರಿಯೂ ಹಾಲಿ ಶಾಸಕ ಪ್ರೊ. ಎನ್. ಲಿಂಗಣ್ಣ ಬಿಜೆಪಿಯಿಂದ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಇನ್ನು ಮಾಜಿ ಶಾಸಕ ಬಸವರಾಜ ನಾಯ್ಕ್, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಆಲೂರು ನಿಂಗರಾಜ್ ಕೂಡ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅತ್ತ ಕಾಂಗ್ರೆಸ್‌ನಲ್ಲೂ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿಯೇ ಇದೆ. 2018ರಲ್ಲಿ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದ ಪರಾಜಿತ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಈ ಬಾರಿಯೂ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು!
ಅತ್ತ ಮಾಜಿ ಸಚಿವ ಶಿವಮೂರ್ತಿ ನಾಯಕ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸೇರಿ ಹಲವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ದುಗ್ಗಪ್ಪ, ವೀರೇಶ್ ನಾಯ್ಕ್ ಬಿ. ಎನ್, ಎಚ್. ಆನಂದಪ್ಪ, ಬಿ.ಹೆಚ್. ವೀರಭದ್ರಪ್ಪ, ಸವಿತಾ ಬಾಯಿ ಮಲ್ಲೇಶ್ ನಾಯ್ಕ್, ಕೆ. ಶಿವಮೂರ್ತಿ, ರಾಘವೇಂದ್ರ ನಾಯ್ಕ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟೂ ಮತದಾರರು - 1,87,672 ಮಂದಿ ಇದ್ದಾರೆ. ಈ ಪೈಕಿ ಲಿಂಗಾಯತ ಮತದಾರರು – 45,900, ಎಸ್‌ಸಿ ಮತದಾರರು – 45,400, ಎಸ್‌ಟಿ ಮತದಾರರು – 29,000, ಕುರುಬ ಮತದಾರರು – 17,000, ಮುಸ್ಲಿಂ ಮತದಾರರು – 13,000, ಉಪ್ಪಾರ ಮತದಾರರು – 7,000, ಮರಾಠ ಮತದಾರರು – 2,500 ಹಾಗೂ ಈಡಿಗ ಮತದಾರರು – 3,000 ಮಂದಿ ಇದ್ದಾರೆ.
ಇದನ್ನೂ ಓದಿ: Karnataka Assembly Elections: ಬರದ ಊರಲ್ಲಿ ಹೇಗಿದೆ ಚುನಾವಣಾ ಜ್ವರ? ಜಗಳೂರಲ್ಲಿ ಜಯಶಾಲಿಯಾಗುವವರು ಯಾರು?
ಮಾಯಕೊಂಡ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಬಿಜೆಪಿಯ ವೋಟ್ ಬ್ಯಾಂಕ್ ಆಗಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮತದಾರರು ಈ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದಾರೆ. ಪರಿಶಿಷ್ಟ ಪಂಗಡದ 29 ಸಾವಿರ ಮತದಾರರಿದ್ದು, ಎಲ್ಲ ಪಕ್ಷಗಳ ನಡುವೆ ಮತಗಳು ಹರಿದು ಹಂಚಿ ಹೋಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ