• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Assembly Elections: ಸಕ್ಕರೆ ನಾಡಿನ ಅಧಿಪತಿ ಆಗೋರು ಯಾರು? ಮಂಡ್ಯದಲ್ಲಿ ಯಾರೆಲ್ಲಾ ಕಣಕ್ಕೆ?

Karnataka Assembly Elections: ಸಕ್ಕರೆ ನಾಡಿನ ಅಧಿಪತಿ ಆಗೋರು ಯಾರು? ಮಂಡ್ಯದಲ್ಲಿ ಯಾರೆಲ್ಲಾ ಕಣಕ್ಕೆ?

ಮಂಡ್ಯ ವಿಧಾನಸಭಾ ಕ್ಷೇತ್ರ

ಮಂಡ್ಯ ವಿಧಾನಸಭಾ ಕ್ಷೇತ್ರ

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಸಕ್ಕರೆ ನಾಡು ಮಂಡ್ಯ ಕ್ಷೇತ್ರದ ಸಂಪೂರ್ಣ ವಿವರ ನೀಡಲಾಗಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Mandya, India
  • Share this:

ಮಂಡ್ಯ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್​ ಹಾಗೂ ಜೆಡಿಎಸ್​ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಕರ್ನಾಟಕದಲ್ಲೇ ಅತೀ ಹೆಚ್ಚು ಒಕ್ಕಲಿಗರನ್ನು ಹೊಂದಿರುವ ಮಂಡ್ಯ ಜಿಲ್ಲೆಯ, ಮಂಡ್ಯ ವಿಧಾನಸಭಾ ಕ್ಷೇತ್ರದ (Mandya Assembly Constituency) ಸಂಪೂರ್ಣ ವಿವರ ನೀಡಲಾಗಿದೆ.


ಕ್ಷೇತ್ರದ ವಿಶೇಷತೆ ಏನು?


ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನ ತಾಲೂಕು ಆಗಿದ್ದ ಮಂಡ್ಯವನ್ನು ಆನಂತರ, ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿಸಿತು. ಬರದ ನಾಡಾಗಿದ್ದ ಜಿಲ್ಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿ ಮಂಡ್ಯ ಜಿಲ್ಲೆಯಲ್ಲಿ ಹಸಿರು ತುಂಬಿ ತುಳುಕುವಂತೆ ಮಾಡಿದರು. ಸಕ್ಕರೆ ನಾಡು ಎಂದು ಕರೆಸಿಕೊಳ್ಳುವ ಮಂಡ್ಯ ಚಳವಳಿಗಳ ತವರೂರು ಎಂದೇ ಖ್ಯಾತಿ ಗಳಿಸಿದೆ. 1930ರ ಇರ್ವಿನ್ ನಾಲಾ ಚಳವಳಿಯಿಂದ ಹಿಡಿದು ಇತ್ತೀಚೆಗೆ ನಡೆದ ಕಬ್ಬು ಮತ್ತು ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿ ಬೇಡಿಕೆಯ ಪ್ರತಿಭಟನೆಗಳವರೆಗೆ, ಹೀಗೆ ಸಾವಿರಾರು ಹೋರಾಟಗಳಿಗೆ ಈ ಜಿಲ್ಲೆ ಸಾಕ್ಷಿಯಾಗಿದೆ.


ಕಬ್ಬು, ಭತ್ತವೇ ರೈತರ ಬದುಕು


ಕಬ್ಬು ಮತ್ತು ಭತ್ತ ಜಿಲ್ಲೆಯ ಪ್ರಧಾನ ಬೆಳೆಗಳು. ಈ ಎರಡು ಬೆಳೆಗಳು ಅತಿ ಹೆಚ್ಚು ನೀರಿನ ಅಗತ್ಯ ಕೇಳುವ ಬೆಳೆಗಳೂ ಆಗಿದ್ದು ಸಮರ್ಪಕ ಮಳೆ ಬಾರದಿದ್ದಾಗ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊರಗಿನವರಿಗೆ ಮಂಡ್ಯ ಜಿಲ್ಲೆ ಅಪಾರ ಪ್ರಮಾಣದಲ್ಲಿ ನೀರಾವರಿ ಹೊಂದಿರುವ ಜಿಲ್ಲೆಯಂತೆಯೇ ಕಾಣುತ್ತದೆ. ಆದರೆ ವಾಸ್ತವವಾಗಿಇಲ್ಲಿನ ಶೇ.50 ಪ್ರದೇಶ ಇಂದಿಗೂ ಮಳೆಯಾಶ್ರಿತವಾಗಿದೆ. ಅನೇಕ ರೈತರು ಇಲ್ಲಿ ರಾಗಿ, ಹುರಳಿ ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ. ಇತ್ತೀಚೆಗೆ ತರಕಾರಿ, ರೇಷ್ಮೆಯತ್ತವೂ ರೈತರು ಮುಖ ಮಾಡಿದ್ದಾರೆ.


ಇದನ್ನೂ ಓದಿ: Karnataka Assembly Elections: ವಿರಾಜಪೇಟೆಯಲ್ಲಿ ಬಿಜೆಪಿ ಹವಾ, ಕಮಲ ಕೋಟೆ ಬೇಧಿಸಲು ಈ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾ ಕಾಂಗ್ರೆಸ್​?


ಎಸ್ಸೆಂ ಕೃಷ್ಣ ಅವರಂತಹ ರಾಷ್ಟ್ರಮಟ್ಟದ ರಾಜಕಾರಣಿ, ರೆಬೆಲ್​ ಸ್ಟಾರ್​ ಅಂಬರೀಶ್ ಅವರಂತಹ ಜನಪ್ರಿಯ ನಾಯಕ, ಕೆ.ಎಸ್ ಪುಟ್ಟಣ್ಣಯ್ಯತಂತಹ ರೈತ ಮುಖಂಡರನ್ನು ನೀಡಿದ ಜಿಲ್ಲೆ. ಪ್ರಸ್ತುತ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿರುವ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಈ ಏನೇ ಆದರೂ ಸರಿ ತಾವೇ ಗೆಲ್ಲಲೇಬೇಕೆಂದು ಕಾಂಗ್ರೆಸ್​ ಪಟ್ಟು ಹಿಡಿದಿದ್ದರೆ, ಅತ್ತ ಜೆಡಿಎಸ್​ ತನ್ನ ಕ್ಷೇತ್ರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಖಾತೆ ತೆರೆದಿರುವ ಬಿಜೆಪಿ ಕೂಡಾ ಗೆಲುವಿಗಾಗಿ ತನ್ನ ಶ್ರಮ ಹಾಕಲಾರಂಭಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕೂಡಾ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಇನ್ನು ಬದಲಾದ ರಾಜಕೀಯ ಬೆಳವಣಿಗೆ ಮಧ್ಯೆ ಇಲ್ಲಿನ ಸಂಸದೆ ಹಾಗೂ ಅಂಬರೀಶ್ ಪತ್ನಿ ಸುಮಲತಾ ಕೂಡಾ ಬಿಜೆಪಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.


ರಾಜಕೀಯ ಇತಿಹಾಸ:


1952ರಲ್ಲಿ ಮೊದಲ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ನ ಕೆ.ವಿ. ಶಂಕರಗೌಡರು ಗೆಲ್ಲುತ್ತಾರೆ ಆದರೆ ಮೈಸೂರು ಭಾಗದ ರೈತರಿಗೆ ಹೆಚ್ಚಿನ ಕರ ನಿಗದಿ ಮಾಡಿದ ಕೆಂಗಲ್ ಹನುಮಂತಯ್ಯ ಸರ್ಕಾರದ ವಿರುದ್ಧ ಕೋಪಗೊಂಡು ರಾಜೀನಾಮೆ ನೀಡುತ್ತಾರೆ. 1954ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿ.ಎಸ್ ಬೊಮ್ಮೇಗೌಡರು ಗೆಲುವು ಸಾಧಿಸುತ್ತಾರೆ. 1957ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಬೊಮ್ಮೇಗೌಡರು ಮತ್ತೆ ಗೆಲುವು ಸಾಧಿಸುತ್ತಾರೆ. 1962ರಲ್ಲಿ ಕಾಂಗ್ರೆಸ್‌ನಲ್ಲಿದ್ದ ಜೆ. ದೇವಯ್ಯ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸುತ್ತಾರೆ. ಆದರೆ 1967ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಗೌಡಗೆರೆ ನಾಗಪ್ಪ ಜಯ ಸಾಧಿಸುತ್ತಾರೆ. 1972ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಎಂ.ಎಚ್. ಬೋರಯ್ಯ ಗೆದ್ದು ಬೀಗುತ್ತಾರೆ.


ಆತ್ಮಾನಂದ ಕೈ ಹಿಡಿದ ಮಂಡ್ಯ ಜನತೆ


1978ರ ಚುನಾವಣೆ ವೇಳೆಗೆ ನಾಲ್ಕು ಬಾರಿ ಮಂಡ್ಯದ ಸಂಸದರಾಗಿದ್ದ ಎಂ.ಕೆ. ಶಿವನಂಜಪ್ಪ ನಿಧನರಾಗುತ್ತಾರೆ, ಹೀಗಾಗಿ ಅವರ ಪುತ್ರ ಆತ್ಮಾನಂದ ಜನತಾಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸುತ್ತಾರೆ ಹಾಗೂ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸುತ್ತಾರೆ. 1983 ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್​ ಸೋಲಿಸಿದ ಜನತಾ ಪಕ್ಷದ ದೊಡ್ಡಬೋರೇಗೌಡರು ಭಾರೀ ಅಂತರದಿಂದ ಗೆಲುವು ಸಾಧಿಸುತ್ತಾರೆ. 1985ರ ಚುನಾವಣೆಯಲ್ಲೂ ಕಾಂಗ್ರೆಸ್​ ಪಕ್ಷ ಜನತಾ ಪಕ್ಷದ ಎಸ್.ಡಿ. ಜಯರಾಂ ವಿರುದ್ಧ ಸೋಲನುಭವಿಸುತ್ತದೆ. ಆದರೆ 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಆತ್ಮಾನಂದ ಅವರಿಗೆ ಟಿಕೆಟ್​ ನೀಡುತ್ತದೆ, ಇಲ್ಲಿ ನಿರೀಕ್ಷೆಯಂತೆ ಕೈ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರೆ. ​


ಎಸ್​. ಡಿ. ಜಯರಾಂ ನಿಧನ


ಆದರೆ 1994ರ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರ ಬುಡಮೇಲಾಗುತ್ತದೆ. ಹಾಲಿ ಸಚಿವರಾಗಿದ್ದ ಎಂ.ಎಸ್. ಆತ್ಮಾನಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಆದರೆ ಜನತಾ ದಳದಿಂದ ಎಸ್.ಡಿ. ಜಯರಾಂ ಈ ಬಾರಿ ಗೆಲುವು ಸಾಧಿಸುತ್ತಾರೆ. ಎರಡನೇ ಬಾರಿ ಶಾಸಕರಾದ ಜಯರಾಂ ಎಚ್.ಡಿ. ದೇವೇಗೌಡ ಹಾಗೂ ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾಗುತ್ತಾರೆ. ಆದರೆ ಈ ನಡುವೆ ಅನಾರೋಗ್ಯದಿಂದ ಅವರು ಸಾವನ್ನಪ್ಪುತ್ತಾರೆ.


ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?


ಸೋಲು-ಗೆಲುವಿನ ಆಟ


1997ರಲ್ಲಿ ನಡೆಯುವ ಉಪಚುನಾವಣೆಯಲ್ಲಿ ಎಸ್.ಡಿ. ಜಯರಾಂ ಅವರ ಪತ್ನಿ ಪ್ರಭಾವತಿ ಜಯರಾಂ ಅವರನ್ನು ಜನತಾದಳವು ಜಣಕ್ಕಿಳಿಸುತ್ತದೆ. ಇಲ್ಲಿ ಅನುಕಂಪದ ಅಲೆಯಿಂದಾಗಿ ಪ್ರಭಾವತಿ ಜಯರಾಂ ಗೆಲುವು ಸಾಧಿಸುತ್ತಾರೆ. 1999ರ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಮತ್ತೆ ಗೆಲುವು ಸಾಧಿಸುತ್ತಾರೆ. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ.ಎಸ್. ಆತ್ಮಾನಂದರವರು ಕಣಕ್ಕಿಳಿದರೂ ಜೆಡಿಎಸ್​ ಅಭ್ಯರ್ಥಿ ಎದುರು ಸೋಲನುಭವಿಸುತ್ತಾರೆ.


ರವಿಕುಮಾರ್​ ಗೌಡ


ಕ್ಷೇತ್ರ ಪುನರ್ ವಿಂಗಡನೆ


2008ರ ವೇಳೆಗೆ ಕ್ಷೇತ್ರ ಪುನರ್‌ವಿಂಗಡಣೆಯಾಗುತ್ತದೆ. ಕೆರಗೋಡು ಕ್ಷೇತ್ರವನ್ನು ಮಂಡ್ಯ ಮತ್ತು ಮೇಲುಕೋಟೆ ಕ್ಷೇತ್ರಗಳಿಗೆ ಸೇರಿಸಲಾಗುತ್ತದೆ. ಬದಲಾದ ರಾಜಕೀಯ ವ್ಯವಸ್ಥೆ ಹಾಗೂ ಕಾಂಗ್ರೆಸ್​ ಮುಖಂಡನ ಹತ್ಯೆ ಮೊದಲಾದ ಕಾರಣಗಳಿಂದಾಗಿ ಮೊದಲ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಆದರೂ ಜೆಡಿಎಸ್ ಪಕ್ಷದ ಎಂ.ಶ್ರೀನಿವಾಸ್ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.


ಗೆದ್ದು ಸಚಿವರಾದ ಅಂಬಿ


2013ರ ಚುನಾವಣೆ ವೇಳೆಗೆ ಹಾಲಿ ಶಾಸಕ ಎಂ.ಶ್ರೀನಿವಾಸ್ ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಟಿಕೆಟ್ ಸಿಗದ ಎಸ್.ಡಿ ಜಯರಾಂರವರ ಪುತ್ರ ಅಶೋಕ್ ಜಯರಾಂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. 2008ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಮತ್ತು 2009ರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲುಂಡಿದ್ದ ಚಿತ್ರನಟ ಅಂಬರೀಶ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ. ಆದರೆ ಅವರನ್ನು ಸೋಲಿಸಲೇಬೇಕೆಂದಯ ಕೊನೆ ಕ್ಷಣದಲ್ಲಿ ಜೆಡಿಎಸ್ ಎಸ್.ಡಿ ಜಯರಾಂರವರನ್ನು ಸಮಾಧಾನಪಡಿಸಿ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸುವಂತೆ ಮಾಡುತ್ತದೆ. ಆದರೂ ಅಂಬಿ ಗೆಲುವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅವರು 42,937 ಮತಗಳ ಭಾರೀ ಅಂತರದ ಭರ್ಜರಿ ಜಯ ದಾಖಲಿಸುತ್ತಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.


Kannada Actor Rebel Star Ambareesh Retro Interesting Stories


ವಿಧಾನಸಭೆ ಮೆಟ್ಟಿಲೇರಿದ ಶ್ರೀನಿವಾಸ್


ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಎಂ.ಶ್ರೀನಿವಾಸ್‌ರವರಿಗೆ ಟಿಕೆಟ್ ನೀಡುತ್ತದೆ. ಅಂಬರೀಶ್ ನಾಮಪತ್ರ ಸಲ್ಲಿಕೆಗೆ 48 ತಾಸು ಬಾಕಿ ಇದೆ ಎನ್ನುವಾಗ ನಾನು ಸ್ಪರ್ಧಿಸುವುದಿಲ್ಲವೆಂದು ಘೋಷಿಸುತ್ತಾರೆ. ಹೀಗಾಗಿ ಕಾಂಗ್ರೆಸ್​ ತರಾತುರಿಯಲ್ಲೇ ರವಿಕುಮಾರಗೌಡ ಗಣಿಗಗೆ ಘೋಷಿಸುತ್ತಾರೆ. ಅತ್ತ ಜೆಡಿಎಸ್‌ನಿಂದ ಟಿಕೆಟ್‌ಗಾಗಿ ಕಡೆ ಕ್ಷಣದವರೆಗೂ ಪೈಪೋಟಿ ನಡೆಸಿದ್ದ ಚಂದಗಾಲು ಶಿವಣ್ಣ ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ. ಇಂತಹ ಕೊನೇ ಕ್ಷಣದಲ್ಲಾದ ಬೆಳವಣಿಗೆ ಸಂದರ್ಭದಲ್ಲಿ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದ ಎಂ. ಶ್ರೀನಿವಾಸ್ ಗೆಲುವು ದಾಖಲಿಸುತ್ತಾರೆ. ಅಲ್ಲದೇ ಎಚ್.ಡಿ. ಕುಮಾರಸ್ವಾಮಿ ಪರ ಎದ್ದ ಒಕ್ಕಲಿಗರ ಅಲೆ ಶ್ರೀನಿವಾಸ್ ಗೆಲುವು ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಹೀಗೆ ಮೂರನೇ ಬಾರಿ ಅದೃಷ್ಟ ಬಲದಿಂದಲೇ ಶ್ರೀನಿವಾಸ್ ವಿಧಾನಸಭೆ ಮೆಟ್ಟಿಲೇರಿದ್ದಾರೆ.


2023ರ ಟಿಕೆಟ್​ ಆಕಾಂಕ್ಷಿಗಳು ಯಾರು?


ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಕಾಣಬಹುದು. ಒಂದೆಡೆ ಜೆಡಿಎಸ್​ ಗೆಲ್ಲಲೇಬೇಕೆಂಬ ಹಠದಲ್ಲಿ ಪ್ರಚಾರ ನಡೆಸುತ್ತಿದ್ದರೆ, ಇತ್ತ ಕಾಂಗ್ರೆಸ್​ ಕೂಡಾ ಮಂಡ್ಯ ಕ್ಷೇತ್ರ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದೆ. ಇವೆರಡೂ ಪಕ್ಷದ ನಾಯಕರನ್ನು ಮಣಿಸಲು ಯೋಜನೆ ರೂಪಿಸಿರುವ ಬಿಜೆಪಿ ತನ್ನೆಲ್ಲಾ ಶಕ್ತಿಮೀರಿ ಪ್ರಯತ್ನ ಪಡುತ್ತಿದೆ. ಈಗಾಗಲೇ ಮೋದಿ ಹಾಗೂ ಅಮಿತ್ ಶಾ ಇಲ್ಲಿಗೆ ಭೇಟಿ ನೀಡಿರುವುದು ಇದಕ್ಕೆ ಸಾಕ್ಷಿ ಎಂಬಂತಿದೆ.


ಎಂ. ಶ್ರೀನಿವಾಸ್
ಎಂ. ಶ್ರೀನಿವಾಸ್


ಜೆಡಿಎಸ್​: ಮಂಡ್ಯ ಕ್ಷೇತ್ರ ಜೆಡಿಎಸ್​ನ ಪ್ರಬಲ ಕೋಟೆ ಎಂಬುವುದರಲ್ಲಿ ಅನುಮಾನವಿಲ್ಲ. ಆದರೆ ಈ ಬಾರಿ ಜೆಡಿಎಸ್‌ನಿಂದ ಹಾಲಿ ಶಾಸಕರಾಗಿವ ಎಂ. ಶ್ರೀನಿವಾಸ್‌ರವರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೂ, ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಮುದ್ದನಘಟ್ಟ ಮಹಾಲಿಂಗೇಗೌಡ, ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಯೋಗೇಶ್ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.


ಕಾಂಗ್ರೆಸ್​: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 16 ಮಂದಿ ಅಭ್ಯರ್ಥಿಗಳು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಗಣಿಗ ರವಿಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಅತ್ತ ಜೆಡಿಎಸ್​ ಬಿಟ್ಟು ಬಂದ ಕೆ.ಕೆ ರಾಧಾಕೃಷ್ಣ ಕೀಲಾರರವರು ಕಾಂಗ್ರೆಸ್ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ. ಕಾವೇರಿ ನರ್ಸಿಂಗ್ ಹೋಮ್‌ನ ಡಾ.ಎಚ್ ಕೃಷ್ಣರವರೂ ಕೈ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನುಳಿದಂತೆ ಎಂ.ಎಸ್. ಆತ್ಮಾನಂದ, ಎಚ್.ಬಿ. ರಾಮು, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್ ಸೇರಿ ಒಟ್ಟು 16 ಮಂದಿ ಆಕಾಂಕ್ಷಿಗಳಿದ್ದಾರೆ.


ಬಿಜೆಪಿ: ಕಮಲ ಪಾಳಯದಿಂದ ಪರಾಜಿತ ಅಭ್ಯರ್ಥಿ ಚಂದಗಾಲು ಶಿವಣ್ಣ, ಅಶೋಕ್ ಜಯರಾಂ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಎಚ್.ಆರ್. ಅರವಿಂದ್ ಅವರು ಸಹ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.


ಜಾತಿ ಲೆಕ್ಕಾಚಾರ:


ಒಟ್ಟು 2,18,991 ಮತದಾರರಿರುವ ಮಂಡ್ಯ ಕ್ಷೇತ್ರದಲ್ಲಿ 1,07,882 ಪುರುಷ ಮತದಾರರಿದ್ದು, 1,11,079 ಮಹಿಳಾ ಮತದಾರರಿದ್ದಾರೆ.

ಲಿಂಗಾಯತ13,000
ಮುಸ್ಲಿಂ17,000
ಎಸ್​ಸಿ28,000
ಕುರುಬ12,000
ಎಸ್​ಟಿ8,000
ಒಕ್ಕಲಿಗ90,000
ಮಡಿವಾಳ4000
ಬ್ರಾಹ್ಮಣ5,000
ವಿಶ್ವಕರ್ಮ5,000
ಇತರೆ12,500

2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್​ನ ಎಂ. ಶ್ರೀನಿವಾಸ್, ಕಾಂಗ್ರೆಸ್​ನ ರವಿಕುಮಾರ್​ ಗೌಡರನ್ನು 21,608 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳು
ಜೆಡಿಎಸ್​ಎಂ. ಶ್ರೀನಿವಾಸ್69,421
ಕಾಂಗ್ರೆಸ್​ರವಿಕುಮಾರ್​ ಗೌಡ47,813

Published by:Precilla Olivia Dias
First published: