ಮಳವಳ್ಳಿ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಮೀಸಲು ಕ್ಷೇತ್ರವಾಗಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರದ (Malavalli Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಮಳವಳ್ಳಿ, ಕಾವೇರಿ ನದಿಯ ಶಿವನಸಮುದ್ರ ಜಲಾಶಯ, ಗಗನಚುಕ್ಕಿ ಮತ್ತು ಬರಚುಕ್ಕಿ ಮಳವಳ್ಳಿ ತಾಲೂಕಿನ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಿಂದಲೇ ಫೇಮಸ್. ಏಷ್ಯಾ ಖಂಡದಲ್ಲೇ ಮೊದಲ ಬಾರಿಗೆ 1905 ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಶಿವನಸಮುದ್ರದಲ್ಲಿ ಸ್ಥಾಪಿಸಲಾಗಿತ್ತು. ಸುಮಾರು 90 ಮೀಟರ್ ಎತ್ತರದಿಂದ ಕಾವೇರಿಯು ಇಲ್ಲಿ ಧುಮ್ಮಿಕ್ಕುತ್ತದೆ ಎಂಬುವುದು ವಿಶೇಷ.
ಇದನ್ನೂ ಓದಿ: Karnataka Assembly Elections: ಸಕ್ಕರೆ ನಾಡಿನ ಅಧಿಪತಿ ಆಗೋರು ಯಾರು? ಮಂಡ್ಯದಲ್ಲಿ ಯಾರೆಲ್ಲಾ ಕಣಕ್ಕೆ?
ರಾಜಕೀಯವಾಗಿ ಹೇಳುವುದಾದರೆ ಹಿರಿಯ ಗಾಂಧಿವಾಧಿ ಹಾಗೂ ರಾಜಕಾರಣಿ, ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರು ರಾಜಕೀಯವಾಗಿ ಗಟ್ಟಿ ನೆಲೆ ಕಂಡುಕೊಂಡ ಕ್ಷೇತ್ರ ಈ ಮಳವಳ್ಳಿ. 1962ರಲ್ಲಿ ಮೊದಲ ಬಾರಿಗೆ ಜಿ.ಮಾದೇಗೌಡರು ಮಳವಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. 1957 ರಿಂದ ಈವರೆಗೆ ನಡೆದ ಚುನಾವಣೆಯಲ್ಲಿ ಕೇವಲ 1962ರ ಎಲೆಕ್ಷನ್ ಹೊರತುಪಡಿಸಿದರೆ ಎಲ್ಲಾ ಚುನಾವಣೆಯಲ್ಲಿ ಮಳವಳ್ಳಿ ಮೀಸಲು ಕ್ಷೇತ್ರವಾಗಿದೆ.
ರಾಜಕೀಯ ಹಿನ್ನೋಟ
ಮೈಸೂರು ಪ್ರಾಂತ್ಯದ ಭಾಗವಾಗಿದ್ದಾಗ ಮಳವಳ್ಳಿ ವಿಧಾನಸಭಾ ಕ್ಷೇತ್ರ ಎರಡು ಸ್ಥಾನಗಳನ್ನು ಹೊಂದಿತ್ತು. ಒಂದು ಸಾಮಾನ್ಯ ಕ್ಷೇತ್ರವಾದರೆ ಮತ್ತೊಂದು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿತ್ತು. ಆದರೆ 1962ರ ವೇಳೆಗೆ ಕಿರುಗಾವಲು ಕ್ಷೇತ್ರವನ್ನು ರಚಿಸಿ ಸಾಮಾನ್ಯ ಕ್ಷೇತ್ರವನ್ನಾಗಿ ಮಾಡಿದರೆ, ಮಳವಳ್ಳಿಯನ್ನು ಮೀಸಲು ಸ್ಥಾನವನ್ನಾಗಿ ಉಳಿಸಿಕೊಳ್ಳಲಾಯಿತು. ಇನ್ನು 1952ರ ಮೊದಲ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನವನ್ನು ಕಿಸಾನ್ ಮಜ್ದೂರ್ ಪಕ್ಷದಿಂದ ಬಿ.ಪಿ ನಾಗರಾಜ ಮೂರ್ತಿ ಗೆದ್ದಿದ್ದರೆ, ಮೀಸಲು ಸ್ಥಾನದಿಂದ ಡಾ.ಬಿ.ಆರ್ ಅಂಬೇಡ್ಕರ್ ಸ್ಥಾಪಿಸಿದ್ದ ಶೆಡ್ಯೂಲ್ ಕಾಸ್ಟ್ ಫೆಡರೇಷನ್ ಪಕ್ಷದಿಂದ ಎನ್.ಚಿಕ್ಕಲಿಂಗಯ್ಯ ಗೆಲುವು ಸಾಧಿಸುತ್ತಾರೆ.
ನಾಲ್ಕನೇ ಬಾರಿ ಗೆದ್ದ ಎಂ.ಮಲ್ಲಿಕಾರ್ಜುನ ಸ್ವಾಮಿ
1972ರಲ್ಲೂ ಕಾಂಗ್ರೆಸ್‌ನಿಂದ ಕಣಕ್ಕಿಳಿದ ಎಂ.ಮಲ್ಲಿಕಾರ್ಜುನ ಸ್ವಾಮಿ ನಾಲ್ಕನೇ ಬಾರಿ ಗೆಲುವಿನ ನಗೆ ಬೀರುತ್ತಾರೆ. ಅಲ್ಲದೇ ಗ್ರಾಮೀಣಾಭಿವೃದ್ದಿ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಸ್ಥಾನವನ್ನೂ ಅಲಂಕರಿಸುತ್ತಾರೆ. 1978ರಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷವು ಎಂ.ಮಲ್ಲಿಕಾರ್ಜುನ ಸ್ವಾಮಿಗೆ ಟಿಕೆಟ್ ನೀಡುತ್ತದೆ. ಈ ಸಂದರ್ಭದಲ್ಲಿ ಎಂ.ಮಲ್ಲಿಕಾರ್ಜುನ ಸ್ವಾಮಿ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ. ಆದರೆ ಮತಗಳ ಹಂಚಿಕೆಯಿಂದ ಜನತಾ ಪಕ್ಷದ ಕೆ.ಎಲ್ ಮರಿಸ್ವಾಮಿ ಗೆಲುವು ಕಾಣುತ್ತಾರೆ. 1983ರ ಚುನಾವಣೆಯಲ್ಲಿ ಯುವ ಮುಖಂಡ ಬಿ.ಸೋಮಶೇಖರ್ ಜನತಾ ಪಕ್ಷದಿಂದ ಕಣಕ್ಕಿಳಿದು ಗೆಲುವು ಸಾಧಿಸುತ್ತಾರೆ. 1985ರ ವೇಳೆಗೆ ಮತ್ತೆ ಜನತಾ ಪಕ್ಷದಿಂದ ಕಣಕ್ಕಿಳಿದ ಸೋಮಶೇಖರ್ ಕಾಂಗ್ರೆಸ್ ಪಕ್ಷದ ಹೆಚ್.ಡಿ ಅಮರನಾಥ್‌ರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
1989ರ ಚುನಾವಣೆಯಲ್ಲಿ ಬಿ.ಸೋಮಶೇಖರ್ ಜನತಾದಳದಿಂದ ಸ್ಪರ್ಧಿಸುತ್ತಾರೆ. ಆದರೆ ಎದುರಾಳಿಯಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಪಕ್ಷದ ಮಲ್ಲಾಜಮ್ಮ ಸೋಮಶೇಖರ್ರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗುತ್ತಾರೆ. 1994ರಲ್ಲಿ ನಡೆಯುವ ಚುನಾವಣೆಯಲ್ಲಿ ಜನತಾದಳದಲ್ಲಿದ್ದ ಸೋಮಶೇಖರ್ ಮತ್ತೆ ಗೆಲುವಿನ ಹಳಿಗೆ ಮರಳುತ್ತಾರೆ. 1999ರ ಚುನಾವಣೆಯಲ್ಲಿ ಜೆಡಿಯು ಪಕ್ಷದಿಂದ ಕಣಕ್ಕಿಳಿದ ಬಿ.ಸೋಮಶೇಖರ್ ಮತ್ತೆ ಗೆಲುವು ಸಾಧಿಸುತ್ತಾರೆ. 2004ರ ವೇಳೆಗೆ ಡಾ.ಕೆ ಅನ್ನದಾನಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್‌ನಿಂದ ಪಿ.ಎಂ ನರೇಂದ್ರ ಸ್ವಾಮಿ ಅಭ್ಯರ್ಥಿಯಾಗುತ್ತಾರೆ. ಈ ಚುನಾವಣೆ ಮೂಲಕ ಅನ್ನದಾನಿ ಮೊದಲ ಬಾರಿ ಗೆಲುವು ಸಾಧಿಸುತ್ತಾರೆ.
ಮತ್ತೆ ಕಣಕ್ಕಿಳಿದ ಅನ್ನದಾನಿ
2008ರಲ್ಲಿ ಜೆಡಿಎಸ್‌ನಿಂದ ಅನ್ನದಾನಿ ಮತ್ತೆ ಕಣಕ್ಕಿಳಿದರೆ, ಅತ್ತ ಬಿ.ಸೋಮಶೇಖರ್‌ರವರು ಮತ್ತೆ ಜೆಡಿಯುನಿಂದ ಸ್ಪರ್ಧಿಸುತ್ತಾರೆ. ಅತ್ತ ನರೇಂದ್ರಸ್ವಾಮಿಯವರು ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಅಂದು ಪಿ.ಎಂ ನರೇಂದ್ರ ಸ್ವಾಮಿಯವರು 45,288 ಮತಗಳನ್ನು ಪಡೆದು ಜಯಕಾಣುತ್ತಾರೆ. ಬಳಿಕ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಪಿ.ಎಂ ನರೇಂದ್ರ ಸ್ವಾಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗುತ್ತಾರೆ. 2013ರ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್ ಪಾಳಯಕ್ಕೆ ಸೇರಿದ ಅವರು ಜೆರಡಿಎಸ್ ಅಭ್ಯರ್ಥಿ ಕೆ. ಅನ್ನದಾನಿ ವಿರುದ್ಧ ಮತ್ತೆ ಗೆಲುವಿನ ನಗೆ ಬೀರುತ್ತಾರೆ. 2018ರ ಚುನಾವಣೆಯ ಸಮಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಒಕ್ಕಲಿಗರ ಪರ ಅಲೆಯಲ್ಲಿ ಅನ್ನದಾನಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ವಿಜಯದ ನಗೆ ಬೀರುತ್ತಾರೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕರಾಗಿರುವ ಅನ್ನದಾನಿಯವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಹಾಗೂ ಬಿಜೆಪಿ ಈ ಅವಕಾಶವನ್ನು ಬಳಸಿಕೊಂಡು ಲಾಭ ಪಡೆಯುವ ಲೆಕ್ಕಾಚಾರದಲ್ಲಿವೆ.
ಜೆಡಿಎಸ್: ಆಡಳಿತ ವಿರೋಧಿ ಅಲೆ ಇದ್ದರೂ ಜೆಡಿಎಸ್ ಹಾಲಿ ಶಾಸಕ ಅನ್ನದಾನಿ ಅವರಿಗೆ ಮತ್ತೆ ಟಿಕೆಟ್ ಘೋಷಿಸಿದೆ.
ಕಾಂಗ್ರೆಸ್: ಎರಡು ಬಾರಿ ಶಾಸಕರಾಗಿರುವ, ಒಮ್ಮೆ ಸಚಿವರಾಗಿರುವ ಪಿ.ಎಂ ನರೇಂದ್ರ ಸ್ವಾಮಿ ಈ ಬಾರಿ ಕಾಂಗ್ರೆಸ್ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮಾಜಿ ಶಾಸಕಿ ಮಲ್ಲಾಜಮ್ಮ ಹಾಗೂ ಆದರ್ಶ ಶಿಕ್ಷಣ ಸಂಸ್ಥೆಯ ಡಾ.ಮೂರ್ತಿ ಕೂಡಾ ಕೈ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಬಿಜೆಪಿ: ಮಳವಳ್ಳಿಯಲ್ಲಿ ಬಿಜೆಪಿಗೆ ಈವೆಗೂ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಿದ್ದರೂ ಪಕ್ಷದ ಟಿಕೆಟ್‌ಗಾಗಿ ಕ್ಷೇತ್ರದಲ್ಲಿ ಮೂವರು ಪೈಪೋಟಿ ನಡೆಸುತ್ತಿದ್ದಾರೆ. ಭೋವಿ ಸಮುದಾಯದ ಜಿ.ಮುನಿರಾಜು, ಮಾಜಿ ಸಚಿವ ಬಿ.ಸೋಮಶೇಖರ್ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಯಮದೂರು ಸಿದ್ಧರಾಜು ಇವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.
ಜಾತಿ ಲೆಕ್ಕಾಚಾರ:
ಒಟ್ಟು 2,38,578 ಮತದಾರರಿರುವ ಮಳವಳ್ಳಿ ಕ್ಷೇತ್ರದಲ್ಲಿ 1,19,733 ಪುರುಷ ಮತದಾರರಿದ್ದು, 1,18,830 ಮಹಿಳಾ ಮತದಾರರಿದ್ದಾರೆ.
ಲಿಂಗಾಯತ | 29,000 |
ಮುಸ್ಲಿಂ | 12,000 |
ಎಸ್ಸಿ | 62,000 |
ಎಸ್ಟಿ | 6,000 |
ಕುರುಬ | 19,000 |
ಒಕ್ಕಲಿಗ | 70,000 |
ಮಡಿವಾಳ | 4,000 |
ಇತರೆ | 21,000 |
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ಡಾ. ಕೆ. ಅನ್ನದಾನಿ, ಕಾಂಗ್ರೆಸ್ನ ಪಿ. ಎಂ. ನರೇಂದ್ರ ಸ್ವಾಮಿ ಅವರನ್ನು 26,760 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಡಾ. ಕೆ. ಅನ್ನದಾನಿ | 1,03,038 |
ಕಾಂಗ್ರೆಸ್ | ಪಿ. ಎಂ. ನರೇಂದ್ರ ಸ್ವಾಮಿ | 76,278 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ