ಬೆಂಗಳೂರಿನ (Bengaluru) ಪ್ರಮುಖ ವಿಧಾನಸಭಾ ಕ್ಷೇತ್ರಗಳ ಪೈಕಿ ಮಹದೇವಪುರ ವಿಧಾನಸಭಾ ಕ್ಷೇತ್ರವೂ (Mahadevapura assembly constituency) ಒಂದು. ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾದ ಮಹದೇವಪುರ ಬಿಜೆಪಿಯ (BJP) ಭದ್ರಕೋಟೆ ಎಂದರೆ ತಪ್ಪಾಗಲಾರದು. ಸದ್ಯ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ (Aravinda Limbavali) ಅಲ್ಲಿನ ಶಾಸಕರು. 2008, 2013 ಹಾಗೂ 2018ರಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಅರವಿಂದ ಲಿಂಬಾವಳಿ, ಈ ಹಿಂದೆ ಸಚಿವರಾಗಿಯುೂ (Minister) ಅನುಭವ ಪಡೆದವರು. ಹಲವು ಬಹುರಾಷ್ಟ್ರೀಯ ಕಂಪನಿಗಳನ್ನು (MNC) ತಮ್ಮ ಮಡಿಲಲ್ಲಿ ಇಟ್ಟುಕೊಂಡಿರುವ ಮಹದೇವಪುರ, ಅನೇಕ ಸಮಸ್ಯೆಗಳಿಂದಲೂ ನಲುಗುತ್ತಿದೆ. 3 ಬಾರಿ ಶಾಸಕರಾಗಿ, ಸಚಿವರೂ ಆಗಿದ್ದ ಅರವಿಂದ ಲಿಂಬಾವಳಿ ಸಮಸ್ಯೆ ಪರಿಹರಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಅಂತ ಅವರ ಅನುಯಾಯಿಗಳು ಹೇಳಿದ್ರೆ, ಸಚಿವರಾಗಿದ್ದಾಗಲೂ ಅವರು ಸಮಸ್ಯೆ ಬಗೆಹರಿಸಿಲ್ಲ ಎನ್ನುವ ಆರೋಪ ವಿರೋಧಿಗಳದ್ದು. ಈ ನಡುವೆ ಈ ಬಾರಿ ಅಲ್ಲಿನ ಮತದಾರರು (Voters) ಏನು ಹೇಳುತ್ತಾರೆ ಎಂಬ ಕುತೂಹಲ ತೀವ್ರವಾಗಿದೆ.
ಮಹದೇವಪುರ ಕ್ಷೇತ್ರದ ಪರಿಚಯ
ಮಹದೇವಪುರ ಬೆಂಗಳೂರಿನ ಒಂದು ಪ್ರಮುಖ ಕ್ಷೇತ್ರಗಳ್ಲಲಿ ಒಂದಾಗಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು, ವಸತಿ ಅಭಿವೃದ್ಧಿಯ ವಿಷಯದಲ್ಲಿ ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರದೇಶದಲ್ಲಿ ಪ್ರಮುಖ ಶಾಲೆಗಳು, ಶಾಪಿಂಗ್ ಮಾಲ್‌ಗಳು, ಶೋರೂಮ್‌ಗಳು ಬಂದಿವೆ. ಜೊತೆಗೆ ಬಹುರಾಷ್ಟ್ರಿಯ ಕಂಪನಿಗಳು ಹೆಚ್ಚಾಗಿ ಅಲ್ಲಿ ನೆಲೆಕಂಡುಕೊಂಡಿವೆ.
ಇನ್ನು ಈ ಮೀಸಲು ಕ್ಷೇತ್ರದಲ್ಲಿ ಬಹುರಾಷ್ಟೀಯ ಕಂಪನಿಗಳು, ಹೊರ ವರ್ತುಲ ರಸ್ತೆ, ಸುದ್ದಿಗೆ ಗ್ರಾಸವಾಗಿರುವ ಕೆರೆಗಳು, ಪ್ರಮುಖ ಆಸ್ಪತ್ರೆಗಳು ಸೇರಿದಂತೆ ವೈವಿಧ್ಯ ಮಯ ತಾಣಗಳಿವೆ. ಬಿಬಿಎಂಪಿಯ ಹೂಡಿ, ಗರುಡಾಚಾರ್ ಪಾಳ್ಯ, ಕಾಡುಗೋಡಿ, ಹಗದೂರು, ದೊಡ್ಡನೆಕ್ಕುಂಡಿ, ಮಾರತ್ ಹಳ್ಳಿ, ವರ್ತೂರು, ಬೆಳ್ಳಂದೂರು ಸೇರಿದಂತೆ 8 ವಾರ್ಡ್‌ಗಳು ಇದರ ವ್ಯಾಪ್ತಿಯಲ್ಲಿವೆ.
ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ
ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಮಹದೇವಪುರದಲ್ಲಿ ಅರವಿಂದ ಲಿಂಬಾವಳಿ ಅಧಿಕಾರದಲ್ಲಿದ್ದಾರೆ. 2008, 2013 ಹಾಗೂ 2018ರ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿ, ಹ್ಯಾಟ್ರಿಕ್ ಬಾರಿಸಿದ್ದಾರೆ. ಅರವಿಂದ ಲಿಂಬಾವಳಿ ಅವರು 2004 ರಲ್ಲಿ ವಿಧಾನ ಪರಿಷತ್ ಸದಸ್ಯರಾದರು ಮತ್ತು ರಾಜೀನಾಮೆ ನೀಡಿ 2008ರಲ್ಲಿ ಮಹದೇವಪುರದಿಂದ ಚುನಾವಣೆಗೆ ಸ್ಪರ್ಧಿಸಿದರು.
ಎಬಿವಿಪಿಯಿಂದ ಸಚಿವ ಸಂಪುಟದವರೆಗೆ
ಎಬಿವಿಪಿ ಸಂಘಟನೆಯ ಮೂಲಕ ಬೆಳೆದವರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಸಾಧನೆ ಮಾಡಿದ್ದಾರೆ. 2008ರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪನವರ ಸಂಪುಟದಲ್ಲಿ ಉನ್ನತ ಶಿಕ್ಷಣ ಮತ್ತು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಹೊಂದಿದ್ದರು. ಸರಕಾರಿ ಶಾಲೆ ಕಟ್ಟಡ, ಅಂಗನವಾಡಿ, ಗ್ರಂಥಾಲಯ, ವ್ಯಾಯಾಮ ಶಾಲೆ, ಕ್ರೀಡಾಂಗಣ ಅಭಿವೃದ್ಧಿ ಇವರ ಸಾಧನೆ ಎನ್ನಲಾಗಿದೆ.
ಈ ಬಾರಿ ಸುಗಮವೇ ಲಿಂಬಾವಳಿ ಹಾದಿ?
ಮೂರು ಬಾರಿ ಶಾಸಕರಾಗಿ ಹ್ಯಾಟ್ರಿಕ್ ಬಾರಿಸಿದ ಅರವಿಂದ ಲಿಂಬಾವಳಿ ಹಾದಿ ಈ ಬಾರಿ ಸುಗಮವಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿಂದೆ ಕಳೆದ ಬಾರಿ ಮಳೆ ಅನಾಹುತವಾಗಿದ್ದಾಗ ವೈಟ್ ಫೀಲ್ಡ್ ಕೋಡಿ ಸರ್ಕಲ್ ಬಳಿಯ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಪರಿಶೀಲನೆ ನಡೆಸಿದ್ದರು‘. ರಾಜಕಾಲುವೆ ಹೊಂದಿಕೊಂಡಿದ್ದ ಕಟ್ಟಡದ ಕೆಲ ಭಾಗವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸ್ಪಷ್ಟನೆ ನೀಡಲು ಮಹಿಳೆ ರುತ್ ಸಗಾಯಿ ಮೇರಿ ಅಮೀಲಾ ಎಂಬುವವರು ಮುಂದಾದಾಗ ಆಕ್ರೋಶ ಗೊಂಡ ಶಾಸಕರು ಮಹಿಳೆಯ ಕೈಯಿಂದ ದಾಖಲೆ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಇದು ವಿಪಕ್ಷ ಅಷ್ಟೇ ಅಲ್ಲ, ಬಿಜೆಪಿ ನಾಯಕರ ಕೆಂಗಣ್ಣಿಗೂ ಕಾರಣವಾಗಿತ್ತು. ಅದಕ್ಕೂ ಮುನ್ನ ಲಿಂಬಾವಳಿ ಪುತ್ರಿ ಟ್ರಾಫಿಕ್ ಪೊಲೀಸರಿಗೆ ಆವಾಜ್ ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು.
ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ಟಿಕೆಟ್?
ಪ್ರಸ್ತುತ ಶಾಸಕ ಅರವಿಂದ್ ಲಿಂಬಾವಳಿ ಅವರು ಬಿಜೆಪಿಯಿಂದ ಈ ಬಾರಿಯೂ ಟಿಕೆಟ್ ಬಯಸಿದ್ದಾರೆ. ಅತ್ತ ಕಾಂಗ್ರೆಸ್‌ನಲ್ಲಿ ಅಲ್ಲಿನ ಮುಖಂಡರಾದ ನಲ್ಲೂರಹಳ್ಳಿ ನಾಗೇಶ್ ಹಾಗೂ ಎಸಿ ಶ್ರೀನಿವಾಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ಸ್ಥಳೀಯ ನಾಯಕ ಮುನಿವೆಂಕಟಪ್ಪ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ.
ಕ್ಷೇತ್ರದ ಮತದಾರರ ವಿವರ
ಮಹದೇವಪುರದಲ್ಲಿ ಒಟ್ಟೂ ಒಟ್ಟು ಮತದಾರರು – 4,70,878 ಮತದಾರರಿದ್ದಾರೆ. ಈ ಪೈಕಿ 2,15,000 ರಷ್ಟಿರುವ ಎಸ್‌ಸಿಎಸ್‌ಟಿ ಮತಗಳೇ ನಿರ್ಣಾಯಕವಾಗಿದೆ. ಇನ್ನು ಒಬಿಸಿ – 95,000, ಒಕ್ಕಲಿಗ – 94,000, ಮುಸ್ಲಿಂ – 45,000 ಹಾಗೂ ಇತರೇ – 20,000 ಮತಗಳಿವೆ.
ಇದನ್ನೂ ಓದಿ: Karnataka Assembly Elections: ವಿಜ್ಞಾನಿ ನೆಲೆಸಿದ್ದ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಹೇಗಿದೆ ಸಿವಿರಾಮನ್ ನಗರದ ಚಿತ್ರಣ?
ದೊಡ್ಡ ಕ್ಷೇತ್ರದಲ್ಲಿ ಸಮಸ್ಯೆಗಳು ಹಲವು
ಮಹದೇವಪುರ ಕ್ಷೇತ್ರವು ವೈಟ್‌ಫೀಲ್ಡ್, ವರ್ತೂರು ಮತ್ತು ಬೆಳ್ಳಂದೂರು ಮುಂತಾದ ಮೂಲಸೌಕರ್ಯ ಕೊರತೆಯಿರುವ, ಹೊಸದಾಗಿ ನಗರೀಕರಣಗೊಂಡ ಪ್ರದೇಶಗಳನ್ನು ಒಳಗೊಂಡಿದೆ. ಇದು ಕಸ ಸಂಗ್ರಹಿಸುವ ಕುಖ್ಯಾತ ಮಂಡೂರು ಪ್ರದೇಶವನ್ನು ಸಹ ಒಳಗೊಂಡಿದೆ, ಅಲ್ಲಿ ಬಹಳ ಹಿಂದೆಯೇ ಬೆಂಗಳೂರಿನ ಕಸವನ್ನು ಸುರಿಯಲಾಗುತ್ತಿತ್ತು. ಇನ್ನು ಮಹದೇವಪುರ ಕ್ಷೇತ್ರ ತೀವ್ರ ನೀರಿನ ಕೊರತೆ ಇದೆ. ಒಳಚರಂಡಿ ಜಾಲಗಳ ಕೊರತೆಯು ಕಲುಷಿತ ಕೆರೆಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮತ್ತು ಹೆಚ್ಚಿನ ಮಟ್ಟದ ಮಾಲಿನ್ಯ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ