ಮಡಿಕೇರಿ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಮೇಲೆ ಸದ್ಯ ಇಡೀ ದೇಶದ ಚಿತ್ತ ನೆಟ್ಟಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡರೆ ಈ ಚುನಾವಣೆ ಬಹಳ ಮಹತ್ವ ಪಡೆದಿದೆ. ಇನ್ನು ಕೆಲ ತಿಂಗಳಲ್ಲಿ ನಡೆಯಲಿರುವ ಅಸೆಂಬ್ಲಿ ಎಲೆಕ್ಷನ್ಗೆ ರಾಜಕೀಯ ನಾಯಕರು ಭರ್ಜರಿ ತಯಾರಿ ನಡೆಸಿದ್ದಾರೆ. ಈ ನಡುವೆ ಪ್ರಚಾರ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ರಾಜಕೀಯ ಮುಖಂಡರ ಪರಸ್ಪರ ರ್ವಾದಾಳಿ ಒಂದೆಡೆಯಾದರೆ, ಪಕ್ಷಾಂತರವಾಗುವ ಸುಳಿವು ಮತ್ತೊಂದೆಡೆಯಾಗಿದೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಕೊಡಗು ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದ (Madikeri Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕಾಫಿನಾಡು ಎಂದೇ ಖ್ಯಾತಿ ಗಳಿಸಿರುವ ಮಡಿಕೇರಿ ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಒಂದು. ಅಲ್ಲದೇ ಇದೊಂದು ತಾಲೂಕು ಮತ್ತು ಜಿಲ್ಲಾ ಕೇಂದ್ರವೂ ಹೌದು. ಮಡಿಕೇರಿಯನ್ನು ಮೊದಲು ಲಿಂಗರಾಜ ಮಹಾರಾಜ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಹೀಗಿರುವಾಗ ಅವರು ಇಲ್ಲಿ ಕಟ್ಟಿಸಿದ ಓಂಕಾರೇಶ್ವರ ದೇವಸ್ಥಾನ, ರಾಜಸೀಟ್, ಅರಮನೆಗಳು ಇಂದಿಗೂ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳಾಗಿ ಉಳಿದಿವೆ. ಅಬ್ಬೀ ಜಲಪಾತ, ಮಡಿಕೇರಿಯ ಮಂಜು, ಮಡಿಕೇರಿ ದಸರಾ, ತಲ ಕಾವೇರಿ, ಭಾಗಮಂಡಲ, ಬೆಟ್ಟ ಗುಡ್ಡಗಳಿಂದ ಕೂಡಿದ ಚಾರಣ ತಾಣ ಮಂದಲ್ ಪಟ್ಟಿ, ಮುಗಿಲು ಪೇಟೆ ಹೀಗೆ ಹಲವು ಸ್ಥಳಗಳು ಮಡಿಕೇರಿಯನ್ನು ತಮ್ಮತ್ತ ಮತ್ತೆ ಮತ್ತೆ ಸೆಳೆಯುತ್ತವೆ. ಪ್ರವಾಸೋದ್ಯಮದ ನಕಾಶೆಯಲ್ಲಿ ಮಡಿಕೇರಿ ಮತ್ತು ಕೊಡಗಿಗೆ ವಿಶಿಷ್ಟ ಸ್ಥಾನಮಾನವಿದೆ.
ಇವತ್ತಿಗೆ ಕೊಡಗು ದಕ್ಷಿಣ ಭಾರತದಲ್ಲೇ ಪ್ರಮುಖ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಇಲ್ಲಿನ ನಿಸರ್ಗವೇ ಕಾರಣ. ಪ್ರಸ್ತುತ ಕೊಡಗಿನಲ್ಲಿರುವುದು ಎರಡೇ ವಿಧಾನಸಭಾ ಕ್ಷೇತ್ರ. ಒಂದು ಮಡಿಕೇರಿ, ಇನ್ನೊಂದು ವಿರಾಜಪೇಟೆ. ಈ ಹಿಂದೆ ಇಲ್ಲಿ ಸೋಮವಾರ ಪೇಟೆ ಅಸೆಂಬ್ಲಿ ಸೀಟ್ ಇತ್ತಾದರೂ, 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ರದ್ದಾಯಿತು. ಇಲ್ಲಿಂದಲೇ ಗೆದ್ದಿದ್ದ ಆರ್. ಗುಂಡೂರಾವ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ಕ್ಷೇತ್ರದಲ್ಲಿ ಗುಂಡೂರಾವ್ ಮತ್ತು ಬಿಎ ಜೀವಿಜಯ ನಡುವಿನ ರಾಜಕೀಯ ಕದನ ರೋಚಕ ರೂಪ ಪಡೆದುಕೊಳ್ಳುತ್ತಿತ್ತು. ಆದರೀಗ ಈ ಕ್ಷೇತ್ರ ಇಂದು ನೆನಪು ಮಾತ್ರ.
ಇಲ್ಲಿನ ರಾಜಕೀಯ ಇತಿಹಾಸದ ಗಮನಿಸಿದರೆ ಜೆಡಿಎಸ್ನ ನಾಯಕ ಹಾಗೂ ಮಾಜಿ ಸಚಿವ ಎಂಸಿ ನಾಣಯ್ಯ 1978ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಎಕೆ ಸುಬ್ಬಯ್ಯರನ್ನು ಸೋಲಿಸಿದ್ದರು. ಇದರ ಬೆನ್ನಲ್ಲೇ ಅಂದರೆ 1980ರಲ್ಲಿ ಇಲ್ಲಿ ಬಿಜೆಪಿಯಾಟ ಆರಂಭವಾಯಿತು. 1983ರಲ್ಲಿ ಚುನಾವಣೆಯಲ್ಲಿ ಎಂ.ಸಿ ನಾಣಯ್ಯಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ ಮುಂದೆ ಅವರು ವಿಧಾನ ಪರಿಷತ್ ಸದಸ್ಯರಾದರು. ಇನ್ನು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎಂ.ಎಂ ನಾಣಯ್ಯ ಇಲ್ಲಿ ಗೆದ್ದಾಗ ಎರಡನೇ ಸ್ಥಾನದಲ್ಲಿ ಬಿಜೆಪಿ ಬಂದು ಕೂತಿತ್ತು. ಬಿಜೆಪಿ ಅಭ್ಯರ್ಥಿ ಎಂ.ಎಂ ಚೆಂಗಪ್ಪರನ್ನು ಅಂದು ನಾಣಯ್ಯ ಕೇವಲ 5 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
1985ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಡಿ.ಎ. ಚಿನ್ನಪ್ಪ ಇಲ್ಲಿ ಕಣಕ್ಕಿಳಿದು ಗೆದ್ದರು. 1989ರಲ್ಲಿಯೂ ಫಲಿತಾಂಶ ಪುನರಾವರ್ತನೆಯಾಯಿತು. ಆದರೆ ಅಷ್ಟರಲ್ಲೇ ಬಿಜೆಪಿ ತನ್ನ ಮತ ಗಳಿಕೆ ಗಣನೀಯವಾಗಿ ಹೆಚ್ಚಿಸಿಕೊಂಡಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡಿತ್ತು. ನಿರೀಕ್ಷೆಯಂತೆ 1994ರಲ್ಲಿ ಕೊಡಗಿನಲ್ಲಿ ಬಿಜೆಪಿ ತನ್ನ ಖಾತೆ ತೆರೆಯಿತು. ಅಂದು ಇಲ್ಲಿನ ಮೂರೂ ಕ್ಷೇತ್ರಗಳೂ ಕಮಲ ತೆಕ್ಕೆಗೆ ಜಾರಿದ್ದವು. ಮಡಿಕೇರಿಯಲ್ಲಿ ದಂಬೆಕೋಡಿ ಸುಬ್ಬಯ್ಯ 11 ಸಾವಿರ ಮತಗಳಿಂದ ಜನತಾದಳದ ಟಿಪಿ ರಮೇಶ್ ರನ್ನು ಸೋಲಿಸಿದರು.
1999ರಲ್ಲಿ ದಂಬೆಕೋಡಿ ಸುಬ್ಬಯ್ಯಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿದ ಸುಬ್ಬಯ್ಯರನ್ನು ಕಾಂಗ್ರೆಸ್ ನ ಎಂ.ಎಂ ನಾಣಯ್ಯ 5 ಸಾವಿರ ಮತಗಳ ಅಂತರದಿಂದ ಸೋಲಿಸಿದರು. 2004ರಲ್ಲಿ ಇಲ್ಲಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆಜಿ ಬೋಪಯ್ಯ ಕ್ಷೇತ್ರವನ್ನು ಮತ್ತೆ ಕೇಸರಿ ಪಕ್ಷದ ತೆಕ್ಕೆಗೆ ತಂದರು. ಈ ಬಾರಿ ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧಿಸಿದರೂ ದಂಬೆಕೋಡಿ ಸುಬ್ಬಯ್ಯ ಸೋಲನುಭವಿಸಿದರು. 2008 ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸೋಮವಾರಪೇಟೆಯಲ್ಲಿ ಸ್ಪರ್ಧಿಸುತ್ತಿದ್ದ ಜಳೇ ತಲೆಗಳಾದಕಾಂಗ್ರೆಸ್ ನ ಬಿಎ ಜೀವಿಜಯ ಹಾಗೂ ಅಪ್ಪಚ್ಚು ರಂಜನ್ ಮಡಿಕೇರಿಗೆ ಶಿಫ್ಟ್ ಆದರು.
ಹೀಗಿರುವಾಗ 2008ರ ಮಡಿಕೇರಿ ಚುನಾವಣೆ ಕುತೂಹಲ ಮೂಡಿಸಿತ್ತು. ಈ ಬಾರಿ ಬಿಜೆಪಿಯ ಅಪ್ಪಚ್ಚು ರಂಜನ್ ಕಾಂಗ್ರೆಸ್ ನ ಜೀವಿಜಯರಿಗೆ 7 ಸಾವಿರ ಮತಗಳ ಅಂತರದಿಂದ ಸೋಲಿಸಿ ಮೂರನೇ ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರು. 2013ರಲ್ಲಿ ಫಲಿತಾಂಶ ಪುನರಾವರ್ತನೆಯಾಯಿತು. ಆದರೆ ಜೀವಿಜಯ ಜೆಡಿಎಸ್ ನಿಂದ ಸ್ಪರ್ಧಿಸಿ 4 ಸಾವಿರ ಮತಗಳಿಂದ ವಿರೋಚಿತ ಸೋಲುಂಡರು.
ಇನ್ನು ಕಳೆದ ಬಾರಿ 2018ರಲ್ಲಿ ಡಿವೈಎಸ್ಪಿ ಎಂಕೆ ಗಣಪತಿ ಪ್ರಕರಣ, ಟಿಪ್ಪು ಜಯಂತಿ ಆಚರಣೆ ಕೇಸರಿ ಪಕ್ಷಕ್ಕೆ ಮಡಿಕೇರಿಯಲ್ಲಿ ಲಾಭ ತಂದುಕೊಟ್ಟಿತ್ತು. ಅಪ್ಪಚ್ಚು ರಂಜನ್ ಬರೋಬ್ಬರಿ ನಾಲ್ಕನೇ ಬಾರಿ ಗೆಲುವು ಸಾಧಿಸಿ ಈ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸಿದ್ದಾರೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಮಡಿಕೇರಿ ಕ್ಷೇತ್ರವನ್ನು ತನ್ನ ಕೋಟೆಯನ್ನಾಗಿಸಿರುವ ಬಿಜೆಪಿಗೆ ಈ ಬಾರಿ ಕಠಿಣ ಸ್ಪರ್ಧೆ ಸಿಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣ ಇಲ್ಲಿ ಸದ್ದು ಮಾಡಿದ್ದು, ಕಾಂಗ್ರೆಸ್ ಇದರ ಪ್ರಯೋಜನ ಪಡೆದುಕೊಳ್ಳುವಲ್ಲಿ ಯಾವ ಎಡವಟ್ಟೂ ಮಾಡಿಕೊಳ್ಳುವುದಿಲ್ಲ ಎಂಬುವುದು ಸತ್ಯವಾದರೂ, ಅತ್ತ ಟಿಪ್ಪು ಜಯಂತಿ ವಿವಾದ ಕೊಂಚ ಹೊಡೆತ ನೀಡುವ ಸಾಧ್ಯತೆ ಇದೆ. ಅಷ್ಟಕ್ಕೂ ಈ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಆಕಾಂಕ್ಷಿಗಳು ಯಾರು ಎಂದು ನೋಡುವುದಾದರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಯಾರು?
* ಚಂದ್ರಮೌಳಿ: ಕಾಂಗ್ರೆಸ್ನಿಂದ ಈ ಬಾರಿ ಚಂದ್ರಮೌಳಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
* ಜೀವಿಜಯ: ಈ ಹಿಂದೆ ಮಡಿಕೇರಿ ಕ್ಷೇತ್ರದಿಂದ ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸಿ, ಅಪ್ಪಚ್ಚು ರಂಜನ್ಗೆ ಕಠಿಣ ಸ್ಪರ್ಧೆ ಒಡ್ಡಿದ್ದ ಜಿ.ವಿಜಯ ಕೂಡಾ ಈ ಬಾರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಟಿಕೆಟ್ ಪಡೆಯುವ ರೇಸ್ನಲ್ಲಿದ್ದಾರೆ.
ಬಿಜೆಪಿಯಿಂದ ಯಾರೆಲ್ಲಾ ರೇಸ್ನಲ್ಲಿ?
* ಅಪ್ಪಚ್ಚು ರಂಜನ್: ಬಿಜೆಪಿಯಿಂದ ಹಾಲಿ ಶಾಸಕ ಅಪ್ಪುಚ್ಚು ರಂಜನ್ ಕಣಕ್ಕಿಳಿಯುವ ಸಾಧ್ಯತೆ ಅಧಿಕವಿದೆ.
* ಭಾರತೇಶ್: ಅಪ್ಪಚ್ಚು ರಂಜನ್ಗೆ ಟಿಕೆಟ್ ತಪ್ಪಿದರೆ ಬಿಜೆಪಿ ನಾಯಕ ಭರತೇಶ್ಗೆ ಸಿಗೋ ಸಾಧ್ಯತೆ ಇದೆ.
2018ರಲ್ಲಿ ಫಲಿತಾಂಶವೇನಾಗಿತ್ತು?2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್, ಕಾಂಗ್ರೆಸ್ನ ಜೀವಿಜಯ ಅವರನ್ನು ಬರೋಬ್ಬರಿ 43,700 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಬಿಜೆಪಿ | ಅಪ್ಪಚ್ಚು ರಂಜನ್ | 70631 |
ಜೆಡಿಎಸ್ | ಜೀವಿಜಯ | 54616 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ