ಮದ್ದೂರು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸ ಹೊಂದಿರುವ ಮದ್ದೂರು ವಿಧಾನಸಭಾ ಕ್ಷೇತ್ರದ (Melukote Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ ಏನು?
ಮಂಡ್ಯ ಜಿಲ್ಲೆ ಮದ್ದೂರು ಅನೇಕ ಕಾರಣಗಳಿಗೆ ಪ್ರಸಿದ್ಧ ಕ್ಷೇತ್ರ. ಇಲ್ಲಿನ ವಡೆ ಸಖತ್ ಫೇಮಸ್. 1938ರಲ್ಲಿ ಇಲ್ಲಿನ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹ, ಮೈಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನ ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಂತಹ ಭವ್ಯ ಇತಿಹಾಸ ಹೊಂದಿರುವ ಪ್ರದೇಶ. ಮಂಡ್ಯ ಜಿಲ್ಲೆಯ ಅತಿದೊಡ್ಡ ಕೈಗಾರಿಕಾ ಪ್ರದೇಶವೂ ಸೋಮನಹಳ್ಳಿಯಲ್ಲಿದೆ. ಗೆಜ್ಜಲಗೆರೆಯಲ್ಲಿ ಮತ್ತೊಂದು ಕೈಗಾರಿಕಾ ಪ್ರದೇಶ ಹಾಗೂ ಗ್ರಾನೈಟ್ ಕೈಗಾರಿಕೆ , ಗಾರ್ಮೆಂಟ್ಸ್ ಇದೆ.
ಇದನ್ನೂ ಓದಿ: Karnataka Assembly Elections: ಸಕ್ಕರೆ ನಾಡಿನ ಅಧಿಪತಿ ಆಗೋರು ಯಾರು? ಮಂಡ್ಯದಲ್ಲಿ ಯಾರೆಲ್ಲಾ ಕಣಕ್ಕೆ?
ಇದಲ್ಲದೆ, ಮದ್ದೂರು ಹಾಲು ಉತ್ಪಾದನಾ ಕ್ಷೇತ್ರದಲ್ಲೂ ಮುಂದಿದೆ. ಇನ್ನು 15 ವಿಧಾನಸಭಾ ಚುನಾವಣೆ ಹಾಗೂ ಎರಡು ಉಪಚುನಾವಣೆ ಸೇರಿ ಒಟ್ಟು 17 ಎಲೆಕ್ಷನ್ಗಳನ್ನು ಕಂಡಿರುವ ಮದ್ದೂರಿನಲ್ಲಿ 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರೆ ಸಾಧಿಸಿದ್ದಾರೆ; ಒಮ್ಮೆ ಸ್ವತಂತ್ರ ಅಭ್ಯರ್ಥಿ, ಮೂರು ಬಾರಿ ಜನತಾ ಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನು ಕಳೆದ ನಾಲದಕು ಚುನಾವಣೆಗಳಲ್ಲಿ ಇಲ್ಲಿ ಜೆಡಿಎಸ್ದ್ದೇ ದರ್ಬಾರ್.
ಮಂಚೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ
1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಳಿಗೌಡರಿಗೆ ಟಿಕೆಟ್ ನೀಡುತ್ತದೆ. ಇದರಿಂದ ನೊಂದ ಮಂಚೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆದರೆ ಗೆಲುವು ಬಿಳಿಗೌಡರ ಪಾಲಾಗುತ್ತದೆ. ಆದರೆ 1978ರ ಚುನಾವಣೆ ವೇಳೆಗೆ ಮಂಚೇಗೌಡರು ಜನತಾ ಪಕ್ಷದ ಅಭ್ಯರ್ಥಿಯಾಗಿ ಬಿಳಿಗೌಡರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. 1983ರ ಚುನಾವಣೆ ವೇಳೆಗೆ ಕಾಂಗ್ರೆಸ್ ಮಂಚೇಗೌಡರ ಮನವೊಲಿಸಿ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತದೆ. ನಿರೀಕ್ಷೆಯಂತೆ ಸ್ವತಂತ್ರ ಅಭ್ಯರ್ಥಿ ಚನ್ನೇಗೌಡರ ಎದುರು ಜಯ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ 1984ರಲ್ಲಿ ಅವರು ನಿಧನರಾದ ಕಾರಣ ಉಪಚುನಾವಣೆ ನಡೆಯುತ್ತದೆ. ಅವರ ಪತ್ನಿ ಜಯವಾಣಿ ಮಂಚೇಗೌಡರು ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸುತ್ತಾರೆ. ಆದರೆ 1985ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಜನತಾ ಪಕ್ಷದ ಬಿ.ಅಪ್ಪಾಜಿಗೌಡರ ಎದುರು ಸೋಲನುಭವಿಸುತ್ತಾರೆ.
ರಾಜ್ಯ ರಾಜಕಾರಣಕ್ಕೆ ಮರಳಿದ ಎಸ್.ಎಂ ಕೃಷ್ಣ
1989ರ ಚುನಾವಣೆ ವೇಳೆಗೆ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿದ ಎಸ್.ಎಂ ಕೃಷ್ಣ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ. ಅಲ್ಲದೇ ತನ್ನ ಎದುರಾಳಿಯನ್ನು ಸೋಲಿಸಿ ಎರಡನೇ ಬಾರಿ ಶಾಸಕರಾಗುತ್ತಾರೆ. ಅಲ್ಲದೆ ಉಪಮುಖ್ಯಮಂತ್ರಿ ಮತ್ತು ಸ್ಪೀಕರ್ ಹುದ್ದೆಯೂ ಅವರ ಪಾಲಾಗುತ್ತದೆ. ಆದರೆ 1994ರ ಚುನಾವಣೆಯಲ್ಲಿ ಮತ್ತೆ ಸೋಲುತ್ತಾರೆ. 1999ರ ವೇಳೆಗೆ ಎಸ್.ಎಂ ಕೃಷ್ಣ ಪಾಂಚಜನ್ಯ ಯಾತ್ರೆ ನಡೆಸಿ ಎದುರಾಳಿಗಳನ್ನು ಸೋಲಿಸುತ್ತಾರೆ. ಅಲ್ಲದೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ಡಿ. ಸಿ ತಮ್ಮಣ್ಣ ಎಂಟ್ರಿ
2004ರ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರಕ್ಕೆ ಡಿ. ಸಿ ತಮ್ಮಣ್ಣ ಎಂಟ್ರಿ ಕೊಡುತ್ತಾರೆ. ಅಷ್ಟರಲ್ಲಾಗಲೇ ಎಸ್ಎಂಕೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರಕ್ಕೆ ತೆರಳಿರುತ್ತಾರೆ. ಇಲ್ಲಿ ತಮ್ಮಣ್ಣ ಗೆಲುವು ಸುಲಭವಾಗಿರಲಿಲ್ಲ. ಆದರೆ ಎಚ್.ಡಿ ದೇವೇಗೌಡರು ತಮ್ಮ ಬೀಗರಾಗಿದ್ದ ತಮ್ಮಣ್ಣ ಗೆಲುವಿಗೆ ರಣತಂತ್ರ ಹೆಣೆಯುತ್ತಾರೆ. ಇದರ ಪರಿಣಾಮ ಎಂಬಂತೆ ಕೈ ನಾಯಕ ತಮ್ಮಣ್ಣ ಗೆದ್ದು ಬೀಗುತ್ತಾರೆ. 2008ರಲ್ಲಿ ಜೆಡಿಸ್ ಸೇರ್ಪಡೆಯಾದ ಎಂ.ಎಸ್ ಸಿದ್ಧರಾಜು ಗೆಲುವು ಸಾಧಿಸುತ್ತಾರೆ. ಆದರೆ ಶಾಸಕ ಎಂ.ಎಸ್ ಸಿದ್ಧರಾಜುರವರ ನಿಧನದಿಂದ ಅದೇ ವರ್ಷ ಉಪ ಚುನಾವಣೆ ಎದುರಾಗುತ್ತದೆ. ಅಷ್ಟರಲ್ಲಿ ತಮ್ಮಣ್ಣ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ. ಕಾಂಗ್ರೆಸ್ ಕೂಡಾ ಎಸ್ಎಂಕೆ ಆಪ್ತನನ್ನು ಕಣಕ್ಕಿಳಿಸುತ್ತದೆ.. ಈ ಕಾಳಗದಲ್ಲಿ ಜೆಡಿಎಸ್ನ ಕಲ್ಪನಾ ಸಿದ್ಧರಾಜು ಗೆಲುವಿನ ಮೈಲಿಗಲ್ಲು ದಾಟುತ್ತಾರೆ.
2013ರ ಚುನಾವಣೆ ವೇಳೆಗೆ ಜೆಡಿಎಸ್ ಕಲ್ಪನಾಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತದೆ. ಬದಲಾಗಿ ದೇವೇಗೌಡರ ಬೀಗ ತಮ್ಮಣ್ಣಗೆ ಟಿಕೆಟ್ ನೀಡುತ್ತದೆ. ಈ ಚುನಾವಣೆಯಲ್ಲಿ ಡಿ. ಸಿ. ತಮ್ಮಣ್ಣ ಗೆಲುವನ್ನು ದಾಖಲಿಸುತ್ತಾರೆ. ಇನ್ನು ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಸಿ ತಮ್ಮಣ್ಣ ಆಡಳಿತ ವಿರೋಧಿ ಅಲೆಯಿಂದ ಗೆಲ್ಲುವ ಭರವಸೆ ಇಟ್ಟುಕೊಂಡಿರಲಿಲ್ಲ. ಆದರೂ ಕೈ ಅಭ್ಯರ್ಥಿ ಎದುರು ಜಯಶಾಲಿಯಾಗುತ್ತಾರೆ.
2023ರ ಟಿಕೆಟ್ ಆಕಾಂಕ್ಷಿಗಳು ಯಾರು?
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರು ಹಾಗೂ ದೇವೇಗೌಡರ ಬೀಗರಾದ ಡಿ.ಸಿ ತಮ್ಮಣ್ಣ ತಮ್ಮ ಕೊನೆಯ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಈ ಬಾರಿ ಅವರಿಗೆ ಕದಲೂರು ಉದಯ್ ನಡುಕ ಹುಟ್ಟಿಸಿದ್ದಾರೆನ್ನಲಾಗುತ್ತಿದೆ. ಹೀಗಾಗಿ ಇಲ್ಲಿನ ರಾಜಕೀಯ ಬೆಳವಣಿಗೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಜೆಡಿಎಸ್: ಜೆಡಿಎಸ್‌ನಿಂದ ಹಾಲಿ ಶಾಸಕ ಡಿ.ಸಿ. ತಮ್ಮಣ್ಣ ಅವರಿಗೆ ಟಿಕೆಟ್ ಸಿಗಲಿದೆ.
ಕಾಂಗ್ರೆಸ್: ಎಸ್.ಎಂ.ಕೃಷ್ಣರ ಸಹೋದರ ಎಸ್.ಎಂ.ಶಂಕರ್ ಪುತ್ರ ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಅಭ್ಯರ್ಥಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಪ್ರಕಟಿಸಿದ್ದಾರೆ. ಈ ನಡುವೆ ಕದಲೂರು ಉದಯ್ ಹೆಸರೂ ಸದ್ದು ಮಾಡುತ್ತಿದ್ದು, ಅವರಿಗೆ ಟಿಕೆಟ್ ಕೊಟ್ಟರೆ ತಮ್ಮಣ್ಣ ವಿರುದ್ಧ ನೇರಾ ಪೈಪೋಟಿ ನಡೆಯುವ ಸಾಧ್ತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ರಾಮಕೃಷ್ಣ ಮತ್ತು ಕೆಐಎಡಿಬಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ವಿ.ಬಿ ಶಂಕರೇಗೌಡ ಕೂಡಾ ಟಿಕೆಟ್ ಆಕಾಂಕ್ಚಿಯಾಗಿದ್ದಾರೆ.
ಬಿಜೆಪಿ: ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರಿರುವ ಮುನ್ಮುಲ್ ನಿರ್ದೇಶಕ ಎಸ್.ಪಿ ಸ್ವಾಮಿಯವರು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ.
ಜಾತಿ ಲೆಕ್ಕಾಚಾರ:
ಒಟ್ಟು 2,05,539 ಮತದಾರರಿರುವ ಮದ್ದೂರು ಕ್ಷೇತ್ರದಲ್ಲಿ 1,00,775 ಪುರುಷ ಮತದಾರರಿದ್ದು, 1,04,746 ಮಹಿಳಾ ಮತದಾರರಿದ್ದಾರೆ.
ಲಿಂಗಾಯತ | 9,000 |
ಮುಸ್ಲಿಂ | 12,000 |
ಎಸ್ಸಿ | 35,000 |
ಕುರುಬ | 11,000 |
ಎಸ್ಟಿ | 4,000 |
ಒಕ್ಕಲಿಗ | 1,02,000 |
ಸವಿತಾ ಸಮಾಜ | 4,000 |
ವಿಶ್ವಕರ್ಮ | 4,000 |
ಇತರೆ | 20,000 |
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್ನ ಡಿ. ಸಿ. ತಮ್ಮಣ್ಣ, ಕಾಂಗ್ರೆಸ್ನ ಮಧು ಮಾದೇಗೌಡ ಅವರನ್ನು 54.030 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಜೆಡಿಎಸ್ | ಡಿ.ಸಿ.ತಮ್ಮಣ್ಣ | 1,09,239 |
ಕಾಂಗ್ರೆಸ್ | ಮಧು ಮಾದೇಗೌಡ | 55,209 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ