• Home
  • »
  • News
  • »
  • state
  • »
  • Karnataka Assembly Elections: ಕುಂದಾಪುರದಲ್ಲಿ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ತಡೆಯೊಡ್ಡುತ್ತಾ ಕಾಂಗ್ರೆಸ್​?

Karnataka Assembly Elections: ಕುಂದಾಪುರದಲ್ಲಿ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ತಡೆಯೊಡ್ಡುತ್ತಾ ಕಾಂಗ್ರೆಸ್​?

ಇಪ್ಪತ್ತೆರಡು ವರ್ಷಗಳಿಂದ ಕುಂದಾಪುರದಲ್ಲಿ ಹಾಲಾಡಿಯವರದ್ದೇ ದರ್ಬಾರ್

ಇಪ್ಪತ್ತೆರಡು ವರ್ಷಗಳಿಂದ ಕುಂದಾಪುರದಲ್ಲಿ ಹಾಲಾಡಿಯವರದ್ದೇ ದರ್ಬಾರ್

Karnataka Assembly Elections 2023: ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಈಗಾಗಲೇ ಸಭೆ, ಸಮಾವೇಶಗಳು ನಡೆಯುತ್ತಿದ್ದು ರಾಜಕೀಯ ನಾಯಕರು ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಜನ ಸಾಮಾನ್ಯರೂ ಆಯಾ ಕ್ಷೇತ್ರದ ಕುರಿತಾಗಿ ಕೆಲ ಮಾಹಿತಿಗಳು ಅಗತ್ಯವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ನ್ಯೂಸ್​​ 18 ಕನ್ನಡ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಚಿತ್ರಣವನ್ನು ಓದುಗರಿಗೆ ತಿಳಿಸಿಕೊಡಲಿದೆ. ಈ ಸರಣಿಯಲ್ಲಿ ಇಂದು ಉಡುಪಿಯ ಐದು ವಿಧಾನಭಾ ಸ್ಥಾನಗಳಲ್ಲೊಂದ ಬಿಜೆಪಿಯ ಭದ್ರಕೋಟೆ ಕುಂದಾಪುರ ವಿಧಾನಸಭಾ ಕ್ಷೇತ್ರದ ವಿವರ ಇಲ್ಲಿದೆ.

ಮುಂದೆ ಓದಿ ...
  • News18 Kannada
  • Last Updated :
  • Kundapura (Kundapur), India
  • Share this:

ಕುಂದಾಪುರ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದೆ. ಇನ್ನೇನು ಆರು ತಿಂಗಳೊಳಗೆ ಚುನಾವಣೆ ನಡೆದು ರಾಜ್ಯದ ಆಡಳಿತ ಚುಕ್ಕಾಣಿ ಯಾರ ಪಾಲಾಗುತ್ತೆ ಎಂಬುವುದು ಬಹಿರಂಗವಾಗಲಿದೆ. ಹೀಗಿರುವಾಗ ರಾಜಕೀಯ ದಾಂಡಿಗರು ತಮ್ಮ ಕ್ಷೇತ್ರದ ಮತದಾರರ ಮನಗೆಲ್ಲುವಲ್ಲಿ ಇನ್ನಿಲ್ಲದ ಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಸಭೆ, ಸಮಾವೇಶಗಳು ನಡೆಯುತ್ತಿದ್ದು ರಾಜಕೀಯ ನಾಯಕರು ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಜನ ಸಾಮಾನ್ಯರೂ ಆಯಾ ಕ್ಷೇತ್ರದ ಕುರಿತಾಗಿ ಕೆಲ ಮಾಹಿತಿಗಳು ಅಗತ್ಯವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ನ್ಯೂಸ್​​ 18 ಕನ್ನಡ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಚಿತ್ರಣವನ್ನು ಓದುಗರಿಗೆ ತಿಳಿಸಿಕೊಡಲಿದೆ. ಈ ಸರಣಿಯಲ್ಲಿ ಇಂದು ಉಡುಪಿಯ ಐದು ವಿಧಾನಭಾ ಸ್ಥಾನಗಳಲ್ಲೊಂದ ಬಿಜೆಪಿಯ ಭದ್ರಕೋಟೆ ಕುಂದಾಪುರ ವಿಧಾನಸಭಾ ಕ್ಷೇತ್ರದ Kundapura Assembly Constituency) ವಿವರ ನೀಡಲಿದೆ. ಈ ಕ್ಷೇತ್ರದ ವಿಶೇಷತೆಗಳೇನು? ಟಿಕೆಟ್​ ಆಕಾಂಕ್ಷಿಗಳು ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ.


ಹಲವಾರು ಕಲಾವಿದರನ್ನು ನೀಡಿದ ನೆಲ


ಕುಂದಗನ್ನಡದ ಭಾಷೆಯಿಂದಲೇ ಖ್ಯಾತಿ ಗಳಿಸಿದ ಕುಂದಾಪುರ ಯಕ್ಷರಂಗಕ್ಕೆ ಹಲವು ಪ್ರತಿಭಾನ್ವಿತ ಕಲಾವಿದರು ಹಾಗೂ ಭಾಗವತರನ್ನು ಕೊಟ್ಟ ನೆಲ. ಸಿನಿ ಕ್ಷೇತ್ರಕ್ಕೂ ಇಲ್ಲಿನ ಕೊಡುಗೆ ಅಪಾರ. ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತ, ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ, ಸ್ಯಾಂಡಲ್​ವುಡ್​ ನಟ ಉಪೇಂದ್ರ, ನಿರ್ದೇಶಕ ಯೋಗರಾಜ್ ಭಟ್ ಹೀಗೆ ಅನೇಕ ಪ್ರತಿಭಾನ್ವಿತರ ತವರು ಈ ಕುಂದಾಪುರವಾಗಿದೆ. ಸುಂದರ ಕಡಲನ್ನು ಹೊಂದಿರುವ ಕುಂದಾಪುರದ ಸೌಂದರ್ಯವನ್ನು ತ್ರಾಸಿ ಕಡಲ ತೀರ, ಮರವಂತೆ ಬೀಚ್, ಗಂಗೊಳ್ಳಿಯ ಹಿನ್ನೀರು ಮತ್ತಷ್ಟು ಹೆಚ್ಚಿಸಿವೆ. ಕುಂದಾಪುರ ಹಾಗೂಬಸ್ರೂರು ಅನಾದಿ ರಾಜರ ಕಾಲದಿಂದಲೂ ವ್ಯಾಪಾರಿ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಇದನ್ನು ಹೊರತುಪಡಿಸಿ ಇದು ಕೊಂಚ ಮಟ್ಟಿಗೆ ನಕ್ಸಲ್ ಪೀಡಿತ ಪ್ರದೇಶವೂ ಹೌದು. ಇನ್ನು ಇಲ್ಲಿನ ಜನರು ಮೀನುಗಾರಿಕೆಯನ್ನು ಬಹಳಷ್ಟು ಅವಲಂಬಿಸಿದ್ದಾರೆ.


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಕುಂದಾಪುರದ ರಾಜಕೀಯ ಇತಿಹಾಸ ಹೀಗಿದೆ


ಕುಂದಾಪುರ ರಾಜಕೀಯ ಇತಿಹಾಸವನ್ನು ನೋಡಿದರೆ ಇಲ್ಲಿ 1983, 85, 89, 1994ರಲ್ಲಿ ಕಾಂಗ್ರೆಸಿನ ಕೆ. ಪ್ರತಾಪ್ ಚಂದ್ರ ಶೆಟ್ಟಿ ಗೆಲುವು ಸಾಧಿಸಿದ್ದರು. ಹೀಗೆ ನಾಲ್ಕು ಬಾರಿ ಗೆದ್ದಿದ್ದ ಪ್ರತಾಪ್ ಚಂದ್ರ ಶೆಟ್ಟಿಗೆ 1999ರಲ್ಲಿ ಕಣಕ್ಕಿಳಿದ ಮೊದಲ ಚುನಾವಣೆಯಲ್ಲೇ ಸೋಲುಣಿಸಿದವರು ಕೆಲವೇ ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ. 1999ರಲ್ಲಿ 1 ಸಾವಿರ ಮತಗಳಿಂದ ಪ್ರತಾಪ್ ಚಂದ್ರ ಶೆಟ್ಟಿಗೆ ಸೋಲುಣಿಸಿದ ಹಾಲಾಡಿ, 2004ರಲ್ಲಿ ಗೆಲುವಿನ ಅಂತರವನ್ನು 20 ಸಾವಿರಕ್ಕೆ ವಿಸ್ತರಿಸಿಕೊಂಡರು. 2008ರಲ್ಲಿ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದ ಪ್ರಭಾವಿ ರಾಜಕಾರಣ ಕೆ. ಜಯಪ್ರಕಾಶ್ ಹೆಗ್ಡೆಯನ್ನೇ 25 ಸಾವಿರ ಮತಗಳಿಂದ ಮಣಿಸಿದ್ದರು.


ಕೇಸರಿಯಲ್ಲಿ ಕೋಲಾಹಲ


ಹೀಗೆ ಮೂರು ಬಾರಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ 2012ರಲ್ಲಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಸಚಿವ ಸ್ಥಾನ ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಇದರಿಂದ ಬೇಸರಗೊಂಡ ಹಾಲಾಡಿ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷವನ್ನೇ ತೊರೆದಿದ್ದರು. ಇದಾದ ಬೆನ್ನಲ್ಲೇ ಅವರನ್ನು ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಭಾರೀ ಪ್ರಯತ್ನಗಳು ನಡೆದಿದ್ದವು. ಆದರೆ, ಈ ಪ್ರಯತ್ನಗಳಷ್ಟೂ ನೆಲಕಚ್ಚಿ ಹಾಲಾಡಿ ಕೇಸರಿ ಪಾಳಯ ತೊರೆದಿದ್ದರು.


ರಾಷ್ಟ್ರೀಯ ಪಕ್ಷಗಳನ್ನು ಏಕಾಂಗಿಯಾಗಿ ಮಣಿಸಿದ್ದ ಹಾಲಾಡಿ


ಮುಂದೆ 2013ರ ವಿಧಾನಸಭೆ ಚುನಾವಣೆಗೆ ಸ್ವತಂತ್ರವಾಗಿ ಕಣಕ್ಕಿಳಿದು 89 ಸಾವಿರ ಮತಗಳನ್ನು ಪಡೆದು 40 ಸಾವಿರ ಮತಗಳ ಅಂತರದಿಂದ ಹಾಲಾಡಿ ಭಾರೀ ಜಯ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದು ಹಾಲಾಡಿ ವೈಯಕ್ತಿಕ ವರ್ಚಸ್ಸಿಗೆ ಕನ್ನಡಿ ಹಿಡಿದಂತಿತ್ತು. ಇದಾದ ಬಳಿಕ 2018ರ ಚುನಾವಣೆ ವೇಳೆಗೆ ಮರಳಿ ಬಿಜೆಪಿಗೆ ಬಂದಿದ್ದ ಹಾಲಾಡಿ ಮತ್ತೆ ಇಲ್ಲಿಂದ ಸ್ಪರ್ಧಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗಲೇ ಅಷ್ಟೊಂದು ಮತಗಳ ಅಂತರದಿಂದ ಗೆದ್ದಿದ್ದ ಈ ಜನನಾಯಕ ನಿರೀಕ್ಷೆಯಂತೆಯೇ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.


ಟಿಕೆಟ್​ ಆಕಾಂಕ್ಷಿಗಳು ಯಾರು?


ಕುಂದಾಪುರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಖುದ್ದು ಹಾಲಾಡಿಯೇ ತಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿಯಿಂದ ಹೊಸ ಅಭ್ಯರ್ಥಿ ಕಳಕ್ಕಿಳಿಯುವ ಸಾಧ್ಯತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ ಇದರ ಲಾಭ ಪಡೆದುಕೊಳ್ಳುವ ಅವಕಾಶ ಇದೆ.


ಇದನ್ನೂ ಓದಿ: Karnataka Assembly Elections: ಕೃಷ್ಣನೂರು ಉಡುಪಿಯ ಸಾರಥಿ ಯಾರು? ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್​, ಬಿಜೆಪಿಯಲ್ಲಿ ರೇಸ್​!


ಕುಂದಾಪುರದ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳು ಯಾರು?


* ಹಾಲಾಡಿ ಶ್ರೀನಿವಾಸ ಶೆಟ್ಟಿ: ಹಾಲಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ನಾಯಕರಾಗಿದ್ದರೂ, ಈ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ನಾಯಕ. ಯಾವ ಮಟ್ಟಕ್ಕೆ ಇವರು ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆಂದರೆ ನಾಳೆ ಪ್ರಭಾವೀ ರಾಜಕಾರಣಿಯೊಬ್ಬರು ಇಲ್ಲಿ ಅವರ ವಿರುದ್ಧ ಸ್ಪರ್ಧಿಸಿದರೂ ಗೆಲ್ಲುವ ತಾಕತ್ತುಳ್ಳ ಜನಪ್ರತಿನಿಧಿ. ಇವರು ಪಕ್ಷದ ಸಹಾಯವಿಲ್ಲದೆಯೂ ಗೆಲ್ಲಬಲ್ಲರೆಂಬುವುದಕ್ಕೆ 2013ರ ಚುನಾವಣೆಯೇ ಸಾಕ್ಷಿ. ಅಂದು ಪಕ್ಷೇತರರಾಗಿ ಇವರು ಬಿಜೆಪಿ ಹಾಗೂ ಕಾಂಗ್ರೆಸ್​ನ್ನು ಏಕಾಂಗಿಯಾಗಿ ಸೋಲಿಸಿದ್ದರು. ಹೀಗಾಗಿ ಬಿಜೆಪಿ ಟಿಕೆಟ್​ ಇವರಿಗೇ ಸಿಗೋದು ಬಹುತೇಕ ಖಚಿತ.


ಹಾಲಾಡಿ ಶ್ರೀನಿವಾಸ ಶೆಟ್ಟಿ


* ಕಿರಣ್ ಕೊಡ್ಗಿ: ಎ.ಜಿ.ಕೊಡ್ಗಿಯವರ ಪುತ್ರ ಕಿರಣ್ ಕೊಡ್ಗಿ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಹಾಲಾಡಿ ಸ್ಪರ್ಧಿಸದಿದ್ದಲ್ಲಿ ಇವರನ್ನೇ ತನ್ನ ಉತ್ತರಾಧಿಕಾರಿಯಾಗಿ ಘೋಷಿಸಬಹುದು.


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳಾರು?


* ಕಿಶನ್ ಹೆಗ್ಡೆ ಕೊಳ್ಕೆಬೈಲ್: ಕಾಂಗ್ರೆಸ್​ನಿಂದ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ ಕಿಶನ್ ಹೆಗ್ಡೆ ಸಹಕಾರಿ ಧುರೀಣ.


* ಮಲ್ಯಾಡಿ ಶಿವರಾಮ್ ಶೆಟ್ಟಿ: ಕಾಂಗ್ರೆಸ್​ ನಾಯಕರಾಗಿರುವ ಮಲ್ಯಾಡಿ ಶಿವರಾಮ್ ಶೆಟ್ಟಿ 2013ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.


* ಪ್ರತಾಪ್ ಚಂದ್ರ ಶೆಟ್ಟಿ: ಮಾಜಿ ಸಭಾಪತಿ ಆಗಿರುವ ಪ್ರತಾಪ್ ಚಂದ್ರ ಶೆಟ್ಟಿ ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದರು.


ಪ್ರತಾಪ್ ಚಂದ್ರ ಶೆಟ್ಟಿ


* ಶ್ಯಾಮಲಾ ಭಂಡಾರಿ: ಮಹಿಳಾ ಕಾಂಗ್ರೆಸ್​ ನಾಯಕಿ


ಜಾತಿ ಲೆಕ್ಕಾಚಾರ

ಒಟ್ಟು ಮತದಾರರು1,88,529
ಬಂಟ್ಸ್48,000
ಬಿಲ್ಲವ36,000
ಮೊಗವೀರ27,000
ದೇವಾಡಿಗ12,000
ಗಾಣಿಗ8,000
ಕೊಂಕಣಿ ಖಾರ್ವಿ10,000
ಕ್ರಿಶ್ಚಿಯನ್14,000
ಮುಸ್ಲಿಂ17,000
ಇತರೆ8,529

2018ರಲ್ಲಿ ಕುಂದಾಪುರ ಕ್ಷೇತ್ರದ ಚುನಾವಣಾ ಫಲಿತಾಂಶವೇನು?2018ರಲ್ಲಿ ಕುಂದಾಪುರ ಕ್ಷೇತ್ರದ ಚುನಾವಣಾ ಫಲಿತಾಂಶವೇನು?


2018 ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ರಾಜೇಶ್ ಮಲ್ಲಿ ಸ್ಪರ್ಧೆಯೊಡ್ಡಿದ್ದರು. ಆದರೆ ನಿರೀಕ್ಷೆಯಂತೆ ಕಮಲ ಪಾಳಯ ಅಭ್ಯರ್ಥಿ ಹಾಲಾಡಿ 56,405 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳು
ಬಿಜೆಪಿಹಾಲಾಡಿ ಶ್ರೀನಿವಾಸ ಶೆಟ್ಟಿ1,03,434
ಕಾಂಗ್ರೆಸ್ರಾಜೇಶ್ ಮಲ್ಲಿ47,029

ಇದನ್ನೂ ಓದಿ: Karnataka Assembly Elections: ಮಂಗಳೂರು ಉತ್ತರದಲ್ಲಿ ಬಾವಾಗೆ ಹೊಸ ಸ್ಪರ್ಧಿ, ಕಾಂಗ್ರೆಸ್​ನಿಂದ ಯಾರು ಕಣಕ್ಕೆ?


ಒಟ್ಟಾರೆಯಾಗಿ ಎರಡೂವರೆ ದಶಕ ಕುಂದಾಪುರ ಕ್ಷೇತ್ರದಲ್ಲಿ ಗೆದ್ದು ಬೀಗಿರುವ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ಕಾಂಗ್ರೆಸ್ ತಡೆಯೊಡ್ಡಬೇಕಾದರೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಷ್ಟೇ.

Published by:Precilla Olivia Dias
First published: