ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಎಲೆಕ್ಷನ್ ಜ್ವರ (election fever) ಜೋರಾದ ಹಾಗೆಯೇ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಅದು ಪಸರಿಸುತ್ತಿದೆ. ಅದರಂತೆಯೇ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿಯೂ (Kumta-Honnavar Assembly Constituency) ಕೂಡ ಎಲೆಕ್ಷನ್ ಕಾವು ಏರುತ್ತಿದೆ. ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆಯ ಭಾಗ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಎಂಬ ಖ್ಯಾತಿಗೆ, ಶೇಕಡಾ 70ರಷ್ಟು ಅರಣ್ಯ ಪ್ರದೇಶ (Forest area) ಹೊಂದಿರುವ ಜಿಲ್ಲೆ ಎಂಬ ಹಿರಿಮೆ ಹೊಂದಿರುವ ಉತ್ತರ ಕನ್ನಡ ಅತ್ಯಂತ ದೊಡ್ಡ ಜಿಲ್ಲೆಯೂ ಹೌದು. 6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಈ ಪೈಕಿ ಕುಮಟಾ ವಿಧಾನಸಭಾ ಕ್ಷೇತ್ರವೂ ಒಂದು. ಬಿಜೆಪಿಯ (BJP) ದಿನಕರ್ ಶೆಟ್ಟಿ (Dinakar Shetty) ಸದ್ಯ ಇಲ್ಲಿನ ಶಾಸಕರು. ಹಾಗಿದ್ರೆ ಹೇಗಿದೆ ಕ್ಷೇತ್ರದಲ್ಲಿ ಚುನಾವಣಾ ಅಬ್ಬರ? ಹಾಲಿ ಶಾಸಕರ ಬಗ್ಗೆ ಮತದಾರರು ಏನಂತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ…
ಕುಮಟಾ ಹೊನ್ನಾವರ ಕ್ಷೇತ್ರ ಪರಿಚಯ
ಉತ್ತರ ಕನ್ನಡ ಜಿಲ್ಲೆಯ ಅವಳಿ ತಾಲೂಕುಗಳಾದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಹಲವು ಗ್ರಾಮಗಳನ್ನು ಒಳಗೊಂಡಿದೆ. ಹೊನ್ನಾವರ ಹಾಗೂ ಕುಮಟಾ ಅವಳಿ ತಾಲೂಕುಗಳು ಗೋಕರ್ಣ ಓಂ ಬೀಚ್, ಕಾಸರಕೋಡು, ಧಾರೇಶ್ವರ, ವನ್ನಳ್ಳಿ ಬೀಚ್ ಸೇರಿದಂತೆ ಹಲವು ಸುಂದರ ಬೀಚ್ಗಳನ್ನು ಗೋಕರ್ಣ, ಇಡಗುಂಜಿ, ಯಾಣ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳು, ಹಲವು ಪ್ರಕೃತಿ ತಾಣಗಳನ್ನು ಹೊಂದಿದೆ. ಮಿರ್ಜಾನ್ ಕೋಟೆ, ಗೇರುಸೊಪ್ಪೆ ಬಸದಿ ಸೇರಿದಂತೆ ಹಲವು ಐತಿಹಾಸಿಕ ಕೋಟೆಗಳು ಇತಿಹಾಸದ ಕಥೆ ಹೇಳುತ್ತವೆ.
ಹಾಲಿ ಶಾಸಕ ದಿನಕರ ಶೆಟ್ಟಿ
ಪ್ರಸ್ತುತ ದಿನಕರ ಶೆಟ್ಟಿಯವರು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಈಗಾಗಲೇ 2 ಬಾರಿ ಗೆದ್ದಿರುವ ದಿನಕರ ಶೆಟ್ಟಿ ಇದೀಗ ಮೂರನೇ ಬಾರಿ ಹ್ಯಾಟ್ರಿಕ್ ಗೆಲುವಿಗಾಗಿ ಕಾತರರಾಗಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ದಿನಕರ ಶೆಟ್ಟಿ, 2013ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಬಿಜೆಪಿಗೆ ವಲಸೆ ಬಂದರು. ಇದಾದ ಬಳಿಕ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದಿದ್ದಾರೆ.
ಇದನ್ನೂ ಓದಿ: Karnataka Assembly Elections: ರೇಷ್ಮೆ ಕೈಮಗ್ಗದ ಕಣದಲ್ಲಿ ಕದನ ಕುತೂಹಲ, ಇಲ್ಲಿದೆ ದೊಡ್ಡಬಳ್ಳಾಪುರದ ರಾಜಕೀಯ ಚಿತ್ರಣ
ಕಾಂಗ್ರೆಸ್ ಮಾಜಿ ಶಾಸಕಿ ಶಾರದಾ ಶೆಟ್ಟಿ
ಮಾಜಿ ಶಾಸಕ ಮೋಹನ ಶೆಟ್ಟಿ 2008ರಲ್ಲಿ ಕೇವಲ 20 ಮತಗಳ ಅಂತರದಲ್ಲಿ ತಮ್ಮ ದಾಯಾಗಿ ದಿನಕರ್ ಶೆಟ್ಟಿ ಎದುರು ಮಣಿಯಬೇಕಾಗಿ ಬಂತು. ಚುನಾವಣೆ ಮುಗಿದ ಕೆಲವೇ ತಿಂಗಳಲ್ಲಿ ಮೋಹನ ಶೆಟ್ಟಿ ನಿಧನರಾದರು. ಆಗ ಕಾಂಗ್ರೆಸ್ನಲ್ಲಿ ಪ್ರಭಾವಿಯಾಗಿದ್ದ ಮಾರ್ಗರೆಟ್ ಆಳ್ವ ಮೋಹನ ಶೆಟ್ಟಿ ಅವರ ಪತ್ನಿ ಶಾರದಾ ಶೆಟ್ಟಿಯವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದರು. ಅನುಕಂಪದ ಅಲೆಯಲ್ಲಿ ತೇಲಿದ ಶಾರದಾ ಶೆಟ್ಟಿ 420 ಮತಗಳ ಅಂತರದಿಂದ ದಿನಕರ ಶೆಟ್ಟಿ ಎದುರು ಗೆದ್ದರು! ಇದಾದ ಬಳಿಕ 2018ರ ಚುನಾವಣೆಯಲ್ಲಿ ಶಾರದಾ ಶೆಟ್ಟಿ ಮತ್ತೆ ಸೋತರು.
ಹಾಲಿ ಶಾಸಕರ ಬಗ್ಗೆ ಮತದಾರರು ಹೇಳುವುದೇನು?
ಜೆಡಿಎಸ್ನಿಂದ ಬಿಜೆಪಿಗೆ ವಲಸೆ ಬಂದವರು ಎನ್ನುವ ಕಾರಣಕ್ಕೆ ಕ್ಷೇತ್ರದ ಮೂಲ ಬಿಜೆಪಿಗರಿಗೆ ಈಗಲೂ ಅಸಮಾಧಾನ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ ಎನ್ನುವುದು ದೊಡ್ಡ ಸಮಸ್ಯೆಯಾಗಿದ್ದು, ದಿನಕರ ಶೆಟ್ಟಿ ಸೇರಿದಂತೆ ಜಿಲ್ಲೆಯ ಯಾವೊಬ್ಬ ಶಾಸಕರು, ಸಂಸದರು ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಬಲವಾದ ಆರೋಪ ಇದೆ. ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಮಳೆ ಬಂದಾಗ ಸೋರುವ ಸಮಸ್ಯೆ, ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಇತ್ಯಾದಿ ಚಿಕ್ಕಪುಟ್ಟ ಸಮಸ್ಯೆ ಕೂಡ ಪರಿಹಾರವಾಗ್ತಿಲ್ಲ ಎನ್ನುವುದು ಕ್ಷೇತ್ರದ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ಯಾರಿಗೆ?
ಬಿಜೆಪಿಯಿಂದ ಹಾಲಿ ಶಾಸಕ ದಿನಕರ ಶೆಟ್ಟಿ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಇವರೊಂದಿಗೆ ಬಿಜೆಪಿ ಹಿರಿಯ ನಾಯಕ ಡಾ. ಜಿ.ಜಿ. ಹೆಗಡೆ, ಉದ್ಯಮಿ ನಾಗರಾಜ್ ನಾಯಕ್ ತೊರ್ಕೆ, ಸುಬ್ರಾಯ ವಾಳ್ಕೆ, ಬಿಜೆಪಿ ಮುಖಂಡ ಎಂ.ಜಿ. ಭಟ್ ಟಿಕೆಟ್ ಬಯಸಿದ್ದಾರೆ. ಅತ್ತ ಕಾಂಗ್ರೆಸ್ನಲ್ಲಿ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ, ಉದ್ಯಮಿ ಕೃಷ್ಣ ಗೌಡ, ಭಾಸ್ಕರ್ ಪಟಗಾರ್, ಶಿವಾನಂದ ಹೆಗಡೆ, ಕಾಂಗ್ರೆಸ್ ನಾಯಕ ಆರ್.ಎಚ್. ನಾಯ್ಕ್ ಸ್ಪರ್ಧೆ ಬಯಸಿದ್ದಾರೆ. ಅತ್ತ ಜೆಡಿಎಸ್ನಿಂದ ಸೂರಜ್ ನಾಯ್ಕ್ ಸೋನಿ ಸ್ಪರ್ಧಿಸುತ್ತಿದ್ದಾರೆ.
ಕ್ಷೇತ್ರದ ಮತದಾರರ ವಿವರ
ಕ್ಷೇತ್ರದಲ್ಲಿ ಒಟ್ಟು 1,81,500 ಮತದಾರರಿದ್ದಾರೆ. ಈ ಪೈಕಿ ನಾಮಧಾರಿಗಳು ಹಾಗೂ ಹಾಲಕ್ಕಿ ಗೌಡರೇ ನಿರ್ಣಾಯಕ ಪಾತ್ರವಹಿಸುತ್ತಾರೆ. ನಾಮಧಾರಿಗಳು – 38,000, ಹಾಲಕ್ಕಿ ಗೌಡರು – 29,000 ಮತದಾರರಿದ್ದಾರೆ. ಮೀನುಗಾರರು – 24,000, ಬ್ರಾಹ್ಮಣ – 16,000, ಮುಸ್ಲಿಂ – 15,000 ಮತದಾರರಿದ್ದಾರೆ. ಇನ್ನು ಎಸ್ಸಿ – 14,000, ಪಟಗಾರ ಸಮುದಾಯದ– 11,000 ಹಾಗೂ ಕ್ರಿಶ್ಚಿಯನ್ನರು – 8,000 ಮತದಾರರಿದ್ದಾರೆ.
ಕ್ಷೇತ್ರದಲ್ಲಿದೆ ಸಾವಿರಾರು ಸಮಸ್ಯೆ
ಉತ್ತರ ಕನ್ನಡ ಜಿಲ್ಲೆಯ ಬಹದೊಡ್ಡ ಸಮಸ್ಯೆ ಎಂದರೆ ಸೂಕ್ತ ಸೌಲಭ್ಯವುಳ್ಳ ಆಸ್ಪತ್ರೆ ಇಲ್ಲದೇ ಇರೋದು. ಇನ್ನು ಅರಣ್ಯ ಅಕ್ರಮ ಸಕ್ರಮಾತಿ. ನಗರ ಪ್ರದೇಶಗಳಲ್ಲಿ ಜಾಗವಿಲ್ಲದೇ ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿ ಗುಡಿಸಲು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕನ್ನು ನೀಡದೇ ಸರ್ಕಾರ ಅನ್ಯಾಯ ಎಸಗುತ್ತಿದೆ ಎನ್ನುವುದು ಇಲ್ಲಿನ ಜನರ ಆರೋಪ. ಕರಾವಳಿ ತೀರದ ಪ್ರದೇಶಗಳಿಗೆ ಅನ್ವಯಿಸುವ ಸಿಆರ್ಝೆಡ್ ನಿಯಮ ಕೂಡ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ