ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಅತೀ ದೊಡ್ಡ ಪ್ರದೇಶ, ಅತೀ ಜನನಿಬಿಡ ಪ್ರದೇಶಗಳಲ್ಲಿ (populated area) ಕೆಆರ್‌ಪುರ (KR Pura) ಕೂಡ ಒಂದು. ಕೃಷ್ಣರಾಜಪುರ (Krishnarajapura) ಎನ್ನುವುದು ಇದರ ಮೂಲ ಹೆಸರು. ಆದರೆ ಬೇರೆ ಭಾಷಿಕರ ಪಾರಮ್ಯದಿಂದಾಗಿ ಕೃಷ್ಣರಾಜಪುರ ಎನ್ನುವುದು ಕೆಆರ್‌ಪುರಂ ಎಂದು ಬದಲಾಗಿದೆ. 1799 ರಿಂದ 1869 ರವರೆಗೆ ಮೈಸೂರು (Mysuru) ಪ್ರಾಂತೀಯ ರಾಜ್ಯವನ್ನು ಆಳಿದ ಮೈಸೂರಿನ ಒಡೆಯರ್ (Mysuru Wodeyar) ಸಂಸ್ಥಾನದ ಪ್ರಮುಖ ರಾಜ ಕೃಷ್ಣರಾಜ ಒಡೆಯರ್ (Krishnaraja Wodeyar) ಅವರ ಸ್ಮರಣಾರ್ಥ ಈ ಪ್ರದೇಶಕ್ಕೆ ಅವರದ್ದೇ ಹೆಸರಿನಲ್ಲಿ ಕೃಷ್ಣರಾಜಪುರ ಅಂತ ಹೆಸರಿಡಲಾಯಿತು. ಸದ್ಯ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡು ಸಚಿವರೂ ಆಗಿರುವ ಬೈರತಿ ಬಸವರಾಜ್ ಕೆಆರ್‌ಪುರದ ಶಾಸಕರಾಗಿದ್ದಾರೆ.
ಕೆಆರ್ ಪುರ ಕ್ಷೇತ್ರದ ಪರಿಚಯ
ಕೆಆರ್ ಪುರ ಬೆಂಗಳೂರಿನ ಉಪನಗರ ಪ್ರದೇಶವಾಗಿದ್ದು, ಪೂರ್ವಕ್ಕೆ ಮಲ್ಲಸಂದ್ರ, ಉತ್ತರಕ್ಕೆ ಆವಲಹಳ್ಳಿ, ಪಶ್ಚಿಮಕ್ಕೆ ರಾಮಮೂರ್ತಿ ನಗರ ಮತ್ತು ದಕ್ಷಿಣಕ್ಕೆ ವೈಟ್‌ಫೀಲ್ಡ್ ಸುತ್ತುವರಿದಿದೆ. ಈ ಪ್ರದೇಶವು ತನ್ನ ದೊಡ್ಡ ಮಾರುಕಟ್ಟೆ, ಕೆರೆಗಳು, ಕೈಗಾರಿಕಾ ಪ್ರದೇಶಗಳಿಂದ ಪ್ರಸಿದ್ಧಿ ಪಡೆದಿದೆ.
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ
ಕೆಆರ್ ಪುರ ಬೆಂಗಳೂರಿನ ಪೂರ್ವ ಪರಿಧಿಯಲ್ಲಿ ಅಭಿವೃದ್ಧಿ ಹೊಂದಿದ ವಸತಿ ಪ್ರದೇಶವಾಗಿದೆ. ORR ಮತ್ತು ವೈಟ್‌ಫೀಲ್ಡ್‌ನ ಪ್ರಮುಖ IT ಕಾರಿಡಾರ್‌ಗಳಿಗೆ ಸಮೀಪದಲ್ಲಿದೆ. ಸಮೀಪದಲ್ಲಿ ಸಾಕಷ್ಟು ಶಾಲೆಗಳು, ಆಸ್ಪತ್ರೆಗಳು, ಮಾರುಕಟ್ಟೆಗಳು, ಮಾಲ್‌ಗಳು ಮತ್ತು ಸರೋವರಗಳು ಇವೆ. ಯೋಜಿತವಲ್ಲದ ಬೆಳವಣಿಗೆ ಕೆಆರ್ ಪುರಂನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವಾಗಿದೆ
ಇದನ್ನೂ ಓದಿ: Karnataka Assembly Elections: ಯುವ ನಾಯಕನ ಜೊತೆ ಸ್ಪರ್ಧಿಸ್ತಾರಾ ಹಳೆ ನಾಯಕ? ಕುತೂಹಲದ ಕಣವಾದ ಶಿವಾಜಿನಗರ
ಪಕ್ಷಾಂತರ ಮಾಡಿ ಗೆದ್ದು, ಸಚಿವರಾಗಿರುವ ಬೈರತಿ ಬಸವರಾಜ್
ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿ ಬಿಜೆಪಿ ಸೇರಿರುವ ಬೈರತಿ ಬಸವರಾಜ್ ಸದ್ಯ ಇಲ್ಲಿನ ಶಾಸಕರು. ಉಪ ಚುನಾವಣೆಯಲ್ಲಿ ಗೆದ್ದು ಸದ್ಯ ಕರ್ನಾಟಕ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರೂ ಆಗಿದ್ದಾರೆ.
ಪಂಚಾಯತ್‌ನಿಂದ ರಾಜ್ಯ ಸಚಿವ ಸಂಪುಟಕ್ಕೆ
ಬೈರತಿ ಬಸವರಾಜ್ ಈ ಹಿಂದೆ ಪಂಚಾಯತ್ ಸದಸ್ಯ ಮತ್ತು ಅಧ್ಯಕ್ಷರಾದರು. ಅವರು 2009 ರಲ್ಲಿ ಹೂಡಿ ವಾರ್ಡ್‌ನಿಂದ ಗೆದ್ದು, ಬಿಬಿಎಂಪಿ ಕಾರ್ಪೊರೇಟರ್ ಆದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕೆಆರ್‌ಪುರಂ ಕ್ಷೇತ್ರದಿಂದ ಸ್ಪರ್ಧಿಸಿ, ಮೊದಲ ಬಾರಿಗೆ ಶಾಸಕರಾದರು. ಅವರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎರಡನೇ ಬಾರಿಗೆ ಶಾಸಕರಾದರು. 2019ರಲ್ಲಿ ರಾಜೀನಾಮೆ ನೀಡಿದ ಬಳಿಕ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದಿದ್ದರು. ನಂತರ ಅವರು ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾದರು ಮತ್ತು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಎರಡನೇ ಅವಧಿಗೆ ಸಚಿವರಾದರು.
ಬೈರತಿ ಬಸವರಾಜ ಪರ ಪರ-ವಿರೋಧ ಅಭಿಪ್ರಾಯ
ಕ್ಷೇತ್ರದಲ್ಲಿ ಸಚಿವ ಬೈರತಿ ಬಸವರಾಜ ಪರ ಮತ್ತು ವಿರೋಧ ಅಭಿಪ್ರಾಯಗಳಿವೆ. ಕಾಂಗ್ರೆಸ್‌ಗೆ ದ್ರೋಹ ಬಗೆದು, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸೇರಿದರು ಎನ್ನುವುದು ಅವರ ಮೇಲಿನ ಆರೋಪ. ಜೊತೆಗೆ ಟ್ರಾಫಿಕ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ನಗರಾಭಿವೃದ್ಧಿ ಸಚಿವರಾಗಿ ಇದರತ್ತ ಗಮನ ಕೊಟ್ಟಿಲ್ಲ ಎನ್ನುವುದು ಆರೋಪ.
ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾದ ಬೈರತಿ, ಸೋಲುಣಿಸುತ್ತಾ ಕಾಂಗ್ರೆಸ್?
ಸಚಿವ ಬೈರತಿ ಬಸವರಾಜ್ ಮತ್ತೊಮ್ಮೆ ಕೆಆರ್ ಪುರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ. ಪಕ್ಷಾಂತರದ ಕಾರಣವನ್ನೇ ಮುಂದಿಟ್ಟುಕೊಂಡು, ಇವರಿಗೆ ಸೋಲುಣಿಸಬೇಕು ಅಂತ ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ. ಇನ್ನು ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ನಾರಾಯಣ ಸ್ವಾಮಿ ಟಿಕೆಟ್ ಬಯಸಿದ್ದರೆ, ಕಾಂಗ್ರೆಸ್ ಮುಖಂಡ ಡಿಕೆ ಮೋಹನ್ ಬಾಬು ಕೂಡ ಟಿಕೆಟ್ ಬಯಸಿದ್ದಾರೆ. ಅತ್ತ ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಗೊತ್ತಿಲ್ಲ.
ಕೆಆರ್ ಪುರ ಕ್ಷೇತ್ರದ ಮತದಾರರು
ಬೆಂಗಳೂರಿನ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕೆಆರ್ ಪುರದಲ್ಲಿ 4,78,000 ಮತದಾರರಿದ್ದಾರೆ. ಈ ಪೈಕಿ ತೆಲುಗು, ತಮಿಳು ಹಾಗೂ ಹಿಂದಿ ಭಾಷಿಕ ಮತದಾರರೇ ಅತೀ ಹೆಚ್ಚಿದ್ದು, ಅವರ ಸಂಖ್ಯೆ 96,000 ಇದೆ. ಇನ್ನು ಒಕ್ಕಲಿ ಮತದಾರರ ಸಂಖ್ಯೆ 90,000 ಇದೆ. ಇನ್ನುಳಿದಂತೆ ಎಸ್‌ಸಿ ಎಸ್‌ಟಿ 80,000, ಲಿಂಗಾಯತ 65,000, ಇತರೇ ಜನಾಂಗ – 62,000, ಮುಸ್ಲಿಂ – 38,000 ಮತದಾರರು ಇದ್ದಾರೆ. ಬ್ರಾಹ್ಮಣ – 28,000 ಇದ್ದರೆ, ಒಬಿಸಿ 19000 ಮತದಾರರಿದ್ದಾರೆ.
ಒಟ್ಟು ಮತದಾರರು | 4,78,000 |
ಇತರೇ ಭಾಷಿಕರು | 96,000 |
ಒಕ್ಕಲಿಗ | 90,000 |
ಎಸ್‌ಸಿ-ಎಸ್‌ಟಿ | 80,000 |
ಲಿಂಗಾಯತ | 65,000 |
ಇತರೇ ಜನಾಂಗ | 62,000 |
ಮುಸ್ಲಿಂ | 38,000 |
ಬ್ರಾಹ್ಮಣ | 28,000 |
ಒಬಿಸಿ | 19000 |
ಕ್ಷೇತ್ರದ ಸಮಸ್ಯೆಗಳು
ಕ್ಷೇತ್ರದಲ್ಲಿ ಹೊರಮಾವು, ರಾಮಮೂರ್ತಿ ನಗರ, ವಿಜ್ಞಾನ ಪುರ, ಕೆಆರ್ ಪುರಂ, ಬಸವನ ಪುರ, ದೇವಸಂದ್ರ, ಎ ನಾರಾಯಣ ಪುರ, ವಿಜ್ಞಾನನಗರ, ಎಚ್ಎಎಲ್ ಏರ್ ಪೋರ್ಟ್ ಸೇರಿದಂತೆ ಬಿಬಿಎಂಪಿಯ 9 ವಾರ್ಡ್‌ಗಳಿವೆ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ನಂತರ ಅತ್ಯಧಿಕ ಮತದಾರರನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಮಾಡಲು ಮನವಿ ಕೂಡಾ ಇದೆ. ಮತದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಸಮಸ್ಯೆಗಳೂ ಹಾಗಿಯೇ ಇವೆ. ಹೊಸಕೋಟೆ ಮಾರ್ಗವಾಗಿ ಹೆದ್ದಾರಿ ಇರುವುದರಿಂದ ಸಂಚಾರ ಸಮಸ್ಯೆ ಇದೆ. ಪೊಲೀಸ್ ವ್ಯವಸ್ಥೆ ಸುಧಾರಿಸಬೇಕಾಗಿದೆ. ಇನ್ನು ಕುಡಿಯುವ ನೀರು ಸಮಸ್ಯೆ ಹಾಗೆಯೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ