ಕಾಪು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಸರಿ ಸುಮಾರು ಆರು ತಿಂಗಳಲ್ಲಿ ಯಾರು ರಾಜ್ಯದಲ್ಲಿ ಅಧಿಕಾರಕ್ಕೇರುತ್ತಾರೆಂಬುವುದು ಸ್ಪಷ್ಟವಾಗಲಿದೆ. ಹೀಗಿರುವಾಗ ರಾಜಕೀಯ ಪಕ್ಷಗಳು, ನಾಯಕರು ಭರದ ಪ್ರಚಾರ ಆರಂಭಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮಾತು, ನಾನಾ ಭರವಸೆಗಳ ಮೂಲಕ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದಾರೆ. ಹೀಗಿರುವಾಗ ಈ ನಿಟ್ಟಿನಲ್ಲಿ ನಿಮ್ಮ ನ್ಯೂಸ್ 18 ಕನ್ನಡ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಚಿತ್ರಣವನ್ನು ಓದುಗರಿಗೆ ತಿಳಿಸಿಕೊಡಲಿದೆ. ಈ ಸರಣಿಯಲ್ಲಿ ಇಂದು ಉಡುಪಿಯ ಐದು ವಿಧಾನಭಾ ಸ್ಥಾನಗಳಲ್ಲೊಂದ ಬಿಜೆಪಿ ಮುಷ್ಠಿಯಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ (Kapu Assembly Constituency) ವಿವರ ನೀಡಲಿದೆ. ಈ ಕ್ಷೇತ್ರದ ವಿಶೇಷತೆಗಳೇನು? ಟಿಕೆಟ್ ಆಕಾಂಕ್ಷಿಗಳು ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ.
ಕಾಪುವಿನಲ್ಲಿ ಮಲ್ಲಿಗೆಯ ಕಂಪು
ಉಡುಪಿಯಿಂದ ದಕ್ಷಿಣಕ್ಕೆ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ಕಡಲ ತಡಿಯ ಸಣ್ಣ ಪಟ್ಟಣ ಕಾಪು. ಹಾಗೆ ನೋಡಿದರೆ ಇದು ಮಂಗಳೂರಿಗೂ ಕೇವಲ 40 ಕಿಲೋಮೀಟರ್ ದೂರದಲ್ಲಿದೆ. ಗ್ರಾಮೀಣ ಪ್ರದೇಶವಾದ ಕಾಪುವಿನಲ್ಲಿ ವ್ಯವಸಾಯ, ಮಲ್ಲಿಗೆ ಕೃಷಿ, ಮೀನುಗಾರಿಕೆಯೇ ಜನರ ಬದುಕಿನ ಆಧಾರ. ಇಲ್ಲಿನ ಶಂಕರಪುರ ಮಲ್ಲಿಗೆಯ ಕಂಪು ದೇಶ, ವಿದೇಶದಲ್ಲೂ ಘಮಿಸುತ್ತಿದೆ. ಅತ್ಯಂತ ಬೇಡಿಕೆಯ ಮಲ್ಲಿಗೆ ಇದಾಗಿದೆ. ಶುದ್ಧ ತುಳು ನಾಡಿನ ಸೀಮೆಯಾದ ಕಾಪುವಿನಲ್ಲಿ ಎಲ್ಲಾ ರೀತಿಯ ವ್ಯವಹಾರ ನಡೆಯೋದು ತುಳು ಭಾಷೆಯಲ್ಲೇ. ಇನ್ನು ಇಲ್ಲಿನ ಕಾಪು ದೀಪಸ್ಥಂಭ ಜನಪ್ರಿಯವಾದುದು. ಜತೆಗೆ ಇಲ್ಲಿರುವ ಮೂರು ಮಾರಿಯಮ್ಮ ದೇವಸ್ಥಾನ, ಟಿಪ್ಪು ಸುಲ್ತಾನ್ ಕಟ್ಟಿದ ಬಂದರು ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಪು ಬೀಚ್ ಎಷ್ಟು ಫೇಮಸ್ ಎಂಬುವುದಕ್ಕೆ ಸೂರ್ಯಾಸ್ತ ನೋಡಲು ಬರುವ ಪ್ರವಾಸಿಗರ ಸಂಖ್ಯೆಯೇ ಸಾಕ್ಷಿ.
ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಲೈನ್!
ರಾಜಕೀಯ ಇತಿಹಾಸ:
ಈ ಕ್ಷೇತ್ರದ ಮೇಲೆ ದಿವಂಗತ ವಸಂತ ವಿ. ಸಾಲ್ಯಾನ್ ಪ್ರಬಲ ಹಿಡಿತ ಹೊಂದಿದ್ದರು. ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಸತತ ಐದು ಅವಧಿಗೆ, 1983, 85, 89, 94, 99ರವರೆಗೆ ಈ ಕ್ಷೇತ್ರದಿಂದ ಅವರು ಗೆಲುವಿನ ನಗಾರಿ ಬಾರಿಸಿದ್ದರು. ಹಲವು ಬಾರಿ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ, 2004 ರಲ್ಲಿ ಇಲ್ಲಿ ವಸಂತ ಸಾಲ್ಯಾನ್ ಸೋಲುಂಡರು. 1994 ಮತ್ತು 1999ರಲ್ಲಿ ವಸಂತ ಸಾಲ್ಯಾನ್ ವಿರುದ್ಧ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿಯ ಲಾಲಾಜಿ ಮೆಂಡನ್ 2004ರಲ್ಲಿ ಸಾಲ್ಯಾನ್ಗೆ ಕೇವಲ 1ಸಾವಿರ ಮತಗಳಿಂದ ಸೋಲುಣಿಸಿ ಮೊದಲ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದರು.
ಸೊರಕೆಯನ್ನು ಕಾಪುವಿಗೆ ತಂದ ಕಾಂಗ್ರೆಸ್
ವಿಶೇಷ ಎಂದರೆ 2008ರಲ್ಲೂ ಇಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ ವಸಂತ ವಿ ಸಾಲ್ಯಾನ್ರನ್ನು ಸೋಲಿಸಿದರಾದರೂ, ಗೆಲುವಿನ ಅಂತರ ಮಾತ್ರ ಮತ್ತೆ ಕೇವಲ 1 ಸಾವಿರ ಚಿಲ್ಲರೆ ಮತಗಳಷ್ಟೇ ಇತ್ತು. ಸಾಲ್ಯಾನ್ ಸೋತರೂ ಅವರ ಪ್ರಭಾವ ಕ್ಷೇತ್ರದಲ್ಲಿ ಕೊಂಚವೂ ತಗ್ಗಿರಲಿಲ್ಲ. 2013ರಲ್ಲಿ ಇಲ್ಲಿ ಕಾಂಗ್ರೆಸ್ ವಸಂತ ಸಾಲಿಯಾನ್ಗೆ ಟಿಕೆಟ್ ನೀಡದೆ ಅನುಭವಿ ರಾಜಕಾರಣಿ ವಿನಯ್ ಕುಮಾರ್ ಸೊರಕೆಗೆ ಟಿಕೆಟ್ ನೀಡಿತ್ತು. ಬಂಡೆದ್ದ ವಸಂತ ಸಾಲ್ಯಾನ್ ಜೆಡಿಎಸ್ ಸೇರಿ ಅಲ್ಲಿಂದ ಕಣಕ್ಕಿಳಿದರು. ಆದರೆ ಸೊರಕೆ ಒಮ್ಮೆ ಲೋಕಸಭಾ ಸದಸ್ಯರಾಗಿದ್ದವರು. 2013ರ ಚುನಾವಣೆಯಲ್ಲಿ ಇಲ್ಲಿ ಸೊರಕೆ ನಿಂತಾಗ, ಇವರು ಸಚಿವರಾಗುತ್ತಾರೆ ಎಂದೇ ಕಾಂಗ್ರೆಸ್ ಮತಯಾಚನೆ ಮಾಡಿತ್ತು.
ಕೈ-ಕಮಲ ಫೈಟ್
ಮತದಾನ ನಡೆದು ಫಲಿತಾಂಶ ಹೊರಬಿದ್ದಾಗ ಸೊರಕೆ ಸುಮಾರು ಒಂದೂವರೆ ಸಾವಿರ ಮತಗಳ ಅಂತರದಿಂದ ಜಯ ದಾಖಲಿಸಿದ್ದರು. ಸೋತರೂ ಬಿಜೆಪಿಯ ಲಾಲಾಜಿ ಮೆಂಡನ್ ಪ್ರಬಲ ಸ್ಪರ್ಧೆ ನೀಡಿದ್ದರು. ಅತ್ತ ಜೆಡಿಎಸ್ನಿಂದ ಕಣಕ್ಕಿಳಿದಿದ್ದ ವಸಂತ ವಿ ಸಾಲ್ಯಾನ್ ಕೇವಲ 4 ಸಾವಿರ ಮತಗಳನ್ನಷ್ಟೇ ಪಡೆದಿದ್ದರು. ಗೆದ್ದ ಸೊರಕೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆದರು. ಬಳಿಕ ನಡೆದ ಸಂಪುಟ ಪುನಾರಚನೆ ವೇಳೆ ಕೈಬಿಡಲಾಯಿತು. ಇದಾದ ಬಳಿಕ ನಡೆದ 2018ರ ಚುನಾವಣೆಯಲ್ಲಿ ಮತ್ತೆ ವಿನಯ್ ಕುಮಾರ್ ಸೊರಕೆ ಹಾಗೂ ಲಾಲಾಜಿ ಮೆಂಡನ್ ಮುಖಾಮುಖಿಯಾದರು. ಈ ಕ್ಷೇತ್ರದಿಂದ ಸೊರಕೆಯೇ ಗೆಲ್ಲುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಚುನಾವಣಾ ಹೊಸ್ತಿಲಲ್ಲಿ ನಡೆದ ಕೋಮುಗಲಭೆ ಬಿಜೆಪಿಯನ್ನು ಗೆಲುವಿನ ದಡ ಮುಟ್ಟಿಸಿತ್ತು ಎಂಬ ಮಾತುಗಳು ಈ ವಲಯದಲ್ಲಿ ಕೇಳಿ ಬಂದಿವೆ.
ಈ ಬಾರಿ ಇಲ್ಲಿನ ಟಿಕೆಟ್ ಆಕಾಂಕ್ಷಿಗಳು ಯಾರು?
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಇಲ್ಲಿ ಅಭ್ಯರ್ಥಿಗಳ ನಡುವಿನ ಗೆಲುವಿನ ಅಂತರ ಪ್ರತಿ ಬಾರಿಯೂ ಬಹಳಷ್ಟು ಕಡಿಮೆ ಇರುತ್ತದೆ. ಹೀಗಾಗೇ ಪಕ್ಷಗಳು ಇಲ್ಲಿ ಬಿರುಸಿನ ಪ್ರಚಾರ ನಡೆಸುತ್ತವೆ. ಈ ಬಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಹಳ ಉದ್ದವಿದೆ. ಇದನ್ನು ಹೊರತುಪಡಿಸಿ ಜೆಡಿಎಸ್ ಇಲ್ಲಿ ಪ್ರಾಬಲ್ಯ ಹೊಂದಿಲ್ಲ. ಆದರೆ ಎಸ್ಡಿಪಿಐ ಕಾಂಗ್ರೆಸ್ಗೆ ತೊಡಕಾಗುವ ಸಾಧ್ಯತೆ ಇದೆ. ಹಾಗಾದ್ರೆ ಈ ಬಾರಿಯ ಚುನಾವಣೆಯ ಪ್ರಮುಖ ಟಿಕೆಟ್ ಆಕಾಂಕ್ಷಿಗಳು ಯಾರು? ಹೀಗಿದೆ ವಿವರ.
ಬಿಜೆಪಿ ಆಕಾಂಕ್ಷಿಗಳು:
* ಲಾಲಾಜಿ ಮೆಂಡನ್: ಹಾಲಿ ಶಾಸಕರಾಗಿರುವ ಲಾಲಾಜಿ ಮೆಂಡನ್ಗೆ ಈಬ ಬಾರಿ ಟಿಕೆಟ್ ತಪ್ಪುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
* ಯಶ್ಪಾಲ್ ಸುವರ್ಣ: ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡ ಮುಖಂಡ
* ಪ್ರಮೋದ್ ಮಧ್ವರಾಜ್: ಮಾಜಿ ಸಚಿವ, ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿರುವ ಪ್ರಮೋದ್ ಮಧ್ವರಾಜ್ಗೆ ಉಡುಪಿ ಅಥವಾ ಕಾಪುವಿನ ಟಿಕೆಟ್ ಸಿಗುವ ಸಾಧ್ಯತೆ ಇದೆ.
* ಗುರ್ಮೆ ಸುರೇಶ್ ಶೆಟ್ಟಿ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷಮ ಉದ್ಯಮಿ ಹಾಗೂ ಸಮಾಜ ಸೇವಕ
* ಕುಯಿಲಾಡಿ ಸುರೇಶ್ ನಾಯಕ: ಬಿಜೆಪಿ ಜಿಲ್ಲಾಧ್ಯಕ್ಷ
* ವೀಣಾ ಶೆಟ್ಟಿ: ಜಿಲ್ಲಾ ಮಹಿಳಾ ಮೋರ್ಚಾದ ನಾಯಕಿ
* ಶಿಲ್ಪ ಜಿ ಸುವರ್ಣ: ದಿವಂಗತ ವಸಂತ್ ಸಾಲಿಯಾನ್ ಅವರ ಪುತ್ರಿ. ವಸಂತ್ ಸಾಲಿಯಾನ್ ಈ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದವರು, ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
* ಗೀತಾಂಜಲಿ ಸುವರ್ಣ: ಜಿ. ಪಂ. ಮಾಜಿ ಸದಸ್ಯೆ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು:
* ವಿನಯ್ ಕುಮಾರ್ ಸೊರಕೆ: ಮಾಜಿ ಸಚಿವರಾಗಿರುವ ವಿನಯ್ ಕುಮಾರ್ ಸೊರಕೆ 1985 ಮತ್ತು 1989ರಲ್ಲಿ ಅವರು ಪುತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದವರು. ಬಳಿಕ ಸಂಸದರೂ ಆಗಿದ್ದರು. ತದನಂತರ 2013ರಲ್ಲಿ ಕಾಪು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರಾದ ಸೊರಕೆ ಕಳೆದ ಎರಡು ಅವಧಿಗೆ ಕಾಪು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇವರಿಗೆ ಕಾಂಗ್ರೆಸ್ನಲ್ಲಿ ಪ್ರತಿಸ್ಪರ್ಧಿಗಳಿಲ್ಲ.
ಇದನ್ನೂ ಓದಿ: Karnataka Assembly Elections: ಕುಂದಾಪುರದಲ್ಲಿ ಹಾಲಾಡಿ ಎಂಬ ಅಶ್ವಮೇಧದ ಕುದುರೆಗೆ ತಡೆಯೊಡ್ಡುತ್ತಾ ಕಾಂಗ್ರೆಸ್?
ಜಾತಿ ಸಮೀಕರಣ:
ಒಟ್ಟು ಮತದಾರರು | 1,64,569 |
ಮೊಗವೀರ | 35,000 |
ಬಿಲ್ಲವ | 35,000 |
ಬಂಟ್ಸ್ | 23,500 |
ಕ್ರಿಶ್ಚಿಯನ್ | 18,000 |
ಮುಸ್ಲಿಂ | 15,000 |
ಪರಿಶಿಷ್ಟ ಜಾತಿ | 10,000 |
ಪರಿಶಿಷ್ಟ ಪಂಗಡ | 8,000 |
ಬ್ರಾಹ್ಮಣ | 6,000 |
ಇತರೆ | 14,069 |
2018 ಚುನಾವಣೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಲಾಲಾಜಿ ಮೆಂಡನ್ ಕಣಕ್ಕಳಿದಿದ್ದರೆ, ಕಾಂಗ್ರೆಸ್ನಿಂದ ವಿನಯ್ ಕುಮಾರ್ ಸೊರಕೆ ಸ್ಪರ್ಧೆಯೊಡ್ಡಿದ್ದರು. ಈ ಚುನಾವಣೆಯಲ್ಲಿ ಕಮಲ ಪಾಳಯದ ಅಭ್ಯರ್ಥಿಯಾಗಿದ್ದ ಲಾಲಾಜಿ ಮೆಂಡನ್ 11,917 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಬಿಜೆಪಿ | ಲಾಲಾಜಿ ಮೆಂಡನ್ | 75,893 |
ಕಾಂಗ್ರೆಸ್ | ವಿನಯ್ ಕುಮಾರ್ ಸೊರಕೆ | 63,976 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ