ಕನಕಪುರ ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಇಡೀ ದೇಶವೇ ಕರುನಾಡಿನತ್ತ ನೆಟ್ಟಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ಮುಖಂಡರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ದಾಳ ಉರುಳಿಸಲಾರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದರೆ, ಅತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ವೈಫಲ್ಯವನ್ನು ಜನರೆದುರು ತೆರೆದಿಡುತ್ತಿವೆ. ಈ ಪೈಪೋಟಿ ನಡುವೆ ಮತದಾರರ ಮನ ಗೆಲ್ಲಲು ಸಕಲ ಯತ್ನಗಳು ನಡೆಯುತ್ತಿವೆ. ಹೀಗಿರುವಾಗ ನಿಮ್ಮ ನ್ಯೂಸ್ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಹೀಗಿರುವಾಗ ರಾಮನಗರ (Ramanagara) ಜಿಲ್ಲೆಯ ಮೀಸಲು ಕ್ಷೇತ್ರ ಕನಕಪುರ ವಿಧಾನಸಭಾ ಕ್ಷೇತ್ರದ (Kanakapura Assembly Constituency) ಸಂಪೂರ್ಣ ವಿವರ ನೀಡಲಾಗಿದೆ.
ಕ್ಷೇತ್ರದ ವಿಶೇಷತೆ
ಬೆಂಗಳೂರಿನಿಂದ ಕೇವಲ 55 ಕಿಲೋಮೀಟರ್ ದೂರದಲ್ಲಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಆಡಳಿತ ಕೇಂದ್ರ. ಅರ್ಕಾವತಿ ನದಿ ದಂಡೆಯಲ್ಲಿರುವ ಕರ್ನಾಟಕದ ರಾಮನಗರ ಜಿಲ್ಲೆಗೆ ಸೇರಿದ ಕನಕಪುರ ದೇಶದಲ್ಲಿಯೇ ಅತೀ ಹೆಚ್ಚು ರೇಷ್ಮೆ ಉತ್ಪಾದಿಸುವ ತಾಲೂಕು ಹೀಗಾಗೇ ಇದು '''ರೇಷ್ಮೆ ಕಣಿವೆ''' ಎಂದೇ ಖ್ಯಾತಿ ಪಡೆದಿದೆ. ಗ್ರಾನೈಟ್ ಉತ್ಪಾದನೆಯಲ್ಲಿ ಸಹ ಕರ್ನಾಟಕದಲ್ಲಿ ಬಹಳ ಮುಂಚೂಣಿಯಲ್ಲಿದೆ ಆದ್ದರಿಂದ ಕರ್ನಾಟಕದ ಗ್ರಾನೈಟ್ ರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ಇಲ್ಲಿ ಶ್ರೀ ಶಿವನಂಕಾರೇಶ್ವರ ದೇವಸ್ಥಾನ, ಶಿಥಿಲಗೊಂಡ ರಂಗನಾಥ ದೇವಾಲಯ, ಕಬ್ಬಾಳು ಶಕ್ತಿ ದೇವತೆ ಕ್ಷೇತ್ರಗಳಿವೆ. ಇನ್ನು ಅರಣ್ಯ ಪ್ರದೇಶ ಬಹಳ ವಿಶಾಲವಾಗಿದ್ದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುಮಾರು ಅರ್ಧದಷ್ಟು ಭಾಗ ಕನಕಪುರದಲ್ಲಿದೆ.
ಇದನ್ನೂ ಓದಿ: Karnataka Assembly Elections: ಮೀಸಲು ಕ್ಷೇತ್ರ, ಜೆಡಿಎಸ್ ಭದ್ರಕೋಟೆ ಸಕಲೇಶಪುರಕ್ಕೆ ಲಗ್ಗೆ ಇಡುತ್ತಾ ಬಿಜೆಪಿ?
ರಾಜಕೀಯ ಹಿನ್ನೋಟ
ಸದ್ಯ ಕನಕಪುರದಲ್ಲಿ ತಮ್ಮದೇ ಕೋಟೆ ಕಟ್ಟಿಕೊಂಡಿರುವವರು ಇಂಧನ ಸಚಿವ ಕಾಂಗ್ರೆಸಿನ ಡಿ.ಕೆ. ಶಿವಕುಮಾರ್. ಹಾಗೆ ನೋಡಿದರೆ 2008ಕ್ಕೂ ಮೊದಲು ಶಿವಕುಮಾರ್ ಇಲ್ಲಿನ ಪಕ್ಕದ ಸಾತನೂರು ಕ್ಷೇತ್ರದಿಂದ ಆರಿಸಿ ಬರುತ್ತಿದ್ದವರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸಾತನೂರು ಮರೆಯಾಗುತ್ತಿದ್ದಂತೆ ಶಿವಕುಮಾರ್ ಕನಕಪುರ ಕ್ಷೇತ್ರಕ್ಕೆ ವಲಸೆ ಬಂದು, ಇದನ್ನೂ ತಮ್ಮ ಕೋಟೆಯಾಗಿಸಿಕೊಂಡರು.
ಡಿಕೆಶಿ ಪ್ರಭಾವ
ಕನಕಪುರಕ್ಕೆ ಬರುವ ಮೊದಲು ಸಾತನೂರಿನಿಂದ ಸ್ಪರ್ಧಿಸಿದ್ದ ಡಿಕೆ ಶಿವಕುಮಾರ್ ಸತತ 4 ಬಾರಿ ಗೆದ್ದಿದ್ದರು. ಅವರ ರಾಜಕೀಯ ಹಿನ್ನಲೆ ನೋಡುವುದಾದರೆ 1985ರಲ್ಲಿ ಸಾತನೂರಿನಲ್ಲಿ ಮೊದಲ ಚುನಾವಣೆ ಎದುರಿಸಿದರು. ಆದರೆ ಆ ಎಲೆಕ್ಷನ್ನಲ್ಲಿ ಡಿಕೆಶಿ 16 ಸಾವಿರ ಮತಗಳ ಅಂತರದಿಂದ ದೇವೇಗೌಡರ ವಿರುದ್ಧ ಸೋಲುಂಡರು. ಇದಾದ ಬಳಿಕ ಡಿಕೆಶಿ ಎಂದಿಗೂ ಹಿಂದಿರುಗಿ ನೋಡಲಿಲ್ಲ. 1989, 1994, 1999, 2004ರಲ್ಲಿ ಸಾತನೂರಿನಿಂದ ಸತತ ನಾಲ್ಕು ಬರಿ ಸ್ಪರ್ಧಿಸಿ ಗೆಲುವು ಕಂಡರು. ಇನ್ನು 1994ರಲ್ಲಿ ಕಾಂಗ್ರೆಸ್ ಅವರಿಗೆ ಟಿಕೆಟ್ ನಿರಾಕರಿಸಿದಾಗ ಸ್ವತಂತ್ರವಾಗಿ ಕಣಕ್ಕಿಳಿದು 1 ಸಾವಿರ ಮತಗಳ ಅಂತರದಿಂದ ಎದುರಾಳಿ ಯುಕೆ ಸ್ವಾಮಿ ಯನ್ನು ಸೋಲಿಸಿ ಗೆದ್ದಿದ್ದರು. ಇನ್ನು 1999ರಲ್ಲಂತೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನೇ ಮಂಡಿಯೂರಿಸಿದ್ದರು.
ಕನಕಪುರಕ್ಕೆ ಎಂಟ್ರಿ
ಇನ್ನು 2004ರಲ್ಲಿ ಆಗ ಕಾಂಗ್ರೆಸ್ನಲ್ಲಿದ್ದ ತೇಜಸ್ವಿನಿ ಗೌಡರನ್ನು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದರು. ಇನ್ನು 2008ರಲ್ಲಿ ಡಿಕೆಶಿ ಕನಕಪುರಕ್ಕೆ ಆಗಮಿಸಿದರು. ಅದಕ್ಕೂ ಮುನ್ನ ಕನಕಪುರ ಜೆಡಿಎಸ್ನ ಭದ್ರಕೋಟೆಯಾಗಿತ್ತು. ಇಲ್ಲಿ ಪಿಜಿಆರ್ ಸಿಂಧ್ಯಾ ಸತತ ಆರು ಚುನಾವಣೆಗಳನ್ನು ಗೆದಿದ್ದರು. ಆದರೆ ಡಿಕೆಶಿ ಎಂಟ್ರಿ ಕೊಟ್ಟ ಬಳಿಕ ಇಲ್ಲಿ ಎಲ್ಲವೂ ಬದಲಾಯ್ತು. 2008ರಲ್ಲಿ 8 ಸಾವಿರ ಮತಗಳಿಂದ ಗೆಲುವು ಸಾಧಿಸಿದ ಡಿಕೆಶಿ, 2013ರಲ್ಲಿ ಪಿಜಿಆರ್ ಸಿಂಧ್ಯಾರನ್ನು 32 ಸಾವಿರ ಮತಗಳಿಂದ ಸೋಲಿಸಿದ್ದರು. ಈ ಮೂಲಕ ಕನಕಪುರವನ್ನು ತನ್ನ ಕೋಟೆಯಾಗಿಸಿದರು.
ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಬದಲಾಯಿಸಿ ನಾರಾಯಣ ಗೌಡರನ್ನು ಕಣಕ್ಕಿಳಿಸಿತು. ಆದರೂ ಡಿಕೆಶಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಡಿಕೆಶಿ ಜೆಡಿಎಸ್ ಅಭ್ಯರ್ಥಿಯನ್ನು ಬರೋಬ್ಬರಿ 79,909 ಮತಗಳ ಸಂತರದಿಂದ ಸೋಲಿಸಿದರು.
ಈ ಬಾರಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಿವರು
ಈ ಬಾರಿಯ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಅದರಲ್ಲೂ ವಿಶೇಷವಾಗಿ ಕನಕಪುರದಲ್ಲಿ ಡಿಕೆಶಿ ಮಣಿಸುವ ಹಠದಲ್ಲಿರುವ ಬಿಜೆಪಿ ಆರ್. ಅಶೋಕ್ರನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಇರುತ್ತಿದ್ದ ಸ್ಪರ್ಧೆಗೆ, ಈ ಬಾರಿ ಬಿಜೆಪಿಯೂ ಎಂಟ್ರಿ ಕೊಟ್ಟಿದೆ.
* ಕಾಂಗ್ರೆಸ್: ಡಿ.ಕೆ.ಶಿವಕುಮಾರ್
* ಜೆಡಿಎಸ್: ನಾಗರಾಜ
* ಬಿಜೆಪಿ: ಆರ್.ಅಶೋಕ್
2018ರಲ್ಲಿ ಫಲಿತಾಂಶವೇನಾಗಿತ್ತು?
2018 ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಡಿಕೆ ಶಿವಕುಮಾರ್ ಜೆಡಿಎಸ್ನ ನಾರಾಯಣ ಗೌಡರನ್ನು 79,909 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.
ಪಕ್ಷ | ಅಭ್ಯರ್ಥಿ ಹೆಸರು | ಮತಗಳು |
ಕಾಂಗ್ರೆಸ್ | ಡಿ. ಕೆ. ಶಿವಕುಮಾರ್ | 127,552 |
ಜೆಡಿಎಸ್ | ನಾರಾಯಣ ಗೌಡ | 47,643 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ