ಜಗಳೂರು ವಿಧಾನಸಭಾ ಕ್ಷೇತ್ರವು (Jagaluru assembly constituency) ದಾವಣಗೆರೆ (Davanagere) ಜಿಲ್ಲೆ ಮತ್ತು ಮಧ್ಯ ಕರ್ನಾಟಕ (Midle Karnaraka) ಪ್ರದೇಶದ ರಾಜ್ಯ ವಿಧಾನಸಭಾ ಕ್ಷೇತ್ರವಾಗಿದೆ. ಇದು ದಾವಣಗೆರೆ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಪರಿಶಿಷ್ಟ ಜಾತಿಗೆ (SC) ಮೀಸಲಾದ ಕ್ಷೇತ್ರವಾದವಾಗಿದ್ದು, ಸದ್ಯ ಬಿಜೆಪಿ ಸುಪರ್ದಿಯಲ್ಲಿ ಜಗಳೂರು ಕ್ಷೇತ್ರವಿದೆ. ಎಸ್ವಿ ರಾಮಚಂದ್ರ (SV Ramachandra) ಇಲ್ಲಿನ ಶಾಸಕರಾಗಿದ್ದಾರೆ. ಬರಪೀಡಿತ ಪ್ರದೇಶ (drought-prone region) ಎಂಬ ಕುಖ್ಯಾತಿ ಪಡೆದಿರುವ ಜಗಳೂರು, ಹಲವು ಸಮಸ್ಯೆಗಳಿಂದ ನರಳುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಸದ್ಯ ಚಳಿಯ ವಾತಾವರಣವಿದ್ದರೂ ಜಗಳೂರಿನಲ್ಲಿ ಚುನಾವಣಾ ಬಿಸಿ ಏರುತ್ತಲೇ ಇದೆ.
ಜಗಳೂರು ಕ್ಷೇತ್ರದ ಪರಿಚಯ
2008ರಲ್ಲಿ ಕ್ಷೇತ್ರ ವಿಂಗಡಣೆಯಾಗಿ ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ ಹೋಬಳಿಯ 7 ಗ್ರಾ.ಪಂ. ವ್ಯಾಪ್ತಿಯ 35 ಗ್ರಾಮಗಳು ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ದಾಖಲೆಗಳಲ್ಲಿ `ಶಾಶ್ವತ ಬರಪೀಡಿತ ಪ್ರದೇಶ' ಎಂಬ ಹಣೆಪಟ್ಟಿ ಉಳಿಸಿಕೊಂಡು ಬಂದ ಕುಖ್ಯಾತಿ ಇಲ್ಲಿಯದು.
2008ರಲ್ಲಿ ಕ್ಷೇತ್ರ ವಿಂಗಡಣೆ
2008ರಲ್ಲಿ ಕ್ಷೇತ್ರ ವಿಂಗಡಣೆಯಾಗಿದ್ದು, ಜಗಳೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಈ ಹಿಂದೆ 1962ರಲ್ಲಿ ಒಂದು ಅವಧಿಗೆ ಮಾತ್ರ ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಆಗ ಕಾಂಗ್ರೆಸ್ ಪಕ್ಷದ ಎಂ.ಎನ್. ಕೃಷ್ಣಾಸಿಂಗ್ ಅವರು ಪಿಎಸ್ಪಿಯ ಅಭ್ಯರ್ಥಿ ಜಗಳೂರು ಗೊಲ್ಲರಹಟ್ಟಿಯ ಕೆ.ವಿ. ವೆಂಕಟಪ್ಪ ಅವರ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು.
ಹಾಲಿ ಶಾಸಕ ಎಸ್ವಿ ರಾಮಚಂದ್ರ
ಎಸ್ಟಿಗೆ ಮೀಸಲಾದ ಕ್ಷೇತ್ರದಲ್ಲಿ 2008ರಲ್ಲಿ ಪ್ರಥಮ ಬಾರಿ ಕಾಂಗ್ರೆಸ್ ಪಕ್ಷದ ಎಸ್.ವಿ. ರಾಮಚಂದ್ರ ಬಿಜೆಪಿಯ ಎಚ್.ಪಿ. ರಾಜೇಶ್ ಅವರನ್ನು ಮಣಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ರಾಮಚಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಮಲದ ತೆಕ್ಕೆಗೆ ಜಾರಿದ್ದರು. 2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕೆ ಧುಮುಕಿದ ರಾಮಚಂದ್ರ, ಪಕ್ಷೇತರ ಅಭ್ಯರ್ಥಿಯಾಗಿ ನಿಕಟ ಸ್ಪರ್ಧೆ ಒಡ್ಡಿದ ರಾಜೇಶ್ ಅವರನ್ನು ಅಲ್ಪ ಮತಗಳ ಅಂತರದಿಂದ ಮತ್ತೆ ಸೋಲಿಸಿ ಎರಡನೇ ಬಾರಿ ಆಯ್ಕೆಯಾದರು. ಬಳಿಕ 2013ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ, ರಾಜೇಶ್ ಗೆದ್ದು ಬಂದರು.
ಈ ಬಾರಿ ಜಗಳೂರಿನಲ್ಲಿ ಟಿಕೆಟ್ ಯಾರಿಗೆ?
ಬಿಜೆಪಿಯಿಂದ ಸದ್ಯ ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಅವರೇ ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಅತ್ತ ಕಾಂಗ್ರೆಸ್ನಿಂದ ಈ ಬಾರಿ ಟಿಕೆಟ್ಗಾಗಿ ಭಾರೀ ಪೈಪೋಟಿ ಎದುರಾಗಿದೆ. ಮಾಜಿ ಶಾಸಕ ಎಚ್.ಪಿ. ರಾಜೇಶ್ ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಟ್ಟಿ ದೇವೇಂದ್ರಪ್ಪ, ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ ಹಾಗೂ ಕಳೆದ ಬಾರಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪುಷ್ಪಾ ಲಕ್ಷ್ಮಣ ಸ್ವಾಮಿ ಟಿಕೆಟ್ಗಾಗಿ ಕ್ಯೂ ನಿಂತಿದ್ದಾರೆ.
ಜಗಳೂರು ಜಾತಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿದಂತೆ ಒಟ್ಟು 1,87,914 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 95,362 ಪುರುಷರು, 92,478 ಮಹಿಳೆಯರು ಮತ್ತು 10 ಇತರರು ಇದ್ದಾರೆ. ಕ್ಷೇತ್ರದಲ್ಲಿ ಮತದಾರರ ಲಿಂಗ ಅನುಪಾತ 96.91 ಮತ್ತು ಅಂದಾಜು ಸಾಕ್ಷರತೆ ಪ್ರಮಾಣ 72% ಇದೆ.
ಇನ್ನು ಜಾತಿ ಲೆಕ್ಕಾಚಾರ ನೋಡುವಾದಾದರೆ ಲಿಂಗಾಯತ-42,100, ಕುರುಬ-9,600, ಮುಸ್ಲಿಂ-11,691, ಎಸ್ ಟಿ-36,827, ಎಸ್ ಸಿ-42,420 ಮತದಾರಿದ್ದಾರೆ. ಇನ್ನುಳಿದಂತೆ ಈಡಿಗ-1,800, ಉಪ್ಪಾರ-4,150 ಮತದಾರರು ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ