ದಾವಣಗೆರೆಯ (Davanagere) ಹೊನ್ನಾಳಿ ವಿಧಾನಸಭಾ ಕ್ಷೇತ್ರ (Honnali Assembly Constituency) ಕೂಡ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ. ಮುಖ್ಯವಾಗಿ ತುಂಗೆಭದ್ರಾ ನದಿಯ (Tungabhadra River) ದಡದಲ್ಲಿರುವ ಹೊನ್ನಾಳಿ, ಹೆಚ್ಚು ಭತ್ತ ಬೆಳೆಯುವ ಪ್ರದೇಶವೂ ಹೌದು. ಸದ್ಯ ಬಿಜೆಪಿಯ (BJP) ಭದ್ರಕೋಟೆಯಾಗಿರುವ ಹೊನ್ನಾಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ಮಾಜಿ ಸಚಿವ, ಬಿಜೆಪಿ ನಾಯಕ ಎಂ.ಪಿ. ರೇಣುಕಾಚಾರ್ಯ (M.P. Renukacharya). ಈಗಾಗಲೇ ಮೂರು ಬಾರಿ ಶಾಸಕರಾಗಿ, ಸಚಿವರೂ ಆಗಿದ್ದ ರೇಣುಕಾಚಾರ್ಯ ಇದೀಗ ನಾಲ್ಕನೇ ಬಾರಿ ಗೆಲುವು ಪಡೆಯಲೇ ಬೇಕು ಎಂಬ ಹಂಬಲದಲ್ಲಿದ್ದಾರೆ. ಸದ್ಯ ಹೇಗಿದೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಚಿತ್ರಣ? ಇಲ್ಲಿದೆ ಓದಿ ಸಂಪೂರ್ಣ ಮಾಹಿತಿ…
ಹೊನ್ನಾಳಿ ಕ್ಷೇತ್ರ ಪರಿಚಯ
ಹೊನ್ನಾಳಿಯು ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಪ್ರದೇಶ. 1997 ಆಗಸ್ಟ್ 15ರಂದು ಶಿವಮೊಗ್ಗ ಜಿಲ್ಲೆಯಿಂದ ಬೇರ್ಪಟ್ಟ ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳು ದಾವಣಗೆರೆ ಜಿಲ್ಲೆಯನ್ನು ಸೇರಿದವು. ಈ ತಾಲ್ಲೂಕಿನಲ್ಲಿ ಚಿನ್ನ ಸ್ವಲ್ಪಮಟ್ಟಿಗೆ ಸಿಗುವುದು. ಹೊನ್ನಾಳಿಯ ಚಿನ್ನದಗಣಿ ಪ್ರದೇಶ ಕುದುರೆಕೊಂಡು-ಪಲವನಹಳ್ಳಿಗಳನ್ನೊಳಗೊಂಡಿದೆ. ಈ ಪ್ರದೇಶದಲ್ಲಿ ಚಿನ್ನ ತೆಗೆಯುವ ಕೆಲಸ ನಡೆದು ಲಾಭದಾಯಕವಲ್ಲ ವೆಂದು ಕೈಬಿಡಲಾಗಿದೆ. ಹೊನ್ನಾಳಿಯಲ್ಲಿ ಅಕ್ಕಿ ಮತ್ತು ಎಣ್ಣೆ ಗಿರಣಿಗಳಿವೆ. ಕೈಮಗ್ಗದ ಹತ್ತಿ ಬಟ್ಟೆ ಇಲ್ಲಿ ತಯಾರಾಗುತ್ತದೆ. ಈ ತಾಲ್ಲೂಕು ಒಂದರಲ್ಲೇ 483 ಕೈಮಗ್ಗದ ಘಟಕಗಳಿದ್ದವು.
ಹಾಲಿ ಶಾಸಕ ಎಂಪಿ ರೇಣುಕಾಚಾರ್ಯ
ಹಾಲಿ ಶಾಸಕ ಎಂಪಿ ರೇಣುಕಾಚಾರ್ಯ ತಮ್ಮನ್ನು ತಾವು ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕರೂ ಆಗಿರುವ ರಾಜ್ಯದ ಹಿರಿಯ ರಾಜಕಾರಣಿ ಬಿಎಸ್ ಯಡಿಯೂರಪ್ಪ ಅವರ ಮಾನಸಪುತ್ರ ಅಂತಾನೇ ಕರೆದುಕೊಳ್ಳುತ್ತಾರೆ. ಇದುವರೆಗೂ ಮೂರು ಬಾರಿ ಮಾತ್ರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ, ಈ ಮೂರು ಬಾರಿಯೂ ಗೆದ್ದಿರುವುದು ಬಿಜೆಪಿಯಿಂದ ಗೆದ್ದಿರುವುದು ಎಂಪಿ ರೇಣುಕಾಚಾರ್ಯ ಅವರೇ. 2004, 2008ರಲ್ಲಿ ಗೆದ್ದಿದ್ದ ರೇಣುಕಾಚಾರ್ಯ ಹ್ಯಾಟ್ರಿಕ್ ಗೆಲುವಿನ ಕನಸು ನನಸಾಗಲೇ ಇಲ್ಲ. 2013ರಲ್ಲಿ ರೇಣುಚಾರ್ಯ ಸೋಲು ಅನುಭವಿಸಬೇಕಾಯ್ತು. ಬಳಿಕ 2018ರಲ್ಲಿ ಮತ್ತೆ ಗೆಲುವಿನ ದಡಸೇರಿದರು.
ರೇಣುಕಾಚಾರ್ಯ ಬಗ್ಗೆ ಮತದಾರರು ಏನಂತಾರೆ?
ಎಂಪಿ ರೇಣುಕಾಚಾರ್ಯ ಈ ಹಿಂದೆ 2009ರಲ್ಲಿ ಅಬಕಾರಿ ಸಚಿವರಾಗಿದ್ದಾಗ ನರ್ಸ್ ಜಯಲಕ್ಷ್ಮೀ ಇವರ ವಿರುದ್ಧ ಆರೋಪಿಸಿದ್ದರು. ಆಗ ರೇಣುಕಾಚಾರ್ಯಗೆ ಭಾರೀ ಹಿನ್ನಡೆ ಉಂಟಾಗಿತ್ತು. ಆದರೆ ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ರೇಣುಕಾಚಾರ್ಯ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗುತ್ತದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ, ಲಾಕ್ ಡೌನ್ ವೇಳೆಯಲ್ಲಿ ಆಹಾರ ಸಾಮಗ್ರಿ ಪೂರೈಕೆ ಸೇರಿದಂತೆ ಕ್ಷೇತ್ರದ ಜನತೆಗೆ ಸ್ಪಂದಿಸಿದ್ದಾರೆ ಎಂಬ ಭಾವನೆ ಮತದಾರರಲ್ಲಿದೆ. ಇತ್ತೀಚಿಗಷ್ಟೇ ಅವರ ಸಹೋದರನ ಪುತ್ರ ಅಪಘಾತದಲ್ಲಿ ಸಾವನ್ನಪ್ಪಿದ್ದು , ಆ ಅನುಕಂಪವೂ ಇದೀಗ ಅವರ ಮೇಲಿದೆ.
ಹೊನ್ನಾಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಮತ್ತೊಮ್ಮೆ ಹಾಲಿ ಶಾಸಕ ಎಂಪಿ ರೇಣುಕಾಚಾರ್ಯ ಅವರೇ ಸ್ಪರ್ಧಿಸೋದು ಪಕ್ಕಾ ಆಗಿದೆ. ಸದ್ಯಕ್ಕೆ ಅವರಿಗೆ ಅಲ್ಲಿ ಯಾವುದೇ ಪೈಪೋಟಿ ಕೊಡುವವರು ಇಲ್ಲ. ಅತ್ತ ಕಾಂಗ್ರೆಸ್ನಲ್ಲಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಟೆಕೆಟ್ ಬಯಸಿದ್ದಾರೆ.
ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಕಾಂಗ್ರೆಸ್ ಮುಖಂಡ ಬಿ. ಸಿದ್ದಪ್ಪ ಮತ್ತಿತರರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: Karnataka Assembly Elections: ಮತ್ತೊಮ್ಮೆ ಸ್ಪರ್ಧೆಯ ಉತ್ಸಾಹದಲ್ಲಿ ಶಾಮನೂರು! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲುವವರಾರು?
ಹೊನ್ನಾಳಿ ಜಾತಿ ಲೆಕ್ಕಾಚಾರ
ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳೇ ನಿರ್ಣಾಯಕವಾಗಿದೆ. ಇಲ್ಲಿ ಲಿಂಗಾಯತ ಮತದಾರರು 60,000, ಕುರುಬ ಮತದಾರರು 37,935, ಮುಸ್ಲಿಂ-13,780, ಎಸ್ ಟಿ-11,000, ಎಸ್ ಸಿ-28,500 ಮತದಾರರಿದ್ದಾರೆ. ಇನ್ನು ಮರಾಠ ಮತದಾರರು 3,000 ದಷ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ