ಹಾವೇರಿಯ (Haveri) ಹಿರೇಕೆರೂರು ವಿಧಾನಸಭಾ ಕ್ಷೇತ್ರ (Hirekerur Assembly Constituency) ಈ ಬಾರಿಯೂ ಕೂಡ ತೀವ್ರ ಕುತೂಹಲ ಕೆರಳಿಸುತ್ತಿದೆ. ಚಿತ್ರ ನಟ, ನಿರ್ಮಾಪಕರೂ ಆಗಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್ (Agriculture Minister B.C. Patil) ಪ್ರತಿನಿಧಿಸುವ ಕ್ಷೇತ್ರವಿದು. ಈ ಕಾರಣಕ್ಕಾಗಿಯೇ ಹಿರೇಕೆರೂರು ಕ್ಷೇತ್ರ ಈ ಬಾರಿಯೂ ತೀವ್ರ ಕುತೂಹಲ ಕೆರಳಿಸಿದೆ. 2018ರಲ್ಲಿ ಕಾಂಗ್ರೆಸ್ನಿಂದ (Congress) ಸ್ಪರ್ಧಿಸಿದ್ದ ಬಿ.ಸಿ. ಪಾಟೀಲ್, ಆಗ ಗೆದ್ದು, ಬಳಿಕ ಬಿಜೆಪಿಗೆ (BJP) ಪಕ್ಷಾಂತರಗೊಂಡಿದ್ದರು. ಹೀಗಾಗಿ 2019ರಲ್ಲಿ ಮತ್ತೊಮ್ಮೆ ಉಪ ಚುನಾವಣೆ ನಡೆಯಿತು. ಈ ವೇಳೆ ಈ ಕ್ಷೇತ್ರ ಕಾಂಗ್ರೆಸ್ ಕೈಬಿಟ್ಟು ಹೋಗಿ, ಬಿಜೆಪಿ ತೆಕ್ಕೆ ಸೇರಿತು. ಇದೀಗ ಮತ್ತೊಮ್ಮೆ ಬಿ.ಸಿ. ಪಾಟೀಲ್ ಕಾರಣಕ್ಕೆ ಈ ಕ್ಷೇತ್ರ ಈ ಬಾರಿಯೂ ಪ್ರತಿಷ್ಠೆಯ ಕಣವಾಗಲಿದೆ.
ಹಿರೇಕೆರೂರು ವಿಧಾನಸಭಾ ಕ್ಷೇತ್ರ ಪರಿಚಯ
ಮಲನಾಡಿನ ಭಾಗವಾದ ಹಿರೇಕೆರೂರು ಹಾವೇರಿ ಜಿಲ್ಲೆಯ ಕೊನೆಯ ತಾಲೂಕು. ಹಿಂದೆ ಬನವಾಸಿ 12 ಸಾವಿರ ನಾಡಿಗೆ ಸೇರಿದ್ದ 'ಪಿರಿಯ ಕೆರೆಯೂರು' 12 ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತು. ಬಳಿಕ ಇದೇ ಹಿರೇಕೆರೂರು ಅಂತ ಕರೆಯಯಲ್ಪಟ್ಟಿತು. ಹಿರೇಕೆರೂರು ರಟ್ಟೆಹಳ್ಳಿ ವ್ಯಾಪ್ತಿಯಲ್ಲಿರುವ ಹಳ್ಳಿಗಳನ್ನು ಒಳಗೊಂಡ ಹಿರೇಕೆರೂರು ಈ ಹಿಂದೆ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಆದರೆ ಬಿಸಿ ಪಾಟೀಲ್ ಪಕ್ಷಾಂತರದೊಂದಿಗೆ ಬಿಜೆಪಿ ಕೋಟೆಯಾಗಿ ಮಾರ್ಪಟ್ಟಿದೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ತವರು ಕ್ಷೇತ್ರ
ಹಿರೇಕೆರೂರು ಕ್ಷೇತ್ರ ಕೃಷಿ ಸಚಿವ ಬಿಸಿ ಪಾಟೀಲ್ರ ತವರೂರು. ಪೊಲೀಸ್ ಅಧಿಕಾರಿಯಾಗಿದ್ದ ಬಿ. ಸಿ. ಪಾಟೀಲ್ ಇದೀಗ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ನಲ್ಲಿ ಕೃಷಿ ಸಚಿವರಾಗಿದ್ದಾರೆ.
ಪೊಲೀಸ್ ಅಧಿಕಾರಿಯಿಂದ ಸಚಿವ ಸಂಪುಟದವರೆಗೆ
ಬಿ. ಸಿ. ಪಾಟೀಲ್ ಪೂರ್ಣ ಹೆಸರು ಬಸನಗೌಡ ಚನ್ನಬಸನಗೌಡ ಪಾಟೀಲ್. ನಾಲ್ಕು ಬಾರಿ ಶಾಸಕರಾಗಿರುವ ಬಿ.ಸಿ. ಪಾಟೀಲ್ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲೂ ಸಚಿವರಾಗಿ ಮುಂದುವರೆದಿದ್ದಾರೆ. 1979ರಲ್ಲಿ ಸಬ್ಇನ್ಸ್ಸ್ಪೆಕ್ಟರ್ ನೇಮಕಗೊಂಡರು. ಬಳ್ಳಾರಿ, ಹಿರಿಯೂರು ಮತ್ತು ದಾವಣಗೆರೆಯಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಇನ್ಸ್ಸ್ಟೆಕ್ಟರ್ ಆಗಿ ಬಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡರು. 2003ರಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ, ರೈತ ಹೋರಾಟದಲ್ಲಿ ಭಾಗಿಯಾದರು. ಈ ವೇಳೆ ಜೈಲು ವಾಸವನ್ನೂ ಅನುಭವಿಸಿದರು. ಬಳಿಕ ರಾಜಕೀಯಕ್ಕೆ ಬಂದು. 2004ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾದರು. ಬಳಿಕ 2008, 2018ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾದರು.
555 ಮತಗಳಿಂದ ಗೆದ್ದಿದ್ದ ಬಿ.ಸಿ. ಪಾಟೀಲ್
2018ರಲ್ಲಿ ಬಿಜೆಪಿಯ ಯು.ಬಿ. ಬಣಕಾರ್ ಹಾಗೂ ಕಾಂಗ್ರೆಸ್ನಲ್ಲಿದ್ದ ಬಿಸಿ ಪಾಟೀಲ್ ಮಧ್ಯೆ ಬಿಗ್ ಫೈಟ್ ನಡೆಯಿತು. ಈ ವೇಳೆ ಕೇವಲ 555 ಮತಗಳಿಂದ ಬಿಸಿ ಪಾಟೀಲ್ ಗೆದ್ದಿದ್ದರು. ಬಳಿಕ ಬಿಜೆಪಿಗೆ ಸೇರಿ, 2019ರಲ್ಲಿ ಉಪಚುನಾವಣೆಯಲ್ಲಿ ಗೆದ್ದು, ಕೃಷಿ ಸಚಿವರೂ ಆದರು.
ಈ ಬಾರಿ ಯಾರಿಗೆ ಟಿಕೆಟ್?
ಮಾಜಿ ಶಾಸಕ ಯು.ಬಿ. ಬಣಕಾರ್ ಈ ಬಾರಿ ಕೌರವ ಬಿಸಿ ಪಾಟೀಲ್ಗೆ ಬಿಗ್ ಫೈಟ್ ಕೊಡಲು ಸಜ್ಜಾಗಿದ್ದಾನೆ. ಕೇವಲ 555 ಮತಗಳಿಂದ ಸೋತಿದ್ದ ಬಣಕಾರ್ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ನಿಂದ ಬಣಕಾರ್ ಸ್ಪರ್ಧಿಸೋದಕ್ಕೆ ಮುಂದಾಗಿದ್ದಾರೆ. ಅತ್ತ ಮತ್ತೋರ್ವ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ತನಗೆ ತಪ್ಪಿದರೆ ತನ್ನ ಮಗ ಪ್ರಕಾಶ್ ಬನ್ನಿಕೋಡ್ಗೆ ಟಿಕೆಟ್ ಕೇಳುತ್ತಿದ್ದಾರೆ.
ಇದನ್ನೂ ಓದಿ: Karnataka Assembly Elections: ಏಲಕ್ಕಿ ನಾಡಲ್ಲಿ ಮತ್ತೆ ಅರಳುತ್ತಾ ಕಮಲ? ಹಾವೇರಿ ಮತದಾರರ ಲೆಕ್ಕಾಚಾರ ಹೇಗಿದೆ?
ಹಿರೇಕೆರೂರು ಕ್ಷೇತ್ರದ ಮತದಾರರ ವಿವರ
ಈ ಕ್ಷೇತ್ರದಲ್ಲಿ ಒಟ್ಟೂ 1,82,796 ಮತದಾರರಿದ್ದಾರೆ. ಈ ಪೈಕಿ ಲಿಂಗಾಯತರು 65,000, ಮುಸ್ಲಿಂಮರು 33,000, ಕುರುಬರು 32,000 ಸಾವಿರ ಮತದಾರರಿದ್ದಾರೆ. ಇನ್ನುಳಿದಂತೆ ಎಸ್ಸಿ ಸಮುದಾಯದವರು 22,000 ಹಾಗೂ ಇತರೇ ಸಮುದಾಯದವರು 32,000 ಮಂದಿ ಮತದಾರರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ