ಮುಖ್ಯಮಂತ್ರಿಗಳ ಸ್ವಕ್ಷೇತ್ರ (chief minister's home constituency) ಶಿಗ್ಗಾವಿಯಂತೆ (shiggaon) ಪಕ್ಕದ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲೂ (Haveri assembly constituency) ಚುನಾವಣೆ (Election) ಅಬ್ಬರ ಈಗಾಗಲೇ ಶುರುವಾಗಿದೆ. ಜಿಲ್ಲಾ ಕೇಂದ್ರವನ್ನೂ ಹೊಂದಿರುವ ಹಾವೇರಿ ವಿಧಾನಸಭಾ ಕ್ಷೇತ್ರ 2008ರ ಕ್ಷೇತ್ರ ಮರುವಿಂಗಡಣೆ ಬಳಿಕ ಮೀಸಲು ಕ್ಷೇತ್ರವಾಗಿ (reserved constituency) ಬದಲಾಯ್ತು. ಇದಾದ ಬಳಿಕ 2018ರವರೆಗೆ ಮೂರು ಬಾರಿ ಚುನಾವಣೆ ನಡೆದಿದೆ. ಸದ್ಯ ಬಿಜೆಪಿ (BJP) ತೆಕ್ಕೆಯಲ್ಲಿರುವ ಹಾವೇರಿಯಲ್ಲಿ ನೆಹರೂ ಓಲೇಕಾರ್ (Nehru Olekar) ಗೆದ್ದು, ಅಧಿಕಾರ ನಡೆಸುತ್ತಿದ್ದಾರೆ. ಹಾಗಾದ್ರೆ ಹಾವೇರಿ ಕ್ಷೇತ್ರದಲ್ಲಿ ಪರಿಸ್ಥಿತಿ ಹೇಗಿದೆ? ಹಾಲಿ ಶಾಸಕರ ಬಗ್ಗೆ ಅಲ್ಲಿನ ಮತದಾರರು ಏನಂತಿದ್ದಾರೆ? ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.
ಹಾವೇರಿ ವಿಶೇಷತೆ
ಹಾವೇರಿ ಎಂಬ ಹೆಸರು ಹಾವು ಮತ್ತು ಕೇರಿ ಎಂಬ ಕನ್ನಡ ಪದಗಳಿಂದ ಬಂದಿದೆ. ಇದರರ್ಥ ಹಾವುಗಳ ಸ್ಥಳ . ಏಲಕ್ಕಿ ಹೂಮಾಲೆಗಳಿಗೆ ಹಾವೇರಿ ಪ್ರಸಿದ್ಧವಾಗಿದೆ. ಪ್ರಾಚೀನ ದಿನಗಳಲ್ಲಿ ಹಾವೇರಿಯಲ್ಲಿ ಸುಮಾರು 1000 ಮಠಗಳು ಇದ್ದವು ಎಂದು ಹೇಳಲಾಗುತ್ತದೆ.
ಹಾವೇರಿ ವಿಧಾನಸಭಾ ಕ್ಷೇತ್ರದ ಪರಿಚಯ
2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ಹಾವೇರಿ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಬದಲಾಯ್ತು. ಇದಾದ ಬಳಿಕ ನಡೆದಿರೋ 3 ಚುನಾವಣೆಗಳಲ್ಲಿ ಎರಡು ಬಾರಿ ನೆಹರೂ ಓಲೇಕಾರ್ ಗೆದ್ದಿದ್ದಾರೆ. 2013ರಲ್ಲಿ ಗೆದ್ದಿದ್ದ ರುದ್ರಪ್ಪ ಮಾನಪ್ಪ ಲಮಾಣಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ರು. ಇದಕ್ಕೂ ಮೊದಲು ಹಾವೇರಿ ಜಿಲ್ಲೆಯಲ್ಲಿ ಮೀಸಲು ಕ್ಷೇತ್ರವಾಗಿದ್ದ ಬ್ಯಾಡಗಿಯಲ್ಲಿ ಇಬ್ಬರೂ ಗೆದ್ದಿದ್ದರು. 1999ರ ಚುನಾವಣೆಯಿಂದ ಕಾದಾಟ ನಡೆಸ್ತಿದ್ದು, ಐದು ಬಾರಿ ಇಬ್ಬರೂ ಚುನಾವಣೆಯಲ್ಲಿ ಪರಸ್ಪರ ಎದುರಾಳಿಯಾಗಿದ್ದರು.
ಹಾಲಿ ಶಾಸಕ ನೆಹರೂ ಓಲೇಕಾರ್
ಸದ್ಯ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಹಾವೇರಿ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಹಿಂದೆ ಸಚಿವ ಸಂಪುಟದಲ್ಲಿ ಸ್ಥಾನ ಬಯಸಿ ಬಂಡಾಯ ಎದ್ದಿದ್ದರು. ಇನ್ನು ಇದೇ ಜೂನ್ನಲ್ಲಿ ನೆಹರು ಓಲೇಕಾರ ಕುಟುಂಬದ ವಿರುದ್ಧ ಜಮೀನಿಗಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಶಿಡೇನೂರು ಗ್ರಾಮದ ನಿವಾಸಿಗಳ ಮೇಲೆ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿಬಂದಿದ್ದು, ಕಿರುಕುಳ ತಾಳಲಾರದೆ ನಾಲ್ವರು ಗ್ರಾಮಸ್ಥರು ಜಮೀನಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ಬಾರಿ ಟಿಕೆಟ್ಗಾಗಿ ಪೈಪೋಟಿ
ಹಾಲಿ ಶಾಸಕ ನೆಹರೂ ಓಲೇಕಾರ್ ಈ ಬಾರಿಯೂ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಇವರ ಜೊತೆಗೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಬಿಜೆಪಿ ಮುಖಂಡ ವೆಂಕಟೇಶ ನಾರಾಯಣಿ ಬಿಜೆಪಿಯಿಂದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಅತ್ತ ಕಾಂಗ್ರೆಸ್ನಿಂದ ಮಾಜಿ ಸಚಿವ, ಮಾಜಿ ಶಾಸಕ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಮುಖಂಡ ಶಾಸಕ ಈರಪ್ಪ ಲಮಾಣಿ ಹಾಗೂ ಕಾಂಗ್ರೆಸ್ ಮುಖಂಡ ಡಾ. ಸಂಜಯ್ ಡಾಂಗೆ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಜೆಡಿಎಸ್ನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಕ್ಷೇತ್ರದ ಮತದಾರರ ವಿವರ
ಇನ್ನು ಜಾತಿ ಲೆಕ್ಕಾಚಾರಕ್ಕೆ ಬಂದ್ರೆ ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರದ್ದೇ ಪ್ರಾಬಲ್ಯವಿದೆ.. ಬಹುತೇಕ ಲಿಂಗಾಯತರೇ ಇಲ್ಲಿನ ನಿರ್ಣಾಯಕರು. ಇಲ್ಲಿ ಒಟ್ಟು ಮತದಾರರು – 2,28,864 ಮಂದಿ ಇದ್ದಾರೆ. ಈ ಪೈಕಿ ಲಿಂಗಾಯತ – 65,000, ದಲಿತರು – 42,000, ಮುಸ್ಲಿಂ – 32,000 ಮಂದಿ ಇದ್ದಾರೆ. ಇನ್ನು ಕುರುಬರು – 30,000, ವಿಶ್ವಕರ್ಮ – 14,000 ಮಂದಿ ಇದ್ದಾರೆ.
2018ರ ಚುನಾವಣಾ ಫಲಿತಾಂಶ
ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನೆಹರೂ ಓಲೇಕಾರ್ 86,565 ಮತ ಪಡೆದು ಗೆದ್ದಿದ್ದರೆ, ಕಾಂಗ್ರೆಸ್ನ ರುದ್ರಪ್ಪ ಮಾನಪ್ಪ ಲಮಾಣಿ 75,261 ವೋಟ್ ಪಡೆದು ಸೋತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ