ಹರಿಹರ ವಿಧಾನಸಭಾ ಕ್ಷೇತ್ರವು (Harihar assembly constituency) ದಾವಣಗೆರೆ (Davanagere) ಜಿಲ್ಲೆಯ ಮತ್ತೊಂದು ಪ್ರಮುಖ ವಿಧಾನಸಭಾ ಕ್ಷೇತ್ರವಾಗಿದೆ. ಹರಿಹರೇಶ್ವನರ ದೇಗುಲದಿಂದಾಗಿ (Harihareshwara Temple) ಐತಿಹಾಸಿಕವಾಗಿಯೂ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಸದ್ಯ ಕಾಂಗ್ರೆಸ್ನ (Congress) ಎಸ್ ರಾಮಪ್ಪ (S. Ramappa) ಇಲ್ಲಿನ ಶಾಸಕರು. ಸದ್ಯ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಫಿಕ್ಸ್ ಆಗಿದೆ. ಕಾಂಗ್ರೆಸ್ನ ಹಾಲಿ ಶಾಸಕರು ಮತ್ತೆ ಸ್ಪರ್ಧೆ ಮಾಡಲಿದ್ದರೆ, ಅವರೊಂದಿಗೆ ಸೆಣಸಲು ಬಿಜೆಪಿಯ (BJP) ಮಾಜಿ ಶಾಸಕರು ಹಾಗೂ ಜೆಡಿಎಸ್ನ (JDS) ಮಾಜಿ ಶಾಸಕರು ಸಜ್ಜಾಗಿದ್ದಾರೆ. ಸದ್ಯ ಎಲ್ಲಾ ಕ್ಷೇತ್ರಗಳಂತೆ ಈ ಕ್ಷೇತ್ರದಲ್ಲೂ ಎಲೆಕ್ಷನ್ ಜ್ವರ (Election Fever) ಜೋರಾಗಿದೆ.
ಹರಿಹರ ಕ್ಷೇತ್ರದ ವಿಶೇಷತೆ
ಹರಿಹರ ದಾವಣಗೆರೆ ಜಿಲ್ಲೆ ಒಂದು ತಾಲ್ಲೂಕು ಕೇಂದ್ರ. ಕರ್ನಾಟಕ ರಾಜ್ಯದ ಮಧ್ಯದಲ್ಲಿದೆ. ಹರಿಹರ ನಗರವು ಪುಣೆ-ಬೆಂಗಳೂರು ರಾಜ್ಯ ಹೆದ್ದಾರಿ -4ರಲ್ಲಿ ಬೆಂಗಳೂರಿನಿಂದ 275 ಕಿ.ಮೀ. ದೂರದಲ್ಲಿದೆ. ತುಂಗಭದ್ರಾ ನದಿಯು ಇಡೀ ಜಿಲ್ಲೆಯ ಜೀವನದಿಯಾಗಿದೆ. ಇದನ್ನು ದೇವಸ್ಥಾನಗಳ ಊರೆಂದು ಕರೆಯಬಹುದು. ಕೆಲವು ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಾಗಿ ಈ ಊರು ಸಾಕಷ್ಟು ಜನರಿಗೆ ಜೀವನಾಧಾರವಗಿತ್ತು. ಇಲ್ಲಿನ ಪ್ರಮುಖ ಕೈಗಾರಿಕಾ ಸಂಸ್ಥೆಗಳಲ್ಲಿ ಉಲ್ಲೇಖನೀಯವಾದವುಗಳೆಂದರೆ, ಮೈಸೂರ್ ಕಿರ್ಲೋಸ್ಕರ್ ಲಿಮಿಟೆಡ್ (ಮೆಷಿನ್ ಟೂಲ್) ಕಾರ್ಖಾನೆ (ಈಗ ಮುಚ್ಚಲಾಗಿದೆ) ಹಾಗು ಹರಿಹರ ಪಾಲಿಫೈಬರ್ಸ್ (ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್) ಇತ್ಯಾದಿ.
ಹರಿಹರೇಶ್ವರನ ದೇಗುಲದಿಂದ ಹರಿಹರಕ್ಕೆ ಹೆಸರು
ಇಲ್ಲಿಯ ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ, ಹೊಯ್ಸಳರ ಕಾಲದ ಹರಿಹರೇಶ್ವರ ದೇವಸ್ಥಾನ. ಹರಿಹರೇಶ್ವರ ಸ್ವಾಮಿಯ ಇರುವುದರಿಂದ ಊರಿಗೆ ಹರಿಹರ ಎಂದು ಹೆಸರು ಬಂದಿತು. ಕಪ್ಪು ಬಣ್ಣದ ಹರಿಹರೇಶ್ವರನ ಮೂರ್ತಿಯು 7 ಅಡಿಯಷ್ಟು ಎತ್ತರವಿದ್ದು ಆಕರ್ಷಕವಾಗಿದೆ.
ಇದನ್ನೂ ಓದಿ: Karnataka Assembly Elections: ರಾಣೇಬೆನ್ನೂರಲ್ಲಿ ರಾಜ ಯಾರು? ಮಾಜಿ ಸ್ಪೀಕರ್, ಮಾಜಿ ಸಚಿವರ ತವರಲ್ಲಿ ಹೇಗಿದೆ ಮತ ಚಿತ್ರಣ?
ಕಾಂಗ್ರೆಸ್ ಶಾಸಕ ರಾಮಪ್ಪ
ಕಾಂಗ್ರೆಸ್ ನಾಯಕ ಎಸ್ ರಾಮಪ್ಪ ಅವರು ಪ್ರಸ್ತುತ ಹರಿಹರ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ಹರಿಹರದಿಂದ ಸ್ಪರ್ಧಿಸಿದ್ದರು. ಆದರೆ ಅವರು ಜೆಡಿಎಸ್ ಅಭ್ಯರ್ಥಿ ಎಚ್ಎಸ್ ಶಿವಶಂಕರ್ ವಿರುದ್ಧ ಸೋತರು. ಬಳಿಕ 2018ರ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ನಿಂದ ಸ್ಪರ್ಧಿಸಿದರು. ಈ ಬಾರಿ ಅವರ ಅದೃಷ್ಟ ಚೆನ್ನಾಗಿತ್ತು. 2018ರಲ್ಲಿ ಅವರು ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್ ಅವರನ್ನು ಸೋಲಿಸುವ ಮೂಲಕ ಹರಿಹರ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು.
2018ರ ಚುನಾವಣಾ ಫಲಿತಾಂಶ
2018ರಲ್ಲಿ ಕಾಂಗ್ರೆಸ್ ಶಾಸಕ ಎಸ್ ರಾಮಪ್ಪ ಅವರು ಮೊದಲ ಬಾರಿಗೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ರಾಮಪ್ಪ 64,801 ಮತಪಡೆದು ಗೆದ್ದಿದ್ದರು. ಬಿಜೆಪಿಯ ಹರೀಶ್ 57,541 ಮತ ಪಡೆದಿದ್ದರು. ಅಂದರೆ ರಾಮಪ್ಪ ಅವರು 7260 ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು.
ಹರಿಹರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ
ಈ ಬಾರಿ ಕಾಂಗ್ರೆಸ್ನಲ್ಲೇ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಹಾಲಿ ಶಾಸಕ ಎಸ್. ರಾಮಪ್ಪ ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಆದರೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಉದ್ಯಮಿ ಎನ್.ಎಚ್. ಶ್ರೀನಿವಾಸ, ವಿಟಿಯು ಮಾಜಿ ಕುಲಪತಿ ದೀಟೂರು ಮಹೇಶ್ವರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಅತ್ತ ಬಿಜೆಪಿಯಲ್ಲೂ ಸ್ಪರ್ಧೆ ತುಸು ಜೋರಾಗಿದೆ. ಮಾಜಿ ಶಾಸಕ ಬಿ.ಪಿ. ಹರೀಶ್ ಈ ಬಾರಿಯೂ ಸ್ಪರ್ಧೆಗೆ ಮನಸ್ಸು ಮಾಡಿದ್ದರೆ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಕಾಂಗ್ರೆಸ್, ಬಿಜೆಪಿಗೆ ಪೈಪೋಟಿ ಕೊಡುವುದಕ್ಕೆ ಜೆಡಿಎಸ್ನಿಂದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: Karnataka Assembly Elections: 'ಬ್ಯಾಡಗಿ' ಮೆಣಸು ಈ ಬಾರಿ ಯಾರಿಗೆ ಖಾರ? ಕ್ಷೇತ್ರದಲ್ಲಿ ಹೇಗಿದೆ ಮತದಾರರ ಲೆಕ್ಕಾಚಾರ?
ಹರಿಹರ ಕ್ಷೇತ್ರದ ಜಾತಿ ಲೆಕ್ಕಾಚಾರ
ಹರಿಹರ ಕ್ಷೇತ್ರದಲ್ಲಿ ಸುಮಾರು 1,78,865 ಮಂದಿ ಮತದಾರರಿದ್ದಾರೆ. ಈ ಪೈಕಿ ಲಿಂಗಾಯತ, ಕುರುಬರದ್ದೇ ಪ್ರಾಬಲ್ಯ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು 58,900, ಕುರುಬ ಮತದಾರರು 38,000 ಇದ್ದಾರೆ. ಇನ್ನುಳಿದಂತೆ ಮುಸ್ಲಿಂ-25,800, ಎಸ್ ಸಿ-23,600, ಎಸ್ ಟಿ-15,565, ಈಡಿಗ-8,000, ಮರಾಠ-4,000 ಹಾಗೂ ಉಪ್ಪಾರ ಮತದಾರರು 500 ಮಂದಿ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ