ಹಾವೇರಿ (Haveri) ಜಿಲ್ಲೆಯ ಮತ್ತೊಂದು ಪ್ರಮುಖ ವಿಧಾನಸಭಾ ಕ್ಷೇತ್ರ ಹಾನಗಲ್ ವಿಧಾನಸಭಾ ಕ್ಷೇತ್ರ . ರಾಜ್ಯದ ಹಿರಿಯ ರಾಜಕಾರಣಿ, ಮಾಜಿ ಸಚಿವರೂ (former minister) ಆಗಿದ್ದ, ಬಿಎಸ್ ಯಡಿಯೂರಪ್ಪ (BS Yeddyurappa) ಆಪ್ತರೂ ಆಗಿದ್ದ ದಿವಂಗತ ಸಿ.ಎಂ. ಉದಾಸಿ (CM Udasi) ಅವರ ಸ್ವಕ್ಷೇತ್ರ. 2021, ಜೂನ್ 8ರಂದು ಸಿಎ ಉದಾಸಿ ಅಧಿಕಾರದಲ್ಲಿದ್ದಾಗಲೇ ನಿಧನರಾದರು. ಆ ಬಳಿಕ ನಡೆದ ಉಪ ಚುನಾವಣೆಯಲ್ಲಿ (by-election) ಶ್ರೀನಿವಾಸ ಮಾನೆ (Srinivas Mane) ಗೆದ್ದು, ವಿಧಾನಸಭೆ ಪ್ರವೇಶಿಸಿದರು. ಸಿಎಂ ಉದಾಸಿ ಇದ್ದಾಗ ಬಿಜೆಪಿ (BJP) ಭದ್ರಕೋಟೆಯಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರ, ಬಳಿಕ ಕಾಂಗ್ರೆಸ್ (Congress) ತೆಕ್ಕೆಗೆ ಸೇರಿತು. ಸದ್ಯ ಮತ್ತೊಂದು ಮಹಾ ಚುನಾವಣೆಗೆ ಹಾನಗಲ್ ಸಜ್ಜಾಗುತ್ತಿದೆ. ಹಾಗಾದ್ರೆ ಹೇಗಿದೆ ಅಲ್ಲಿ ಚುನಾವಣಾ ಜ್ವರ? ಕ್ಷೇತ್ರದ ಮತದಾರರು ಹಾಲಿ ಶಾಸಕರ ಬಗ್ಗೆ ಏನಂತಾರೆ? ಅಲ್ಲಿನ ಸಮಸ್ಯೆಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಹಾನಗಲ್ ಕ್ಷೇತ್ರ ಪರಿಚಯ
ಹಾನಗಲ್ ಹಾವೇರಿ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಈ ತಾಲ್ಲೂಕು ಜಿಲ್ಲೆಯ ಮಲೆನಾಡು ಪ್ರದೇಶಕ್ಕೆ ಸೇರಿದೆ. ಈ ಪ್ರದೇಶದಲ್ಲಿ ಚಿಕ್ಕ ಬೆಟ್ಟಗುಡ್ಡಗಳನ್ನು ಕಾಣಬಹುದು. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಗಂಧದ ಮರ ಬೆಳೆಯುತ್ತವೆ. ರಕ್ಷಿತ ಅರಣ್ಯ ಪ್ರದೇಶ ಮತ್ತು ಹುಲ್ಲುಗಾವಲುಗಳಿವೆ. ತಾಲ್ಲೂಕಿನ ಮುಖ್ಯನದಿ ವರದಾ ನದಿ. ಹಾಗನಲ್ ಅಂದರೆ ನೆನಪಿಗೆ ಬರುವುದು ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್. ಹೌದು, ಅವರು ಇದೇ ಕ್ಷೇತ್ರದಲ್ಲಿ ಜನಿಸಿದವವರು.
ಹಾನಗಲ್ ವಿಧಾನಸಭಾ ಕ್ಷೇತ್ರದ ವಿಶೇಷತೆ
ಹಾನಗಲ್ ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದ ಸಿಎಂ ಉದಾಸಿ ಅವರ ಕ್ಷೇತ್ರ. ಪುರಸಭಾ ಸದಸ್ಯರಾಗಿ, ಪುರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಕೆಲಸ ನಿರ್ವಹಿಸಿದ ಸಿಎಂ ಉದಾಸಿ, 1983 ರಿಂದ 2018 ರವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು 1983, 1985, 1994, 2004, 2008 ಮತ್ತು 2018ರಲ್ಲಿ ಚುನಾಯಿತರಾಗಿದ್ದರು. ಅವರು 1989, 1999, 2013 ರಲ್ಲಿ ಸೋತಿದ್ದರು. 2021, ಜೂನ್ 8ರಂದು ಸಿಎ ಉದಾಸಿ ಅಧಿಕಾರದಲ್ಲಿದ್ದಾಗಲೇ ನಿಧನರಾದರು.
ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀನಿವಾಸ ಮಾನೆ
ಸಿಎಂ ಉದಾಸಿ ನಿಧನದಿಂದಾಗಿ 2012ರಲ್ಲಿ ಅಕ್ಟೋಬರ್ 31ರಂದು ಹಾನಗಲ್ನಲ್ಲಿ ಉಪ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಶ್ರೀನಿವಾಸ ಮಾನೆ ಗೆದ್ದು, ವಿಧಾನಸಭೆ ಪ್ರವೇಶಿಸಿದರು. 2010 ರಿಂದ 2021 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಧಾರವಾಡ ಸ್ಥಳೀಯ ಪ್ರಾಧಿಕಾರಗಳ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯ (MLC) ಮತ್ತು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು. 2009 ಮತ್ತು 2015ರಲ್ಲಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಎಐಸಿಸಿ ಮತ್ತು ಕೆಪಿಸಿಸಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಸಿ.ಎಂ.ಉದಾಸಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಬಳಿಕ ಉಪ ಚುನಾವಣೆಯಲ್ಲಿ ಗೆದ್ದು, ಹಾನಗಲ್ ಕ್ಷೇತ್ರದ ಶಾಸಕರಾಗಿದ್ದಾರೆ.
ಹಾನಗಲ್ನಲ್ಲಿ ಈ ಬಾರಿ ಯಾರಿಗೆ ಟಿಕೆಟ್?
ಹಾಲಿ ಶಾಸಕ ಶ್ರೀನಿವಾಸ ಮಾನೆ ಈ ಬಾರಿಯೂ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದಾರೆ. ಮತ್ತೊಂದೆಡೆ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಈ ಬಾರಿ ಸ್ಪರ್ಧೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತದೆ. ಇನ್ನು ಬಿಜೆಪಿಯಲ್ಲಿ ಮಾಜಿ ಶಾಸಕ ಶಿವರಾಜ್ ಸಜ್ಜನರ್, ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಯಾಣ್ ಕುಮಾರ್ ನಡುವೆ ಟಿಕೆಟ್ಗಾಗಿ ಸ್ಪರ್ಧೆ ಇದೆ. ಇವುಗಳ ನಡುವೆ ಜೆಡಿಎಸ್ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ.
ಕ್ಷೇತ್ರದ ಮತದಾರರ ವಿವರ
ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟೂ 2,07,411 ಮತದಾರರು ಇದ್ದಾರೆ. ಈ ಪೈಕಿ ಲಿಂಗಾಯತರ ಮತವೇ ನಿರ್ಣಾಯಕವಾಗಿದ್ದು, ಲಿಂಗಾಯತರು 73,000 ಮತದಾರರಿದ್ದಾರೆ. ಇನ್ನು ಎಸ್ಸಿ - ಎಸ್ಟಿ – 38,000, ಮುಸ್ಲಿಂ – 35,000, ಗಂಗಾಮತಸ್ಥ – 25,000 ಮತದಾರರಿದ್ದಾರೆ. ಇನ್ನು ಇತರೇ ಸಮುದಾಯದ ಮತ 15,000 ಇದ್ದರೆ, ಮರಾಠರು 10,600 ಮಂದಿ ಇದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ