ರಾಜ್ಯದ ಹಿರಿಯ ರಾಜಕಾರಣಿ, ಮಾಜಿ ಸಚಿವ, ರಾಜ್ಯದ ಅತ್ತುತ್ತಮ ಶಾಸಕ ಆರ್.ವಿ. ದೇಶಪಾಂಡೆ (R.V. Deshpande) ಪ್ರತಿನಿಧಿಸುವ ಕ್ಷೇತ್ರವೇ ಹಳಿಯಾಳ ವಿಧಾನಸಭಾ ಕ್ಷೇತ್ರ (Haliya assembly constituency). ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಹಳಿಯಾಳವೂ ಒಂದು. ಮಲೆನಾಡಿನ ಭಾಗದ ಜೊತೆ ಬಯಲುಸೀಮೆಯನ್ನೂ ಹೊಂದಿರುವ ಹಳಿಯಾಳ ಹಲವು ವಿಶೇಷತೆಗಳನ್ನು ಹೊಂದಿದೆ. ದಾಂಡೇಲಿ (Dandeli) ಕಾರ್ಖಾನೆ, ಸೂಫಾ ಅಣೆಕಟ್ಟು, ಉಳವಿ ಪಕ್ಷಿಧಾಮ ಸೇರಿ ಹಲವು ಪ್ರಸಿದ್ಧ ಸ್ಥಳಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲೇ ಇವೆ. ಸದ್ಯ ಆರ್ವಿ ದೇಶಪಾಂಡೆ ಪ್ರತಿನಿಧಿಸುವ ಈ ಕ್ಷೇತ್ರ ಹತ್ತು ಹಲವು ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ಈ ಬಾರಿ ಇಲ್ಲಿಯೂ ಚುನಾವಣಾ ಕಣ ರಂಗೇರಲಿದ್ದು, ಜನರು ಈಗಲೇ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಹಳಿಯಾಳ ವಿಧಾನಸಭಾ ಕ್ಷೇತ್ರದ ಪರಿಚಯ
1967ರಲ್ಲಿ ಶಿರಸಿ ಕ್ಷೇತ್ರದಿಂದ ಬೇರ್ಪಟ್ಟು, ಹೊಸದಾಗಿ ರಚನೆಯಾದ ಕ್ಷೇತ್ರವೇ ಹಳಿಯಾಳ ವಿಧಾನಸಭಾ ಕ್ಷೇತ್ರ. ಮಾಜಿ ಮುಖ್ಯಮಂತ್ರಿ, ರಾಷ್ಟ್ರ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸಿದ್ದ ದಿ. ರಾಮಕೃಷ್ಣ ಹೆಗಡೆ ಹಿಂದೆ ಈ ಕ್ಷೇತ್ರದಿಂದಲೇ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಅದಾದ ಬಳಿಕ ಹಿರಿಯ ರಾಜಕಾರಣಿ ಆರ್ವಿ ದೇಶಪಾಂಡೆ ಬರೋಬ್ಬರಿ 8 ಬಾರಿ ಇದೇ ಕ್ಷೇತ್ರದಿಂದಲೇ ಗೆದ್ದಿದ್ದಾರೆ. ಕಾಡು ಮತ್ತು ಕೃಷಿ ಪ್ರಧಾನವಾದ ಹಳಿಯಾಳ ವಿಧಾನಸಭಾ ಕ್ಷೇತ್ರ ಜತೆಗೆ ಜೊಯಿಡಾ ಹಾಗೂ ನೂತನವಾಗಿ ರಚನೆಯಾಗಿರುವ ದಾಂಡೇಲಿ ತಾಲೂಕುಗಳನ್ನು ಒಳಗೊಂಡಿದೆ.
ಹಳಿಯಾಳ ಕ್ಷೇತ್ರದ ವಿಶೇಷತೆ
ಹಳಿಯಾಳ ಉತ್ತರ ಕನ್ನಡ ಜಿಲ್ಲೆಯ ಒಂದು ವಿಶಿಷ್ಟ ಪ್ರದೇಶ. ಮಲೆನಾಡಿನ ಭಾಗದ ಜೊತೆ ಬಯಲುಸೀಮೆಯನ್ನೂ ಹೊಂದಿರುವ ಹಳಿಯಾಳ ಹಲವು ವಿಶೇಷತೆಗಳನ್ನು ಹೊಂದಿದೆ. ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ದಾಂಡೇಲಿ ಇದೇ ಕ್ಷೇತ್ರದಲ್ಲಿ ಇದೆ. ಮಂಗಟ್ಟೆ ಅಥವಾ ಹಾರ್ನ್ ಬಿಲ್ ಎಂದು ಕರೆಯಲ್ಪಡುವ ವಿಶಿಷ್ಟ ಪಕ್ಷಿಯ ರಕ್ಷಿತ ತಾಣ ಇಲ್ಲೇ ಇದೆ. ಕಾಳಿ ನದಿ, ಕಾವ್ಲಾ ಗುಹೆಗಳು, ಸಿಂಥೇರಿ ರಾಕ್ಸ್, ಉಲವಿ ದೇವಸ್ಥಾನ, ಸೈಕ್ಸ್ ಪಾಯಿಂಟ್ ಮತ್ತು ಸುಪಾ ಜಲವಿದ್ಯುತ್ ಅಣೆಕಟ್ಟು ಇಲ್ಲೇ ಇವೆ. ಪ್ರಕೃತಿ ಪ್ರಿಯರು, ಪ್ರಾಣಿ ಪ್ರಿಯರು, ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಇದಾಗಿದೆ.
ಹಿರಿಯ ರಾಜಕಾರಣಿ ಆರ್ವಿ ದೇಶಪಾಂಡೆ
ರಾಜ್ಯದ ಹಿರಿಯ ರಾಜಕಾರಣಿ, ಮಾಜಿ ಸಚಿವ, ರಾಜ್ಯದ ಅತ್ತುತ್ತಮ ಶಾಸಕ ಆರ್.ವಿ. ದೇಶಪಾಂಡೆ ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇಲ್ಲಿವರೆಗೆ 8 ಬಾರಿ ಗೆದ್ದು ವಿಧಾನಸಭೆ ಪ್ರವೇಶಿಸಿರುವುದು ಇವರ ಹೆಚ್ಚುಗಾರಿಕೆ. 1983ರ ಮೊದಲ ಸ್ಪರ್ಧೆಯಲ್ಲಿ ಜನತಾ ಪಕ್ಷದಲ್ಲಿದ್ದ ಆರ್ವಿ ದೇಶಪಾಂಡೆ, 1989, 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಗೆದ್ದರು. 1999, 2004ರಲ್ಲಿ ಕಾಂಗ್ರೆಸ್ ನಿಂದ ಗೆದ್ದರು. 2008ರಲ್ಲಿ ಸೋತ ದೇಶಪಾಂಡೆ, 2013 ಹಾಗೂ 2018ರಲ್ಲಿ ಪುನಃ ಗೆದ್ದು ಶಾಸಕರಾದರು.
ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ದೇಶಪಾಂಡೆಗೆ ಸ್ಥಾನ!
ಹೌದು ಹೀಗೊಂದು ಮಾತು ರಾಜ್ಯ ರಾಜಕಾರಣದಲ್ಲಿ ಚಾಲ್ತಿಯಲ್ಲಿದೆ. ಯಾವಾಗ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೂ ಆರ್ವಿ ದೇಶಪಾಂಡೆಯವರು ಸಚಿವರಾಗ್ತಾರೆ ಅನ್ನೋ ಮಾತಿದೆ. ಅದರಂತೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮಾರ್ಗದರ್ಶನದಲ್ಲಿ ಬೆಳೆದ ಆರ್.ವಿ. ದೇಶಪಾಂಡೆ ಅವರು ಕನಿಷ್ಠ ಸುಮಾರು 10 ಜನ ಮುಖ್ಯಮಂತ್ರಿಗಳ ಜೊತೆ ಕಾರ್ಯ ನಿರ್ವಹಿಸಿದ್ದಾರೆ. ಸಚಿವರಾಗಿ, ಪ್ರತಿಪಕ್ಷದ ನಾಯಕರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, 2004 ರಲ್ಲಿ ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಸಣ್ಣ ಕೈಗಾರಿಕೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಕೃಷಿ, ತೋಟಗಾರಿಕೆ, ಕಂದಾಯ, ಕೌಶಲ್ಯಾಭಿವೃದ್ಧಿ ಸೇರಿದಂತೆ ಅನೇಕ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಹಳಿಯಾಳದಲ್ಲಿ ಈ ಬಾರಿ ಯಾರಿಗೆ ಟಿಕೆಟ್?
ಈ ಬಾರಿಯೂ ಆರ್.ವಿ. ದೇಶಪಾಂಡೆ ಟಿಕೆಟ್ ಬಯಸಿದ್ದಾರೆ. ಮತ್ತೊಂದೆಡೆ ಅವರಿಗೆ ಟಿಕೆಟ್ಗಾಗಿ ಪೈಪೋಟಿ ಕೊಡಲು ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀಕಾಂತ್ ಘೋಟ್ನೇಕರ್ ಸಜ್ಜಾಗಿದ್ದಾರೆ. ಅತ್ತ ಬಿಜೆಪಿಯಲ್ಲಿ ಸುನೀಲ್ ಹೆಗಡೆ ಟಿಕೆಟ್ ನಿರೀಕ್ಷೆಯಲ್ಲಿದ್ದರೆ, ಜೆಡಿಎಸ್ನಲ್ಲಿ ಯಾರಿಗೆ ಟಿಕೆಟ್ ಸಿಗಬಹುದು ಎನ್ನುವುದು ಗೊತ್ತಾಗಿಲ್ಲ.
ಕ್ಷೇತ್ರದ ಮತದಾರರ ವಿವರ
ಕ್ಷೇತ್ರದಲ್ಲಿ ಒಟ್ಟು ಮತದಾರರು – 1,76,907ರಷ್ಟಿದ್ದಾರೆ. ಇನ್ನು ಮರಾಠರು – 45,035, ಮುಸ್ಲಿಂ – 26,050, ಕುಣಬಿ ಸಮುದಾಯದ ಮತದಾರರು 21,612 ಮಂದಿ ಇದ್ದಾರೆ. ಇನ್ನು ಅಲ್ಪಸಂಖ್ಯಾತ – 15,000, ಲಿಂಗಾಯತ – 14,010, ಎಸ್ಸಿ – 11,345, ಬ್ರಾಹ್ಮಣ – 11,000 ಮತದಾರರಿದ್ದರೆ, ಇತರೇ ಸಮುದಾಯದ ಮತದಾರರ ಸಂಖ್ಯೆ 10,000 ಆಗಿದೆ.
ಕ್ಷೇತ್ರದ ಸಮಸ್ಯೆಗಳು
ಹಳಿಯಾಳ ಕ್ಷೇತ್ರದಲ್ಲಿ ಕಬ್ಬು ಬೆಳೆಗಾರರು ಹಲವು ಸಮಸ್ಯೆಗಳಿಂದ ತತ್ತರಿಸಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎನ್ನಲಾಗುತ್ತಿದೆ. ಉತ್ತರ ಕನ್ನಡದ ಎಲ್ಲಾ ಕ್ಷೇತ್ರಗಳಂತೆ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿನ ಮತದಾರರ ಬೇಡಿಕೆಯೂ ಆಗಿದೆ. ಇದಕ್ಕೆ ಆರ್.ವಿ. ದೇಶಪಾಂಡೆ ಶ್ರಮಿಸಿಲ್ಲ ಎನ್ನುವುದು ಗಂಭೀರ ಆರೋಪ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ