ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಮಗ್ಗುಲಲ್ಲೇ ಇದ್ದರೂ ದೊಡ್ಡಬಳ್ಳಾಪುರ (Doddaballapur) ಎನ್ನುವುದು ಚಿಕ್ಕಬಳ್ಳಾಪುರದ ಭಾಗವಲ್ಲ. ಬದಲಾಗಿ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಒಂದು ಭಾಗ ದೊಡ್ಡಬಳ್ಳಾಪುರ. ಸದ್ಯ ಈ ಕ್ಷೇತ್ರದಲ್ಲೂ ಚುನಾವಣೆ (Election) ಭರಾಟೆ ಜೋರಾಗಿದೆ. ಗ್ರಾಮೀಣ ಸೊಗಡನ್ನು ತನ್ನಲ್ಲಿ ಉಳಿಸಿಕೊಂಡಿರುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ (Doddaballapur Assembly Constituency) ಸದ್ಯ ಕಾಂಗ್ರೆಸ್ (Congress) ಭದ್ರಕೋಟೆಯಾಗಿದೆ. ಹಾಗಾದರೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಹೇಗಿದೆ? ಅಲ್ಲಿ ಚುನಾವಣಾ ಕಾವು ಹೇಗಿದೆ? ಕ್ಷೇತ್ರದ ಅಭಿವೃದ್ಧಿ ಬಗ್ಗೆ, ಶಾಸಕರ ಬಗ್ಗೆ ಅಲ್ಲಿನ ಮತದಾರರು ಏನಂತಾರೆ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…
ದೊಡ್ಡಬಳ್ಳಾಪುರ ಕ್ಷೇತ್ರ ಪರಿಚಯ
ಸ್ಥಳೀಯ ಆದಿನಾರಾಯಣ ದೇವಸ್ಥಾನದಿಂದ ಕ್ರಿ.ಶ 1598 ರ ದಾಖಲೆಯಲ್ಲಿ ಈ ಸ್ಥಳವನ್ನು ಬಲ್ಲಲಾಪುರ ತಾಂಡಾ ಎಂದು ಉಲ್ಲೇಖಿಸಲಾಗಿದೆ. ಹಸುವಿನ ಹಾಲನ್ನು ಅಳೆಯಲು ಉಪಯೋಗಿಸುತ್ತಿದ್ದ ಬಳ್ಳದಿಂದ ದೊಡ್ಡಬಳ್ಳಾಪುರ ಎಂಬ ಹೆಸರು ಹುಟ್ಟಿದೆ ಎನ್ನಲಾಗುತ್ತಿದೆ. ಬೆಂಗಳೂರಿನಿಂದ 36 ಕಿ.ಮೀ ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ಐದು ಪ್ರಮುಖ ಹೋಬಳಿಗಳನ್ನು ಹೊಂದಿದೆ. ದೊಡ್ಡಬೆಳವಂಗಲ, ತೂಬಗೆರೆ, ಸಾಸಲು, ಮಧುರೆ ಹಾಗೂ ಕಸಬಾ ಪ್ರಮುಖ ಹೋಬಳಿ ಕೇಂದ್ರಗಳಾಗಿವೆ. ಸದ್ಯ ದೊಡ್ಡಬಳ್ಳಾಪುರ ತಾಲ್ಲೂಕು 29 ಗ್ರಾಮ ಪಂಚಾಯತಿಗಳನ್ನು ಹೊಂದಿದೆ.
ಹಲವು ವಿಶೇಷತೆಗಳನ್ನು ಹೊಂದಿರುವ ಕ್ಷೇತ್ರ
ದೊಡ್ಡಬಳ್ಳಾಪುರ ಪಟ್ಟಣವು ರೇಷ್ಮೆ ಸೀರೆಗಳನ್ನು ನೇಯ್ಗೆ ಮಾಡಲು ಹೆಸರುವಾಸಿಯಾಗಿದೆ. ತಾಲ್ಲೂಕು ಜನಸಂಖ್ಯೆಯ ಬಹುಪಾಲು ಜನರು ಇನ್ನೂ ಕೃಷಿಯನ್ನು ಮುಖ್ಯ ಆದಾಯದ ಮೂಲವಾಗಿ ಪರಿಗಣಿಸಿದ್ದಾರೆ. ಪಟ್ಟಣ ಪ್ರದೇಶದಲ್ಲಿ ಜನರು ನೇಯ್ಗೆ ಸಂಬಂಧಿತ ವ್ಯವಹಾರವನ್ನು ಅವಲಂಬಿಸಿದ್ದಾರೆ. ವಿದ್ಯುತ್ ಮಗ್ಗ ಮತ್ತು ಕೈಮಗ್ಗಗಳಿಂದ ಮತ್ತು ರೇಷ್ಮೆ ಬಟ್ಟೆಗಳ ತಯಾರಿಕೆಯಾಗಿದ್ದು, ವೀಣಾ ಮತ್ತು ತಂಬುರಿ, ಪಾಟರಿ ಕೃತಿಗಳು, ಅಗರ್ಬತ್ತಿ ಮುಂತಾದವುಗಳನ್ನು ತಯಾರಿಸುತ್ತಿವೆ. ಕೈಗಾರಿಕಾ ಪ್ರದೇಶದ ವಿವಿಧ ರೀತಿಯ ಸಣ್ಣ ಪ್ರಮಾಣದ ಮತ್ತು ದೊಡ್ಡ ಪ್ರಮಾಣದ ಕೈಗಾರಿಕೆಗಳು ಮತ್ತು ಕೈಗಾರಿಕಾ ಎಸ್ಟೇಟ್ ಇವೆ. ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಪ್ರಸಿದ್ಧಿಯಾಗಿದೆ. ಇನ್ನೂ ಹಲವು ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳು ಈ ಕ್ಷೇತ್ರದಲ್ಲಿವೆ.
ಸ್ಥಳೀಯ ಶಾಸಕ ವೆಂಕಟರಮಣಯ್ಯ
ವೆಂಕಟರಮಣಯ್ಯ 2013ರಲ್ಲಿ ಇಲ್ಲಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. 2018ರಲ್ಲೂ ಇಲ್ಲಿಂದಲೇ ಗೆದ್ದಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ವೆಂಕಟರಮಣಯ್ಯ ಮೊದಲ ಬಾರಿಗೆ ಮಂಡಲ ಪಂಚಾಯತ್ ಚುನಾವಣೆಯಲ್ಲಿ ತಮ್ಮ ತಾಯಿಯ ಪರವಾಗಿ ಪ್ರಚಾರ ಮಾಡಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಗೆಲುವು ಅವರ ಪಾಲಿಗೆ ರಾಜಕೀಯ ಪಾದಾರ್ಪಣೆಯಂತಿತ್ತು. ಅಲ್ಲಿಂದ ಮುಂದೆ ಹಲವಾರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಬಹುಬೇಗ ಜನಪ್ರಿಯರಾದರು.
ಈ ಬಾರಿ ಯಾರಿಗೆ ಟಿಕೆಟ್?
ದೊಡ್ಡಬಳ್ಳಾಪುರದಲ್ಲಿ ಈ ಬಾರಿ ಮೂರೂ ಪಕ್ಷಗಳಿಂದಲೂ ಟಿಕೆಟ್ಗಾಗಿ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕ ವೆಂಕಟರಮಣಯ್ಯ, ಬಮೂಲ್ ನಿರ್ದೇಶಕ ಬಿಸಿ ಆನಂದ್ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದಾರೆ. ಅತ್ತ ಬಿಜೆಪಿಯಿಂದ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಅವರೊಂದಿಗೆ ಟಿಕೆಟ್ಗಾಗಿ ಸಮಾಜಸೇವಕ ಧೀರಜ್ ಮುನಿರಾಜು ಟಿಕೆಟ್ ಬಯಸಿದ್ದಾರೆ. ಅತ್ತ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ವಿಧಾನ ಪರಿಷತ್ ಸದಸ್ಯ ಎಚ್.ಎಂ. ರಮೇಶಗೌಡ, ಜೆಡಿಎಸ್ ಮುಖಂಡ ಹರೀಶ್ ಗೌಡ ಸೇರಿದಂತೆ ಪ್ರಮುಖರು ರೇಸ್ನಲ್ಲಿದ್ದಾರೆ.
ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ |
ವೆಂಕಟರಮಣಯ್ಯ | ವಾಣಿಶ್ರೀ ವಿಶ್ವನಾಥ್ | ಎಚ್.ಎಂ. ರಮೇಶಗೌಡ |
ಬಿ.ಸಿ. ಆನಂದ್ | ಧೀರಜ್ ಮುನಿರಾಜು | ಬಿ. ಮುನೇಗೌಡ |
ಹರೀಶ್ ಗೌಡ |
ಕ್ಷೇತ್ರದಲ್ಲಿ ಒಟ್ಟು - 2,03,232 ಮತದಾರರಿದ್ದಾರೆ. ಎಸ್ಸಿ-ಎಸ್ಟಿ – 46,620, ಒಕ್ಕಲಿಗ – 43,923, ಲಿಂಗಾಯತರು – 26,278 ಹಾಗೂ ಮುಸ್ಲಿಂ ಮತದಾರರು 18,743 ಮಂದಿಯಿದ್ದಾರೆ.
ಇದನ್ನೂ ಓದಿ: Karnataka Assembly Elections: ಈ ಬಾರಿಯೂ ‘ಪ್ರವೀಣನ ಜೊತೆ ನವೀನ’ನ ಗುದ್ದಾಟ! ಹೊಸಕೋಟೆಯಲ್ಲಿ ಕೋಟೆ ಕಟ್ಟುವವರಾರು?
ಹರಿದು ಬರುತ್ತಾ ಎತ್ತಿನ ಹೊಳೆ ನೀರು?
ಎತ್ತಿನ ಹೊಳೆ ಯೋಜನೆ ಎನ್ನುವುದು ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಕನಸಿನ ಯೋಜನೆ. ದಕ್ಷಿಣ ಕನ್ನಡದಿಂದ 'ಎತ್ತಿನಹೊಳೆ ಯೋಜನೆ' ಮೂಲಕ ನೀರು ಹರಿದುಬರುತ್ತದೆ ಎಂದು ಜನರು ಕಾದು ಕುಳಿತಿದ್ದಾರೆ. ಆದರೆ ಅದಕ್ಕೆ ಈಗಾಗಲೇ ಪರ ವಿರೋಧ ಎದುರಾಗಿದ್ದು, ಯೋಜನೆ ನೆನೆಗುದಿಗೆ ಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ