ಇತಿಹಾಸದಲ್ಲಿ ದೇವನದೊಡ್ಡಿ (Devanadoddy), ದೇವನಪುರ (Devanapura) ಅಂತೆಲ್ಲ ಕರೆಸಿಕೊಂಡಿದ್ದ ದೇವನಹಳ್ಳಿ (Devanahalli), ಇದೀಗ ಹಳ್ಳಿಯಾಗಿ ಉಳಿದಿಲ್ಲ. ದಿಲ್ಲಿಯನ್ನೇ ನಾಚಿಸುವಂತೆ ಬೆಳೆಯುತ್ತಿದೆ. ಇದಕ್ಕೆ ಕಾರಣ ಇದರ ವ್ಯಾಪ್ತಿಯಲ್ಲೇ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport – KIAL). ದೇವನಹಳ್ಳಿ ವಿಧಾನಸಭಾ ಕ್ಷೇತ್ರವು (Devanahalli assembly constituency) ಬೆಂಗಳೂರು ಗ್ರಾಮಾಂತರದ (Bengaluru Rural) ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಕೆಂಪೇಗೌಡರು (Kempegowda), ಟಿಪ್ಪು ಸುಲ್ತಾನ್ (Tipu Sultan) ಸೇರಿದಂತೆ ಐತಿಹಾಸಿಕ ಪುರುಷರೊಂದಿಗೆ ನಂಟು ಹೊಂದಿರುವ ದೇವನಹಳ್ಳಿ ಬೆಂಗಳೂರಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಜೆಡಿಎಸ್ನ (JDS) ನಿಸರ್ಗ ನಾರಾಯಣ ಸ್ವಾಮಿ (Nisarga Narayana Swamy) ದೇವನಹಳ್ಳಿ ಶಾಸಕ. ಸದ್ಯ ಅಲ್ಲೂ ಚುನಾವಣಾ ಕಾವು ಏರುತ್ತಿದ್ದು, ಅಲ್ಲಿ ಕ್ಷೇತ್ರ ಚಿತ್ರಣ ತಿಳಿಯೋಣ ಬನ್ನಿ…
ದೇವನಹಳ್ಳಿ ಕ್ಷೇತ್ರ ಪರಿಚಯ
ದೇವನಹಳ್ಳಿಯು ಬೆಂಗಳೂರಿನಿಂದ ಹೈದಾರಬಾದ್ ಗೆ ಹೋಗುವ ಎನ್ಎಚ್-7 ರಸ್ತೆಯಲ್ಲಿದ್ದು ಬೆಂಗಳೂರಿನಿಂದ ಸುಮಾರು 34 ಕೀಲೋಮೀಟರ್ ದೂರದಲ್ಲಿರುತ್ತದೆ. ಮೈಸೂರು ಹುಲಿ ಎಂದೆ ಪ್ರಸಿದ್ದಿ ಪಡೆದಿದ್ದ ಟಿಪ್ಪು ಸುಲ್ತಾನರ ಜನ್ಮ ಸ್ಥಳವು ಪುರಸಭೆ ವ್ಯಾಪ್ತಿಯಲ್ಲಿದ್ದು ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ.. ದೇವನಹಳ್ಳಿ ಯಲ್ಲಿ 1501 ನೇ ಇಸವಿಯ ಪುರಾತನ ಕೋಟೆ ಇದ್ದು, ಹಲವು ಐತಿಹಾಸಿಕ ತಾಣಗಳು ಇಲ್ಲಿವೆ.
ವಿಮಾನ ನಿಲ್ದಾಣದಿಂದ ಭೂಮಿಗೆ ಬಂಗಾರದ ಬೆಲೆ
ಬೆಂಗಳೂರು ಅಂತರ್ ರಾಷ್ಷೀಯ ವಿಮಾನ ನಿಲ್ದಾಣವು ದೇವನಹಳ್ಳಿಯಿಂದ 6.5 ಕೀಲೋಮೀಟರ್ ದೂರದಲ್ಲಿರುತ್ತದೆ. ದೇವನಹಳ್ಳಿ ಮೊದಲು ಅತೀ ಹೆಚ್ಚು ಕೃಷಿ ಭೂಮಿ ಹೊಂದಿದ್ದ ಕ್ಷೇತ್ರವಾಗಿದ್ದು, ಬೆಂಗಳೂರಿಗೆ ಅತೀ ಹೆಚ್ಚು ತರಕಾರಿ ಸರಬರಾಜು ಮಾಡುತ್ತಿತ್ತು. ಆದರೆ 2008ರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆಯಾಯ್ತು. ಅಲ್ಲಿಂದ ದೇವನಹಳ್ಳಿಯ ದೆಸೆಯೇ ಬದಲಾಯ್ತು.
ಕೃಷಿಕರಿಗಿಂತ ರಿಯಲ್ ಎಸ್ಟೇಟ್ ಉದ್ಯಮಿಗಳೇ ಜಾಸ್ತಿಯಾಗಿ, ಭೂಮಿಗೆ ಬಂಗಾರದ ಬೆಲೆ ಬಂತು. ಖ್ಯಾತ ಸಾಹಿತಿ 'ಡಿವಿಜಿ' ಯವರು ವಾಸಿಸುತ್ತಿದ್ದ ಹಳೆಯ ಮನೆ ಇಲ್ಲಿದೆ. ದುಬೈ, ಶಾರ್ಜಾಗಳಿಗೆ ರಫ್ತಾಗುವ, 'ಚಕ್ಕೋತನ ಹಣ್ಣು' ಗಳಿಗೆ ದೇವನಹಳ್ಳಿ ಪ್ರಸಿದ್ಧಿಯಾಗಿದೆ. ಸಭೆ-ಸಮಾರಂಭಗಳಲ್ಲಿ ನಮ್ಮ ಜನ, ನಿಂಬೆಹಣ್ಣನ್ನು ಕೊಟ್ಟು ಅತಿಥಿಗಳ ದಣಿವಾರಿಕೆಯನ್ನು ವ್ಯವಸ್ಥೆ ಮೊದಲಿಂದ ಇದೆ. ಆದರೆ, ದೇವನಹಳ್ಳಿಯಲ್ಲಿ 'ಚಕ್ಕೋತ ಹಣ್ಣು' ನಿಂಬೆಹಣ್ಣಿನ ಜಾಗವನ್ನು ಆಕ್ರಮಿಸಿದೆ.
ಇದನ್ನೂ ಓದಿ: Karnataka Assembly Elections: ಈ ಬಾರಿಯೂ ‘ಪ್ರವೀಣನ ಜೊತೆ ನವೀನ’ನ ಗುದ್ದಾಟ! ಹೊಸಕೋಟೆಯಲ್ಲಿ ಕೋಟೆ ಕಟ್ಟುವವರಾರು?
ಶಾಸಕ ನಿಸರ್ಗ ನಾರಾಯಣ ಸ್ವಾಮಿ
ದೇವನಹಳ್ಳಿ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಪ್ರಾರಂಭದಲ್ಲೇ ಬಂಡಾಯದ ಬಿಸಿ ಅನುಭವಿಸಿದ್ದವರು. 2018ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಥಳೀಯರಲ್ಲ. ಕೇವಲ ನಾಲ್ಕು ವರ್ಷದ ಹಿಂದೆ ದೇವನಹಳ್ಳಿ ರಾಜಕೀಯದಲ್ಲಿ ಕಾಣಿಸಿಕೊಂಡವರು. ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಪರಿಚಿತರಾದವರು. ಇದನ್ನೇ ಬಂಡವಾಳ ಮಾಡಿಕೊಂಡು ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಚುನಾವಣೆಯಲ್ಲೂ ಗೆಲುವು ಸಾಧಿಸಿದರು.
ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ
ಜೆಡಿಎಸ್ ನಿಂದ ಗೆಲವು ಸಾಧಿಸಿದ್ದ ಪಿಳ್ಳಮುನಿಶಾಮಪ್ಪ ಸದ್ಯ ಬಿಜೆಪಿ ಸೇರಿದ್ದಾರೆ. 2018ರಲ್ಲಿ ಟಿಕೆಟ್ ವಂಚಿತ ಪಿಳ್ಳಮುನಿಶ್ಯಾಮಪ್ಪ ಮತ್ತು ಅವಬೆಂಬಲಿಗರು ಜೆಡಿಎಸ್ ವರಿಷ್ಠರ ಈ ನಡೆಯಿಂದ ಮುನಿಸಿಕೊಂಡಿದ್ದರು. ಬಳಿಕ ಬಿಜೆಪಿಗೆ ಸೇರಿದ್ದರು.
ದೇವನಹಳ್ಳಿಯಲ್ಲಿ ಈ ಬಾರಿ ಟಿಕೆಟ್ ಯಾರಿಗೆ?
ಜೆಡಿಎಸ್ನಿಂದ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರೇ ಈ ಬಾರಿಯೂ ಟಿಕೆಟ್ ಬಯಸಿದ್ದಾರೆಯ. ಇವರ ಜೊತೆಗೆ ಟಿಕೆಟ್ಗಾಗಿ ಸ್ಪರ್ಧೆಗೆ ಜೆಡಿಎಸ್ ನಾಯಕ, ಸಮಾಜಸೇವಕ ಮಂಜುನಾಥ್ ಎಂಬುವರು ಸಜ್ಜಾಗಿದ್ದಾರೆ. ಅತ್ತ ಕಾಂಗ್ರೆಸ್ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ವೆಂಕಟಸ್ವಾಮಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರೊಂದಿಗೆ ಕಾಂಗ್ರೆಸ್ ನಾಯಕ ಶಾಂತಕುಮಾರ್ ಎಂಬುವರು ರೇಸ್ನಲ್ಲಿದ್ದಾರೆ. ಅತ್ತ ಜೆಡಿಎಸ್ ತೊರೆದು ಬಿಜೆಪಿ ಪಿಳ್ಳಮುನಿಶಾಮಪ್ಪ ಈ ಬಾರಿ ಸ್ಪರ್ಧೆ ಬಯಸಿದ್ದರೆ, ಅವರಿಗೆ ಟಿಕೆಟ್ ಪಡೆಯುವಲ್ಲಿ ಪೈಪೋಟಿ ನೀಡಲು ನಾಗೇಶ್ ಎಕೆಪಿ ಇದ್ದಾರೆ.
ಕ್ಷೇತ್ರದ ಮತದಾರರ ವಿವರ
ದೇವನಹಳ್ಳಿ ಕ್ಷೇತ್ರದಲ್ಲಿ ಒಟ್ಟು 206029 ಮತದಾರರು ಇದ್ದಾರೆ. ಈ ಪೈಕಿ ಎಸ್ಸಿ-ಎಸ್ಟಿ – 74,662, ಒಕ್ಕಲಿಗ – 45,723, ಕುರುಬರು – 16,231 ಮತದಾರರು ಇದ್ದಾರೆ. ಇನ್ನು ಮುಸ್ಲಿಂಮರು 8723, ಲಿಂಗಾಯತ – 7233 ಹಾಗೂ ವಿಶ್ವಕರ್ಮ ಸಮುದಾಯದವರು 2621 ಮತದಾರರಿದ್ದಾರೆ.
ದೇವನಹಳ್ಳಿ ಅಭಿವೃದ್ಧಿಗೆ ಯೋಜನೆ
ದೇವನಹಳ್ಳಿ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸುತ್ತಿದೆ. 'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್ಗಳು ಪ್ರತಿ 15 ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಾವ ಮೂಲೆಯಿಂದಲಾದರೂ ಹೊರಟು ವಿಮಾನ ನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: Karnataka Assembly Elections: ನೆಲಮಂಗಲದಲ್ಲಿ ಮತ್ತೆ ಚಿಗುರುತ್ತದೆಯೇ 'ತೆನೆ'? ಕೈ-ಕಮಲದ ಪ್ಲಾನ್ ಏನು ಗೊತ್ತಾ?
ವಿಮಾನ ನಿಲ್ದಾಣದ ಸಮೀಪದಲ್ಲೇ ಸಮಸ್ಯೆಯ ಗೂಡು!
ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳು ದೇವನಹಳ್ಳಿಯಲ್ಲಿ ತಲೆ ಎತ್ತುತ್ತಿವೆ. ಆದರೆ ಇಲ್ಲಿನ ಸ್ಥಳೀಯರಿಗೆ ದೊಡ್ಡ ಪ್ರಮಾಣದ ಉದ್ಯೋಗಗಳು ಲಭಿಸುತ್ತಿಲ್ಲ ಎಂಬ ಆರೋಪ ಇದೆ. ಭೂಮಿ ಬೆಲೆ ಗಗನಕ್ಕೇರುತ್ತಿರೋದು ರಿಯಲ್ ಎಸ್ಟೇಟ್ ದಂಧೆ ಜೋರಾಗಿದ್ದು, ಕ್ರೈಮ್ಗಳು ನಡೆಯುತ್ತಿವೆ. ಆವತಿ ಬೆಟ್ಟ, ದೇವನಹಳ್ಳಿ ಕೋಟೆ, ನಲ್ಲೂರಿನ ಹುಣಸೆ ತೋಪು, ಕುಂದಾಣ ಬೆಟ್ಟ, ತಿಮ್ಮರಾಯಸ್ವಾಮಿ ಬೆಟ್ಟ ಸೇರಿದಂತೆ ಇತರ ಪ್ರವಾಸಿ ತಾಣಗಳ ಅಭಿವೃದ್ಧಿಗಳಿಗೆ ಅನುದಾನಗಳು ಬಿಡುಗಡೆಯಾಗಿದ್ದರೂ ಅವುಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ ಎಂಬ ಆರೋಪವೂ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ