ಗುಜರಾತ್ (Gujarat), ಹಿಮಾಚಲ ಪ್ರದೇಶ (Himachal Pradesh) ಚುನಾವಣಾ ಫಲಿತಾಂಶ (election results) ಬಂದಿದೆ. ಈ ರಾಜ್ಯಗಳ ರಿಸಲ್ಟ್ ಹೊರಬೀಳುತ್ತಿದ್ದಂತೆ, ಇತ್ತ ಕರ್ನಾಟಕದಲ್ಲೂ (Karnataka) ಚುನಾವಣಾ ಕಾವು ಏರುತ್ತಿದೆ. ಒಂದೆಡೆ ಟಿಕೆಟ್ ಆಕಾಂಕ್ಷಿಗಳು (ticket aspirants), ಹಾಲಿ ಶಾಸಕರು (MLA’s), ಸಚಿವರು (ministers) ತಮ್ಮ ತಮ್ಮ ಕ್ಷೇತ್ರದಲ್ಲಿ ಚುರುಕಿನ ಚಟುವಟಿಕೆ ಕೈಗೊಂಡಿದ್ದರೆ, ಮತ್ತೊಂದೆಡೆ ಪಕ್ಷ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಜೋರಾಗುತ್ತಿದೆ. ಈ ಎಲ್ಲವುಗಳ ನಡುವೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ (assembly constituency) ಚುನಾವಣಾ ಚಟುವಟಿಕೆ ಗರಿಗೆದರಿದೆ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಸಿವಿ ರಾಮನ್ ನಗರ (CV Raman Nagar) ಕೂಡ ಇದರಿಂದ ಹೊರತಾಗಿಲ್ಲ. ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾದ ಸಿವಿ ರಾಮನ್ ನಗರ ಬಿಜೆಪಿಯ (BJP) ಭದ್ರಕೋಟೆಯಾಗಿದೆ. ಇದೇ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಿಜೆಪಿಯ ಎಸ್. ರಘು (S. Raghu) ಹಾಲಿ ಶಾಸಕರು.
ಸಿವಿ ರಾಮನ್ ನಗರ ಕ್ಷೇತ್ರದ ಪರಿಚಯ
ಸಿವಿ ರಾಮನ್ ನಗರವು ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಖ್ಯಾತ ವಿಜ್ಞಾನಿ, ಭಾರತ ರತ್ನ ಸರ್ ಸಿ.ವಿ. ರಾಮನ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿದೆ.
ಇಲ್ಲಿ ಬಾಗ್ಮನೆ ಟೆಕ್ ಪಾರ್ಕ್ ಇದೆ. ಈ ಕ್ಷೇತ್ರ ಇಂದಿರಾನಗರ, ಕಗ್ಗದಾಸಪುರ ಮತ್ತು ಬೈಯಪ್ಪನಹಳ್ಳಿಯಿಂದ ಸುತ್ತುವರಿದಿದೆ. ಇದು ಒಂದು ಉನ್ನತ ಮಾರುಕಟ್ಟೆ ಪ್ರದೇಶವಾಗಿದೆ. ಇದನ್ನು ಗ್ರೇಟರ್ ಇಂದಿರಾನಗರ ಎಂದೂ ಕರೆಯಲಾಗುತ್ತದೆ. ಇನ್ನು ಬಿಬಿಎಂಪಿಯ ಬೆನ್ನಿಗಾನಹಳ್ಳಿ, ಸಿವಿ ರಾಮನ್ ನಗರ, ನ್ಯೂ ತಿಪ್ಪಸಂದ್ರ, ಸರ್ವಜ್ಞ ನಗರ, ಹೊಯ್ಸಳ ನಗರ, ಜೀವನ್ ಭೀಮಾ ನಗರ, ಕೋನೇನ ಅಗ್ರಹಾರ ಸೇರಿದಂತೆ 7 ವಾರ್ಡ್ಗಳನ್ನು ಹೊಂದಿದೆ.
ಹಾಲಿ ಶಾಸಕ ಎಸ್. ರಘು
ಸದ್ಯ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಪ್ರಸ್ತುತ ಬಿಜೆಪಿಯ ಎಸ್ ರಘು ಅವರು ಈ ಕ್ಷೇತ್ರದ ಶಾಸಕರು. ಹಿಂದೆ ಶಾಂತಿನಗರ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದ ರಘು, 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಸಿವಿ ರಾಮನ್ ನಗರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಪ್ರಸ್ತುತ ಮೂರು ಬಾರಿ ಗೆಲುವು ಸಾಧಿಸಿ, ಹ್ಯಾಟ್ರಿಕ್ ಬಾರಿಸಿರುವ ರಘು, ಈ ಬಾರಿಯೂ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಇದನ್ನೂ ಓದಿ: Karnataka Assembly Elections: ಗಲಾಟೆಯ ಬೆಂಕಿಯಲ್ಲಿ ಬೆಂದಿದ್ದ 'ಅಖಂಡ' ಕೋಟೆ! ಪುಲಿಕೇಶಿನಗರದಲ್ಲಿ ಹೇಗಿದೆ ಚುನಾವಣಾ ಕಾವು?
ಈ ಬಾರಿ ಜೋರಾಗಿದೆ ಟಿಕೆಟ್ಗಾಗಿ ಸ್ಪರ್ಧೆ!
ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ ಕೂಡ ಈ ಬಾರಿ ಪ್ರತಿಷ್ಠೆಯ ಕಣವಾಗಿದೆ. ಪ್ರಸ್ತುತ ಶಾಸಕರಾಗಿರುವ ಎಸ್ ರಘು, ಈ ಬಾರಿ ಕೂಡ ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ಸದ್ಯ ಅವರಿಗೆ ಬಿಜೆಪಿಯಲ್ಲಿ ಯಾರೂ ಸ್ಪರ್ಧಿಗಳಿಲ್ಲ ಎನ್ನಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್ನಿಂದ ಮಾಜಿ ಮೇಯರ್ ಸಂಪತ್ ರಾಜ್ ಈ ಬಾರಿ ಮತ್ತೊಮ್ಮೆ ಟಿಕೆಟ್ ಬಯಸಿದ್ದಾರೆ. ಈ ಹಿಂದೆ ಸ್ಪರ್ಧಿಸಿ ಸೋತಿದ್ದ ಸಂಪತ್ ರಾಜ್, ಈ ಬಾರಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇನ್ನು ಜೆಡಿಎಸ್ನಲ್ಲಿ ಸದ್ಯ ಟಿಕೆಟ್ ಆಕಾಂಕ್ಷಿಗಳು ಯಾರು ಎನ್ನುವುದು ಸ್ಪಷ್ಟವಾಗಿಲ್ಲ.
ಕ್ಷೇತ್ರದ ಮತದಾರರ ವಿವರ
ಸಿವಿ ರಾಮನ್ ನಗರದಲ್ಲಿ ಒಟ್ಟು 2,60,811 ಮತದಾರರಿದ್ದಾರೆ. ಈ ಪೈಕಿ ಎಸ್ಸಿ – 60,000 ಮತಗಳಿದ್ದರೆ, ಇತರೇ ಸಮುದಾಯದ ವೋಟ್ 66,669 ಆಗಿದೆ. ಇನ್ನುಳಿದಂತೆ ತಮಿಳು – 40,000, ಒಕ್ಕಲಿಗ – 20,000, ಅಲ್ಪಸಂಖ್ಯಾತ – 10,000, ಲಿಂಗಾಯತ – 8,000, ಕುರುಬ – 18,000 ಹಾಗೂ ಬೋವಿ – 8,000 ಮತದಾರರಿದ್ದಾರೆ.
ಕ್ಷೇತ್ರದಲ್ಲಿ ಕಾವೇರಿ ನೀರು ಪೂರೈಕೆ
ಇಲ್ಲಿನ ಪುರಾತನ ಕಲ್ಯಾಣಿ ಪುನರುಜ್ಜೀವನಗೊಳಿಸಲಾಗಿದೆ. ಕಾವೇರಿ ನೀರು ಕ್ಷೇತ್ರದ ಹೊಸ ಪ್ರದೇಶಗಳಲ್ಲೂ ಹರಿದಿದೆ. ಇನ್ನು ಐಸೊಲೇಶನ್ ಆಸ್ಪತ್ರೆ ಪಕ್ಕದಲ್ಲೇ 250 ಹಾಸಿಗೆಯ ಸಿವಿ ರಾಮನ್ ಆಸ್ಪತ್ರೆ ನಿರ್ಮಿಸಲಾಗಿದೆ.
ಅತೀ ಹೆಚ್ಚು ಪಬ್ಗಳಿರುವ ಕ್ಷೇತ್ರ!
ದೇಶದಲ್ಲೇ ಹೆಚ್ಚು ಪಬ್ಗಳಿರುವುದು ಇಂದಿರಾನಗರದಲ್ಲಿ. ಒಂದು ಮಾಹಿತಿ ಪ್ರಕಾರ ಇಂದಿರಾನಗರದಲ್ಲಿ 114 ಪಬ್, ಬಾರ್ ಮತ್ತು ಬ್ರೂವರೀಸ್ ಗಳಿವೆ ಎನ್ನಲಾಗಿದೆ. ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಹೆಚ್ಚಿನ ಪಬ್ಗಳಿವೆ. ಇದರ ವಿರುದ್ಧವಾಗಿ ಹೈಕೋರ್ಟ್ ಆದೇಶವಿದ್ದರೂ ಯಾವುದೇ ಕಾನೂನು ಇದುವರೆಗೂ ಅನುಷ್ಠಾನಗೊಂಡಿಲ್ಲ, ಇಲ್ಲಿನ ಪಬ್ ಮತ್ತು ಬಾರ್ ಗಳಲ್ಲಿ ಬರುವ ಶಬ್ದದಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದಾರೆ.
ಇದನ್ನೂ ಓದಿ: Karnataka Assembly Elections: ಹೆಬ್ಬಾಳದಲ್ಲಿ ಹೇಗಿದೆ ಚುನಾವಣಾ ಕಾವು? ಸಂಚಾರ ಸಮಸ್ಯೆಗೆ ಮುಕ್ತಿ ಕೊಡುವವರು ಯಾರು?
ಹೆಚ್ಚಿನ ಸಮಸ್ಯೆಗಳು
ಈ ಕ್ಷೇತ್ರದಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ರೇಷನ್ ಕಾರ್ಡ್ ಕೊಡಿಸಿಲ್ಲ. ಒಳಚರಂಡಿ ಕಾರ್ಯ ಪೂರ್ಣಗೊಂಡಿಲ್ಲ. ಬಯಪ್ಪನಹಳ್ಳಿ ಕೊಳೆಗೇರಿ ಸಮಸ್ಯೆ ಬೃಹದಾಕಾರವಾಗಿದೆ. ಈ ಬಾರಿಯಾದರೂ ಇವಕ್ಕೆಲ್ಲ ಮುಕ್ತಿ ಸಿಗುತ್ತಾ ಅಂತ ಮತದಾರರು ಪ್ರಶ್ನಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ